ಬಳ್ಳಾರಿ

ಖೊಟ್ಟಿ ಫಲಾನುಭವಿಗಳ ವಿರುದ್ಧ ತನಿಖೆ

Published On :

ಕನ್ನಡಪ್ರಭ ವಾರ್ತೆ, ಕೂಡ್ಲಿಗಿ, ಸೆ. 26
2001ರಿಂದ 2013ನೇ ಸಾಲಿನಲ್ಲಿ ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ರೈತರಿಗೆ ನೀಡುವ ಉಚಿತ ಕೊಳವೆಬಾವಿ ಯೋಜನೆಯಲ್ಲಿ 27 ಬೊಗಸ್ ಫಲಾನುಭವಿಗಳು ಇದ್ದಾರೆ. ಆದರೆ ಅಂಬೇಡ್ಕರ್ ಅಭಿವೃದ್ಧಿ ನಿಗಮದವರು ಈವರೆಗೂ ಈ ಕುರಿತು ವರದಿ ನೀಡಿಲ್ಲ ಎಂದು ತಾಪಂ ಸದಸ್ಯ ಗುರುಪ್ರಸಾದ್ ನಿಗಮದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ತಾಪಂ ಸಭಾಂಗಣದಲ್ಲಿ ಗುರುವಾರ ನಡೆದ ಸಾಮಾನ್ಯ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿ ಸಭೆಯ ಗಮನ ಸಳೆದ ಅವರು, ಅಂಬೇಡ್ಕರ್ ಅಭಿವೃದ್ಧಿ ನಿಗಮದ ವತಿಯಿಂದ 2001-2013ನೇ ಸಾಲಿನಲ್ಲಿಫಲಾನುಭವಿಗಳನ್ನು ಆಯ್ಕೆ ಮಾಡುವಾಗ ಸರ್ಕಾರದ ಆದೇಶ ಪಾಲನೆ ಮಾಡಿಲ್ಲ. ಅಲ್ಲದೇ 27 ಜನರು ಖೊಟ್ಟಿ ದಾಖಲೆ ನೀಡಿ ಅನುದಾನ ಪಡೆದಿದ್ದಾರೆ. ಅವರ ಹೊಲದಲ್ಲಿ ಕೊಳವೆಬಾವಿ ಕೊರೆಸಿಲ್ಲ. ಆದರೂ ವಿದ್ಯುತ್ ಸಂಪರ್ಕ ಕಲ್ಪಿಸಿರುವ ಬಗ್ಗೆ ವರದಿ ನೀಡಲಾಗಿದೆ. ಈ ಕುರಿತು ಸಮಗ್ರ ತನಿಖೆ ನಡೆಯಬೇಕೆಂದು ಒತ್ತಾಯಿಸಿದರು.
ಇದಕ್ಕೆ ಉತ್ತರಿಸಿದ ತಾಪಂ ಇಒ ಸೈಯಿದ್ ಹಜರತ್‌ಷಾ, ಬೊಗಸ್ ಫಲಾನುಭವಿಗಳ ಆಯ್ಕೆ ಬಗ್ಗೆ ಸತ್ಯಾಸತ್ಯತೆ ತಿಳಿಯಲು ತಾಪಂ ಸದಸ್ಯರೊಳಗೊಂಡಂತೆ ಸಮಿತಿ ರಚನೆ ಮಾಡಲಾಗುವುದು. ಈ ಸಮಿತಿ ಕೆಲವೇ ದಿನಗಳಲ್ಲಿ ಸವಿವರವನ್ನು ಸಭೆಗೆ ದಾಖಲೆ ಸಹಿತ ನೀಡಿ ಸೂಕ್ತ ಉತ್ತರ ನೀಡಲಿದೆ. ನಂತರ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.
ರೈತರ ಪ್ರವೇಶ: ಸಾಮಾನ್ಯ ಸಭೆ ನಡೆಯುತ್ತಿದ್ದಾಗಲೆ ರೈತಪರ ಸಂಘಟನೆ ಕಾರ್ಯಕರ್ತರು ಸಭೆಯೊಳಗೆ ಪ್ರವೇಶಿಸಿ, ಗಂಗಾಕಲ್ಯಾಣ ಯೋಜನೆಯಲ್ಲಿ ಅಕ್ರಮವಾಗಿ ಫಲಾನುಭವಿಗಳಿರುವ ಬಗ್ಗೆ ಸೂಕ್ತಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು. ಇದೇ ಸಂದರ್ಭದಲ್ಲಿ ಇಂದಿರಾ ಅವಾಸ ಯೋಜನೆಯಿಂದ ಸಾಮಾನ್ಯ ವರ್ಗಕ್ಕೆ ತುಂಬಾ ಅನ್ಯಾಯವಾಗುತ್ತಿದೆ. ಫಲಾನುಭವಿಗಳ ಆಯ್ಕೆ ಮಾಡುವಾಗ ಸೂಕ್ತ ಪ್ರಾತಿನಿಧ್ಯ ನೀಡಬೇಕೆಂದು ತಾಪಂ ಸದಸ್ಯ ಗುರುಪ್ರಸಾದ್, ಬೆಣ್ಣೆ ಕೊಟ್ರೇಶ ಆಗ್ರಹಿಸಿದರು.
ಹುಡುಕಿಕೊಡಿ: ನಮ್ಮ ತಾಪಂ ವ್ಯಾಪ್ತಿಯಲ್ಲಿ ಬರುವ ಗ್ರಾಮ ಪಂಚಾಯಿತಿಗಳಲ್ಲಿನ ಬಡವರನ್ನು ಗುರುತಿಸಿ ಮನೆ ಇಲ್ಲದ ಫಲಾನುಭವಿಗಳ ಆಯ್ಕೆಪಟ್ಟಿಯನ್ನು ದಯವಿಟ್ಟು ಹುಡುಕಿಕೊಡಿ ಎಂದು ರಾಮದುರ್ಗ ತಾಪಂ ಸದಸ್ಯ ರಾಜಣ್ಣ ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ತಾಪಂ ಇಒ, ತಕ್ಷಣ ಪಟ್ಟಿಯನ್ನು ಹುಡುಕಿಕೊಡುವುದಾಗಿ ಭರವಸೆ ಇತ್ತರು.
ತಾಲೂಕಿನ ಗ್ರಾಮೀಣ ಭಾಗದ ಜನರಿಗೆ ಬೇಕಾದ ಅಗತ್ಯ ಸೌಲಭ್ಯಗಳ ಕುರಿತು ಹೆಚ್ಚು ಚರ್ಚೆಯಾಗಬೇಕಿತ್ತು. ಆದರೆ ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ಸದಸ್ಯರು ಸಭೆಯ ಸಮಯವನ್ನು ವ್ಯರ್ಥ ಮಾಡಿದರು. ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಗಂಭೀರತೆ ಎದುರಾಗುತ್ತಿದ್ದು, ಮಂಜಾಗ್ರತಾ ಕ್ರಮವಾಗಿ ಈ ಬಗ್ಗೆ ಸಭೆಯಲ್ಲಿ ಹೆಚ್ಚಿನ ಚರ್ಚೆ ನಡೆಯಬೇಕಿತ್ತು. ಆದರೆ ಇದಾವುದೂ ನಡೆಯದಿರುವುದು ತಾಲೂಕಿನ ಜನತೆಯ ದೌರ್ಭಾಗ್ಯ.
ತಾಪಂ ಅಧ್ಯಕ್ಷೆ ಮಂಗಳಮ್ಮ ಚಿನ್ನಾಪುರಪ್ಪ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಪೂಜಾರಹಳ್ಳಿ ಮಹಾಂತೇಶ, ತಾಪಂ ಸದಸ್ಯರು, ಅಧಿಕಾರಿಗಳು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.