ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟ ಅವ್ಯವಸ್ಥೆ ಆಗರ
ಕನ್ನಡಪ್ರಭ ವಾರ್ತೆ, ಹೂವಿನಹಡಗಲಿ, ಸೆ. 21
ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ದಸರಾ ಮಹಿಳಾ ಕ್ರೀಡಾಕೂಟ ಸಂಪೂರ್ಣ ಅವ್ಯವಸ್ಥೆಯ ಆಗರವಾಗಿತ್ತು. ಊಟ ವಿಲ್ಲ, ತಿಂಡಿ ಇಲ್ಲ, ಮಹಿಳಾ ಕ್ರೀಡಾಪಟುಗಳಿಗೆ ಶೌಚಾಲಯದ ಅವ್ಯವಸ್ಥೆ ನೋಡಿದ ಜಿಲ್ಲೆಯಿಂದ ಆಗಮಿಸಿದ್ದ ಕ್ರೀಡಾಪಟುಗಳು ಆಯೋಜಕರಿಗೆ ಹಿಡಿಶಾಪ ಹಾಕಿದರು.
ಕ್ರೀಡಾಕೂಟ ಆಯೋಜಿಸಿರುವ ಜಿಲ್ಲಾ ಯುವಜನ ಮತ್ತು ಕ್ರೀಡಾ ಇಲಾಖೆಯ ನಿರ್ಲಕ್ಷ್ಯದಿಂದಲೇ ಈ ಅವ್ಯವಸ್ಥೆ. ಈ ಕಾರ್ಯಕ್ರಮಕ್ಕೆ ಜಿಲ್ಲಾ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರಾಜು ಬಾವಿಹಳ್ಳಿ ಬಂದಿಲ್ಲ.
3 ಗಂಟೆ ತಡ: ಬೆಳಗ್ಗೆ 10.30ಕ್ಕೆ ನಿಗದಿಯಾಗಿದ್ದ ಸಮಾರಂಭ 12ಕ್ಕೆ ಆರಂಭವಾಗಿ 1.30ಕ್ಕೆ ಕ್ರೀಡಾಕೂಟ ಆರಂಭಿಸಲಾಗಿದೆ. ಸಂಜೆಯಾದರೂ ಮುಕ್ಕಾಲು ಭಾಗ ಕ್ರೀಡೆಗಳು ಉಳಿದವು.
ಸಂಡೂರು, ಕೂಡ್ಲಿಗಿ, ಹೊಸಪೇಟೆ ಸೇರಿದಂತೆ ಇನ್ನಿತರ ಕಡೆಗಳಿಂದ ಆಗಮಿಸಿದ್ದ ಕ್ರೀಡಾಪಟುಗಳಿಗೆ ಊಟದ ಟೋಕನ್ ನೀಡಿದ್ದರೂ ಊಟವಿಲ್ಲದ್ದರಿಂದ ಸ್ವಂತ ಹಣದಲ್ಲಿ ಊಟ ಮಾಡಿದ್ದಾರೆ.
ಉದ್ಘಾಟನಾ ಸಮಾರಂಭದಲ್ಲಿ ಜಿಪಂ ಅಧ್ಯಕ್ಷೆ ಶೋಭಾ ಬೆಂಡಿಗೇರಿ ಇವರಿಗೆ ಹೊಸಪೇಟೆ ಕ್ರೀಡಾಪಟು ಮೆಹರ್ ಸಭಾಖಾನ್ ಮೇಡಂ ಮಹಿಳೆಯರಿಗೆ ಶೌಚಾಲಯವೇ ಇಲ್ಲ ಹೇಗೆ ಎಂದು ಕೇಳಿದಾಗ ಕಾರ್ಯಕ್ರಮದ ನಂತರ ಮಾತನಾಡುತ್ತೇನೆಂದು ಹೇಳಿದಾಗ ವೇದಿಕೆಯಿಂದ ಬೇಸರಗೊಂಡು ಕೆಳಗಿಳಿದರು. ಈ ಕುರಿತು ತಾಲೂಕು ಕ್ರೀಡಾಧಿಕಾರಿ ಮಹಮದ್ ರಫಿ ಮಾತನಾಡಿಸಿದಾಗ, ಜಿಲ್ಲೆಯಿಂದ ಸುಮಾರು 560 ಕ್ರೀಟಾಪಟುಗಳ ನೋಂದಣಿ ಮಾಡಿಕೊಳ್ಳಲಾಗಿದೆ. ಅವರಿಗೆ ಊಟ ಮತ್ತು ತಿಂಡಿ ವ್ಯವಸ್ಥೆ ಮಾಡಲಾಗಿತ್ತು. ಆದರೆ, ಕ್ರೀಡಾಪಟುಗಳ ಹಿಂದೆ ಬಂದಿರುವವರು ಊಟ ಮಾಡಿದ್ದರಿಂದ ಅವ್ಯವಸ್ಥೆಯಾಗಿದೆ. ಮಹಿಳೆಯರಿಗೆ ಹೊರಗಡೆ ಶೌಚ ವ್ಯವಸ್ಥೆ ಮಾಡಿದ್ದೇವೆ ಎನ್ನುತ್ತಾರೆ.
ಜಿಲ್ಲಾ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ರಾಜು ಬಾವಿಹಳ್ಳಿ ಜಿಲ್ಲಾಧಿಕಾರಿಗಳೊಂದಿಗೆ ಬೆಂಗಳೂರು ಮೀಟಿಂಗ್ ಹೋಗಿದ್ದಾರೆ. ಆದ್ದರಿಂದ ಅವರಿಗೆ ಬರಲಿಲ್ಲ. ಇದರ ವ್ಯವಸ್ಥೆ ತಾವೇ ಮಾಡಿರುವುದಾಗಿ ಹೇಳಿದರು.
ಸಮಯಕ್ಕೆ ಸರಿಯಾಗಿ ಆಟಗಳು ನಡೆದಿಲ್ಲ: ಈ ರೀತಿಯ ಅವ್ಯವಸ್ಥೆಯ ನಡುವೆಯೂ ಸಮಯಕ್ಕೆ ಸರಿಯಾಗಿ ಆಟಗಳು ನಡೆದಿಲ್ಲ. ಪ್ರತಿ ಕ್ರೀಡಾಪಟುಗಳಿಗೆ ಊಟದ ವೆಚ್ಚ ಮತ್ತು ಸಾರಿಗೆ ವೆಚ್ಚ ಭರಿಸಬೇಕು. ಆದರೆ, ಸಂಜೆಯಾದರೂ ಯಾರೂ ಈ ಬಗ್ಗೆ ಗಮನಿಸುವರೇ ಇಲ್ಲ. ಸಚಿವರ ಕ್ಷೇತ್ರದಲ್ಲೇ ಇಂಥ ಅವ್ಯವಸ್ಥೆ ಆಗಿದೆ. ಸಚಿವರು ಈ ಕುರಿತು ಕ್ರಮ ಕೈಗೊಳ್ಳುವರೇ ಎಂದು ಕ್ರೀಡಾಪಟುಗಳು ಪ್ರಶ್ನಿಸುತ್ತಾರೆ.
ತಿಂಡಿ, ಊಟವಿಲ್ಲ, ಕುಡಿಯಲು ಸರಿಯಾಗಿ ನೀರಿಲ್ಲ, ಶೌಚಾಲಯವಿಲ್ಲ, ಮಹಿಳಾ ಕ್ರೀಟಾಪಟುಗಳು ಬಯಲಲ್ಲೇ ಶೌಚ ಮಾಡುವ ಪರಿಸ್ಥಿತಿ ಬಂದಿದೆ. ಜಿಲ್ಲಾ ಉಸ್ತುವಾರಿ ಸಚಿವರ ಕ್ಷೇತ್ರದಲ್ಲಿ ವ್ಯವಸ್ಥೆ ಸರಿಯಾಗಿ ಇರಬಹುದು ಎಂಬ ಆಸೆಯಿಂದ ಬಂದರೆ, ಇಲ್ಲಿ ಏನು ಇಲ್ಲ. ಇದೇನಾ ಸಚಿವರ ಕ್ಷೇತ್ರ.
- ಹುಸೇನ್ಬಾಷಾ
ಕ್ರೀಡಾಪಟು, ತೆಕ್ಕಲಕೋಟೆ
ನಮ್ಮಿಂದ ತಪ್ಪಾಗಿದೆ. ಅನುದಾನ ಸಲುವಾಗಿ ಬೆಂಗಳೂರು ಹೋಗಿರುವ ಕಾರಣ ತಮಗೆ ಸಮಾರಂಭಕ್ಕೆ ಆಗಮಿಸಲು ಆಗಲಿಲ್ಲ. ಕ್ಷಣ ಕ್ಷಣಕ್ಕೂ ಇಲ್ಲಿ ನಡೆಯುತ್ತಿರುವ ತೊಂದರೆಗಳನ್ನು ಗಮನಿಸಿ ಮಹಮದ್ ರಫಿ ಹಾಗೂ ಮಲಕಪ್ಪ ಅವರಿಗೆ ಎಲ್ಲ ಅಗತ್ಯ ಸೌಲಭ್ಯ ನೀಡಿ ವ್ಯವಸ್ಥೆ ಮಾಡುವಂತೆ ಹೇಳಿದ್ದೇನೆ. ರಾತ್ರಿ ವಸತಿ ವ್ಯವಸ್ಥೆ ಮಾಡಲು ಹೇಳಿದ್ದೇನೆ.
-ರಾಜು ಬಾವಿಹಳ್ಳಿ,
ಸಹಾಯಕ ನಿರ್ದೇಶಕರು,
ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ
ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುತ್ತೇನೆ. ತಮಗೆ ಆಹ್ವಾನ ಪತ್ರಿಕೆಯನ್ನು ಶುಕ್ರವಾರ ನೀಡಿದ್ದಾರೆ. ಶನಿವಾರ ಕ್ರೀಡೆಗಳಿವೆ. ಈ ರೀತಿ ಅವ್ಯವಸ್ಥೆ ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇನೆ.
-ಶೋಭಾ ಬೆಂಡಿಗೇರಿ,
ಜಿಪಂ ಅಧ್ಯಕ್ಷೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

