ಬಳ್ಳಾರಿ

ಜನಾರ್ದನ ರೆಡ್ಡಿಗೆ ಮತ್ತಷ್ಟು ಕಂಟಕ

Published On :

ಕನ್ನಡಪ್ರಭ ವಾರ್ತೆ, ಬಳ್ಳಾರಿ, ಫೆ. 19
ಆಂಧ್ರಪ್ರದೇಶದ ಗಡಿಯಲ್ಲಿರುವ ಓಎಂಸಿ ಕಂಪನಿಯ ಕರ್ನಾಟಕ ಗಡಿ ಒತ್ತುವರಿ ಆರೋಪ ಪ್ರಕರಣ ಭವಿಷ್ಯದಲ್ಲಿ ಮಾಜಿ ಸಚಿವ ಜನಾರ್ದನ ರೆಡ್ಡಿಗೆ ಮುಳುವಾಗುವ ಭೀತಿ ಎದುರಾಗಿದೆ.
ಇದಕ್ಕೆ ಕಾರಣ ಗಡಿ ಒತ್ತುವರಿ ಕುರಿತು ಮೂಲ ದಾಖಲೆಗಳನ್ನು ಸಂಗ್ರಹಿಸುತ್ತಿರುವ ಸಿಬಿಐ ಪ್ರಕರಣದ ಬಗ್ಗೆ ವಿಸ್ತೃತ ಮಾಹಿತಿ ಕಲೆ ಹಾಕುತ್ತಿರುವುದು. ದಾಖಲೆ ಸಂಗ್ರಹದೊಂದಿಗೆ ಅರಣ್ಯ ಇಲಾಖೆ ಅಧಿಕಾರಿಗಳಿಂದ ಮಾಹಿತಿ ಸಂಗ್ರಹಿಸುತ್ತಿದೆ. ಇದರಿಂದಾಗಿ ಜನಾರ್ದನ ರೆಡ್ಡಿ ಪಾಲುದಾರತ್ವದ ಓಎಂಸಿ ಮೇಲಿನ ಗಡಿ ಒತ್ತುವರಿ ಆರೋಪ ರೆಡ್ಡಿಗೆ ಕಂಟಕವಾಗಲಿದೆ.
ಓಬಳಾಪುರಂ ಮೈನಿಂಗ್ ಕಂಪನಿ (ಓಎಂಸಿ)ಯ ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈದರಾಬಾದ್ ಸಿಬಿಐ ಡಿಐಜಿ ಎಂ.ಡಿ. ಲಕ್ಷಿಸ್ತೀನಾರಾಯಣ ಅವರು ಸೆ. 5, 2011ರಂದು ಜನಾರ್ದನ ರೆಡ್ಡಿ ಅವರನ್ನು ಬಂಧಿಸಿದ್ದರು. ಈ ಬಗ್ಗೆ ಅಲ್ಲಿನ ಸಿಬಿಐ ಅಧಿಕಾರಿಗಳು ವಿಚಾರಣೆ ನಡೆಸಿ ಸಿಬಿಐ ನಾಂಪಲ್ಲಿ ಕೋರ್ಟ್‌ಗೆ ದೋಷಾರೋಪಣ ಪಟ್ಟಿಯನ್ನು ಸಲ್ಲಿಸಿದ್ದರು. ಆದರೆ, ರೆಡ್ಡಿಗೆ ಯಾವುದೇ ರೀತಿಯಲ್ಲೂ ಜಾಮೀನು ಸಿಕ್ಕಿರಲಿಲ್ಲ. ಇದೀಗ ಸುಪ್ರೀಂ ಕೋರ್ಟ್ ಜನಾರ್ದನ ರೆಡ್ಡಿಗೆ ಸಂಬಂಧಿಸಿದಂತೆ ತನಿಖೆ ಪೂರ್ಣಗೊಳಿಸಬೇಕು ಎಂದು ಸಿಬಿಐಗೆ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಸಿಬಿಐ ರೆಡ್ಡಿ ಮೇಲಿನ ಆರೋಪಗಳಿಗೆ ಸಂಬಂಧಿಸಿದಂತೆ ಅಗತ್ಯ ದಾಖಲೆಗಳನ್ನು ಸಂಗ್ರಹಿಸುವಲ್ಲಿ ದಿಟ್ಟ ಹೆಜ್ಜೆ ಇಟ್ಟಿದೆ.
ಗಡಿ ಒತ್ತುವರಿಯ ಗುರುತರ ಆರೋಪ: ಈಗಾಗಾಲೆ ಓಎಂಸಿ ಅಕ್ರಮತೆ ಆರೋಪ ಜನಾರ್ದನ ರೆಡ್ಡಿ ಮೇಲಿದ್ದು, ಈ ಕುರಿತು ಸಿಬಿಐ ತನಿಖೆ ನಡೆಸಿ, ಅಕ್ರಮತೆಗೆ ಸಂಬಂಧಿಸಿದ ಮಾಹಿತಿಯನ್ನು ಸಿಬಿಐ ಸಲ್ಲಿಸಿದ ಚಾರ್ಜ್‌ಶೀಟ್‌ನಲ್ಲಿ ತಿಳಿಸಿದೆ. ಗಡಿ ಒತ್ತುವರಿ ಬಗ್ಗೆ ತನಿಖೆ ನಡೆಸಿತ್ತು. ಜನಾರ್ದನ ರೆಡ್ಡಿ ಮೇಲಿನ ಗಂಭೀರ ಆರೋಪಗಳಲ್ಲಿ ಆಂಧ್ರಪ್ರದೇಶದಲ್ಲಿನ ಓಎಂಸಿ ಮೂಲಕ ಕರ್ನಾಟಕದ ಗಡಿ ಒತ್ತುವರಿ ಮಾಡಲಾಗಿದೆ ಎಂಬ ಗುರುತರ ಆರೋಪ ಇದೆ. ಈ ಒತ್ತುವರಿಯು ರಾಜ್ಯದ ಗಡಿ ಒತ್ತುವರಿಯೂ ಆಗಿರುವುದರಿಂದ ಈ ವಿಷಯ ಮತ್ತಷ್ಟು ಗಂಭೀರತೆ ಪಡೆಯಲು ಕಾರಣವಾಗುತ್ತದೆ. ಈ ಆರೋಪದ ಕುರಿತು ಹೈದರಾಬಾದ್‌ನ ಸಿಬಿಐ ಅಧಿಕಾರಿಗಳು ಕೆಲ ದಿನಗಳಿಂದ ಬಳ್ಳಾರಿಯಲ್ಲಿ ಬೀಡು ಬಿಟ್ಟು, ಅಗತ್ಯ ಮಾಹಿತಿ ಸಂಗ್ರಹಿಸುತ್ತಿದ್ದಾರೆ.
ಕಡತ, ಮಾಹಿತಿ ಸಂಗ್ರಹ: ಕೆಲ ದಿನಗಳ ಹಿಂದೆ ಹೈದರಾಬಾದ್‌ನ ಎಎಸ್ಪಿ ರಾಯ್ ನೇತೃತ್ವದ ತಂಡ ಬಳ್ಳಾರಿಯ ಅರಣ್ಯ ಇಲಾಖೆಯ ಉಪ ಸಂರಕ್ಷಣಾಧಿಕಾರಿಗಳ ಕಚೇರಿಗೆ ಭೇಟಿ ನೀಡಿ, ಓಎಂಸಿ ಗಡಿ ಒತ್ತುವರಿಗೆ ಸಂಬಂಧಿಸಿದಂತೆ ಕಡತಗಳನ್ನು ಪರಿಶೀಲನೆ ಮಾಡಿ, ಮೂಲ ದಾಖಲೆಗಳನ್ನು ಸಂಗ್ರಹಿಸಿದ್ದಾರೆ. ಯಾವಾಗ ಗಡಿ ಒತ್ತುವರಿಯಾಗಿದೆ? ಗಡಿ ಒತ್ತುವರಿಗೆ ಸಂಬಂಧಿಸಿದಂತೆ ನಡೆದಿರುವ ಕಾನೂನಾತ್ಮಕ ಹಾಗೂ ಇಲಾಖೆಯವಾರು ತನಿಖೆಯ ಬೆಳವಣಿಗೆಗಳು, ಪ್ರಕರಣದ ಸತ್ಯಾಸತ್ಯಗಳು ಬಗ್ಗೆ ಮಾಹಿತಿಯನ್ನು ಹಾಗೂ ಅರಣ್ಯ ಇಲಾಖೆಯಲ್ಲಿನ ಕಡತಗಳನ್ನು ಪರಿಶೀಲಿಸಿದ್ದಾರೆ. ಅಲ್ಲದೆ ಮೂಲ ದಾಖಲೆಗಳ ಕಡತಗಳನ್ನು ಸಿಬಿಐ ವಶಕ್ಕೆ ಪಡೆದಿದ್ದಾರೆ.
ಮುಚ್ಚಿ ಹಾಕುವ ಪ್ರಯತ್ನ: ಗಡಿ ಧ್ವಂಸಕ್ಕೆ ಸಂಬಂಧಿದಂತೆ ಅಧಿಕಾರಿಗಳು ಕೈಗೊಂಡಿರುವ ಕ್ರಮಗಳೇನು ಎಂಬ ಮಾಹಿತಿ ಸಿಬಿಐಗೆ ದೊರೆತಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅರಣ್ಯ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಹಿಂದಿನ ಅಧಿಕಾರಿಯೊಬ್ಬರು ಪ್ರಕರಣವನ್ನು ಮುಚ್ಚಿ ಹಾಕುವ ಪ್ರಯತ್ನಗಳು ನಡೆದಿರುವ ಬಗ್ಗೆ ಸಿಬಿಐಗೆ ಮಾಹಿತಿ ಲಭ್ಯವಾಗಿದೆ ಎಂದು ಹೇಳಲಾಗುತ್ತಿದೆ. ಇದರಿಂದಾಗಿ ಆ ಅಧಿಕಾರಿಗೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಭವಿಷ್ಯದಲ್ಲಿ ಸಂಕಷ್ಟ ಎದುರಾಗಬಹುದು ಎನ್ನಲಾಗುತ್ತಿದೆ. ಓಎಂಸಿಯೊಂದಿಗೆ ಯಾವ ಯಾವ ಕಂಪನಿಗಳು ಅದಿರು ವಹಿವಾಟು ನಡೆಸಿವೆ ಎಂಬ ಬಗ್ಗೆ ಸಿಬಿಐ ಮಾಹಿತಿ ಕಲೆ ಹಾಕುತ್ತಿರುವುದು ನೋಡಿದರೆ ಓಎಂಸಿಯ ಕುರಿತಾಗಿ ಅದರಲ್ಲೂ ಜನಾರ್ದನ ರೆಡ್ಡಿ ಮೇಲಿನ ಆರೋಪಗಳ ಬಗ್ಗೆ ಮೂಲ ದಾಖಲೆಗಳನ್ನು ಸಂಗ್ರಹಿಸಿ ನ್ಯಾಯಾಲಯಕ್ಕೆ ಸಲ್ಲಿಸುವ ಸಾಧ್ಯತೆ ಹೆಚ್ಚಾಗಿದೆ.
ಒಂದು ಕಡೆ ಜನಾರ್ದನ ರೆಡ್ಡಿ ಇಂದಲ್ಲಾ ನಾಳೆ ಹೊರ ಬರುತ್ತಾರೆ ಎಂಬ ಸುದ್ದಿ ಇದ್ದರೆ, ಮತ್ತೊಂದೆಡೆ ಸಿಬಿಐ ಅಧಿಕಾರಿಗಳು ಜನಾರ್ದನ ರೆಡ್ಡಿ ಮೇಲಿನ ಆರೋಪಗಳ ಬಗ್ಗೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದು, ಇದೀಗ ಪ್ರಕರಣಗಳಿಗೆ ಸಂಬಂಧಿಸಿದಂತೆ ಮೂಲ ದಾಖಲೆಗಳನ್ನು ಸಂಗ್ರಹಿಸುವ ಕಾರ್ಯ ನಿರಂತರವಾಗಿ ಸಾಗಿದೆ. ಸಿಬಿಐ ಈ ಎಲ್ಲ ಮಾಹಿತಿ ಸಂಗ್ರಹಿಸುತ್ತಿರುವುದನ್ನು ನೋಡಿದರೆ ಜನಾರ್ದನ ರೆಡ್ಡಿಗೆ ಭವಿಷ್ಯದಲ್ಲಿ ಮತ್ತಷ್ಟು ಕಂಟಕ ಎದುರಾಗುವ ಭೀತಿ ಹೆಚ್ಚಾಗಿದೆ ಎಂದು ಹೇಳಬಹುದು.


-ಶಶಿಧರ ಮೇಟಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.