ಕುಡಿದು ಶಾಲೆಗೆ ಬರುತ್ತಿದ್ದ ಶಿಕ್ಷಕನಿಗೆ ಘೇರಾವ್
ಕೂಡ್ಲಿಗಿ: ಪ್ರತಿದಿನ ಕುಡಿದು ಶಾಲೆಗೆ ಬರುತ್ತಿದ್ದ ಮುಖ್ಯ ಶಿಕ್ಷಕ, ಶಾಲೆಯಲ್ಲಿ ಪಾಠ ಮಾಡುವುದನ್ನು ಬಿಟ್ಟು ಶಾಲೆಯಲ್ಲೇ ಮಲಗುತ್ತಿದ್ದರಿಂದ ಗ್ರಾಮಸ್ಥರು ರೋಸಿ ಕೊನೆಗೆ ಶಾಲೆಗೆ ಬೀಗ ಜಡಿದು ಪ್ರತಿಭಟಿಸಲು ಮುಂದಾದಾಗ ಶಿಕ್ಷಣ ಇಲಾಖೆ ಅಧಿಕಾರಿಗಳು ಶಾಲೆಗೆ ಭೇಟಿ ನೀಡಿ ಆ ಶಿಕ್ಷಕನನ್ನು ಕೂಡ್ಲಿಗಿ ಪಟ್ಟಣದ ಶಾಲೆಯೊಂದಕ್ಕೆ ಡೆಪ್ಯೂಟೇಶನ್ ನೀಡಿದ ಘಟನೆ ಬುಧವಾರ ತಾಲೂಕಿನ ಅಮ್ಮನಕೆರೆ ಗ್ರಾಮದಲ್ಲಿ ನಡೆದಿದೆ. ಅಮ್ಮನಕೆರೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬಡ್ತಿ ಮುಖ್ಯಗುರು ಉಮ್ಲಾನಾಯ್ಕ ಪ್ರತಿದಿನ ಶಾಲೆಗೆ ಕುಡಿದು ಬರುತ್ತಿದ್ದು, ಅಲ್ಲಿ ಮಕ್ಕಳಿಗೆ ಪಾಠ ಮಾಡುವ ಬದಲು ಶಾಲೆಯ ಕೋಣೆಗಳಲ್ಲಿಯೇ ಮಲಗುತ್ತಿದ್ದನು. ಕೋಣೆಗಳನ್ನೆಲ್ಲ ಗಲೀಜು ಮಾಡುತ್ತಿದ್ದನು. ಗ್ರಾಮಸ್ಥರು ಈತನ ರಂಪಾಟವನ್ನು ವರ್ಷಗಟ್ಟಲೆ ಸಹಿಸಿಕೊಂಡಿದ್ದಾರೆ. ಈಗ ಸರಿ ಆಗಬಹುದು, ಮುಂದಿನ ದಿನಗಳಲ್ಲಿ ಎಚ್ಚೆತ್ತುಕೊಳ್ಳುತ್ತಾನೆ ಎಂದು ತಿಳಿದು ಗ್ರಾಮಸ್ಥರು ಸುಮ್ಮನಾಗಿದ್ದರು. ಅಲ್ಲದೆ ಸಾಕಷ್ಟು ಬಾರಿ ಆ ಶಿಕ್ಷಕನಿಗೆ ಎಚ್ಚರಿಕೆಯನ್ನೂ ನೀಡಿದ್ದರು. ಆದರೆ ಆ ಶಿಕ್ಷಕ ವರ್ಷಗಳೆ ಕಳೆದರೂ ಸರಿಯಾಗುವ ಮಟ್ಟಕ್ಕೆ ಬರಲಿಲ್ಲ. ಇದರಿಂದ ರೋಸಿ ಹೋಗಿದ್ದ ಗ್ರಾಮದ ವಂದೇ ಮಾತರಂ ಸಂಘಟನೆಯ ಯುವಕರು ಹಾಗೂ ಗ್ರಾಮಸ್ಥರು ಬುಧವಾರ ಈತನ ವರ್ತನೆಗೆ ಬೇಸತ್ತು ಶಾಲೆಗೆ ಬೀಗಿ ಹಾಕಿ ಪ್ರತಿಭಟಿಸಲು ನಿರ್ಧರಿಸಿದ್ದರು. ಇದನ್ನರಿತ ಕುಡುಕ ಶಿಕ್ಷಕ ಬುಧವಾರ ಶಾಲೆಗೆ ಬರದೆ ರಜೆ ಹಾಕಿ ಬಿಟ್ಟ. ಆದರೂ ಗ್ರಾಮಸ್ಥರು ಶಾಲೆಗೆ ಬೀಗ ಹಾಕಿ ಪ್ರತಿಭಟಿಸಲು ಮುಂದಾದಾಗ ವಿಷಯ ತಿಳಿದ ಬಿಇಒ ಎಂ.ಆರ್. ಮಂಜುನಾಥ ಅಮ್ಮನಕೆರೆ ಗ್ರಾಮಕ್ಕೆ ಭೇಟಿ ನೀಡಿ, ಗ್ರಾಮಸ್ಥರ ಮನವಿ ಆಲಿಸಿ ಕುಡುಕ ಶಿಕ್ಷಕನನ್ನು ಡೆಪ್ಯೂಟೇಶನ್ ಮೇಲೆ ಕೂಡ್ಲಿಗಿ 7ನೇ ವಾರ್ಡ್ ಶಾಲೆಗೆ ವರ್ಗಾವಣೆಯನ್ನು ಸ್ಥಳದಲ್ಲಿ ಮಾಡಿದರು. ಅಮ್ಮನಕೆರೆ ಶಾಲೆಗೆ ಮುಖ್ಯ ಶಿಕ್ಷಕರನ್ನಾಗಿ ಅದೇ ಶಾಲೆ ಹಿರಿಯ ಶಿಕ್ಷಕ ಬಸವರಾಜಗೆ ತಕ್ಷಣ ಅಧಿಕಾರ ನೀಡಲಾಯಿತು. ಹೇಗೊ ನಮ್ಮೂರಿನ ಶಾಲೆಗೆ ಕುಡುಕ ಶಿಕ್ಷಕನ ಕಾಟ ತಪ್ಪಿತಲ್ಲ ಎಂದು ಜನತೆ ಸಂಭ್ರಮಿಸಿದರು. ಪಿ.ವಿ. ಕೊತ್ಲಪ್ಪ, ಪಿ. ಶಿವರಾಜ, ಷಣ್ಮುಖಪ್ಪ, ಎಂ. ಶಿವಕುಮಾರಸ್ವಾಮಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

