ವಿಎಸ್ಕೆ ವಿಶ್ವವಿದ್ಯಾಲಯದಲ್ಲಿ ಕುಲಪತಿ, ಕುಲಸಚಿವರ ಕಿತ್ತಾಟ
ಬಳ್ಳಾರಿ: ಬಳ್ಳಾರಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ ಕುಲಪತಿ ಹಾಗೂ ಕುಲಸಚಿವರ ಮಧ್ಯೆ ತಿಕ್ಕಾಟಕ್ಕೆ ಕೊನೆ ಇಲ್ಲ ಎಂದು ಕಾಣಿಸುತ್ತಿದೆ. ವಿವಿಯಲ್ಲಿ ಇವರಿಬ್ಬರ ಮಧ್ಯೆ ಈಗಾಗಲೇ ಸಾಕಷ್ಟು ತಿಕ್ಕಾಟಗಳು ನಡೆದಿದ್ದು, ಇದೀಗ ಮತ್ತೊಂದು ಶುರುವಾಗಿದೆ.
ವಿವಿಯ ಹಣಕಾಸು ಅಧಿಕಾರಿ ಜುಬೇರಾ ಅವರನ್ನು ವರ್ಗಾವಣೆ ಮಾಡಬೇಕೆಂದು ಕುಲಸಚಿವ ವಿಜಯಕುಮಾರ್ ಅವರು ಕುಲಪತಿ ಹಾಗೂ ಸಿಂಡಿಕೇಟ್ ಅನುಮತಿ ಪಡೆಯದೆ ಸರ್ಕಾರಕ್ಕೆ ಪತ್ರ ಬರೆದಿರುವುದು ಹೊಸ ವಿವಾದಕ್ಕೆ ಕಾರಣವಾಗಿದೆ. ಇದಕ್ಕೆ ಪ್ರತಿಯಾಗಿ ಕುಲಪತಿ ಮಂಜಪ್ಪ ಡಿ. ಹೊಸಮನಿ ಅವರು, ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹಾಗೂ ಸಚಿವ ದೇಶಪಾಂಡೆ ಅವರಿಗೆ ಪತ್ರ ಬರೆದು, ಹಣಕಾಸು ಅಧಿಕಾರಿಗೆ ಕುಲಸಚಿವರು ಕಿರುಕುಳ ನೀಡುತ್ತಿದ್ದು, ಹಣಕಾಸು ಅಧಿಕಾರಿ ವರ್ಗಾವಣೆ ರದ್ದುಪಡಿಸಬೇಕು ಹಾಗೂ ವಿಜಯಕುಮಾರ್ ಮೇಲೆ ಕ್ರಮ ಕೈಗೊಳ್ಳಬೇಕೆಂದು ಕೋರಿದ್ದಾರೆ.
ಮಂಗಳವಾರ ಈ ಕುರಿತು ವಿವಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಶ್ವವಿದ್ಯಾಲಯದ ಕುಲಪತಿ ಮಂಜಪ್ಪ ಡಿ. ಹೊಸಮನಿ, 'ಕುಲಸಚಿವರೇ ಹಣಕಾಸು ಅಧಿಕಾರಿಯನ್ನು ವರ್ಗಾವಣೆ ಮಾಡಬೇಕೆಂದು ಸರ್ಕಾರಕ್ಕೆ ಪತ್ರ ಬರೆಯುವ ಮೂಲಕ ಹಾಗೂ ಅನಗತ್ಯವಾಗಿ ಮೆಮೋ ನೀಡುವ ಮೂಲಕ ಹಣಕಾಸು ಅಧಿಕಾರಿಗೆ ಕಿರುಕುಳ ನೀಡುತ್ತಿದ್ದಾರೆ. ಇದರಿಂದಾಗಿ ವಿವಿಯ ಆಡಳಿತ ವ್ಯವಸ್ಥೆ ಮೇಲೆ ಪರಿಣಾಮ ಬೀರುತ್ತಿದೆ. ಪ್ರಾಮಾಣಿಕ, ನಿಷ್ಠಾವಂತ ಹಣಕಾಸು ಅಧಿಕಾರಿ ಜುಬೇರಾ ಅವರಿಗೆ ಈ ರೀತಿ ಕಿರುಕುಳ ನೀಡುವುದು ಎಷ್ಟು ಸರಿ' ಎಂದು ಕುಲಸಚಿವ ವಿಜಯಕುಮಾರ್ ಕ್ರಮ ಪ್ರಶ್ನಿಸಿದರು.
ನಾಲ್ಕೈದು ತಿಂಗಳಿನಿಂದ ಹಣಕಾಸು ಅಧಿಕಾರಿಗೆ ಈ ರೀತಿ ಕಿರುಕುಳ ನೀಡುತ್ತಿದ್ದಾರೆ. ವಿಸಿ ಹಾಗೂ ಸಿಂಡಿಕೇಟ್ನ ಅನುಮತಿ ಇಲ್ಲದೆ ಸರ್ಕಾರಕ್ಕೆ ಹಣಕಾಸು ಅಧಿಕಾರಿಯನ್ನು ವರ್ಗಾವಣೆ ಮಾಡಬೇಕೆಂದು ಪತ್ರ ಬರೆದಿದ್ದಾರೆ. ಪತ್ರದ ಆಧಾರದ ಮೇಲೆಯೆ ಸರ್ಕಾರ ವರ್ಗಾವಣೆಗೆ ಮುಂದಾಗಿದೆ. ಇನ್ನು ವಿವಿಯಲ್ಲಿ ಕೋಟ್ಯಂತರ ರುಪಾಯಿ ಅವ್ಯವಹಾರವಾಗಿದೆ ಎಂದು ಪತ್ರ ಬರೆದ ವಿಷಯ ಗೊತ್ತಾಗಿದೆ. ಈ ವಿಷಯ ಬಗ್ಗೆ ಸರ್ಕಾರಕ್ಕೆ ಪತ್ರ ಬರೆದು, ವಿಜಯಕುಮಾರ್ ಮಾಡಿರುವ ಆರೋಪ ಸರಿಯಲ್ಲ. ಹಣಕಾಸಿನ ವಿಚಾರದಲ್ಲಿ ಯಾವುದೆ ಅವ್ಯವಹಾರವಾಗಿಲ್ಲ. ವಿಜಯಕುಮಾರ್ ವಿಸಿ ಹಾಗೂ ಸಿಂಡಿಕೇಟ್ ಒಪ್ಪಿಗೆ ಇಲ್ಲದೆ ಪತ್ರ ಬರೆದು ಗೊಂದಲ ಸೃಷ್ಟಿಸುತ್ತಿದ್ದಾರೆ. ಇವರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಸರ್ಕಾರಕ್ಕೆ ಪತ್ರ ಬರೆದರೂ ಈವರೆಗೂ ಯಾವುದೆ ಪ್ರತಿಕ್ರಿಯೆ ಬಂದಿಲ್ಲ ಎಂದು ವಿಸಿ ತಿಳಿಸಿದರು.
ಕುಲಸಚಿವರ ಮೇಲೆ ಕ್ರಮ ಕೈಗೊಳ್ಳುವ ಅಧಿಕಾರ ತಮಗೆ ಇಲ್ಲ, ಈ ಹಿನ್ನೆಲೆಯಲ್ಲಿ ಕುಲಸಚಿವರ ಮೇಲೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು. ಜುಬೇರಾ ಅವರ ವರ್ಗಾವಣೆ ರದ್ದುಪಡಿಸಬೇಕು, ವಿವಿಯ ಇತರ ಸಿಬ್ಬಂದಿ ಹಾಗೂ ಅಧಿಕಾರಿಗಳ ಮೇಲೆ ಆರೋಪ ಮಾಡಿ, ಪತ್ರ ಬರೆಯುವ ಮೂಲಕ ಕಿರುಕುಳ ನೀಡಿದರೆ ವಿವಿಯಲ್ಲಿ ಕೆಲಸ ನಿರ್ವಹಿಸುವುದಾದರೂ ಹೇಗೆ? ಇನ್ನು ಹಣಕಾಸು ಅಧಿಕಾರಿ ಜುಬೇರಾ ಅವರು ತಮಗೆ ಪತ್ರ ಬರೆಯುವ ಮೂಲಕ ಇಂತಹ ಸಮಸ್ಯೆಯನ್ನು ತಮ್ಮ ಗಮನಕ್ಕೆ ತಂದಿದ್ದಾರೆ. ಅನುಮತಿ ಇಲ್ಲದೆ ಕುಲಸಚಿವರು ಲ್ಯಾನ್ಸರ್ ಕಾರನ್ನು ಪಡೆದುಕೊಂಡಿದ್ದಾರೆ. ಇದು ಕೂಡ ನಿಯಮ ಉಲ್ಲಂಘನೆ, ಅಲ್ಪಸಂಖ್ಯಾತ ಅಧಿಕಾರಿಯೊಬ್ಬರ ಮೇಲೆ ಆರೋಪದ ಪತ್ರ, ಮೆಮೋ ನೀಡುವ ಕೆಲಸ ಮಾಡುವುದು ಸರಿಯೆ ಎಂದು ಕುಲಸಚಿವ ವಿಜಯಕುಮಾರ್ ಕ್ರಮವನ್ನು ಕುಲಪತಿ ಖಂಡಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

