ಬಳ್ಳಾರಿ

ಖರೀದಿ ಅವಧಿ ವಿಸ್ತರಣೆಗೆ ರೈತರ ಆಗ್ರಹ

Published On :

ಕನ್ನಡಪ್ರಭ ವಾರ್ತೆ, ಬಳ್ಳಾರಿ, ಫೆ. 26
ಸ್ಥಳೀಯ ಎಪಿಎಂಸಿ ಮಾರುಕಟ್ಟೆಯಲ್ಲಿ ಮೆಕ್ಕೆಜೋಳ ಖರೀದಿ ಅವಧಿಯನ್ನು ವಿಸ್ತರಿಸಬೇಕು. ತ್ವರಿತಗತಿಯಲ್ಲಿ ಹಾಗೂ ನ್ಯಾಯಯುತವಾಗಿ ತೂಕ ಮಾಡಿ, ಬೆಳೆ ಸಾಗಿಸಬೇಕು ಎಂದು ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಕಾರ್ಯಕರ್ತರು ಎಪಿಎಂಸಿ ಆವರಣದ ಖರೀದಿ ಕೇಂದ್ರದ ಮುಂಭಾಗ ಬುಧವಾರ ಪ್ರತಿಭಟನೆ ನಡೆಸಿದರು.
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳು ಈಗಾಗಲೆ ಖರೀದಿಗಾಗಿ ರೈತರಿಗೆ ಟೋಕನ್ ನೀಡಿ 15-20 ದಿನ ಕಳೆದರೂ ಖರೀದಿ ಮಾಡದೆ ವಿಳಂಬ ಮಾಡಲಾಗುತ್ತಿದೆ. ಕ್ವಿಂಟಲ್‌ಗೆ 4 ಕೆಜಿ ಹೆಚ್ಚುವರಿಯಾಗಿ ತೂಕ ಮಾಡವ ಮೂಲಕ ರೈತರನ್ನು ವಂಚಿಸಲಾಗುತ್ತಿದೆ. ಧಾನ್ಯಗಳಿಗೆ ಸೂಕ್ತ ರಕ್ಷಣೆಯೂ ಇಲ್ಲಿ ಇಲ್ಲ. ಆದರೆ ಖರೀದಿ ಇನ್ನೆರಡು ದಿನ ಮಾತ್ರ ನಡೆಯಲಿದ್ದು, ಫೆ. 28 ಕೊನೆ ದಿನವಾಗಿದೆ. ಹೀಗಾಗಿ ಕೂಡಲೆ ಖರೀದಿಯನ್ನು ತ್ವರಿತಗೊಳಿಸಬೇಕು. ಖರೀದಿಗಾಗಿ ನಿಗದಿಪಡಿಸಿದ ಅವಧಿಯನ್ನು ವಿಸ್ತರಿಸಬೇಕು ಎಂದು ಆಗ್ರಹಿಸಿದರು.
ಅಧಿಕಾರಿಗಳಿಂದ ಅನ್ಯಾಯ: ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಜಿ.ಪುರುಷೋತ್ತಮಗೌಡ ಮಾತನಾಡಿ, ರಾಜ್ಯ ಸರ್ಕಾರವೆ ಮೆಕ್ಕೆಜೋಳಕ್ಕೆ 1310 ಬೆಂಬಲ ಬೆಲೆ ನಿಗದಿಪಡಿಸಿದ ಹಿನ್ನೆಲೆಯಲ್ಲಿ ಎಲ್ಲರೂ ಖರೀದಿ ಕೇಂದ್ರದಲ್ಲೆ ಮೆಕ್ಕೆಜೋಳ ಮಾರಲು ಮುಂದಾಗುತ್ತಿದ್ದಾರೆ. ಖರೀದಿಸುವುದಾಗಿ ರೈತರಿಗೆ ಟೋಕನ್ ನೀಡಿದ ಅಧಿಕಾರಿಗಳು 20 ದಿನಗಳಾದರೂ, ಎಚ್ಚೆತ್ತುಕೊಳ್ಳುತ್ತಿಲ್ಲ. ಇದರಿಂದ ರೈತರಿಗೆ ತೀವ್ರ ನಷ್ಟ ಉಂಟಾಗಲಿದೆ. ಅಲ್ಲದೆ 20 ದಿನಗಳಿಂದ ಪ್ಲಾಟ್‌ಫಾರ್ಮ್ ಮೇಲೆ ಇರುವ ಮೆಕ್ಕೆಜೋಳ ದಿನದಿನಕ್ಕೆ ಏರುತ್ತಿರುವ ಬಿಸಿಲಿನ ತಾಪದಿಂದಾಗಿ ತೂಕದಲ್ಲಿ ವ್ಯತ್ಯಾಸ ಉಂಟಾಗುತ್ತಿದೆ. ಕ್ವಿಂಟಲ್‌ಗೆ ನಾಲ್ಕು ಕೆಜಿ ಹೆಚ್ಚುವರಿಯಾಗಿ ಪಡೆದು, ರೈತರನ್ನು ವಂಚಿಸಲಾಗುತ್ತಿದೆ. ಯಾವುದೆ ಸರ್ಕಾರಿ ಆದೇಶವಿಲ್ಲದೆ ಹೆಚ್ಚುವರಿಯಾಗಿ ಪಡೆಯುತ್ತಿರುವ ಅಧಿಕಾರಿಗಳು ರೈತರಿಗೆ ಅನ್ಯಾಯ ವೆಸಗುತ್ತಿದ್ದಾರೆ ಎಂದು ಆರೋಪಿಸಿದರು.
ಮೆಕ್ಕೆಜೋಳ ಸಾಗಿಸಿ: ಬಳ್ಳಾರಿ ತಾಲೂಕಿನ ಬೊಬ್ಬುಕುಂಟೆ, ಶಂಕರಬಂಡೆ, ಕೊಳಗಲ್ಲು, ಕಪ್ಪಗಲ್ಲು, ಸಿರುವಾರ, ಸಂಗನಕಲ್ಲು, ಕೊರ್ಲಗುಂದಿ, ಸೋಮಸಮುದ್ರ, ಕೋಳೂರು, ಎರ್ರಂಗಳಿ, ಸಿದ್ದಮ್ಮನಹಳ್ಳಿ ಸೇರಿದಂತೆ ಸಿರುಗುಪ್ಪದ ತೆಕ್ಕಲಕೋಟೆ ಇನ್ನಿತರೆ ಗ್ರಾಮಗಳಿಂದ ಖರೀದಿಗಾಗಿ ತಂದಿರುವ ಸುಮಾರು 30 ಸಾವಿರ ಚೀಲ (15000 ಕ್ವಿಂಟಲ್)ಗಳು ಸದ್ಯ ಎಪಿಎಂಸಿ ಆವರಣದಲ್ಲಿನ ಖರೀದಿ ಕೇಂದ್ರದ ಬಳಿಯಿದ್ದು, ಇನ್ನು ಸಾವಿರಾರು ಕ್ವಿಂಟಲ್ ಮೆಕ್ಕೆಜೋಳ ಬರುವ ಲಕ್ಷಣಗಳಿವೆ. ಹೀಗಾಗಿ ಕೂಡಲೆ ಸಧ್ಯ ಇರುವ ಮೆಕ್ಕೆಜೋಳವನ್ನು ಖರೀದಿಸಿ ಸಾಗಿಸಬೇಕು ಎಂದು ಒತ್ತಾಯಿಸಿದರು.
ಇಷ್ಟುದಿನ ಇದ್ದ ಗೋದಾಮು ಕೊರತೆ ಇದೀಗ ನಿವಾರಣೆಯಾಗಿದ್ದು, ಖರೀದಿಯಾದ ಮೆಕ್ಕೆಜೋಳ ಸಾಗಿಸಲು ಲಾರಿಗಳ ಕೊರತೆ ಎದುರಾಗಿದೆ ಎಂದು ಅಧಿಕಾರಿಗಳು ತಿಳಿಸುತ್ತಿದ್ದಾರೆ. ಆದರೆ ಕಳೆದ ಡಿಸೆಂಬರ್‌ನಂಲ್ಲಿ ಆರಂಭವಾಗಿರುವ ಕೇಂದ್ರದಲ್ಲಿ ಇವರೆಗೂ ಸುಮಾರು 30 ಸಾವಿರ ಕ್ವಿಂಟಲ್ ಖರೀದಿ ಮಾಡಲಾಗಿದ್ದು, ದಿನಕ್ಕೆ ಕೇವಲ 3-4 ಲಾರಿಗಳಿಂದ ಸಾಗಿಸಲಾಗುತ್ತಿದೆ. ಇದರಿಂದ ಖರೀದಿಯೂ ವಿಳಂಬವಾಗುತ್ತಿದ್ದು, ರೈತರಲ್ಲಿ ಆತಂಕ ಉಂಟಾಗಿದೆ ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಕುಂದಾಪುರ ನಾಗರಾಜ್, ರಾಜಶೇಖರಗೌಡ, ಶಾನವಾಸಪುರ ತಿಮ್ಮನಗೌಡ, ಗಂಗಿರೆಡ್ಡಿ, ಸುರೇಶ್ ರೆಡ್ಡಿ, ಬಿ. ಜಂಬಣ್ಣ, ಬಿ. ಪಂಪಣ್ಣ ಹಾಗೂ ರೈತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.