ಬಳ್ಳಾರಿ

ಮದ್ಯಪಾನ ನಿಷೇಧಿಸದಿದ್ದರೆ ಸತ್ಯಾಗ್ರಹ

Published On :

ಕನ್ನಡಪ್ರಭ ವಾರ್ತೆ, ಬಳ್ಳಾರಿ, ಸೆ. 27
ಮದ್ಯಪಾನ, ಮಾದಕ ವಸ್ತುಗಳ ನಿಷೇಧಕ್ಕೆ ಸರ್ಕಾರ ಮುಂದಾಗದಿದ್ದರೆ ವಿಧಾನಸೌಧದ ಮುಂದೆ ಮಠಾಧೀಶರು ಸತ್ಯಾಗ್ರಹ ಮಾಡಬೇಕಾಗುತ್ತದೆ ಎಂದು ಕೊಟ್ಟೂರು ಸ್ವಾಮಿ ಮಠದ ಶ್ರೀ ಸಂಗನಬಸವ ಸ್ವಾಮೀಜಿ ಎಚ್ಚರಿಸಿದ್ದಾರೆ.
ಹಾನಗಲ್ ಕುಮಾರ ಮಹಾಶಿವಯೋಗಿಗಳ 146ನೇ ಜಯಂತಿ ಮಹೋತ್ಸವದ ಅಂಗವಾಗಿ ತಾಲೂಕಿನ ಅಸುಂಡಿ ಗ್ರಾಮದಲ್ಲಿ ಏರ್ಪಡಿಸಲಾಗಿದ್ದ 9ನೇ ಜನಜಾಗೃತಿ ಪಾದಯಾತ್ರೆಯಲ್ಲಿ ಮಾತನಾಡಿದ ಸ್ವಾಮೀಜಿ, ಮದ್ಯಪಾನ ನಿಷೇಧ, ಮಾದಕ ವಸ್ತುಗಳ ನಿಷೇಧಕ್ಕೆ ಎಲ್ಲರ ಸಹಕಾರ ಅಗತ್ಯ. ಮಠ-ಮಾನ್ಯಗಳ ಇಂತಹ ಜಾಗೃತಿ ಕಾರ್ಯಕ್ರಮ ದೊಂದಿಗೆ ಸರ್ಕಾರಗಳು ಕಠಿಣ ನಿರ್ಧಾರ ಕೈಗೊಂಡರೆ, ಜಾಗೃತಿ ಕಾರ್ಯಕ್ರಮಗಳ ಫಲ ನೀಡಿದಂತಾಗಿ, ಮದ್ಯಪಾನಮುಕ್ತ ಸಮಾಜವನ್ನಾಗಿ ಮಾಡಲು ಸಾಧ್ಯವಾಗುತ್ತದೆ ಎಂದರು.
ಅದ್ಧೂರಿ ಸ್ವಾಗತ
ಗ್ರಾಮದ ಜನತಾ ಕಾಲನಿಯ ಶ್ರೀ ಮಾರಮ್ಮ ದೇವಸ್ಥಾನದಿಂದ ಆರಂಭವಾಗಿ ಈಶ್ವರಗುಡಿ ದೇವಸ್ಥಾನ ವರೆಗೆ ಸಕಲ ಮಂಗಳ ವಾದ್ಯಗಳೊಂದಿಗೆ, ಮಹಿಳೆಯರು ಕಳಸ ಕುಂಭಗಳೊಂದಿಗೆ ಆಗಮಿಸಿದ ಜ್ಯೋತಿಯನ್ನು ಅದ್ಧೂರಿಯಾಗಿ ಸ್ವಾಗತಿಸಲಾಯಿತು.
ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ, ಸತತವಾಗಿ 9 ದಿನಗಳಿಂದ ದಿನಂಪ್ರತಿ ಬಳ್ಳಾರಿ ಜಿಲ್ಲೆ ಮತ್ತು ತಾಲೂಕಿನ ವಿವಿಧ ಗ್ರಾಮಗಳಲ್ಲಿ ಶಿವಯೋಗ ಮಂದಿರ ಸಾಧಕರನ್ನು ಜತೆಗೂಡಿಸಿಕೊಂಡು, ನಾಡಿ ವಿವಿಧ ಭಾಗಗಳಿಂದ ಆಗಮಿಸಿರುವ ಹರ-ಗುರು-ಚರಮೂರ್ತಿಗಳ ಸಮ್ಮುಖದಲ್ಲಿ ಕಾರ್ಯಕ್ರಮ ನಡೆಯಿತು.
ಮಾನಸಿಕ ತಜ್ಞ ಡಾ. ಟಿ.ಆರ್. ಶ್ರೀನಿವಾಸ್ ನೇತೃತ್ವದಲ್ಲಿ ಆರೋಗ್ಯ ಉಚಿತ ತಪಾಸಣಾ ಶಿಬಿರ ಏರ್ಪಡಿಸಲಾಗಿತ್ತು. ದುಶ್ಚಟಗಳಿಗೆ ಒಳಗಾದವರು, ಪುರುಷರು, ಮಹಿಳೆಯರು ಸೇರಿದಂತೆ ಒಟ್ಟು 300ಕ್ಕೂ ಹೆಚ್ಚು ಜನರಿಗೆ ಆರೋಗ್ಯ ತಪಾಸಣೆ ಮಾಡಲಾಯಿತು. ಶಿವಯೋಗವುಂದಿರದ ಸಾಧಕರು ಹಾಗೂ ಕಲ್ಯಾಣ ಮಹಾಸ್ವಾಮಿಗಳು, ಹಾವನೂರಿನ ಶಿವಕುಮಾರ ಸ್ವಾಮಿಗಳು, ಸದಾಶಿವ ಮಹಾಸ್ವಾಮಿಗಳು, ಅಕ್ಕಿಆಲೂರು, ಮರಿಮಹಾಂತಸ್ವಾಮಿಗಳು, ಶಿವಬಸವ ಸ್ವಾಮಿಗಳು, ಮಾಜಿ ಸಚಿವರಾದ ಅಲ್ಲಂ ವೀರಭದ್ರಪ್ಪ, ವೀ.ವಿ. ಸಂಘದ ಅಧ್ಯಕ್ಷ ಅಲ್ಲಂ ಗುರುಬಸವರಾಜ್, ಕಾರ್ಯದರ್ಶಿ ಗುರುಸಿದ್ದಸ್ವಾಮಿ, ಅರವಿಬಸವಗೌಡ ಹಾಗೂ ಗ್ರಾಮದ ಹಿರಿಯರಾದ ಬಸವರಾಜಸ್ವಾಮಿ, ಟಿ. ಹೇಮರೆಡ್ಡಿ, ಎ.ಜಿ. ಎರ್ರಿಬಸವನಗೌಡ, ಗೋಡೆಹಾಳ್, ನಾಗಭೂಷಣಗೌಡ, ಎಸ್. ನಾಗರೆಡ್ಡಿ, ಟಿ. ಮಲ್ಲಿಕಾರ್ಜುನ ರೆಡ್ಡಿ, ಅಸುಂಡಿ ನಾಗರಾಜಗೌಡ, ಮಹಾನಗರ ಪಾಲಿಕೆ ಸದಸ್ಯ ಮಲ್ಲನಗೌಡ, ಕೆ. ರಾಮಣ್ಣ, ಕೆ. ಕಾನೆಪ್ಪ, ನಕ್ಕುಲ ಮಾರೆಣ್ಣ, ಅನ್ವರ್ ಬಾಷಾ, ಅಹಮ್ಮದ್ ಸಾಬ್, ಸಾಲಿಸಿದ್ದಯ್ಯಸ್ವಾಮಿ, ಕಾಂಗ್ರೆಸ್ ಎಸ್.ಟಿ. ಮೋರ್ಚಾ ಅಧ್ಯಕ್ಷ ಅಸುಂಡಿ ಹೊನ್ನೂರಪ್ಪ, ಡಿ. ಪ್ರಕಾಶ್, ತಾಪಂ ಮಾಜಿ ಅಧ್ಯಕ್ಷ, ವೀರಶೈವ ತರುಣ ಸಂಘದ ಸದಸ್ಯರು, ಬಳ್ಳಾರಿ ಮಹಾನಗರ ಪಾಲಿಕೆ ಸದಸ್ಯರು ಇದ್ದರು. ಗ್ರಾಮದ ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.