ಬಳ್ಳಾರಿ

ಕೊಟ್ಟೂರೇಶ್ವರ ಸ್ವಾಮಿ ದೇವಸ್ಥಾನಕ್ಕೆ ಸಿಸಿ ಕಣ್ಗಾವಲು

Published On :

ಜಿ. ಸೋಮಶೇಖರ
ಕನ್ನಡಪ್ರಭ ವಾರ್ತೆ, ಕೊಟ್ಟೂರು, ಏ. 6
ರಾಜ್ಯದ ಪ್ರಮುಖ ಧಾರ್ಮಿಕ ಸ್ಥಳಗಳಲ್ಲಿ ಒಂದಾದ ಕೊಟ್ಟೂರು ಶ್ರೀಗುರು ಕೊಟ್ಟೂರೇಶ್ವರ ಸ್ವಾಮಿ ದೇವಸ್ಥಾನ ಅಂತೂ ಇಂತೂ ಸಿ.ಸಿ. ಕ್ಯಾಮೆರಾ ಅಳವಡಿಸಿಕೊಂಡಿದೆ. ಕೋಟಿ ಗಿಂತಲೂ ಅಧಿಕ ವರಮಾನ ಹೊಂದಿ ಎ  ಗ್ರೇಡ್ ಎನಿಸಿಕೊಂಡಿದ್ದ ದೇವಸ್ಥಾನಕ್ಕೆ ಸಿಸಿ ಕ್ಯಾಮೆರಾ ಅಳವಡಿಕೆ ಅತ್ಯವಶ್ಯಕವಾಗಿತ್ತಾದರೂ ಇಲ್ಲಿವರೆಗೂ ಅಳವಡಿಸಿಕೊಂಡಿರಲಿಲ್ಲ. ಸಿಸಿ ಕ್ಯಾಮೆರಾಗಳ ಕಣ್ಗಾವಲು ಸದಾ ಇರಲಿದ್ದು, ಲಕ್ಷಾಂತರ ಭಕ್ತರು ಸಂತಸ ವ್ಯಕ್ತಪಡಿಸಿದ್ದಾರೆ.
ಶ್ರೀಗುರು ಕೊಟ್ಟೂರೇಶ್ವರ ಸ್ವಾಮಿಯ ದೇವಸ್ಥಾನದಲ್ಲಿ ದೊಡ್ಡ ಗಾತ್ರದ ಪ್ರಮುಖ ಭಕ್ತರ ಕಾಣಿಕೆ ಹುಂಡಿಗಳಿದ್ದು, ದೇವರ ಮೂರ್ತಿಗಳು ಅಪಾರ ಬೆಲೆ ಬಾಳುವ ಚಿನ್ನಾಭರಣಗಳನ್ನು ಒಳಗೊಂಡಿವೆ. ಸುರಕ್ಷತೆ ಮತ್ತು ಭದ್ರತೆ ಕೊರತೆ ಸದಾ ದೇವಸ್ಥಾನಕ್ಕೆ ಇತ್ತಾದರೂ ದೊಡ್ಡ ಮಟ್ಟದ ಕಳ್ಳತನಗಳು ಜರುಗಿರಲಿಲ್ಲ.
ಇದೊಂದು ಸಮಾಧಾನಕರ ವಿಷಯವಾಗಿದ್ದರೂ ಜನಸಂದಣಿ ಸಮಯಗಳಲ್ಲಿ ಸಣ್ಣ-ಪುಟ್ಟ ಕಳ್ಳತನಗಳು ಆಗಾಗ ಜರುಗುತ್ತಿದ್ದವು. ಹೀಗಾಗಿ ಭಕ್ತರ ಪಾಲಿನ ತಲೆನೋವಾಗಿ ಪರಿಣಮಿಸಿತ್ತು. ಈ ಕಾರಣಕ್ಕಾಗಿಯೇ ಸಿಸಿ ಕ್ಯಾಮೆರಾ ಮತ್ತು ಟಿವಿ ಅಳವಡಿಸಿಕೊಳ್ಳುವಂತೆ ಪೊಲೀಸ್ ಇಲಾಖೆ ಮತ್ತು ಸಾರ್ವಜನಿಕರು ದೇವಸ್ಥಾನದ ಅಧಿಕಾರಿಗಳ ಮೇಲೆ ಪದೇ ಪದೇ ಒತ್ತಡ ಏರುತ್ತಿದ್ದರು.
ದೇವಸ್ಥಾನದ ಒಳಾವರಣದ ಎಡ ಮತ್ತು ಬಲ ಭಾಗ, ಹೊರಭಾಗಗಳಲ್ಲಿ ಇದೀಗ ಸಿ.ಸಿ. ಕ್ಯಾಮೆರಾಗಳನ್ನು ಧಾರ್ಮಿಕ ದತ್ತಿ ಮತ್ತು ಉಂಬಳಿ ಇಲಾಖೆ ಅಳವಡಿಸಿದೆ.
ದೇವಸ್ಥಾನಕ್ಕೆ ಆಗಮಿಸುವ ಭಕ್ತರು ಮತ್ತು ದೇವಸ್ಥಾನದಲ್ಲಿ ನಡೆಯುವ ಪ್ರತಿಘಟನಾವಳಿಗಳನ್ನು ಕ್ಯಾಮೆರಾಗಳು ಬಿಡುವಿಲ್ಲದೇ ಚಿತ್ರಕರಿಸುತ್ತವೆ. ಸುಮಾರು 40 ಅಡಿಗಿಂತಲೂ ಹೆಚ್ಚಿನ ಪ್ರದೇಶ ವ್ಯಾಪ್ತಿಯುದ್ದಕ್ಕೂ ಕ್ಯಾಮೆರಾಗಳು ನಿರಂತರ ದೃಶ್ಯ ಸೆರೆ ಹಿಡಿಯುತ್ತವೆ. ದೃಶ್ಯಾವಳಿಗಳನ್ನು ದೇವಸ್ಥಾನದ ಹಿಂಭಾಗದಲ್ಲಿನ ಧಾರ್ಮಿಕ ದತ್ತಿ ಇಲಾಖೆ ಕಾರ್ಯನಿರ್ವಾಹಕ ಅಧಿಕಾರಿಗಳ ಕಚೇರಿಯಲ್ಲಿ ಕುಳಿತ ಅಧಿಕಾರಿಗಳು ವೀಕ್ಷಿಸಬಹುದಾಗಿದೆ. ದೇವಸ್ಥಾನ ಆವರಣದಲ್ಲಿ ನಡೆಯುತ್ತಿದ್ದ ಚಿಕ್ಕಪುಟ್ಟ ಕಳ್ಳತನಗಳಿಗೆ ಇದೀಗ ಕಾಡಿವಾಣ ಬೀಳುವಂತಾಗಬಹುದಾಗಿದೆ. ದೇವಸ್ಥಾನ ಬಳಗ ಮತ್ತು ಸಿಬ್ಬಂದಿ ಯಾವುದೇ ಹಂತದಲ್ಲಿ ಅಕ್ರಮ ಎಸಗದಂತೆ ಸಿ.ಸಿ. ಕ್ಯಾಮೆರಾಗಳು ಸದಾ ಎಚ್ಚರಿಸುವಂತಾಗಿದೆ. ಸಿ.ಸಿ. ಕ್ಯಾಮೆರಾಗಳನ್ನು ತಾತ್ಕಾಲಿಕ ಅಳವಡಿಸಲಾಗುತ್ತಿತ್ತು.
ಇದಕ್ಕೆಂದೆ ದುಬಾರಿ ಬಾಡಿಗೆ ದರವನ್ನು ಖಾಸಗಿ ಕಂಪನಿಯವರಿಗೆ ಇಲಾಖೆ ನೀಡುತ್ತಿತ್ತು. ಕಾಯಂ ಸಿಸಿ ಟಿವಿ ಅಳವಡಿಸಲು ಕಳೆದ ವರ್ಷ ಯೋಜನೆ ರೂಪಿಸಲಾಗಿತ್ತು. ಆದರೆ, ಆಡಳಿತಾತ್ಮಕ ತೊಂದರೆಗಳಿಂದಾಗಿ ಕಾರ್ಯ ನೆರವೇರಿರಲಿಲ್ಲ. ಇದೀಗ ಇದು ನೆರವೇರಿದೆ.
ಭದ್ರತೆ: ದೇವಸ್ಥಾನಕ್ಕೆ ಭದ್ರತೆ ಮತ್ತು ಭಕ್ತರ ನೆರವಿಗಾಗಿ ಸಿಸಿ ಕ್ಯಾಮೆರಾ ಮತ್ತು ಟಿವಿ ಅಳವಡಿಸಲು ಕ್ರಮಕೈಗೊಂಡಿದ್ದೇವೆ. ಇದರ ನೆರವಿನಿಂದ ಎಲ್ಲ ಬಗೆಯ ಅಕ್ರಮ ಮತ್ತಿತರ ಚಟುವಟಿಕೆಗಳು ಕ್ಯಾಮೆರಾದಲ್ಲಿ ದಾಖಲಾಗುತ್ತವೆ. ಯಾರೊಬ್ಬರೂ ಇವುಗಳ ಸೆರೆಯಿಂದ ತಪ್ಪಿಸಿಕೊಳ್ಳಲಾಗುವುದಿಲ್ಲ.
ಸಿಸಿ ಕ್ಯಾಮೆರಾಗಳಲ್ಲಿನ ದೃಶ್ಯಾವಳಿಗಳನ್ನು ಸತತ ವೀಕ್ಷಿಸಲು ಇದೀಗ ತಮ್ಮ ಕಚೇರಿಯಲ್ಲಿ ಮಾತ್ರ ಟಿವಿ ಅಳವಡಿಸಲಾಗಿದ್ದು, ಮುಂದಿನ ದಿನಗಳಲ್ಲಿ ಧರ್ಮಕರ್ತರ ಕಚೇರಿಯಲ್ಲಿಯೂ ಅಳವಡಿಸಲು ಕ್ರಮಕೈಗೊಳ್ಳಲಾಗುವುದು ಎಂದು ದೇವಸ್ಥಾನದ ಧಾರ್ಮಿಕ ದತ್ತಿ ಇಲಾಖೆ ಕಾರ್ಯನಿರ್ವಾಹಕ ಅಧಿಕಾರಿ ಅರವಿಂದ ಸುತಗುಂಡಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.