ಶ್ರೀರಾಮುಲು ವಿರುದ್ಧ ಮತ ಜಾಗೃತಿ
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಏ. 11
ಬಳ್ಳಾರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ. ಶ್ರೀರಾಮುಲು ಅವರಿಗೆ ಮತ ನೀಡದಂತೆ, ಕಳೆದ ವಿಧಾನಸಭಾ ಚುನಾವಣೆಯ ಬಿಎಸ್‌ಆರ್ ಕಾಂಗ್ರೆಸ್ ಪರಾಜಿತ ಅಭ್ಯರ್ಥಿಗಳು ನಗರದಲ್ಲಿ ಶುಕ್ರವಾರ ಕರಪತ್ರಗಳನ್ನು ಹಂಚುವ ಮೂಲಕ ಪ್ರಚಾರ ನಡೆಸಿ, ಜಾಗೃತಿ ಮೂಡಿಸಿದರು.
ಸ್ಥಳೀಯ ಶ್ರೀ ಕನಕದುರ್ಗಮ್ಮ ದೇವಸ್ಥಾನದಿಂದ ಪ್ರಚಾರ ಕಾರ್ಯ ಆರಂಭಿಸಿದ ಬಿಎಸ್‌ಆರ್ ಕಾಂಗ್ರೆಸ್ ಪರಾಜಿತ ಅಭ್ಯರ್ಥಿಗಳಾದ ಕೋಲಾರದ ಸಿ.ಕೆ. ಜಗದೀಶ್, ಬೆಂಗಳೂರು ಗಾಂಧಿನಗರದ ವಿ. ನಾಗರಾಜ್, ಬಾಲಕೃಷ್ಣ, ಸಹೋದರಿಯರಾದ ಲೀಲಾವತಿ, ಇಂದಿರಾ ಇನ್ನಿತರರು ಆಟೋ ಚಾಲಕರು, ಪಾದಚಾರಿಗಳು ಹಾಗೂ ಸ್ಥಳೀಯ ಎಸ್‌ಜಿ ಕಾಲೇಜು ರಸ್ತೆಯಲ್ಲಿ ಮನೆ ಮನೆಗೆ ತೆರಳಿ ಕರಪತ್ರ ಹಂಚುವ ಮೂಲಕ ಜಾಗೃತಿ ಮೂಡಿಸಿದರು.
ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕೋಲಾರದ ಮುಳಬಾಗಿಲಿನ ಸಿ.ಕೆ. ಜಗದೀಶ್, ನಗರದಾದ್ಯಂತ ಜನಸಂದಣಿ ಇರುವ ಪ್ರದೇಶ, ಮನೆಮನೆಗೆ ತೆರಳಿ ಕರಪತ್ರ ಹಂಚುವ ಮೂಲಕ ಶ್ರೀರಾಮುಲು ಪರ ಮತ ಚಲಾಯಿಸದಂತೆ ಜಾಗೃತಿ ಮೂಡಿಸಲಾಗುವುದು. ಶ್ರೀರಾಮುಲು ಅವರಿಗೆ ಜಿಲ್ಲೆ ಅಭಿವೃದ್ಧಿ ಕುರಿತು ದೂರದೃಷ್ಟಿ ಚಿಂತನೆಗಳಿಲ್ಲ. ನೈಸರ್ಗಿಕ ಸಂಪತ್ತು ಉಳಿಸುವ ಜವಾಬ್ದಾರಿಯಿಲ್ಲ. ಕುಡಿವ ನೀರಿನ ಸಮಸ್ಯೆ ಎದುರಿಸುತ್ತಿದ್ದರೂ ದಿನಕ್ಕೆ ರು. 10, ರು. 15 ಪಡೆಯುತ್ತಿದ್ದಾರೆ. ಈ ಸಮಸ್ಯೆಗೆ ಇಲ್ಲಿನ ಮುಖಂಡರು ಯಾವುದೇ ಕ್ರಮ ಕೈಗೊಂಡಿಲ್ಲ. ಈ ನಿಟ್ಟಿನಲ್ಲಿ ಯಾರೂ ಅವರಿಗೆ ಮತ ನೀಡದೆ, ಉತ್ತಮರಿಗೆ ಮತ ನೀಡಬೇಕೆಂದು ಮನವಿ ಮಾಡಿದರು. ಶ್ರೀರಾಮುಲು ಅವರಿಗೆ ಯಾರೂ ಮತ ಚಲಾಯಿಸಬಾರದು ಎಂಬ ನಿಟ್ಟಿನಲ್ಲಿ ಜಿಲ್ಲಾದ್ಯಂತ ಏ. 15ರ ವರೆಗೆ ಜಾಗೃತಿ ಮೂಡಿಸಲಾಗುವುದು ಎಂದರು.
ಮತ ಹಾಕಿ ಮೋಸ ಹೋಗಬೇಡಿ: ಇನ್ನೋರ್ವ ಅಭ್ಯರ್ಥಿ ಬಾಲಕೃಷ್ಣ ಮಾತನಾಡಿ, ತಮ್ಮ ಊರನ್ನೇ ಸರಿಯಾಗಿ ಅಭಿವೃದ್ಧಿ ಮಾಡದ ಶ್ರೀರಾಮುಲು ಇದೀಗ ದೇಶ ಅಭಿವೃದ್ಧಿ ಪಡಿಸೋಕೆ ಹೊರಟಿದ್ದಾರೆ. ಅವರಿಂದ ಯಾವುದೇ ಅಭಿವೃದ್ಧಿ ನಿರೀಕ್ಷಿಸಲು ಸಾಧ್ಯವಿಲ್ಲ. ಹೀಗಾಗಿ ಉತ್ತಮ ವ್ಯಕ್ತಿಗಳಿಗೆ ಮತದಾನ ಮಾಡಬೇಕೆಂದು ಜಿಲ್ಲೆಯ ಜನರಲ್ಲಿ ಆಗ್ರಹಿಸುತ್ತೇವೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

