ಬಳ್ಳಾರಿ

ಪಟ್ಟಭದ್ರ ಹಿತಾಸಕ್ತಿಗೆ ಮಣಿದು ದೂರು

Published On :

ಕಂಪ್ಲಿ: ಪಟ್ಟಭದ್ರಹಿತಾಸಕ್ತಿಗಳ ಒತ್ತಡಕ್ಕೆ ಮಣಿದು ಬಿಜೆಪಿ ಮುಖಂಡರ ಮೇಲೆ ಚುನಾವಣಾ ನೀತಿಸಂಹಿತೆ ದೂರು ದಾಖಲಿಸಿದ ಫೈಯಿಂಗ್ ಸ್ಕ್ವಾಡ್, ಉಪ ತಹಸೀಲ್ದಾರ್ ಕೆ. ಬಾಲಪ್ಪ ಅವರ ಕಾರ್ಯವೈಖರಿಯನ್ನು ಕಂಪ್ಲಿ ಬಿಜೆಪಿ ಮುಖಂಡ ಜಿ. ರಾಮಣ್ಣ ಖಂಡಿಸಿದ್ದಾರೆ.
ಇಲ್ಲಿನ ಬಿಜೆಪಿ ಮುಖಂಡ ಹಾಗೂ ಪುರಸಭೆ ಮಾಜಿ ಅಧ್ಯಕ್ಷ ಪಿ. ಬ್ರಹ್ಮಯ್ಯ ಅವರ ನಿವಾಸದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶನಿವಾರ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಜಿ. ಲಿಂಗನಗೌಡರ ನಿವಾಸಕ್ಕೆ ರಾಯಚೂರು ಸಂಸದ ಸಣ್ಣ ಫಕ್ಕೀರಪ್ಪ ಆಗಮಿಸಿದ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರು ಔಪಚಾರಿಕವಾಗಿ ಆಗಮಿಸಿದ್ದರು. ಆದರೆ, ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಎಂದು ದೂರು ಸಲ್ಲಿಸಿರುವುದು ಸರಿಯಲ್ಲ. ಕಾಂಗ್ರೆಸ್ ಮುಖಂಡರಾದ ಮಾಜಿ ಸಂಸದ ಕೆ.ಸಿ. ಕೊಂಡಯ್ಯ, ಎಚ್.ಡಿ. ಬಸವರಾಜ್ ಕಂಪ್ಲಿಗೆ ಬಂದಾಗ ಹಾಗೂ ಶಾಸಕ ಅನಿಲ್ ಲಾಡ್ ಗೋನಾಳ್ ಗ್ರಾಮಕ್ಕೆ ಭೇಟಿ ನೀಡಿದಾಗ ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪಾಲ್ಗೊಂಡಿದ್ದರು. ಅವರ ಮೇಲೆ ದೂರು ದಾಖಲಿಸದ ಚುನಾವಣಾಧಿಕಾರಿಗಳು ವಿರೋಧ ಪಕ್ಷಗಳ ಕಾರ್ಯಕರ್ತರ ಮೇಲೆ ದೂರು ದಾಖಲಿಸಿದ್ದು ತಾರತಮ್ಯ ನೀತಿಯಾಗಿದೆ. ವಿರೋಧ ಪಕ್ಷದವರಿಗೆ ಒಂದು ಕಾನೂನು, ಆಡಳಿತ ಪಕ್ಷದವರಿಗೆ ಒಂದು ಕಾನೂನು ಜಾರಿ ಮಾಡುವುದು ಸರಿಯಲ್ಲ ಎಂದು ಆರೋಪಿಸಿದರು.
ಕಾನೂನು ಎಲ್ಲರಿಗೂ ಒಂದೇ ಆಗಿದೆ. ಬಿಜೆಪಿ ಕಾರ್ಯಕರ್ತರ ಮೇಲೆ ಮಾತ್ರ ದೂರು ದಾಖಲು ಮಾಡುವುದು ಸರಿಯಲ್ಲ. ಪ್ರಚಾರ ಮಾಡುವ ಬಗ್ಗೆ ಸೂಕ್ತ ಮಾರ್ಗದರ್ಶನ ನೀಡಲಿ, ಬಿಜೆಪಿ ಮೇಲೆ ವಿನಾಕಾರಣ ಗದಾ ಪ್ರಹಾರ ಮಾಡುವುದನ್ನು ಬಿಟ್ಟು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಬೇಕು. ಅಧಿಕಾರ ದುರ್ಬಳಕೆ ಮೂಲಕ ವಿರೋಧ ಪಕ್ಷಗಳ ಕಾರ್ಯಕರ್ತರ ಮೇಲೆ ದ್ವೇಷ ರಾಜಕಾರಣ ಮಾಡುವುದನ್ನು ನಿಲ್ಲಿಸಬೇಕಿದೆ. ಇದೇ ರೀತಿ ತಾರತಮ್ಯ ಮುಂದುವರಿದಲ್ಲಿ ಹೋರಾಟ ಹಮ್ಮಿಕೊಳ್ಳುವುದಾಗಿ ಎಚ್ಚರಿಕೆ ನೀಡಿದರು.
ಯುವಮೋರ್ಚಾ ಅಧ್ಯಕ್ಷ ಡಿ.ಎಚ್.ಎಂ. ರವೀಂದ್ರ ಮಾತನಾಡಿ, ರಾಯಚೂರು ಸಂಸದ ಸಣ್ಣ ಫಕ್ಕೀರಪ್ಪ ಅವರು ಬರುವ ಬಗ್ಗೆ ಅರ್ಜಿ ಮೂಲಕ ಚುನಾವಣಾಧಿಕಾರಿಗಳ ಗಮನಕ್ಕೆ ತರಲು ಯತ್ನಿಸಿದ್ದು, ಚುನಾವಣಾಧಿಕಾರಿಗಳಿಂದ ಸೂಕ್ತ ಸ್ಪಂದನೆ ದೊರೆತಿಲ್ಲ. ಸರಿಯಾದ ಮಾರ್ಗದರ್ಶನ ನೀಡಿಲ್ಲ. ಚುನಾವಣಾಧಿಕಾರಿಗಳು ಸಕಾಲಕ್ಕೆ ಲಭ್ಯವಾಗುತ್ತಿಲ್ಲ ಎಂದು ದೂರಿದರು.
ಪುರಸಭೆ ಮಾಜಿ ಅಧ್ಯಕ್ಷ ಪಿ. ಬ್ರಹ್ಮಯ್ಯ, ಬಿ. ಸಿದ್ದಪ್ಪ, ಎಪಿಎಂಸಿ ಅಧ್ಯಕ್ಷ ಎನ್.ಪುರುಷೋತ್ತಮ, ಪುರಸಭೆ ಸದಸ್ಯ ಎನ್. ರಾಮಾಂಜನೇಯಲು, ಆರ್. ಇಮಾಮ್ ಸಾಬ್ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.