66 ಹಳ್ಳಿಗಳಿಗೆ ಶೀಘ್ರ ಶುದ್ಧ ಕುಡಿವ ನೀರು
ಕನ್ನಡಪ್ರಭ ವಾರ್ತೆ, ಕೂಡ್ಲಿಗಿ, ಫೆ. 1
ಫ್ಲೋರೈಡ್ ಮುಕ್ತ ತಾಲೂಕನ್ನಾಗಿಸಬೇಕೆಂಬ ಕನಸು ಈಗ ನನಸಾಗುವ ದಿನ ಹತ್ತಿರ ಬಂದಿದ್ದು, ರು. 260 ಕೋಟಿ ಮೌಲ್ಯದ ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ. ತಾಲೂಕಿನ 217 ಹಳ್ಳಿಗಳಿಗೆ ರಾಷ್ಟ್ರೀಯ ಕುಡಿಯುವ ನೀರಿನ ಯೋಜನೆಯಡಿ ಕಾಮಗಾರಿ ಪ್ರಾರಂಭಿಸಲು ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ.
ಡಿಸೆಂಬರ್ 22ರಂದೇ ಈ ಕಾಮಗಾರಿಗೆ ಟೆಂಡರ್ ಕರೆಯಲಾಗಿದ್ದು, ಫೆಬ್ರವರಿ ಕೊನೆ ಇಲ್ಲವೇ ಮಾರ್ಚ್ ಮೊದಲ ವಾರದಲ್ಲಿ ಕಾಮಗಾರಿ ಪ್ರಾರಂಭಿಸಲು ಉದ್ದೇಶಿಸಲಾಗಿದೆ ಎನ್ನುತ್ತಾರೆ ಅಧಿಕಾರಿಗಳು.
ಮೊದಲ ಹಂತದಲ್ಲಿ ರು. 130 ಕೋಟಿ: ತಾಲೂಕಿನ 217 ಹಳ್ಳಿಗಳಲ್ಲಿ ಮೊದಲ ಕಂತಿನಲ್ಲಿ ರು. 130 ಕೋಟಿ ವೆಚ್ಚದಲ್ಲಿ 66 ಹಳ್ಳಿಗಳಿಗೆ ಶುದ್ಧ ಕುಡಿಯುವ ನೀರು ಪೂರೈಸಲಾಗುತ್ತದೆ. ಎರಡನೇ ಹಂತದಲ್ಲಿ ರು. 130 ಕೋಟಿ ವೆಚ್ಚದಲ್ಲಿ 151 ಹಳ್ಳಿಗಳಿಗೆ ಕುಡಿಯುವ ನೀರು ಪೂರೈಕೆಯಾಗಲಿದೆ. ಹಲವು ವರ್ಷಗಳಿಂದ ಫ್ಲೋರೈಡ್ಯುಕ್ತ ನೀರು ಸೇವಿಸುತ್ತಿದ್ದ ಜನತೆ ವಿವಿಧ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ತುಂಗಭದ್ರಾ ನದಿಯಿಂದ ರಾಷ್ಟ್ರೀಯ ಹೆದ್ದಾರಿ 13ರ ಆಸುಪಾಸಿನ ಹಳ್ಳಿಗಳ ಮೂಲಕ ಕೂಡ್ಲಿಗಿಗೆ ನೀರನ್ನು ತರಲಾಗುತ್ತಿದ್ದು, 2 ವರ್ಷಗಳ ಒಳಗೆ ಮೊದಲ ಹಂತದ ಕಾಮಗಾರಿ ಮುಗಿಸಲು ಅಧಿಕಾರಿಗಳು ಗುತ್ತಿಗೆದಾರರಿಗೆ ಗಡುವು ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.
ಟೆಂಡರ್ ಪ್ರಕ್ರಿಯೆ: ಮೊದಲ ಕಂತಿನಲ್ಲಿ ಈಗಾಗಲೇ ರು. 130 ಕೋಟಿ ಬಿಡುಗಡೆಯಾಗಿದ್ದು, ಈಗಾಗಲೇ ಟೆಂಡರ್ ಕರೆದಿದ್ದೇವೆ. ಇದೇ ತಿಂಗಳು 30ಕ್ಕೆ ಟೆಂಡರ್ ಪ್ರಕ್ರಿಯೆ ಮುಗಿಯಲಿದೆ. ಫೆಬ್ರವರಿ ತಿಂಗಳೊಳಗೆ ಕಾಮಗಾರಿ ಪ್ರಾರಂಭಿಸಲು ಪ್ರಯತ್ನ ಮಾಡುತ್ತಿದ್ದೇವೆ. ಕಾಮಗಾರಿ ಪ್ರಾರಂಭವಾದರೆ ಚುನಾವಣೆ ನೀತಿ ಸಂಹಿತೆ ಅಡ್ಡ ಬರುವುದಿಲ್ಲ. ಫೈನಾನ್ಸಿಯಲ್ ಬಿಡ್ ಹಾಗೂ ಟೆಕ್ನಿಕಲ್ ಬಿಡ್ ಮಾಡಿದರೆ ಕಾಮಗಾರಿ ಪ್ರಾರಂಭ ಮಾಡುವುದಷ್ಟೇ ಬಾಕಿ ಇರುತ್ತದೆ. ಮೊದಲ ಹಂತದ ಈ ಕಾಮಗಾರಿ 26 ತಿಂಗಳೊಳಗೆ ಮುಗಿಯಲಿದ್ದು, ಎರಡನೇ ಹಂತದ ಕಾಮಗಾರಿಯನ್ನು ಪ್ರಾರಂಭಿಸಲಾಗುವುದು ಎಂದು ಹೂವಿನಹಡಗಲಿ ಪಂಚಾಯತ್ ರಾಜ್ ಎಂಜನಿಯರಿಂಗ್ ವಿಭಾಗದ ಕಾರ್ಯನಿರ್ವಾಹಕ ಅಭಿಯಂತ ಡಿ. ಬಸವನಗೌಡ ತಿಳಿಸಿದ್ದಾರೆ.
ಕೇಂದ್ರ, ರಾಜ್ಯದ ಅನುದಾನ: ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಶೇ. 50ರಷ್ಟು ಅನುದಾನವನ್ನು ಈ ಯೋಜನೆಗೆ ಬಿಡುಗಡೆ ಮಾಡಿದ್ದು, ತುಂಗಭದ್ರಾ ಡ್ಯಾಂನ ರಾಯಬಸಣ್ಣ ಕಾಲುವೆಯಿಂದ ಶಿವಪುರ, ಕೈವಲ್ಯಾಪುರ ಮಧ್ಯದಲ್ಲಿರುವ ಅಯ್ಯನ ಗುಡ್ಡಕ್ಕೆ ಮೊದಲು ನೀರನ್ನು ತರಲು ಕಾಮಗಾರಿ ನಡೆಯಲಿದೆ. ನಂತರ ಶಿವಪುರ ಸಮೀಪದ ಅಯ್ಯನಗುಡ್ಡದಲ್ಲಿ ನೀರನ್ನು ಶುದ್ಧೀಕರಣ ಮಾಡಿ ಅಲ್ಲಿಂದ ತಾಲೂಕಿನ ವಿವಿಧೆಡೆ ಸರಬರಾಜು ಮಾಡಲಾಗುವುದು ಎಂದು ಕೂಡ್ಲಿಗಿ ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗದ ಸಹಾಯಕ ಅಭಿಯಂತ ಐ. ವೀರಬಾಬು ತಿಳಿಸಿದ್ದಾರೆ.
ಒಟ್ಟಾರೆ ಲೋಕಸಭಾ ಚುನಾವಣಾ ನೀತಿ ಸಂಹಿತೆ ಜಾರಿಯಾಗುವ ಮುನ್ನ ಕಾಮಗಾರಿ ಪ್ರಾರಂಭಿಸಿ ಶೀಘ್ರ ಕಾಮಗಾರಿ ಮುಗಿಸಲಿ ಜನತೆಯ ಆಶಯವಾಗಿದೆ.
-ಭೀಮಣ್ಣ ಗಜಾಪುರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

