ಮಾಲ್ವಿ ಯೋಜನೆ ತ್ವರಿತ ಜಾರಿಗೊಳಿಸಿ
ಹಗರಿಬೊಮ್ಮನಹಳ್ಳಿ: ತಾಲೂಕಿನ ಜೀವನಾಡಿ ಮಾಲ್ವಿ ಜಲಾಶಯಕ್ಕೆ ತುಂಗಭದ್ರಾ ನದಿಯಿಂದ ಶಾಶ್ವತ ನೀರೊದಗಿಸುವ ಯೋಜನೆಯನ್ನು ತ್ವರಿತಗತಿಯಲ್ಲಿ ಜಾರಿಗೊಳಿಸುವ ಮೂಲಕ ಬಿಸಿಲೂರಿನ ರೈತರ ಬದುಕನ್ನು ಹಸನುಗೊಳಿಸಲು ರಾಜ್ಯ ಸರ್ಕಾರ ಮುಂದಾಗಬೇಕು ಎಂದು ಸೋಮವಾರ ಹಳೇಹಗರಿಬೊಮ್ಮನಹಳ್ಳಿ ಸಮುದಾಯ ಭವನದಲ್ಲಿ ಜರುಗಿದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಬ್ಯಾಂಕ್ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಒಮ್ಮತದ ನಿರ್ಧಾರ ಕೈಗೊಳ್ಳಲಾಯಿತು.
ಅಧ್ಯಕ್ಷತೆ ವಹಿಸಿದ್ದ ಬ್ಯಾಂಕಿನ ಅಧ್ಯಕ್ಷ ಹುಡೇದ್ ಗುರುಬಸವರಾಜ ಸಭೆಯಲ್ಲಿ ಈ ವಿಚಾರ ಪ್ರಸ್ತಾಪಿಸಿ, ಮಾಲ್ವಿ ಡ್ಯಾಂ ಭರ್ತಿಯಾದರೆ ಸರಿಸುಮಾರು ಅರ್ಧ ತಾಲೂಕಿನ ವ್ಯಾಪ್ತಿಯಲ್ಲಿ ಅಂತರಜಲ ಹೆಚ್ಚುತ್ತದೆ. ಅಲ್ಲದೆ 20 ಸಾವಿರಕ್ಕೂ ಅಧಿಕ ಎಕರೆ ಒಣಭೂಮಿಗೆ ಶಾಶ್ವತ ನೀರಾವರಿ ಸೌಲಭ್ಯ ಸಿಗಲಿದೆ. ಇದರಿಂದ ತಾಲೂಕಿನಲ್ಲಿ ಅರ್ಥಿಕ ಅಭಿವೃದ್ಧಿ ವೇಗ ಪಡೆದುಕೊಳ್ಳಲಿದೆ. ಜೊತೆಗೆ ಕಾಯಂ ಬರಗಾಲದ ಹಣೆಪಟ್ಟಿಯಿಂದ ಹಗರಿಬೊಮ್ಮನಹಳ್ಳಿ ತಾಲೂಕನ್ನು ವಿಮುಕ್ತಿಗೊಳಿಸಲು ಸಾಧ್ಯವಿದೆ. ಈ ದಿಸೆಯಲ್ಲಿ ಶಾಸಕರಾದಿಯಾಗಿ ಸಚಿವರ ಬಳಿಗೆ ನಿಯೋಗದ ಮೂಲಕ ಭೇಟಿಯಾಗಿ ಮನವಿಪತ್ರ ಅರ್ಪಿಸಿ ಯೋಜನೆ ಜಾರಿಗೆ ಆಗ್ರಹಿಸೋಣ ಎಂದರು. ಸಭೆಯಲ್ಲಿ ಭಾಗವಹಿಸಿದ್ದ ಬ್ಯಾಂಕಿನ ನೂರಾರು ರೈತ ಶೇರುದಾರರು ಅಧ್ಯಕ್ಷರ ಪ್ರಸ್ತಾಪಕ್ಕೆ ಚಪ್ಪಾಳೆ ತಟ್ಟುವ ಮೂಲಕ ಬೆಂಬಲ ಸೂಚಿಸಿದರು. ರಾಜ್ಯ ಸರ್ಕಾರದ ಮೇಲೆ ತೀವ್ರ ಒತ್ತಡ ಹೇರುವಂತಹ ಕಾಲ ಈಗ ಕೂಡಿಬಂದಿದೆ. ತುಂಗಭದ್ರಾ ನದಿಯಿಂದ ನಮ್ಮ ಪಾಲಿನ ನೀರನ್ನು ಸದ್ಬಳಕೆ ಮಾಡಿಕೊಳ್ಳಲು ಮಾಲ್ವಿ ಡ್ಯಾಂಗೆ ಶಾಶ್ವತ ನೀರೊದಗಿಸುವ ಯೋಜನೆ ಜಾರಿಗೊಳಿಸುವಂತೆ ಸರ್ಕಾರವನ್ನು ಒತ್ತಾಯಿಸಬೇಕು ಎಂದು ಅಭಿಪ್ರಾಯಪಟ್ಟರು.
ಪ್ರಶಂಸೆ: ಸತತ ಮೂರು ವರ್ಷಗಳಿಂದ ಸಾಲ ವಸೂಲಾತಿ ಹಾಗೂ ಲಾಭಾಂಶದಲ್ಲಿ ನಮ್ಮ ಬ್ಯಾಂಕ್ ಇಡೀ ತಾಲೂಕಿನಲ್ಲಿಯೇ ಪ್ರಥಮ ಸ್ಥಾನದಲ್ಲಿದೆ. ನಮ್ಮ ಬ್ಯಾಂಕಿನ ಸಾಧನೆಯನ್ನು ಮೆಚ್ಚಿಕೊಂಡು ಆಪೆಕ್ಸ್ ಬ್ಯಾಂಕ್ಗೆ ರು. 5 ಸಾವಿರ ಬಹುಮಾನ ಹಾಗೂ ಪ್ರಶಸ್ತಿ ನೀಡಿ ಗೌರವಿಸಿದೆ ಎಂದು ಅಧ್ಯಕ್ಷ ಹುಡೇದ್ ಗುರುಬಸವರಾಜ ಸಭೆಗೆ ತಿಳಿಸಿದರು. ಬ್ಯಾಂಕಿನ ಈ ಸಾಧನೆಗೆ ಆಡಳಿತ ಮಂಡಳಿ ಮತ್ತು ಸಿಬ್ಬಂದಿ ಪರಿಶ್ರಮ ಹಾಗೂ ಶೇರುದಾರ ರೈತರು ಸಕಾಲಕ್ಕೆ ಸಾಲವನ್ನು ಮರುಪಾವತಿಮಾಡಿರುವುದು ಮೂಲಕಾರಣ ಎಂದು ಹೇಳಿದರು. ಬ್ಯಾಂಕಿನ ಪ್ರಗತಿ ಹಾಗೂ ಮುಂದಿನ ಯೋಜನೆ ಉದ್ದೇಶಗಳ ಕುರಿತಂತೆ ಸಭೆಯಲ್ಲಿ ಚರ್ಚಿಸಲಾಯಿತು.
ಬ್ಯಾಂಕಿನ ಉಪಾಧ್ಯಕ್ಷ ಕಾತ್ರಿಕಿ ಮುತ್ತಪ್ಪ, ನಿರ್ದೇಶಕರಾದ ಅರಸಿಕೇರಿ ಹನುಮಂತಪ್ಪ, ರಾಜೇಶ ಬ್ಯಾಡಗಿ, ಕೊಗಳಿ ಹನುಮಂತಪ್ಪ, ಬಸವರಾಜ, ಚನ್ನವೀರಪ್ಪ, ಶಿರೂರು ನಿಂಗಮ್ಮ, ವ್ಯವಸ್ಥಾಪಕ ನಿರ್ದೇಶಕ ಬಸವನಗೌಡ ಪಾಟೀಲ್ ಸೇರಿದಂತೆ ಹಲವರು ಸಭೆಯಲ್ಲಿ ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

