20 ನಿಮಿಷ 20 ಸುದ್ದಿ
ದೇವಲಾಪುರ ಗ್ರಾಪಂ ಅಧ್ಯಕ್ಷೆ ವಿರುದ್ಧ ಅವಿಶ್ವಾಸ ಮಂಡನೆ
ಕಂಪ್ಲಿ: ಸಮೀಪದ ದೇವಲಾಪುರ ಗ್ರಾಪಂ ಸದಸ್ಯರು ಶನಿವಾರ ಹೊಸಪೇಟೆ ಸಹಾಯಕ ಆಯುಕ್ತರ ಸಮ್ಮುಖ ಗ್ರಾಪಂ ಅಧ್ಯಕ್ಷೆ ವಿರುದ್ಧ ಕೈ ಎತ್ತುವ ಮೂಲಕ ಅವಿಶ್ವಾಸ ವ್ಯಕ್ತಪಡಿಸಿದರು. ಸಹಾಯಕ ಆಯುಕ್ತ ಪಿ. ಸುನೀಲ್ಕುಮಾರ್ ಮಾತನಾಡಿ, ಗ್ರಾಪಂ ಅಧ್ಯಕ್ಷೆ ಶಾರದಾ ಒಡೆಯರ್ ವಿರುದ್ಧ 14 ಸದಸ್ಯರು ಅವಿಶ್ವಾಸ ನಿರ್ಣಯ ಕೈಗೊಂಡಿದ್ದು, ಮುಂದಿನ ಪ್ರಕ್ರಿಯೆಗಳನ್ನು ಕೈಗೊಳ್ಳುವುದಾಗಿ ಹೇಳಿದರು. ಮಾ. 19, 2014ರಂದು ಅಧ್ಯಕ್ಷೆ ವಿರುದ್ಧ ಅವಿಶ್ವಾಸ ವ್ಯಕ್ತಪಡಿಸಿದ ಪತ್ರ ಸಲ್ಲಿಸಿದ್ದರಿಂದ ಶನಿವಾರ ಸಭೆ ಜರುಗಿಸಲಾಗಿದೆ. ಅಧ್ಯಕ್ಷರ ವಿರುದ್ಧ 14 ಸದಸ್ಯರು ಅವಿಶ್ವಾಸ ವ್ಯಕ್ತಪಡಿಸಿದ್ದಾರೆ. ಗ್ರಾಪಂ ಸದಸ್ಯರಾದ ಚನ್ನದಾಸರ ಚನ್ನಮ್ಮ, ತಾಯಮ್ಮ, ರವಿ ಕಿಷನ್ ನಾಯ್ಡು, ಶಿವಕುಮಾರ, ನಾಗಪ್ಪ, ತಾಯಮ್ಮ, ಅಂಜಿನಪ್ಪ, ಕುರಿ ಬೆನಕಪ್ಪ, ಅಮರನಾಥ, ಆನಂದಮ್ಮ, ತಳವಾರ ತಿಪ್ಪೇಸ್ವಾಮಿ, ದಾಸರ ಮರಿಸ್ವಾಮಿ, ವಿ. ವೀರೇಶ್, ಎನ್. ಹೇಮಾವತಿ, ಪಿಡಿಒ ಶಿಲ್ಪಾರಾಣಿ ಇದ್ದರು.
ಪ್ರಾಣೇಶ್ಗೆ ಕನ್ನಡ ಹಾಸ್ಯರತ್ನ ಪ್ರಶಸ್ತಿ
ಬಳ್ಳಾರಿ: ನಗರದ ಡಾ. ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಭಾವಸಾರ ವಿಜನ್ ಇಂಡಿಯಾ ಸಂಘದ ವಾರ್ಷಿಕೋತ್ಸವ ಇತ್ತೀಚೆಗೆ ಜರುಗಿತು. ಅತಿಥಿಯಾಗಿ ಭಾಗವಹಿಸಿದ್ದ ಖ್ಯಾತ ಹಾಸ್ಯ ಕಲಾವಿದ ಗಂಗಾವತಿ ಪ್ರಾಣೇಶ್ಗೆ ಸಂಘದ ಅಧ್ಯಕ್ಷ ಶ್ರೀನಿವಾಸ ದೇವಳೆ ಕನ್ನಡ ಹಾಸ್ಯ ರತ್ನ ಪ್ರಶಸ್ತಿ ನೀಡಿ ಗೌರವಿಸಿ, ಸನ್ಮಾನಿಸಿದರು. ಹಾಸ್ಯ ಕಲಾವಿದ ಬಸವರಾಜ ಮಹಾಮನಿ, ನರಸಿಂಹ ಜೋಷಿ ಅವರನ್ನು ಸನ್ಮಾನಿಸಲಾಯಿತು. ಭಾವಸಾರ ವಿಜನ್ ಇಂಡಿಯಾ ಅಧ್ಯಕ್ಷ ಶ್ರೀನಿವಾಸ ದೇವಳೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ನಂತರ ಹಾಸ್ಯ ಕಲಾವಿದರಿಂದ ನಗೆ ಸಂಜೆ ಕಾರ್ಯಕ್ರಮ ಜರುಗಿತು. ಸಂಘದ ಮಾಜಿ ಅಧ್ಯಕ್ಷ ದೀಪಕ್ ಕಾಕಡೆ, ಗೋಪಾಲ್ ರಾವ್ ದುಸ್ತಕರ್ ಇತರರಿದ್ದರು. ಕಾರ್ಯದರ್ಶಿ ರಾಜಶೇಖರ ದೇವಳೆ ನಿರ್ವಹಿಸಿದರು.
10ನೇ ರ್ಯಾಂಕ್: ಅಪೂರ್ವ ಹಿರೇಮಠಗೆ ಸನ್ಮಾನ
ಕೂಡ್ಲಿಗಿ: 2010-11ನೇ ಸಾಲಿನ ಬಿಎಸ್ಸಿ ಪದವಿ ಪರೀಕ್ಷೆಯಲ್ಲಿ ಗುಲ್ಬರ್ಗ ವಿಶ್ವವಿದ್ಯಾಲಯಕ್ಕೆ 10ನೇ ರ್ಯಾಂಕ್ ಪಡೆದ ಪಟ್ಟಣದ ಅಪೂರ್ವ ಹಿರೇಮಠ ಅವರಿಗೆ ಇತ್ತೀಚೆಗೆ ಹೊಸಪೇಟೆಯಲ್ಲಿ ಜರುಗಿದ ವಿಜಯನಗರ ಮಹಾವಿದ್ಯಾಲಯದ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಸುವರ್ಣ ಮಹೋತ್ಸವದಲ್ಲಿ ಸಾಧಕ ಹಳೆ ವಿದ್ಯಾರ್ಥಿಗಳು, ವಿವಿಯಲ್ಲಿ ರ್ಯಾಂಕ್ ಪಡೆದ ಎಲ್ಲ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಅಪೂರ್ವ ಪ್ರಸಕ್ತ ಮೈಸೂರಿನಲ್ಲಿ ಎಂಸಿಎ ವ್ಯಾಸಂಗ ಮಾಡುತ್ತಿದ್ದು, ಸ್ಥಳೀಯ ಹಿರೇಮಠ ವಿದ್ಯಾಪೀಠದ ಕಾಲೇಜಿನ ಪ್ರಾಚಾರ್ಯ ಸಿದ್ಧರಾಮ ಹಿರೇಮಠ ಅವರ ಪುತ್ರಿ. ಅಪೂರ್ವ ಹಿರೇಮಠ ಸಾಧನೆಗೆ ಕೂಡ್ಲಿಗಿ ಕಾರ್ಯನಿರತ ಪತ್ರಕರ್ತರ ಸಂಘ, ತಾಲೂಕು ಕಸಾಪ, ಪಟ್ಟಣದ ಸಂಘ- ಸಂಸ್ಥೆಗಳು ಗಣ್ಯರು ಸಂತಸ ವ್ಯಕ್ತಪಡಿಸಿದ್ದಾರೆ.
ಹೊಸಪೇಟೆ: ಕ್ರೈಸ್ತ ಬಾಂಧವರಿಂದ ಪ್ರಾರ್ಥನೆ
ಹೊಸಪೇಟೆ: ನಗರದ ತಿರು ಹೃದಯ ದೇವಾಲಯದಲ್ಲಿ ಕ್ಯಾಥೋಲಿಕ್ ಕ್ರೈಸ್ತರು ಪವಿತ್ರ ಶುಕ್ರವಾರ ಆಚರಿಸಿ, ಪ್ರಾರ್ಥನೆ ಸಲ್ಲಿಸಿದರು. ಏಸುಕ್ರಿಸ್ತನನ್ನು ಶಿಲುಬೆಗೇರಿಸಿದ ದಿನವಾದ ಶುಕ್ರವಾರದಂದು 40 ದಿನ ಉಪವಾಸ ಮಾಡಿದ ಕ್ರೈಸ್ತರು ಶುಕ್ರವಾರದಂದು ಇಡಿ ದಿನ ಉಪವಾಸ ಮಾಡಿ, ಪ್ರಾರ್ಥನೆ ಮಾಡಿದರು. ಫಾದರ್ ಹೆನ್ರಿ ಫರ್ನಾಂಡಿಸ್, ಫಾದರ್ ಅಮಲ್ ಭಾಗವಹಿಸಿದ್ದರು. ಕ್ರೈಸ್ತರು ಶಿಲುಬೆ ಹೊತ್ತು ತಂದು ಪ್ರಾರ್ಥನೆ ಸಲ್ಲಿಸಿದರು. ದೇವಮಾನವ ಕ್ರಿಸ್ತನು ಜಗತ್ತಿಗೆ ಪ್ರೀತಿ, ಶಾಂತಿ ಸಾರಿದನು. ಆತನನ್ನು ಸ್ಮರಿಸಿಕೊಳ್ಳುವ ದಿನವಾಗಿ ಪವಿತ್ರ ದಿನವನ್ನಾಗಿ ಆಚರಿಸಲಾಯಿತು. ಕ್ರೈಸ್ತ ಬಂಧುಗಳ ಪ್ರಾರ್ಥನೆ ಸ್ಥಳದಲ್ಲಿ ಉಪವಾಸ ನಿರತ ಭಕ್ತರಿಗೆ ಪಾನಕ ಸೇವೆಯನ್ನು ಕ್ರೈಸ್ತ ಬಂಧುಗಳು ನಡೆಸಿಕೊಟ್ಟರು.
ಸಂಚಾರಿ ನಿಯಮ ಕಡ್ಡಾಯ ಪಾಲಿಸಿ: ಯಾಳ್ಪಿ ವಲಿಭಾಷಾ
ಬಳ್ಳಾರಿ: ಪ್ರತಿಯೊಬ್ಬ ಆಟೋ ಚಾಲಕ ಸಂಚಾರಿ ನಿಯಮ ಕಡ್ಡಾಯ ಪಾಲಿಸಬೇಕು ಎಂದು ಕರ್ನಾಟಕ ಯುವ ಜಾಗೃತಿ ವೇದಿಕೆ ರಾಜ್ಯಾಧ್ಯಕ್ಷ ಯಾಳ್ಪಿ ವಲಿಭಾಷಾ ಹೇಳಿದರು. ನಗರದ ರೂಪನಗುಡಿ ರಸ್ತೆಯ ಹುಲಿಗೆಮ್ಮ ದೇವಸ್ಥಾನದ ಬಳಿ ಕರ್ನಾಟಕ ಯುವ ಜಾಗೃತಿ ವೇದಿಕೆ ಆಟೋ ಚಾಲಕರ ಘಟಕದ ನಾಮಫಲಕ ಉದ್ಘಾಟಿಸಿ ಮಾತನಾಡಿದರು. ಆಟೋ ಚಾಲಕರು ಸಮವಸ್ತ್ರಗ ಧರಿಸಿ, ಶಿಸ್ತು ಕಾಪಾಡಬೇಕು. ಎಲ್ಲರೂ ಸಂಘಟಿತರಾಗಿ ತಮ್ಮ ನ್ಯಾಯಯುತ ಬೇಡಿಕೆಗಳ ಈಡೇರಿಕೆಗಾಗಿ ಹೋರಾಡಲು ಮುಂದಾಗುವಂತೆ ಎಂದು ಕರೆ ನೀಡಿದರು. ಬಿ. ರಘು, ಡಿ.ಕೆ. ವೆಂಕಟೇಶ್, ರಾಣಿತೋಟ ವೀರೇಶ್ ಇ, ಕೆ. ರಮೇಶ್, ಗೋವಿಂದ, ಜಿ. ಜಿಲಾನ್ ಬೇಗ್, ಖಾದರ್ ಭಾಷಾ, ರಾಮಾಂಜಿನೇಯ, ವಿ. ಗಾದಿಲಿಂಗ, ಕಾರೇಕಲ್ಲು ಎಸ್. ತಿಕ್ಕಪ್ಪ, ಕೆ.ವಿ. ಗಣೇಶ್, ಸಂಗನಕಲ್ಲು ವಿಜಯ್ ಕುಮಾರ್ ಇತರರಿದ್ದರು.
ಮೇ 4ಕ್ಕೆ ಮರುಳಸಿದ್ಧೇಶ್ವರ ರಥೋತ್ಸವ
ಕೊಟ್ಟೂರು: ವೀರಶೈವ ಪಂಚಪೀಠಗಳ ಎರಡನೇ ಪೀಠವಾದ ಸಮೀಪದ ಉಜ್ಜಯಿನಿ ಸದ್ಧರ್ಮಪೀಠದ ಆರಾಧ್ಯದೈವ ಶ್ರೀ ಜಗದ್ಗುರು ಮರುಳಸಿದ್ಧೇಶ್ವರ ಸ್ವಾಮಿಯ ರಥೋತ್ಸವವು ಮೇ. 4ರಂದು ಜಗದ್ಗುರು ಧಾರುಕಾಚಾರ್ಯ ಜಯಂತ್ಯುತ್ಸವದೊಂದಿಗೆ ಜರುಗಲಿದೆ. ಮರುದಿನ ವಿಶಿಷ್ಟಾಚರಣೆಯ ಶ್ರೀಮರುಳಸಿದ್ಧ ಸ್ವಾಮಿಯ ಶಿಖರ ತೈಲಾಭಿಷೇಕ ಮೇ 5 ರಂದು ನಡೆಯಲಿದೆ ಎಂದು ಪೀಠದ ಜಗದ್ಗುರು ಸಿದ್ಧಲಿಂಗರಾಜದೇಶೀಕೇಂದ್ರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಥೋತ್ಸವಕ್ಕೂ ಮುನ್ನ ಧಾರ್ಮಿಕ ಕಾರ್ಯಕ್ರಮಗಳು ಏ. 29ರಂದು ಕಂಕಣಧಾರಣೆ, ನಾಗವಾಹನೋತ್ಸವ, 30ರಂದು ಮಯೂರವಾಹನೋತ್ಸವ, ಮೇ 1ಕ್ಕೆ ಗಜವಾಹನೋತ್ಸವ, 2ರಂದು ಸಿಂಹವಾಹನೋತ್ಸವ, 3ರಂದು ವೃಷಭವಾಹನೋತ್ಸವ ಪೀಠದಲ್ಲಿ ನಡೆಯಲಿವೆ ಎಂದರು. 9ರಂದು ಉಚಿತ ಸಾಮೂಹಿಕ ವಿವಾಹಗಳು ಮತ್ತು ಧರ್ಮಸಭೆಯನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.
ದೇವಲಾಪುರದಲ್ಲಿ ಅಂತರ್ಜಾಲ ಕಲ್ಪಿಸಿ
ಕಂಪ್ಲಿ: ಸಮೀಪದ ದೇವಲಾಪುರದಲ್ಲಿ ಅಂತರ್ಜಾಲ ವ್ಯವಸ್ಥೆ ಕಲ್ಪಿಸಬೇಕೆಂದು ಆಗ್ರಹಿಸಿ ಗ್ರಾಮದ ಪ್ರಗತಿ ಪರ ಫೋಟೋಗ್ರಾಫರ್ ಗಿರೀಶ್ ಸೇರಿದಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಗ್ರಾಮದಲ್ಲಿ ಲ್ಯಾಂಡ್ಫೋನ್, ಅಂತರ್ಜಾಲ ಲಭಿಸಿಲ್ಲ. ಅಂತರ್ಜಾಲ ವ್ಯವಸ್ಥೆ ಇಲ್ಲದ್ದರಿಂದ ಗ್ರಾಪಂ, ಅಂಚೆ, ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ (ಸೊಸೈಟಿ), ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿನವರು ಅಂತರ್ಜಾಲಕ್ಕಾಗಿ ಬೇರೆ ಗ್ರಾಮಗಳತ್ತ ತೆರಳಬೇಕಿದೆ. ಗ್ರಾಮದ ಪ್ರಧಾನ ಅಂಚೆ ಕಚೇರಿಯಲ್ಲಿ ಅಂತರ್ಜಾಲ ವ್ಯವಸ್ಥೆಯಿಲ್ಲದ್ದರಿಂದ, ಬೇರೆಡೆ ತೆರಳಿ ಅಂತರ್ಜಾಲ ವ್ಯವಸ್ಥೆ ಮೂಲಕ ವ್ಯವಹಾರ ನಿಭಾಯಿಸಬೇಕಿದೆ. ಜಿಲ್ಲೆಯ 73 ಅಂಚೆ ಕಚೇರಿಗಳಿಗೆ ಅಂತರ್ಜಾಲ ವ್ಯವಸ್ಥೆಯಿದೆ. ಆದರೆ, ಗ್ರಾಮಕ್ಕಿಲ್ಲ. ಗ್ರಾಪಂ ಕಚೇರಿ, ಗ್ರಾಮದಲ್ಲಿ ಅಂತರ್ಜಾಲ ವ್ಯವಸ್ಥೆ ಕಲ್ಪಿಸುವಂತೆ ಅ. 17, 2013ರಂದೇ ಗ್ರಾಪಂ ಅಧ್ಯಕ್ಷರು, ಸದಸ್ಯರು ಬಳ್ಳಾರಿ ಬಿಎಸ್ಸೆನ್ನೆಲ್ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಬರೆಯಲಾಗಿತ್ತು. ನಿರ್ಲಕ್ಷ್ಯಿಸಿದರೆ ಹೋರಾಟ ಮಾಡುವುದಾಗಿ ಗ್ರಾಮಸ್ಥರು ತಿಳಿಸಿದ್ದಾರೆ.
ಆರೊಗ್ಯ ಮುಂಜಾಗ್ರತೆ ವಹಿಸಿ: ಡಾ. ಪ್ರಕಾಶ್
ಸಿರುಗುಪ್ಪ: ಆರೋಗ್ಯದ ದೃಷ್ಟಿಯಿಂದ ಪರಿಸರವು ಮನುಷ್ಯನ ಮೇಲೆ ಪರಿಣಾಮ ಬೀರುತ್ತದೆ. ಪರಿಸರದಲ್ಲಿರುವ ಕೀಟಗಳು ವ್ಯಕ್ತಿಯ ಆರೋಗ್ಯಕ್ಕೆ ಹಾನಿಯುಂಟು ಮಾಡಲಿದ್ದು, ಮುಂಜಾಗ್ರತೆ ಕ್ರಮ ಅಗತ್ಯ ಎಂದು ನೋಡಲ್ ಅಧಿಕಾರಿ ಡಾ. ಪ್ರಕಾಶ್ ಹೇಳಿದರು. ಅವರು ತೆಕ್ಕಲಕೋಟೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವಿಶ್ವ ಆರೋಗ್ಯ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು. ಡಾ. ಗೋಪಾಲ್ ರಾವ್, ದಂತ ವೈದ್ಯಾಧಿಕಾರಿ ಅಂಜುಮುನಿಸ್ಸಾ ಇದ್ದರು. ಆರೋಗ್ಯ ಸಹಾಯಕ ಕೆ.ಎಂ. ರಾಚೋಟಯ್ಯ ಸ್ವಾಗತಿಸಿ, ಆರೋಗ್ಯ ಸಹಾಯಕ ಟಿ. ಬಸವಯ್ಯ ವಂದಿಸಿದರು.
ವಸ್ತ್ರಧಾರಣೆಯಿಂದ ಸಾಂಸ್ಕೃತಿಕ ಮೌಲ್ಯ ಬಿಂಬ: ರಾಜೇಶ್ವರಿ
ಕಂಪ್ಲಿ: ವಸ್ತ್ರಧಾರಣೆ ಕೇವಲ ನಾಗರಿಕತೆ ಪ್ರತೀಕವಲ್ಲ. ಆಯಾ ಭಾಗದ ಸಾಂಸ್ಕೃತಿಕ ಮೌಲ್ಯಗಳನ್ನು ಬಿಂಬಿಸುತ್ತದೆ ಎಂದು ಕಂಪ್ಲಿ ಅಕ್ಕಮಹಾದೇವಿ ಮಹಿಳಾ ಮಂಡಳಿ ಅಧ್ಯಕ್ಷೆ ಕಲ್ಗುಡಿ ರಾಜೇಶ್ವರಿ ತಿಳಿಸಿದರು. ಇಲ್ಲಿನ ಸಾಂಗತ್ರಯ ಸಂಸ್ಕೃತ ಪಾಠಶಾಲೆ ಅಕ್ಕಮಹಾದೇವಿ ದೇವಸ್ಥಾನ ಆವರಣದಲ್ಲಿ ಅಕ್ಕಮಹಾದೇವಿ ಮಹಿಳಾ ಮಂಡಳಿ ಪದಾಧಿಕಾರಿಗಳು ಮತ್ತು ಸದಸ್ಯೆಯರು ಶಿವಶರಣೆ ಅಕ್ಕಮಹಾದೇವಿ ಜಯಂತ್ಯುತ್ಸವ ನಿಮಿತ್ತ ಜರುಗಿದ ಫ್ಯಾಷನ್ ಷೋದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ತೀರ್ಪುಗಾರ್ತಿಯರಾದ ಎಸ್. ಶಾಂತಮ್ಮ, ಡಬ್ಲ್ಯು. ಶಾರದಮ್ಮ ಇದ್ದರು. ವೇಷಭೂಷಣ ಸ್ಪರ್ಧೆಯಲ್ಲಿ ಮುಕ್ಕುಂದಿ ಮಮತಾ ಪ್ರಥಮ, ಮರಿಶೆಟ್ರು ವಿಜಯಲಕ್ಷ್ಮೀ ದ್ವಿತೀಯ, ಸುನಿತಾ ಬೂದಗುಂಪಿ ತೃತೀಯ ಬಹುಮಾನ ಗಳಿಸಿದರು. ಮುಕ್ಕುಂದಿ ಮಮತಾ, ಮುಕ್ಕುಂದಿ ಶಿವಗಂಗಮ್ಮ, ತಂಬ್ರಳ್ಳಿ ಮಧುಮತಿ ಇತರರಿದ್ದರು.
ವ್ಯಕ್ತಿತ್ವ ವಿಕಸನ ಶಿಬಿರಗಳು ಅವಶ್ಯ: ಐಗೋಳ್ ಚಿದಾನಂದ
ಹೂವಿನಹಡಗಲಿ: ಸ್ಪರ್ಧಾತ್ಮಕ ಯುಗದಲ್ಲಿ ಗ್ರಾಮೀಣ ವಿದ್ಯಾರ್ಥಿಗಳಿಗೆ ವ್ಯಕ್ತಿತ್ವ ವಿಕಸನ ಶಿಬಿರಗಳು ಅಗತ್ಯ ಎಂದು ಜಿಬಿಆರ್ ಕಾಲೇಜ್ ಆಡಳಿತ ಮಂಡಳಿ ಅಧ್ಯಕ್ಷ ಐಗೋಳ್ ಚಿದಾನಂದ ಹೇಳಿದರು. ಪಟ್ಟಣದ ಜಿಬಿಆರ್ ಕಾಲೇಜಿನ ಗ್ರಂಥಾಲಯದಲ್ಲಿ ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ವ್ಯಕ್ತಿತ್ವ ವಿಕಸನ ಶಿಬಿರ ಉದ್ಘಾಟಿಸಿ ಮಾತನಾಡಿದರು. ಧಾರವಾಡದ ಸಂಪನ್ಮೂಲ ವ್ಯಕ್ತಿ ಮೇಜರ್ ಸಿ.ಎಸ್. ಆನಂದ ವ್ಯಕ್ತಿತ್ವ ವಿಕಸನ ಕುರಿತು ಉಪನ್ಯಾಸ ನೀಡಿ, ನ್ಯಾಯ ಸಮ್ಮತ ಸನ್ಮಾರ್ಗದಲ್ಲಿ ದುಡಿದು ಸಮಾಜ ಹಾಗೂ ದೇಶದ ಪ್ರಗತಿಯತ್ತ ಯುವಕರು ಚಿಂತಿಸಬೇಕಿದೆ ಎಂದರು. ಪ್ರಾಚಾರ್ಯ ಡಾ. ಕೆ. ರುದ್ರಪ್ಪ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕ ಡಾ. ಶಾಂತಮೂರ್ತಿ ಬಿ. ಕುಲಕರ್ಣಿ ಮಾತನಾಡಿದರು. ಕಾಲೇಜು ಸಿಬ್ಬಂದಿ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

