ಸಮನ್ವಯತೆ ಹರಿಕಾರನ ಸಂಭ್ರಮದ ರಥೋತ್ಸವ
ಕೊಟ್ಟೂರು: ಸರ್ವಧರ್ಮ ಸಮನ್ವಯತೆಯ ಹರಿಕಾರ ಶ್ರೀಗುರು ಕೊಟ್ಟೂರೇಶ್ವರ ಸ್ವಾಮಿ ಮಹಾ ರಥೋತ್ಸವ ಸೋಮವಾರ ಸಂಜೆ ಮೂಲನಕ್ಷತ್ರದಲ್ಲಿ ಭಕ್ತ ಸಾಗರದ ಅಮಿತೋತ್ಸಾಹದ ಮಧ್ಯೆ ಅದ್ಧೂರಿಯಾಗಿ ಜರುಗಿತು.
ಸಂಜೆ 5.16ರ ವೇಳೆಗೆ ರಥೋತ್ಸವಕ್ಕೆ ಚಾಲನೆ ದೊರೆಯುತ್ತಿದ್ದಂತೆಯೆ ನೆರೆದಿದ್ದ ಭಕ್ತಸ್ತೋಮ ಏಕ ಕಂಠದಿಂದ ಕೊಟ್ಟೂರು ದೊರೆಯೆ ನಿನಗಾರು ಸರಿಯೆ, ಸರಿ ಎಂದವರ ಹಲ್ಲು ಮುರಿವೆ.. ಬಹುಪರಾಕ್ ಎಂಬ ಘೋಷಣೆಯನ್ನು ಮುಗಿಲು ಮುಟ್ಟುವಂತೆ ಕೂಗಿ ರಾಶಿಯೋಪಾದಿ ಬಾಳೆಹಣ್ಣು ತೀರಿ ಭಕ್ತಿ ಸಮರ್ಪಿಸಿದರು. ಸಮಾಳ, ನಂದಿಕೋಲು ಮತ್ತಿತರ ವಾದ್ಯಗಳ ಇಂಪಾದ ನಿನಾದಕ್ಕೆ ಸ್ವಾಮಿಯ ಭಕ್ತರು ಕುಣಿದಾಡಿ ಉದ್ಘೋಷಗಳನ್ನು ಕೂಗುತ್ತಾ ಭಕ್ತಿಯ ಪರಾಕಾಷ್ಠೆ ಮೆರೆದರು.
ಶ್ರೀಗುರು ಕೊಟ್ಟೂರೇಶ್ವ ಸ್ವಾಮಿಯ ಮೂಲ ಮೂರ್ತಿಯನ್ನು ಹಿರೇಮಠದಿಂದ ಬೆಳ್ಳಿ ಪಲ್ಲಕ್ಕಿಯಲ್ಲಿ ಕುಳ್ಳಿರಿಸಿ ಮೆರವಣಿಗೆ ಕೈಗೊಳ್ಳಲಾಯಿತು. ಮೆರವಣಿಗೆ ಇಲ್ಲಿನ ಗಾಂಧಿ ವೃತ್ತದ ಬಳಿ ಬರುತ್ತಿದ್ದಂತೆಯೆ ದಿನವಿಡಿ ಉಪವಾಸವಿದ್ದ ಹರಿಜನ ಮಹಿಳೆ ಉಡುಲಸಮ್ಮ ಶ್ರೀಸ್ವಾಮಿಗೆ ಕಳಸದಾರತಿ ಬೆಳಗಿದಳು. ಕ್ರಿಯಾಮೂರ್ತಿ ಮಲ್ಲಿಕಾರ್ಜುನ ದೇವರು, ಧರ್ಮಕರ್ತ ಎ.ಎಂ.ಬಿ. ಕೊಟ್ರಯ್ಯ ಮತ್ತು ಆಯಾಗಾರ ಬಳಗದವರು ಶ್ರೀಸ್ವಾಮಿಯನ್ನು ವೈಭದೊಂದಿಗೆ ಮೇಲೆ ಕೊಂಡೊಯ್ದು ಕುಳ್ಳಿರಿಸುತ್ತಿದ್ದಂತೆಯೆ ರಥ ಮುಂದೆ ಸಾಗಿತು. ಯಾವುದೆ ಬಗೆಯ ಅನಾಹುತಗಳು ನಡೆಯದಂತೆ ರಥೋತ್ಸವದ ಸುತ್ತಲೂ ಭಾರೀ ಪೊಲೀಸ್ ಬಂದೋಬಸ್ತ್ನ್ನು ಕೂಡ್ಲಿಗಿ ಡಿವೈಎಸ್ಪಿ ಗಜಕೋಶ ಏರ್ಪಡಿಸಿದ್ದರು.
ಶಾಸಕ ಎಸ್. ಭೀಮಾನಾಯ್ಕ, ಜೆಡಿಎಸ್ ಮುಖಂಡ ಎಂ.ಎಂ.ಜೆ. ಹರ್ಷವರ್ಧನ್, ಜಿಪಂ ಸದಸ್ಯ ರೋಗಾಣಿ ಹುಲುಗಪ್ಪ, ಶಿವಮೂರ್ತಿ, ಧಾರ್ಮಿಕ ದತ್ತಿ ಇಲಾಖೆ ಸಹಾಯಕ ಆಯುಕ್ತ ಎಸ್.ಪಿ.ಬಿ. ಮಹೇಶ್, ದೇವಸ್ಥಾನ ಸಿಇಒ ಅರವಿಂದ ಸುತಗುಂಡಿ ಮತ್ತಿತರರು ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

