ಬಳ್ಳಾರಿ

ಕೇಸ್ ಇದ್ದಾಗ 160 ಕಿ.ಮೀ. ಹೋಗಬೇಕು

Published On :

ಕನ್ನಡಪ್ರಭ ವಾರ್ತೆ, ಬಳ್ಳಾರಿ, ಫೆ. 13
ಹೂವಿನಹಡಗಲಿ, ಹಗರಿಬೊಮ್ಮನಹಳ್ಳಿಯ ಕೋರ್ಟ್‌ನಲ್ಲಿ ಒಂದು ವರ್ಷದಿಂದ ನ್ಯಾಯಾಧೀಶರು ಇಲ್ಲದೆ ಆ ತಾಲೂಕುಗಳ ಕಕ್ಷಿದಾರರು ಹಾಗೂ ವಕೀಲರು ತೊಂದರೆ ಎದುರಿಸುವಂತಾಗಿದೆ.
ಇದುವರೆಗೆ ವಾರದಲ್ಲಿ 2-3 ದಿನ ಈ ಎರಡು ಈ ತಾಲೂಕುಗಳ ಪ್ರಕರಣಗಳನ್ನು ಅಲ್ಲಿಗೆ ಹೋಗಿ ವಿಚಾರಣೆ ನಡೆಸುತ್ತಿದ್ದ ಕೂಡ್ಲಿಗಿ ಮತ್ತು ಹೊಸಪೇಟೆ ನ್ಯಾಯಾಧೀಶರು ವರ್ಗವಾಗಿದ್ದರಿಂದ ಈ ಕೋರ್ಟ್‌ಗಳಲ್ಲಿನ ದಾವೆಗಳನ್ನು ಜಿಲ್ಲೆಯ ಇತರ ತಾಲೂಕುಗಳ ನ್ಯಾಯಾಲಯಕ್ಕೆ ವಹಿಸಿಕೊಟ್ಟಿದ್ದರಿಂದ ಈ ತಾಲೂಕುಗಳ ಕಕ್ಷಿದಾರರು ಹಾಗೂ ವಕೀಲರಿಗೆ ತೊಂದರೆಯಾಗಿದೆ ಎನ್ನುವುದು ಇಲ್ಲಿನವರ ಅಳಲು.
ಜಿಲ್ಲೆಯಲ್ಲಿ ಒಟ್ಟಾರೆ 21 ನ್ಯಾಯಾಲಯಗಳಿದ್ದು, ಅದರಲ್ಲಿ 16 ಕೋರ್ಟ್‌ನಲ್ಲಿ ನ್ಯಾಯಾಧೀಶರಿದ್ದು, ಉಳಿದ ಕಡೆ ಜಡ್ಜ್‌ಗಳು ಇಲ್ಲದಿದ್ದರೂ ಬೇರೊಂದು ನ್ಯಾಯಾಲಯದ ನ್ಯಾಯಾಧೀಶರು ಅಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ವಾರದ 2-3 ದಿನ ಅಲ್ಲಿ ಕಾರ್ಯ ನಿರ್ವಹಿಸುವುದರಿಂದ ಉಳಿದ ದಿನಗಳಲ್ಲಿ ಕಲಾಪಗಳು ಅಲ್ಲಿ ನಡೆಯುವುದಿಲ್ಲ. ಹೀಗಾಗಿ ಹೂವಿನಹಡಗಲಿ ಹಾಗೂ ಹಗರಿಬೊಮ್ಮನಹಳ್ಳಿ ವಕೀಲರು, ಕಕ್ಷಿದಾರರು ತೀವ್ರ ಸಮಸ್ಯೆ ಎದುರಿಸುವಂತಾಗಿದೆ.
ಹಗರಿಬೊಮ್ಮನಹಳ್ಳಿ ತೊಂದರೆ: ಹಗರಿಬೊಮ್ಮನಹಳ್ಳಿ ಕೋರ್ಟ್‌ನಲ್ಲಿ ಒಂದೂವರೆ ವರ್ಷದಿಂದ ನಿಯಮಿತ ನ್ಯಾಯಾಧೀಶರು ಇಲ್ಲದ ಕಾರಣ ಹೊಸಪೇಟೆ ನ್ಯಾಯಾಧೀಶರು ವಾರದ 3 ದಿನ ಹಗರಿಬೊಮ್ಮನಹಳ್ಳಿ ಕೋರ್ಟ್‌ಗೆ ಬಂದು ಕಲಾಪ ನಡೆಸುತ್ತಿದ್ದರು. ಇದರಿಂದಾಗಿ ಅಲ್ಲಿನ ಜನರಿಗೆ ಸಮಸ್ಯೆಯಾಗುತ್ತಿರಲಿಲ್ಲ. ಆದರೆ ಕೆಲ ದಿನಗಳ ಹಿಂದೆ ಹೊಸಪೇಟೆಯ ನ್ಯಾಯಾಧೀಶರು ವರ್ಗಾವಣೆಯಾಗಿದ್ದರಿಂದ ಇದೀಗ ಹಗರಿಬೊಮ್ಮನಹಳ್ಳಿ ಕೋರ್ಟ್‌ನಲ್ಲಿ ಕಲಾಪ ನಡೆಯುತ್ತಿಲ್ಲ. ಇಲ್ಲಿನ ಕ್ರಿಮಿನಲ್ ದಾವೆಗಳನ್ನು ಹೊಸಪೇಟೆ ನ್ಯಾಯಾಲಯಕ್ಕೆ ಹಾಗೂ ಸಿವಿಲ್ ದಾವೆಗಳನ್ನು 160 ಕಿ.ಮೀ. ದೂರದ ಸಿರುಗುಪ್ಪ ಕೋರ್ಟ್ ವ್ಯಾಪ್ತಿಗೆ ವಹಿಸಲಾಗಿದೆ. ಇದರಿಂದಾಗಿ ಸಮಸ್ಯೆ ಎದುರಿಸುವಂತಾಗಿದೆ ಎಂಬುದು ಕಕ್ಷಿದಾರರು ಹಾಗೂ ನ್ಯಾಯವಾದಿಗಳ ಗೋಳು.
ಹೂವಿನಹಡಗಲಿಯಲ್ಲೂ: ಇನ್ನು ಹೂವಿನಹಡಗಲಿಯ ತೊಂದರೆ ಇದಕ್ಕೆ ಹೊರತಾಗಿಲ್ಲ. ಇಲ್ಲಿಯೂ ಒಂದು ವರ್ಷದಿಂದ ನಿಯಮಿತ ನ್ಯಾಯಾಧೀಶರು ಇಲ್ಲದ ಕಾರಣದಿಂದ ಕೂಡ್ಲಿಗಿಯ ಜಡ್ಜ್ ವಾರಕ್ಕೆ 3 ದಿನಗಳ ಕಾಲ ಹೂವಿನಹಡಗಲಿ ಕೋರ್ಟ್‌ಗೆ ಬಂದು ಕಲಾಪ ನಡೆಸುತ್ತಿದ್ದರು. ಇನ್ನು ಮೂರು ದಿನಗಳ ಅಲ್ಲಿ ಕಲಾಪ ನಡೆಯುತ್ತಿರಲಿಲ್ಲ. ಆದರೆ ಕೆಲ ದಿನಗಳ ಹಿಂದೆ ಕೂಡ್ಲಿಗಿ ನ್ಯಾಯಾಧೀಶರು ವರ್ಗಾವಣೆಯಾಗಿದ್ದರಿಂದ ಹೂವಿನಹಡಗಲಿಯ ಸಿವಿಲ್ ದಾವೆಗಳನ್ನು ಸಂಡೂರಿನ ಕೋರ್ಟ್‌ಗೂ ಹಾಗೂ ಕ್ರಿಮಿನಲ್ ದಾವೆಗಳನ್ನು ಕೂಡ್ಲಿಗಿ ನ್ಯಾಯಾಲಯದ ಸೀನಿಯರ್ ಡಿವಿಜನ್‌ಗೆ ವಹಿಸಲಾಗಿದೆ. ಇದರಿಂದ ತಮಗೆ ಅನಾನುಕೂಲವಾಗಿದೆ ಎನ್ನುತ್ತಾರೆ ಆ ತಾಲೂಕಿನ ವಕೀಲರು ಮತ್ತು ಕಕ್ಷಿದಾರರು.
160 ಕಿ.ಮೀ. ದೂರ: ಹಗರಿಬೊಮ್ಮನಹಳ್ಳಿ ತಾಲೂಕು ವಕೀಲರ ಸಂಘದ ಅಧ್ಯಕ್ಷ ಬಿ.ವಿ. ಶಿವಯೋಗಿ ಅವರು ಮಾತನಾಡಿ, ಕಳೆದು ಒಂದೂವರೆ ವರ್ಷದಿಂದ ರೆಗ್ಯುಲರ್ ನ್ಯಾಯಾಧೀಶರು ಇಲ್ಲದಿದ್ದರಿಂದ ಹೊಸಪೇಟೆ ನ್ಯಾಯಾಧೀಶರು ವಾರದ 3 ದಿನಗಳ ಕಾಲ ಬಂದು ಹೋಗುತ್ತಿದ್ದರು. ಇದೀಗ ಅವರೂ ವರ್ಗಾವಣೆಯಾಗಿದ್ದರಿಂದ ಕೋರ್ಟ್ ಕಲಾಪ ನಡೆಯುತ್ತಿಲ್ಲ. ಇಲ್ಲಿನ ಕೇಸ್‌ಗಳನ್ನು ಸಿರುಗುಪ್ಪ ಹಾಗೂ ಹೊಸಪೇಟೆ ಕೋರ್ಟ್‌ಗೆ ವಹಿಸಿಕೊಡಲಾಗಿದೆ. ಸಿರುಗುಪ್ಪ ಹಗರಿಬೊಮ್ಮನಹಳ್ಳಿಯಿಂದ 160 ಕಿ.ಮೀ. ದೂರ ಇದ್ದು, ಬಸ್ಸಿನ ವ್ಯವಸ್ಥೆ ಸರಿಯಾಗಿ ಇಲ್ಲ. ಈ ನಡುವೆಯೂ ವಕೀಲರು, ಕಕ್ಷಿದಾರರು 160 ಕಿ.ಮೀ. ದೂರ ಹೋಗಬೇಕಾಗಿದೆ. ಕೂಡಲೆ ಹಗರಿಬೊಮ್ಮನಹಳ್ಳಿ ಕೋರ್ಟ್‌ಗೆ ನ್ಯಾಯಾಧೀಶರನ್ನು ನೇಮಕ ಮಾಡಬೇಕೆಂದು ಮನವಿ ಮಾಡಲಾಗಿದೆ ಎನ್ನುತ್ತಾರೆ.
ಬಡ ಕಕ್ಷಿದಾರರಿದ್ದಾರೆ: ಹೂವಿನಹಡಗಲಿ ತಾಲೂಕು ವಕೀಲರ ಸಂಘದ ಅಧ್ಯಕ್ಷ ಸಿ.ಕೆ.ಎಂ. ಬಸವಲಿಂಗಪ್ಪ ಅವರು ಮಾತನಾಡಿ, ಎರಡು ವರ್ಷಗಳಿಂದ ಇಲ್ಲಿ ರೆಗ್ಯುಲರ್ ಜಡ್ಜ್ ಇಲ್ಲ. ಇದುವರೆಗೆ ಕೂಡ್ಲಿಗಿ ನ್ಯಾಯಾಧೀಶರು ವಾರದ 3 ದಿನ ಬಂದು ಕಲಾಪ ನಡೆಸುತ್ತಿದ್ದರು. ಇದೀಗ ಅವರು ವರ್ಗವಾಗಿದ್ದರಿಂದ ಇಲ್ಲಿನ ದಾವೆಗಳನ್ನು ಸಂಡೂರು ಹಾಗೂ ಕೂಡ್ಲಿಗಿ ಕೋರ್ಟ್‌ಗಳಿಗೆ ವಹಿಸಲಾಗಿದೆ. ನಾವು ಅಷ್ಟೊಂದು ದೂರ ಹೋಗಲು ತೊಂದರೆಯಾಗುತ್ತದೆ. ಅಲ್ಲದೇ ಎಷ್ಟೋ ಕಕ್ಷಿದಾರರ ಬಳಿ ಹಣ ಇರುವುದಿಲ್ಲ. ಅಂಥವರ ಕೇಸ್‌ಗಳು ಆ ಕೋರ್ಟ್‌ಗಳಿಗೆ ವಹಿಸಲಾಗಿದೆ. ಬಡ ಕಕ್ಷಿದಾರರಿಗೆ ತೀವ್ರ ತೊಂದರೆಯಾಗುತ್ತಿದೆ. ಈಗಾಗಲೆ ನ್ಯಾಯಾಧೀಶರನ್ನು ನೇಮಕ ಮಾಡುವಂತೆ ಬೆಂಗಳೂರಿಗೆ ಹೋಗಿ ಮನವಿ ಮಾಡಲಾಗಿದೆ ಎಂದು ತಿಳಿಸುತ್ತಾರೆ.
 ತೀರಾ ಕಷ್ಟ ಆಗೇತಿ...
ಹಗರಿಬೊಮ್ಮನಹಳ್ಳಿ ಕೋರ್ಟ್‌ನ್ಯಾಗ ಜಡ್ಜ್ ಸಾಹೇಬ್ರು ಇಲ್ಲ. ಹಿಂಗಾಗಿ ನಮ್ಗಾ ಬಾಳ ತ್ರಾಸ್ ಆಗೇತಿ. ನಮ್ ಕೇಸ್ ಇದ್ದಾಗ ಪ್ರತಿಸಲ ನಾವು ಸಿರುಗುಪ್ಪ ಮತ್ ಹೊಸಪೇಟಿಗೆ ಹೋಗ್ಬೇಕು. ಪ್ರತಿಸಲ ಹೋಗಿ ಬರೋದು ಅಂದ್ರ ನಮ್ಗ ತೀರಾ ಕಷ್ಟ ಆಗೇತಿ. ಸಿರುಗುಪ್ಪಕ್ಕ ಹೋಗಬೇಕಂದ್ರ ಬಾಳ ರೊಕ್ಕ ಖರ್ಚ್ ಆಗತೇತಿ. ಟೈಮು ಬಾಳ ಆಗ್ತೇತಿ. ಹಿಂಗಾಗಿ ಸಂಬಂಧಪಟ್ಟೋರು ಈ ಸಮಸ್ಯೆನ ದೂರ ಮಾಡಬೇಕು.
- ಕೆ. ಗೋವಿಂದಪ್ಪ, ಹಗರಿಬೊಮ್ಮನಹಳ್ಳಿ ಕಕ್ಷಿದಾರ


-ಶಶಿಧರ ಮೇಟಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.