ಬಳ್ಳಾರಿ

20 ನಿಮಿಷ 20 ಸುದ್ದಿ

Published On :

ರಾಜ್ಯ ಸರ್ಕಾರ ಆಡಳಿತದಿಂದ ಬೇಸರ
ಹೂವಿನಹಡಗಲಿ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದು 8 ತಿಂಗಳಲ್ಲೆ ಅದೇ ಪಕ್ಷದ ಕಾರ್ಯಕರ್ತರು ಸೇರಿದಂತೆ ಮುಖಂಡರು ಭ್ರಮನಿರಸನಗೊಂಡಿದ್ದಾರೆ ಎಂದು ಮಾಜಿ ಶಾಸಕ ಬಿ. ಚಂದ್ರನಾಯ್ಕ ಅಭಿಪ್ರಾಯಿಸಿದರು.
ಪಟ್ಟಣದ ಮಲ್ಲಿನಕೇರಿ ಮಠದಲ್ಲಿ ಆಯೋಜಿಸಿದ್ದ ಬಿಜೆಪಿ- ಕೆಜೆಪಿ ವಿಲೀನ ಪ್ರಕ್ರಿಯೆ ಕಾರ್ಯಕ್ರಮದಲ್ಲಿ ಮಾತನಾಡಿ, ಬಿಜೆಪಿ ಸರ್ಕಾರದ ಆಡಳಿತಾವಧಿಯಲ್ಲಿ ಬಿಜೆಪಿ ಸರ್ಕಾರ ಭ್ರಷ್ಟ ಎಂದು ಜರೆಯುತ್ತಿದ್ದ ಕಾಂಗ್ರೆಸ್ ಸರ್ಕಾರವೆ ಇದೀಗ ಸಂಪೂರ್ಣ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದು ಆರೋಪಿಸಿದರು.
ಮುಖಂಡ ಮಧುನಾಯ್ಕ, ಎಚ್. ಪೂಜೆಪ್ಪ, ಎಸ್. ಸಂಜೀವರೆಡ್ಡಿ, ದೊಡ್ಡಬಸಪ್ಪ, ಎಂ. ಬಸಣ್ಣ, ಕೆ. ಗೋವಿಂದರೆಡ್ಡಿ ಮತ್ತಿತರರು ಇದ್ದರು.

ರಸ್ತೆ ದುರಸ್ತಿಗಾಗಿ ವಿನೂತನ ಪ್ರತಿಭಟನೆ
ಹೊಸಪೇಟೆ: ರಸ್ತೆಗಳನ್ನು ದುರಸ್ತಿ, ಮೂಲಸೌಲಭ್ಯ ಒದಗಿಸುವಂತೆ ಒತ್ತಾಯಿಸಿ ಭ್ರಷ್ಟಾಚಾರ ಮುಕ್ತ ಕರ್ನಾಟಕ ಸಂಘಟನೆ ಪದಾಧಿಕಾರಿಗಳು ಈಚೆಗೆ ನಗರದ ಅಮರಾವತಿಯಲ್ಲಿ ಅನ್ನ, ಸಾಂಬಾರ್, ಕುಡಿಯುವ ನೀರನ್ನು ರಸ್ತೆ ಬದಿಯಲ್ಲಿಟ್ಟು ಪ್ರತಿಭಟಿಸಿದರು. ಸಂಘಟನೆ ರಾಜ್ಯಾಧ್ಯಕ್ಷ ಪ.ಯ. ಗಣೇಶ್, ನಗರದ ರಸ್ತೆಗಳನ್ನು ದುರಸ್ತಿಗೊಳಿಸಿ ಎಂದರು. ಪ್ರತಿಭಟನಾ ಸ್ಥಳಕ್ಕೆ ನಗರಸಭೆ ಅಧಿಕಾರಿಗಳಾದ ಮನ್ಸೂರ್ ಅಹ್ಮದ್, ಎ. ಕೃಷ್ಣಪ್ಪ ಸೇರಿದಂತೆ ಇತರೆ ಅಧಿಕಾರಿಗಳು ಭೇಟಿ ನೀಡಿದಾಗ ಪ್ರತಿಭಟನಾಕಾರರು ರಸ್ತೆ ಬದಿಯಲ್ಲಿಯ ಅನ್ನ, ಸಾಂಬಾರ್, ಕುಡಿಯುವ ನೀರನ್ನು ಸೇವಿಸುವಂತೆ ಒತ್ತಾಯಿಸಿದರು. ಇದನ್ನು ನಿರಾಕರಿಸಿದ ಅವರು ಶೀಘ್ರ ರಸ್ತೆ ಅಭಿವೃದ್ಧಿಪಡಿಸಲಾಗುವುದೆಂದು ಭರವಸೆ ನೀಡಿದರು.

ತಬಲಾ ವಿದ್ಯಾಲಯ ವಾರ್ಷಿಕೋತ್ಸವ
ಬಳ್ಳಾರಿ: ಸ್ಥಳೀಯ ಅರಳಿಕಟ್ಟಿ ತಬಲಾ ವಿದ್ಯಾಲಯದ 6ನೇ ವಾರ್ಷಿಕೋತ್ಸವ ಕಾರ್ಯಕ್ರಮ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ನಗರದ ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಜರುಗಿತು. ಕಲಾವಿದ ರಮೇಶ ಕುಲಕರ್ಣಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. 32ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಶ್ರೀನಿವಾಸ ಜೋಶಿ ತಬಲಾ ಸಾಥ್‌ನೊಂದಿಗೆ ವಿವಿಧ ಪ್ರಕಾರಗಳನ್ನು ಪ್ರಸ್ತುತಪಡಿಸಿದರು. ಕಲಾವಿದ ರಮೇಶ ಕುಲಕರ್ಣಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ಪ್ರೇಕ್ಷಕರ ಮನಸೂರೆಗೊಳಿಸಿತು. ಪ್ರಾರಂಭದಲ್ಲಿ ಪೂರಿಯಾ ಕಲ್ಯಾಣ ಹಾಗೂ ದರ್ಬಾರಿ ರಾಗಗಳನ್ನು ಪ್ರಸ್ತುತಪಡಿಸಿ, ನಂತರ ದಾಸರ ರಚನೆಗಳ ಗಾಯನ ಮಾಡಿದರು.

ಕುರುಗೋಡು: ಪ್ರತಿಭಾ ಪುರಸ್ಕಾರ ಕಾರ್ಯಕ್ರಮ
ಕುರುಗೋಡು: ಪಟ್ಟಣದ ನಾಡಗೌಡ ಮರಿಬಸವನಗೌಡರ ಸ್ಮಾರಕ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಸರಸ್ವತಿ ಪೂಜಾ ಮತ್ತು ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಂದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಜರುಗಿತು.
ಸಮಯ ಪ್ರಜ್ಞೆ ಅರಿತು ಶ್ರದ್ಧೆಯಿಂದ ಹಾಗೂ ಸ್ಪರ್ಧಾ ಮನೋಭಾವದಿಂದ ವಿದ್ಯಾಭ್ಯಾಸ ಮಾಡಿ ಕೀರ್ತಿ ತರಬೇಕು ಎಂದು ಪ್ರಾಚಾರ್ಯ ವೇಣುಗೋಪಾಲರೆಡ್ಡಿ ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಉಪನ್ಯಾಸಕ ಮಲ್ಲಪ್ಪ ಮಾತನಾಡಿ, ವಿದ್ಯಾಭ್ಯಾಸದ ಜತೆಗೆ ಪಠ್ಯೇತರ ಚಟುವಟಿಕೆಯಲ್ಲಿ ಭಾಗವಹಿಸಬೇಕು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ರತ್ನಾ ಪ್ರಭಾಕರ್, ವೀರೇಶ, ಶಶಿಕಲಾ, ದ್ರಾಕ್ಷಯಿಣಿ ಉಪಸ್ಥಿತರಿದ್ದರು. ರಾಜ ಮಹಮ್ಮದ ಪ್ರಾರ್ಥಿಸಿದರು. ಸಂತೋಷ ನಿರೂಪಿಸಿದರು. ಸನಂದನ ನಿರ್ವಹಿಸಿದರು. ಬಳಿಕ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ಡಿಸೆಂಬರ್ ಅಂತ್ಯಕ್ಕೆ ಸಿಸಿ ರಸ್ತೆ ನಿರ್ಮಾಣ
ಹಗರಿಬೊಮ್ಮನಹಳ್ಳಿ: ಡಿಸೆಂಬರ್ ಅಂತ್ಯಕ್ಕೆ ಪಟ್ಟಣದ ಎಲ್ಲ ಓಣಿ, ಕಾಲೋನಿ, ಬಡಾವಣೆಗಳ ರಸ್ತೆಗಳನ್ನು ಸಿಮೆಂಟ್ ರಸ್ತೆಗಳನ್ನಾಗಿ ಅಭಿವೃದ್ಧಿಪಡಿಸಿ ಸೌಲಭ್ಯ ಕಲ್ಪಿಸಲಾಗುವುದು ಎಂದು ಶಾಸಕ ಎಸ್. ಭೀಮಾನಾಯ್ಕ ಭರವಸೆ ನೀಡಿದ್ದಾರೆ. ಪಟ್ಟಣದ ಸೋಮೇಶ್ವರ ನಗರದಲ್ಲಿ ರು. 30 ಲಕ್ಷ ವೆಚ್ಚದ ಸಿಸಿ ರಸ್ತೆ ಕಾಮಗಾರಿಗೆ ಭೂಮಿಪೂಜೆ ನೇರವೇರಿಸಿ ಮಾತನಾಡಿ, ಪಟ್ಟಣ ವೇಗವಾಗಿ ಬೆಳೆಯುತ್ತಿದೆ. ಜನತೆಗೆ ಉತ್ತಮ ರಸ್ತೆ ಕಲ್ಪಿಸಲು ಈಗಾಗಲೆ ಸಿಸಿ ರಸ್ತೆ ನಿರ್ಮಿಸಲು ಕ್ರಿಯಾಯೋಜನೆ ಸಿದ್ಧಪಡಿಸಲಾಗಿದೆ. ನಾನಾ ಯೋಜನೆಗಳಲ್ಲಿ ಲೋಕೋಪಯೋಗಿ, ಪಂರಾಇ, ನೀರಾವರಿ ಇಲಾಖೆಗಳಿಂದ ಪಟ್ಟಣದಲ್ಲಿ ಸಿಸಿ ರಸ್ತೆಗಳ ನಿರ್ಮಾಣ ಕಾರ್ಯ ಕೈಗೆತ್ತಿಕೊಳ್ಳಲಾಗುವುದು ಎಂದರು.

ಬಳ್ಳಾರಿ: ಚಾಯ್ ಪೇ ಚರ್ಚಾ
ಬಳ್ಳಾರಿ: ಸಿಟಿಜನ್ಸ್ ಫಾರ್ ಅಕೌಂಟಬಲ್ ಗವರ್ನನ್ಸ್ (ಸಿಎಜೆ) ಹಾಗೂ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ನಗರ ಘಟಕದ ಯುವ ಮೋರ್ಚಾದ ಸಹಯೋಗದಲ್ಲಿ ನಗರದ ಕನಕದುರ್ಗಮ್ಮ ದೇವಸ್ಥಾನದ ಮುಂಭಾಗದ ಮೈದಾನದಲ್ಲಿ ಚಾಯ್ ಪೇ ಚರ್ಚಾ ಕಾರ್ಯಕ್ರಮ ಆಯೋಜಿಸಲಾಗಿತ್ತು. ಎಸ್‌ಟಿ ಮೋರ್ಚಾ ರಾಜ್ಯಾಧ್ಯಕ್ಷ ಎಂ.ಎಸ್. ಸೋಮಲಿಂಗಪ್ಪ ಸಾರ್ವಜನಿಕರಿಗೆ ಟೀ ನೀಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಿಜೆಪಿ ನಗರ ಘಟಕದ ಯುವ ಮೋರ್ಚಾ ಅಧ್ಯಕ್ಷ ಕರೂರು ಸುಧಾಕರ ರೆಡ್ಡಿ, ರಾಘವೇಂದ್ರ, ಅಂಬರೀಷ್, ಮಹೇಂದ್ರ, ರಂಗಸ್ವಾಮಿ, ಮಧು, ಕುಮಾರರೆಡ್ಡಿ, ವೆಂಕಟೇಶ್, ಸಿದ್ದೇಶ್, ಮುರಹರಗೌಡ ಇತರರು ಇದ್ದರು.

ಹಮಾಲಿ ನೂತನ ದರಗಳ ಒಪ್ಪಂದಕ್ಕೆ ಸಹಿ
ಬಳ್ಳಾರಿ: ಹಮಾಲಿಗಳ ಲೋಡಿಂಗ್, ಅನ್‌ಲೋಡಿಂಗ್ ಕುರಿತಂತೆ ನೂತನ ದರಗಳ ಒಪ್ಪಂದ ನಗರದ ಚೇಂಬರ್ ಆಫ್ ಕಾಮರ್ಸ್ ಕಚೇರಿಯಲ್ಲಿ ಜರುಗಿತು. ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಕೆ. ಚನ್ನಪ್ಪ, ಕಾರ್ಯದರ್ಶಿ ವಿ. ರವಿಕುಮಾರ್, ಕಟ್ಟಡ ಸಮಿತಿ ಚೇರ್‌ಮನ್ ವಿ.ಕೆ. ನಾಯ್ಡು, ಮ್ಯಾಕ್ಸಿಜನ್ ಕಮಿಟಿ ಮುಖ್ಯಸ್ಥ ಮಲ್ಲಿಕಾರ್ಜುನ ಮಸ್ಕಿ, ಹಮಾಲಿ ಸಂಘದ ಅಧ್ಯಕ್ಷ ಎಂ. ರವಿಪ್ರಸಾದ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಹಮಾಲಿಗಳ ನೂತನ ದರಗಳ ಒಪ್ಪಂದದ ಪತ್ರಕ್ಕೆ ಸಹಿ ಮಾಡಲಾಯಿತು. ಚೇಂಬರ್ ಆಫ್ ಕಾಮರ್ಸ್‌ನ ಅಧ್ಯಕ್ಷ ಕೆ. ಚನ್ನಪ್ಪ ಒಪ್ಪಂದದ ಪತ್ರವನ್ನು ಹಮಾಲರ ಸಂಘದ ಅಧ್ಯಕ್ಷ ಎಂ. ರವಿಪ್ರಸಾದ್‌ಗೆ ನೀಡಿದರು. ನಂತರ ಹಮಾಲರಿಗೆ ಗುರುತಿನ ಚೀಟಿಗಳನ್ನು ವಿತರಿಸಿದರು.

ಕ್ಯಾಂಪಸ್ ಸಂದರ್ಶನ: 80 ವಿದ್ಯಾರ್ಥಿಗಳು ಆಯ್ಕೆ
ಬಳ್ಳಾರಿ: ಸ್ಥಳೀಯ ವೀರಶೈವ ಮಹಾವಿದ್ಯಾಲಯದಲ್ಲಿ ಇನ್‌ಫೋಸಿಸ್ ಕಂಪನಿಯಿಂದ ಕ್ಯಾಂಪಸ್ ಸಂದರ್ಶನ ಜರುಗಿತು. ಸಂದರ್ಶನದಲ್ಲಿ ವೀರಶೈವ ಕಾಲೇಜು, ಅಲ್ಲಂ ಸುಮಂಗಳಮ್ಮ ಮಹಿಳಾ ಮಹಾವಿದ್ಯಾಲಯ ಮತ್ತು ವಾಣಿಜ್ಯ ಕಾಲೇಜು, ಹೊಸಪೇಟೆಯ ವಿಜಯನಗರ ಪದವಿ ಕಾಲೇಜು ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕೊಟ್ಟೂರಿನ ಕೊಟ್ಟೂರೇಶ್ವರ ಕಾಲೇಜು, ಸಿರುಗುಪ್ಪದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಬಿಎ, ಬಿಕಾಂ, ಬಿಬಿಎಂ, ಬಿಎಸ್ಸಿ ಅಂತಿಮ ವರ್ಷದ 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕ್ಯಾಂಪಸ್ ಸಂದರ್ಶನದಲ್ಲಿ ಒಟ್ಟು 80 ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ. ಅದರಲ್ಲಿ ವೀರಶೈವ ಮಹಾವಿದ್ಯಾಲಯದಿಂದ 40 ವಿದ್ಯಾರ್ಥಿಗಳು, ಹೊಸಪೇಟೆಯ ವಿಜಯನಗರ ಕಾಲೇಜಿನ 34 ವಿದ್ಯಾರ್ಥಿಗಳು ಮತ್ತು ಅಲ್ಲಂ ಸುಮಂಗಳಮ್ಮ ಮಹಿಳಾ ವಿದ್ಯಾಲಯದಿಂದ 6 ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ ಎಂದು ಪ್ರಾಚಾರ್ಯರು ತಿಳಿಸಿದ್ದಾರೆ.

ಜನಪ್ರತಿನಿಧಿಗಳ ನಿರ್ಲಕ್ಷ್ಯ ಸಲ್ಲ: ತೋಟಾನಾಯ್ಕ
ಹೂವಿನಹಡಗಲಿ: ತಾಲೂಕಿನ ಸುಕ್ಷೇತ್ರ ಶ್ರೀ ಮೈಲಾರಲಿಂಗೇಶ್ವರ ಜಾತ್ರೆನಿಮಿತ್ತ ಡೆಂಕಣ ಮರಡಿಯಲ್ಲಿ ಜರುಗುವ ಐತಿಹಾಸಿಕ ಕಾರ್ಣಿಕೋತ್ಸವದಲ್ಲಿ ಜನಪ್ರತಿನಿಧಿಗಳನ್ನು ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತ ನಿರ್ಲಕ್ಷ್ಯಿಸಿದೆ ಎಂದು ಇಟಿಗಿ ಜಿಪಂ ಸದಸ್ಯ ಬಿ. ತೋಟಾನಾಯ್ಕ ದೂರಿದ್ದಾರೆ. ಕಾರ್ಣಿಕ ನಡೆಯುವ ಸ್ಥಳಕ್ಕೆ ಹೋಗಲು ಜನಪ್ರತಿನಿಧಿಗಳಿಗೆ, ಗಣ್ಯರಿಗೆ ತಾಲೂಕು ಆಡಳಿತದಿಂದ ಪಾಸ್‌ಗಳನ್ನು ವಿತರಣೆ ಮಾಡುತ್ತಾರೆ. ಆದರೆ, ತಾವು ಬಿಜೆಪಿಯವರೆಂಬ  ಕಾರಣಕ್ಕೆ ನಿರ್ಲಕ್ಷ್ಯಿಸಿದ್ದಾರೆ ಎಂದು ಆರೋಪಿಸಿದ್ದಾರೆ. ತಾಲೂಕಾಡಳಿತ ಎಲ್ಲ ಪಕ್ಷದ ಜನಪ್ರತಿನಿಧಿಗಳಿಗೂ ಕಾರ್ಣಿಕ ಸ್ಥಳಕ್ಕೆ ಹೋಗಲು ಪಾಸ್‌ಗಳನ್ನು ವಿತರಿಸಬೇಕು ಎಂದು ಬಿ. ತೋಟಾನಾಯ್ಕ ಆಗ್ರಹಿಸಿದ್ದಾರೆ.

ಕೊಟ್ಟೂರು: ಇಂದು ಪಿಕಾರ್ಡ್ ಬ್ಯಾಂಕ್ ಚುನಾವಣೆ
ಕೊಟ್ಟೂರು: ಪಟ್ಟಣವನ್ನು ಕೇಂದ್ರವಾಗಿರಿಸಿಕೊಂಡಿರುವ ಕೂಡ್ಲಿಗಿ ತಾಲೂಕು ಕೊಟ್ಟೂರೇಶ್ವರ ಪ್ರಾಥಮಿಕ ಸಹಕಾರ ಮತ್ತು ಗ್ರಾಮೀಣಾಭಿವೃದ್ಧಿ (ಪಿಕಾರ್ಡ್) ನಿಯಮಿತ ಬ್ಯಾಂಕ್‌ಗೆ ಫೆಬ್ರವರಿ 16ರ ಭಾನುವಾರ ಚುನಾವಣೆ ನಡೆಯಲಿದೆ. ಬ್ಯಾಂಕ್‌ನ ಒಟ್ಟು 11 ನಿರ್ದೇಶಕರ ಸ್ಥಾನಗಳ ಪೈಕಿ 6 ಸ್ಥಾನಗಳಿಗೆ ಈಗಾಗಲೇ ಅವಿರೋಧ ಆಯ್ಕೆ ನಡೆದಿದ್ದರೆ ಉಳಿದ ಐದು ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ತಾಲೂಕಿನಾದ್ಯಂತ ಹತ್ತಾರು ದಿನಗಳಿಂದ ಪ್ರಚಾರದ ಭರಾಟೆ ತೀವ್ರಗೊಂಡಿದೆ. ಕೊಟ್ಟೂರಿನ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ಭಾನುವಾರ ಬೆಳಗ್ಗೆ 9ರಿಂದ ಸಂಜೆ 4ರ ವರೆಗೆ ಚುನಾವಣೆ ನಡೆಯಲಿದೆ. 5 ಕ್ಷೇತ್ರಗಳ ಮತದಾರರು ಸುಗಮವಾಗಿ ಮತದಾನ ಮಾಡಲು ಪ್ರತ್ಯೇಕ ಮತಕೇಂದ್ರಗಳನ್ನು ತೆರೆಯಲಾಗಿದೆ.

ತಡೆಯಾಜ್ಞೆ ಸಮಾಧಾನ ತಂದಿದೆ
ಕೊಟ್ಟೂರು: ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಎಸ್‌ಡಿಎಂಸಿ ಅಧ್ಯಕ್ಷರಾಗಿದ್ದ ಎನ್. ಕೊಟ್ರಪ್ಪ ಮತ್ತು 8 ಸದಸ್ಯರ ಸಮಿತಿಯ ಕಾರ್ಯಚಟುವಟಿಕೆಗೆ ಕಡಿವಾಣ ಹೇರಿ ಧಾರವಾಡದ ಹೈಕೋರ್ಟ್ ಪೀಠ ತಮ್ಮ ಅರ್ಜಿಯನ್ನು ಮನ್ನಿಸಿ ಮಧ್ಯಂತರ ತಡೆ ನೀಡಿದೆ ಎಂದು ಪೋಷಕರ ಸಮಿತಿಯ ಜೆ. ರಾಜಪ್ಪ ತಿಳಿಸಿದರು. ವಿದ್ಯಾರ್ಥಿಗಳ ಪೋಷಕರ 2/3 ಮೆಜಾರಿಟಿಯುಳ್ಳ ಸಭೆಯಲ್ಲಿ ತಮ್ಮನ್ನು ಎಸ್‌ಡಿಎಂಸಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿತ್ತು. ಆದರೆ ನಿಂಬಳಗೇರಿ ಕೊಟ್ರಪ್ಪ ಮತ್ತು ಅವರ ತಂಡ ಶಾಸಕರ ಶಿಫಾರಸು ಪತ್ರ ತಂದು ತಮ್ಮ ನೇತೃತ್ವದ ಸಮಿತಿಗೆ ಕೂಡ್ಲಿಗಿ ಬಿಇಒ ಅನುಮೋದನೆ ಪಡೆದಿದ್ದರು. ಇದನ್ನು ಪ್ರಶ್ನಿಸಿ ಕೋರ್ಟ್‌ಗೆ ಹೋಗಿದ್ದೆ. ನ್ಯಾಯಾಲಯ ನೀಡಿದ ತಡೆಯಾಜ್ಞೆ ಸಮಾಧಾನ ತಂದಿದೆ ಎಂದರು.

ಕೇಂದ್ರ ಪ್ರವಾಸೋದ್ಯಮ ಇಲಾಖೆಗೆ ನೇಮಕ
ಬಳ್ಳಾರಿ: ಆಂಧ್ರದ ಕರ್ನೂಲು ಜಿಲ್ಲೆಯ ಆಸ್ಪರಿ ಗ್ರಾಮದ ಸುದರ್ಶನ್ ಕೇಂದ್ರ ಪ್ರವಾಸೋದ್ಯಮ ಇಲಾಖೆಯ ರಾಷ್ಟ್ರೀಯ ಸಲಹಾ ಸಮಿತಿಯ ಸದಸ್ಯರಾಗಿ ನೇಮಕವಾಗಿದ್ದಾರೆ. ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಕೇಂದ್ರ ಪ್ರವಾಸೋದ್ಯಮ ಸಚಿವ, ತೆಲುಗಿನ ಖ್ಯಾತ ಚಿತ್ರನಟ ಚಿರಂಜೀವಿ ನನ್ನನ್ನು ನೇಮಕ ಮಾಡಿದ್ದು, ಅವಧಿ ಎರಡು ವರ್ಷದ್ದಾಗಿದೆ. ದೇಶದ 28 ರಾಜ್ಯಗಳಲ್ಲಿನ ಪ್ರವಾಸೋದ್ಯಮ ಕೇಂದ್ರಗಳಿಗೂ ಭೇಟಿ ಮಾಡಿ, ಅಭಿವೃದ್ಧಿ ಸೇರಿದಂತೆ ಇತರೆ ವಿಷಯಗಳ ಕುರಿತು ಸರ್ಕಾರದ ಗಮನ ಸೆಳೆಯಬಹುದಾಗಿದೆ. ಬಳ್ಳಾರಿ ಗಡಿ ಜಿಲ್ಲೆಯಾದ್ದರಿಂದ ಇಲ್ಲಿನ ಐತಿಹಾಸಿಕ ತಾಣ ಹಂಪಿಗೆ ಭೇಟಿ ನೀಡಿ, ಅಲ್ಲಿನ ಸಮಸ್ಯೆ, ಸೌಲಭ್ಯಗಳನ್ನು ಪರಿಶೀಲಿಸಿ, ಕೇಂದ್ರದ ಗಮನ ಸೆಳೆಯಲಾಗುವುದು. ಅದೇ ರೀತಿ, ಇತರೆ ಪ್ರವಾಸಿ ತಾಣಗಳಾಗಿರುವ ಎಳ್ಳಾರ್ತಿ, ದೇವರಗಟ್ಟ ಮಲ್ಲಯ್ಯ ಇತರೆ ಕೇಂದ್ರ ಅಭಿವೃದ್ಧಿಪಡಿಸಲು ಕ್ರಮಕೈಗೊಳ್ಳಲಾಗುವುದು ಎಂದರು.

ಆರೋಗ್ಯ ಇಲಾಖೆಯ ಸಹಾಯವಾಣಿ
ಬಳ್ಳಾರಿ: ರಾಜ್ಯ ಸರ್ಕಾರ ಜನಸಾಮಾನ್ಯರಿಗೆ ಆರೋಗ್ಯ ಸೇವಾ ಸೌಲಭ್ಯಗಳನ್ನು ಒದಗಿಸಲು 104 ಆರೋಗ್ಯ ಸಹಾಯವಾಣಿ ಎಂಬ ವಿನೂತನ ಯೋಜನೆಯನ್ನು ಜಾರಿಗೆ ತಂದಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ತಿಳಿಸಿದ್ದಾರೆ. ಜನರಿಗೆ ಸುಲಭದಲ್ಲಿ ಹಾಗೂ ಸಕಾಲದಲ್ಲಿ ಆರೋಗ್ಯ ಸೇವೆಗಳನ್ನು ಒದಗಿಸುವ ನಿಟ್ಟಿನಲ್ಲಿ ಈ ಯೋಜನೆಯನ್ನು ಜಾರಿಗೆ ತರಲಾಗಿದೆ. ಆರೋಗ್ಯ ಇಲಾಖೆಯಿಂದ ದೊರೆಯುವ ಎಲ್ಲ ಸೇವಾ ಸೌಲಭ್ಯಗಳನ್ನು 104 ಆರೋಗ್ಯ ಸಹಾಯವಾಣಿಗೆ ಕರೆ ಮಾಡುವ ಮೂಲಕ ಪಡೆಯಬಹುದಾಗಿದೆ. ಸಾರ್ವಜನಿಕರು ಈ ಸೌಲಭ್ಯದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.


ಕಂದಕಕ್ಕೆ ಬಿದ್ದ ವಾಹನ: 22 ಮಕ್ಕಳಿಗೆ ಗಾಯ
ಹೂವಿನಹಡಗಲಿ: ಶಾಲಾ ವಾಹನ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಪಕ್ಕದ ಕಂದಕ್ಕೆ ಉರುಳಿದ ಪರಿಣಾಮ 22 ಮಕ್ಕಳಿಗೆ ಗಾಯಗಳಾಗಿರುವ ಘಟನೆ ತಾಲೂಕಿನ ಉತ್ತಂಗಿ ಹೊರ ವಲಯದಲ್ಲಿ ಶನಿವಾರ ಬೆಳಗ್ಗೆ ನಡೆದಿದೆ.ಗಂಭೀರ ಗಾಯಗೊಂಡಿರುವ ನಿತೀಶ (8), ಭೂಮಿಕಾ (4), ಬಿ. ನಂದೀಶ (15), ಶಾರದಾ (8), ರಾಜೇಶ್ವರಿ (13), ಭೂಮಿಕಾ (9)ಳನ್ನು ದಾವಣಗೆರೆ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಉತ್ತಂಗಿ ಗ್ರಾಮದ ತರಳಬಾಳು ಜಗದ್ಗುರು ಶ್ರೀಗುರು ಶಾಂತರಾಜ ದೇಶೀಕೇಂದ್ರ ನರ್ಸರಿ ಮತ್ತು ಪ್ರಾಥಮಿಕ ಖಾಸಗಿ ಶಾಲೆಗೆ ಸೇರಿದ್ದ ವಾಹನದಲ್ಲಿ ಶಾಲೆಗೆ ಬರುತ್ತಿದ್ದ 28 ಶಾಲಾ ವಿದ್ಯಾರ್ಥಿಗಳಲ್ಲಿ 6 ವಿದ್ಯಾರ್ಥಿಗಳಿಗೆ  ್ಲ ಗಂಭೀರ ಗಾಯಗಳಾಗಿವೆ. ಉಳಿದ 16 ವಿದ್ಯಾರ್ಥಿಗಳಿಗೆ ಸಣ್ಣ ಪುಟ್ಟ ಗಾಯಗಳಿದ್ದು, ಅವರಿಗೆ ಇಟಗಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಮನೆಗೆ ಕಳಹಿಸಲಾಗಿದೆ.

ಆಯುಷ್ ಚಿಕಿತ್ಸೆ ಬಗ್ಗೆ ಅರಿವು ಮೂಡಿಸಿ: ಡಾ. ವೀರನಗೌಡ
ಬಳ್ಳಾರಿ: ಆಯುಷ್ ಇಲಾಖೆಯಡಿ ಕಾರ್ಯನಿರ್ವಹಿಸುವ ಎಲ್ಲ ಸಿಬ್ಬಂದಿಗಳು ಆಯುಷ್ ಚಿಕಿತ್ಸಾ ಪದ್ಧತಿಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಪ್ರಾಮಾಣಿಕ ಪ್ರಯತ್ನ ಮಾಡಬೇಕೆಂದು ಜಿಲ್ಲಾ ಆಯುಷ್ ಅಧಿಕಾರಿ ಡಾ. ವೀರನಗೌಡ ಪಾಟೀಲ್ ತಿಳಿಸಿದರು. ಜಿಲ್ಲಾ ಪಂಚಾಯಿತಿ, ಜಿಲ್ಲಾ ಆಯುಷ್ ಇಲಾಖೆ ಆಶ್ರಯದಲ್ಲಿ ನಗರದ ಐಎಂಎ ಸಭಾಂಗಣದಲ್ಲಿ ಆಯುಷ್ ಇಲಾಖೆಯ ಗ್ರೂಪ್ ಸಿ ಮತ್ತು ಡಿ ವರ್ಗದ ನೌಕರರಿಗಾಗಿ ಏರ್ಪಡಿಸಿದ್ದ ಮೂರು ದಿನಗಳ ವಸತಿ ಸಹಿತ ತರಬೇತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಡಾ. ಸಿದ್ದರಾಮಯ್ಯ ಉದ್ಘಾಟಿಸಿದರು. ಸಂಪನ್ಮೂಲ ವ್ಯಕ್ತಿಗಳು ಉಪನ್ಯಾಸ ನೀಡಿದರು. ಡಾ. ಮುಕುಂದ್, ಡಾ. ಅನಿಲ್, ಡಾ. ಫಣೀಂದರ್ ಇದ್ದರು.

ಎಂಪಿಪಿ ಸ್ಮರಣೆ: ಕವನ ಸಂಕಲನಕ್ಕೆ ಕವಿತೆಗಳ ಆಹ್ವಾನ
ಹೂವಿನಹಡಗಲಿ: ಮಾಜಿ ಡಿಸಿಎಂ ದಿ.ಎಂ.ಪಿ. ಪ್ರಕಾಶ 74ನೇ ಜನ್ಮದಿನ ನೆನಪಿಗಾಗಿ ರಾಜ್ಯಮಟ್ಟದ ಕವನ ಸಂಕಲನ ಹೊರತರಲಾಗುವುದು. ಆಸಕ್ತರು ಕವಿತೆಗಳನ್ನು ಎಂ.ಪಿ. ಪ್ರಕಾಶ್ ವ್ಯಕ್ತಿತ್ವ, ಜೀವಮಾನ ಸಾಧನೆ ಕುರಿತಂತೆ ಸ್ವ ರಚಿತ ಎರಡು ಕವಿತೆಗಳನ್ನು ಮಾರ್ಚ್ 31, 2014ರ ಒಳಗಾಗಿ ಕಳುಹಿಸಬಹುದು. 2014ನೇ ಜುಲೈ 11ರಂದು ಜರುಗುವ ಸಮಾರಂಭದಲ್ಲಿ ಕಾವ್ಯಗಳಲ್ಲಿ ಎಂ.ಪಿ. ಪ್ರಕಾಶ್ ಎಂಬ ಕವನ ಸಂಕಲನ ಬಿಡುಗಡೆ ಮಾಡಲಾಗುವುದು. ಬಳ್ಳಾರಿ ಜಿಲ್ಲೆಯ ಕವಿಗಳು ಸೇರಿದಂತೆ ರಾಜ್ಯದ ಹೆಸರಾಂತ ಕವಿಗಳು ಕವನಗಳನ್ನು ಕಳುಹಿಸಿಕೊಡುವಂತೆ ಈಗಾಗಲೆ ಪತ್ರ ಮುಖೇನ ಮನವಿ ಮಾಡಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಎಸ್. ನಿಂಗರಾಜ್, ಪತ್ರಕರ್ತರು, ತಾಪಂ ಮಳಿಗೆ ಲಾಲ್ ಬಹಾದ್ದೂರ್ ಶಾಸ್ತ್ರಿ ಸರ್ಕಲ್, ಹೂವಿನಹಡಗಲಿ- 583219, ಬಳ್ಳಾರಿ ಜಿಲ್ಲೆ, ಮೊ-944632733, 9481711947 ಇವರನ್ನು ಸಂಪರ್ಕಿಸಬೇಕೆಂದು ಪತ್ರಿಕಾ ಪ್ರಕಟಣೆ ತಿಳಿಸಿದೆ.

ಉಜ್ಜಿನಿ ಶ್ರೀಗುರು ಮರುಳಸಿದ್ಧಸ್ವಾಮಿಯ ವಿಜಯ ಯಾತ್ರಾ
ಕೊಟ್ಟೂರು: ಭರತ ಹುಣ್ಣಿಮೆ ನಿಮಿತ್ತ ಉಜ್ಜಿನಿಯ ಶ್ರೀಗುರು ಮರುಳಸಿದ್ಧಸ್ವಾಮಿಯ ವಿಜಯ ಯಾತ್ರಾ ಶುಕ್ರವಾರ ನಡೆಯಿತು. ಶ್ರೀಸ್ವಾಮಿಯ ಮಹೋತ್ಸವ ಫೆಬ್ರವರಿ 6ರಿಂದ ಆರಂಭಗೊಂಡು ಹುಣ್ಣಿಮೆಯ ದಿನವಾದ ಶುಕ್ರವಾರ ಮುಕ್ತಾಯಗೊಂಡಿತು. ಇದರ ನಿಮಿತ್ತ ಸ್ವಾಮಿಯನ್ನು ಪಲ್ಲಕ್ಕಿಯಲ್ಲಿರಿಸಿ ಪೀಠದ ಪಾದಗಟ್ಟಿ ಇರುವ ಗ್ರಾಮಗಳಲ್ಲಿ ಸಂಚಾರ ಕೈಗೊಳ್ಳಲಾಯಿತು. ಪಲ್ಲಕ್ಕಿ ಉತ್ಸವ ಮಾಚೇನಹಳ್ಳಿ, ಬೆಳದೇರಿ, ಬೆನಕನಹಳ್ಳಿ, ಸೊಕ್ಕೆ ಸ್ವಾಸ್ವಳ್ಳಿಗಳಿಗೆ ಸಾಗುತ್ತಿದ್ದಂತೆ ಆಯಾ ಗ್ರಾಮಗಳ ಜನತೆ ಉತ್ಸವವನ್ನು ಬರಮಾಡಿಕೊಂಡು ಭಕ್ತಿ ಸಮರ್ಪಿಸಿದರು. ಗುರುವಾರ ರಾತ್ರಿ ಉತ್ಸವ ಕಾಳಾಪುರದಲ್ಲಿ ನಡೆಯಿತು. ಬೆಳಗಿನ ಜಾವದವರೆಗೆ ಕಾಳಾಪುರದಲ್ಲಿ ಸಾಗಿತು. ರಾತ್ರಿಯಿಡಿ ಭಕ್ತರು ಭಕ್ತಿ ಸಮರ್ಪಿಸಿದರು.

ವಿಜಯನಗರ ಸಾಮ್ಯಾಜ್ಯ ಸ್ಥಾಪನೆಗೆ ಕಂಪ್ಲಿ ಪ್ರೇರಣೆ
ಕಂಪ್ಲಿ: ಗಂಡು ಮೆಟ್ಟಿನ ನಾಡು ಮತ್ತು ನೊಳಂಬರ ರಾಜಧಾನಿಯಾಗಿದ್ದ ಕಂಪ್ಲಿ  ವಿಜಯನಗರ ಸಾಮ್ರಾಜ್ಯ ಸ್ಥಾಪನೆಗೆ ಪ್ರೇರಣೆಯಾಗಿದೆ ಎಂದು ತುಮಕೂರು ವಿಶ್ವವಿದ್ಯಾಲಯದ ಇತಿಹಾಸ ವಿಭಾಗದ ಅಧ್ಯಕ್ಷ ಡಾ. ಎಂ. ಕೊಟ್ರೇಶ್ ಹೇಳಿದರು. ಪಟ್ಟಣದ ಕಂಪ್ಲಿ ವಿದ್ಯಾವರ್ಧಕ ಸಂಘ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಕಂಪ್ಲಿ ಮತ್ತು ಹಂಪಿ ಇತಿಹಾಸ ಕುರಿತು ಉಪನ್ಯಾಸ ನೀಡಿದರು. ವಿದ್ಯಾವರ್ಧಕ ಸಂಘದ ಅಧ್ಯಕ್ಷ ಜೋರಾವರಮಲ್ ಜೈನ್ ಅಧ್ಯಕ್ಷತೆ ವಹಿಸಿದ್ದರು. ಅಲ್ಲಂ ಗುರುಬಸವರಾಜ, ಗುರುಸಿದ್ಧಸ್ವಾಮಿ, ಅರವಿ ಬಸವನಗೌಡ, ಜಿ. ಸಿದ್ದರಾಮಪ್ಪ, ಅಂಚೆ ವಲಿಸಾಬ್, ಎಸ್. ಅನಿಲ್‌ಕುಮಾರ್, ಆರ್. ರಾಮಲಾಲ್, ಎಂ. ಮೋಹನ್‌ಬಾಬು, ಕಲ್ಗುಡಿ ವಿಶ್ವನಾಥ ಇತರರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.