ಅಂಗವಿಕಲ ಹೆಣ್ಣುಮಕ್ಕಳ ಧ್ವನಿಯಾಗಿ ಅಶ್ವಿನಿ
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಸೆ. 20
ವಿಶ್ವಸಂಸ್ಥೆಯ ಗಾರ್ಡನ್ಬ್ರೌನ್ ಪ್ರಶಸ್ತಿಗೆ ಭಾಜನವಾಗಿ ದೇಶಕ್ಕೆ ಕೀರ್ತಿ ತಂದುಕೊಟ್ಟ ಅಂಗಡಿ ಅಶ್ವಿನಿ, ಇದೀಗ ವಿಶ್ವದ ಅಂಗವಿಕಲ ಹೆಣ್ಣು ಮಕ್ಕಳು ಧ್ವನಿಯಾಗಲು ಹೊರಟಿದ್ದಾಳೆ.
ಹೌದು...ವಿಶ್ವಸಂಸ್ಥೆಯ ಮುಂದಿನ ಮಿಲಿಯನ್ ಡೆವಲಪ್ಮೆಂಟ್ ಗೋಲ್ಸ್ನಲ್ಲಿ ಅಂಗವಿಕಲರ ಹೆಣ್ಣು ಮಕ್ಕಳನ್ನು ಸೇರಿಸಬೇಕೆಂಬ ವಿಷಯವನ್ನಿಟ್ಟುಕೊಂಡು ಸೆ. 23ರಂದು ನ್ಯೂಯಾರ್ಕ್ ವಿಶ್ವಸಂಸ್ಥೆಯಲ್ಲಿ ಕರೆದಿರುವ ಸಭೆಯಲ್ಲಿ ದೇಶದ ಪ್ರತಿನಿಧಿಯಾಗಿ ಭಾಗವಹಿಸಿ ವಿಷಯ ಮಂಡನೆ ಮಾಡಲಿದ್ದು, ಶನಿವಾರ ಸಂಜೆ ನ್ಯೂಯಾರ್ಕ್ಗೆ ತೆರಳಲಿದ್ದಾಳೆ.
ದೈಹಿಕವಾಗಿ ಅಂಧಳಾಗಿದ್ದರೂ, ಬೌದ್ಧಿಕವಾಗಿ ನಿಚ್ಚಳ ಕಣ್ಣುಗಳುಳ್ಳ ಅಶ್ವಿನಿ ಅಂಗಡಿ ಮೇಲೆ ಜವಾಬ್ದಾರಿಗಳು ಹೆಚ್ಚುತ್ತಾ ಹೋಗಿವೆ. ಇತ್ತೀಚೆಗೆ ವಿಶ್ವಸಂಸ್ಥೆಯ ವಿಶ್ವದ ಏಳು ಗಾರ್ಡನ್ಬ್ರೌನ್ ಪ್ರಶಸ್ತಿಯಲ್ಲಿ ಒಂದನ್ನು ಪಡೆದ ಅಶ್ವಿನಿಗೆ ಇದೀಗ ವಿಶ್ವಸಂಸ್ಥೆಯಲ್ಲಿ ವಿಶ್ವದ ಅಂಗವಿಕಲರ ಹೆಣ್ಣು ಮಕ್ಕಳ ಧ್ವನಿಯಾಗಲು ಅವಕಾಶ ಕಲ್ಪಿಸಿ ಕೊಟ್ಟಂತಾಗಿದೆ.
ವಿಶ್ವದ ಅಂಗವಿಕಲರ ಧ್ವನಿಯಾಗುವ ಅಶ್ವಿನಿ: ವಿಶ್ವಸಂಸ್ಥೆ ಪ್ರತಿ 15 ವರ್ಷಗಳ ಅವಧಿಯಲ್ಲಿ 8 ವಿಷಯಗಳನ್ನು ಇಟ್ಟುಕೊಂಡು ವಿಶ್ವಸಂಸ್ಥೆ ಮಿಲಿಯನ್ ಡೆವಲಪ್ಮೆಂಟ್ ಗೋಲ್ಸ್ ಮಾಡಿಕೊಂಡಿರುತ್ತದೆ. ಇದನ್ನು 15 ವರ್ಷದ ಅವಧಿಗೆ ಮಾಡಿಕೊಂಡಿರುತ್ತದೆ. ಈ ಎಂಟು ವಿಷಯಗಳಲ್ಲಿ ಶಿಕ್ಷಣ, ಹೆಣ್ಣು ಮಕ್ಕಳು, ಮಕ್ಕಳು, ರೋಗ ರುಜಿನಿ, ಪರಿಸರ ಸೇರಿದಂತೆ ಇತರ ವಿಷಯ ಸೇರಿಸಿಕೊಂಡಿದೆ. ಇದೀಗ 2015ಕ್ಕೆ ಮಿಲಿಯನ್ ಡೆವಲಪ್ಮೆಂಟ್ ಗೋಲ್ಸ್ ಅವಧಿ ಮುಗಿಯುತ್ತದೆ. ಮುಂದಿನ ಅವಧಿಗೆ ಅಂದರೆ 2015ರಿಂದ 2030ರ ಅವಧಿಯ ಮಿಲಿಯನ್ ಡೆವಲಪ್ಮೆಂಟ್ ಗೋಲ್ಸ್ನಲ್ಲಿ ಎಂಟು ವಿಷಯಗಳಲ್ಲಿ ಅಂಗವಿಕಲ ಹೆಣ್ಣು ಮಕ್ಕಳ ವಿಷಯವನ್ನು ಸೇರಿಸಬೇಕು ಎಂಬ ವಿಷಯದ ಕುರಿತಾಗಿ ಸಭೆಯನ್ನು ಕರೆದಿದ್ದು, ಸಭೆಯಲ್ಲಿ ಅಶ್ವಿನಿ ಅಂಗಡಿ ವಿಷಯದ ಮಂಡನೆ ಮಾಡಲು ವಿಶ್ವಸಂಸ್ಥೆ ಅವಕಾಶ ಮಾಡಿಕೊಟ್ಟಿದೆ.
ಏನಿದು?: ವಿಶ್ವಸಂಸ್ಥೆಯ ಅಭಿವೃದ್ಧಿ ದೃಷ್ಟಿಯಿಂದ ಎಂಟು ವಿಷಯ ಇಟ್ಟುಕೊಂಡು ಆ ವಿಷಯಗಳ ಕುರಿತಾಗಿ ಅಭಿವೃದ್ಧಿ, ಪ್ರಗತಿ ಸಾಧಿಸಲು ದೇಶಗಳಿಗೆ ಅನುದಾನ ನೀಡಿ ಟಾರ್ಗೆಟ್ ನೀಡುತ್ತಾರೆ. ಈ ಮೂಲಕ ಆಯಾ ಕ್ಷೇತ್ರದ ಅಭಿವೃದ್ಧಿ ಸಾಧ್ಯವಾಗುತ್ತದೆ.
ಶಿಕ್ಷಣ, ಆರೋಗ್ಯದ ಬಗ್ಗೆ ತಮ್ಮ ಆದ್ಯತೆ ನೀಡಿರುವ ವಿಶ್ವಸಂಸ್ಥೆಯು ಅಂಗವಿಕಲರ ಹೆಣ್ಣು ಮಕ್ಕಳ ವಿಷಯಕ್ಕೆ ಆದ್ಯತೆ ನೀಡಿ, ತಮ್ಮ ಗೋಲ್ಸ್ನಲ್ಲಿ ಸೇರಿಸಿದರೆ, ಅಂಗವಿಕಲರ ಹೆಣ್ಣು ಮಕ್ಕಳ ಅಭಿವೃದ್ಧಿಗೆ ಸಾಕಷ್ಟು ಅವಕಾಶ ಅನುದಾನ ಬರುವುದರಿಂದ ಅಂಗವಿಕಲರ ಹೆಣ್ಣುಮಕ್ಕಳ ಏಳಿಗೆ ಸಾಧ್ಯ. ಈ ನಿಟ್ಟಿನಲ್ಲಿ ಅಶ್ವಿನಿ ಅಂಗಡಿಯ ವಿಷಯ ಮಂಡನೆ ಅತ್ಯಂತ ಮಹತ್ವ ಪಡೆದುಕೊಳ್ಳಲಿದೆ.
ಬೆಂಗಳೂರಿನ ತಮ್ಮ ಸಂಸ್ಥೆಯ ವತಿಯಿಂದ ಶನಿವಾರ ನ್ಯೂಯಾರ್ಕ್ಗೆ ಪ್ರಯಾಣ ಬೆಳೆಸಲಿದ್ದು, ಸೆ.23ರಂದು ಬೆಳಿಗ್ಗೆ 10 ಗಂಟೆಯಿಂದ 5ಗಂಟೆಯವರೆಗೆ ಸಭೆ ನಡೆಯಲಿದೆ. ಅಲ್ಲದೆ, ಮಲಾಲ, ಗೌರ್ಡನ್ಬ್ರೌನ್ ಅವರೊಂದಿಗೆ ಪ್ರೆಸ್ ಕಾನ್ಫ್ರೆನ್ಸ್ನಲ್ಲಿ ಕೂಡ ಅಶ್ವಿನಿ ಭಾಗವಹಿಸಲಿದ್ದಾಳೆ.
ಹೆಚ್ಚುತ್ತಿರುವ ಜವಾಬ್ದಾರಿಯ ಬಗ್ಗೆ ಸಂತಸ: ಗಾರ್ಡನ್ ಬ್ರೌನ್ ಪ್ರಶಸ್ತಿ ಪಡೆದ ಅಶ್ವಿನಿ ಅಂಗಡಿ ಅವರನ್ನು ಕನ್ನಡಪ್ರಭ ಸಂಪರ್ಕಿಸಿದಾಗ, ತಮಗೆ ಅಂಗವಿಕಲರ ಸೇವೆ ಮಾಡಲು ಹೆಚ್ಚು ಅವಕಾಶ ಸಿಗುತ್ತಿರುವುದು ಸಂತೋಷ ತಂದಿದೆ. ಇನ್ನು ಜವಾಬ್ದಾರಿ ಹೆಚ್ಚಾಗುತ್ತಿದೆ, ಇದೀಗ ಜನರು ನನ್ನೊಂದಿಗೆ ಕೈ ಜೋಡಿಸುತ್ತಿರುವುದರಿಂದ ತಾವು ನಿರ್ವಹಿಸುತ್ತಿರುವ ಕೆಲಸ ಸುಲಭವಾಗುತ್ತದೆ. ಮುಂದಿನ ವಿಶ್ವಸಂಸ್ಥೆಯ ಮಿಲಿಯನ್ ಡೆವಲಪ್ಮೆಂಟ್ ಗೋಲ್ಸ್ನಲ್ಲಿ ತಾವು ಮಂಡಿಸುತ್ತಿರುವ ಅಂಗವಿಕಲರ ಹೆಣ್ಣು ಮಕ್ಕಳ ವಿಷಯವನ್ನು ಸೇರಿಸುವ ನಿರೀಕ್ಷೆ ಇದೆ ಎಂದರು.
ವಿಶ್ವದ ಎಲ್ಲಾ ದೇಶಗಳ ಅಂಗವಿಕಲ ಪ್ರತಿನಿಧಿಗಳು ಭಾಗವಹಿಸುವ ವಿಶ್ವಸಂಸ್ಥೆಯ ಸಭೆಯಲ್ಲಿ ವಿಷಯ ಮಂಡನೆಗೆ ದೇಶದ ಪ್ರತಿನಿಧಿಯಾಗಿ ಅಶ್ವಿನಿ ಹೋಗುತ್ತಿರುವುದು ಸಂತಸವಾಗಿದೆ.
ಇದು ಕರ್ನಾಟಕ ರಾಜ್ಯಕ್ಕೆ ಹೆಗ್ಗಳಿಕೆ ವಿಷಯ. ಗಾರ್ಡನ್ಬ್ರೌನನ್ ಪ್ರಶಸ್ತಿ ಬಂತು ಎಂದು ಬೀಗುತ್ತಾ ಕೂಡದೇ, ಇದೀಗ ಅಂಗವಿಕಲ ಹೆಣ್ಣು ಮಕ್ಕಳಿಗೆ ಆದ್ಯತೆ ನೀಡಬೇಕೆಂದು ವಿಶ್ವಸಂಸ್ಥೆಯ ಮಟ್ಟದಲ್ಲಿ ವಿಷಯ ಮಂಡನೆಯ ಮೂಲಕ ವಿಶ್ವದ ಅಂಗವಿಕಲರ ಧ್ವನಿಯಾಗಲು ಹೊರಟಿರುವ ಅಶ್ವಿನಿ ಅಂಗಡಿಗೆ ಎಲ್ಲರೂ ಅಭಿನಂದಿಸಬೇಕಾಗಿದೆ.
-ಶಶಿಧರ ಮೇಟಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

