ಬಳ್ಳಾರಿ

ರು. 7.30 ಕೋಟಿ ವೆಚ್ಚದಲ್ಲಿ ಹಂಪಿ ಉತ್ಸವ

Published On :

ಕನ್ನಡಪ್ರಭ ವಾರ್ತೆ, ಬಳ್ಳಾರಿ, ಜ. 4
ಜ. 10ರಿಂದ ನಡೆಯುವ ಹಂಪಿ ಉತ್ಸವಕ್ಕೆ ಸಿದ್ಧತೆ ನಡೆದಿದ್ದು, ರು. 7.30 ಕೋಟಿ ವೆಚ್ಚದಲ್ಲಿ ಆಚರಿಸಲು ನಿರ್ಧರಿಸಲಾಗಿದೆ. ಉತ್ಸವಕ್ಕೆ ಬೇಕಾಗುವ ಅನುದಾನವನ್ನು ಸಂಗ್ರಹಿಸಲಾಗಿದೆ. ಅನುದಾನದ ಕೊರತೆಯಾಗದಂತೆ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಅಮ್ಲಾನ್ ಆದಿತ್ಯ ಬಿಸ್ವಾಸ್ ತಿಳಿಸಿದರು.
ಶನಿವಾರ ಹಂಪಿಯಲ್ಲಿ ಉತ್ಸವ ಸಿದ್ಧತೆ ಪರಿಶೀಲಿಸಿದ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ಬಾರಿ ಹಂಪಿ ಉತ್ಸವದಲ್ಲಿ ಕೆಲ ವಸ್ತುಗಳನ್ನು ಸ್ವಂತ ಖರೀದಿಸಲಾಗಿದೆ. ಕನ್ನಡ ಮತ್ತು ಸಂಸ್ಕೃತ ಇಲಾಖೆಯಿಂದ ರು. 1.75 ಕೋಟಿ ನೀಡಲಾಗಿದೆ. ಪ್ರವಾಸೋದ್ಯಮ ಇಲಾಖೆಯಿಂದ ರು. 25 ಲಕ್ಷ ಬಿಡುಗಡೆಯಾಗಿದ್ದು, ಬಾಕಿ ರು. 75 ಲಕ್ಷ ನೀಡಲಿದೆ. ವಾರ್ತಾ ಇಲಾಖೆ ರು. 25 ಲಕ್ಷ ನೀಡಿದ್ದು, ಬಾಕಿ ಅನುದಾನವನ್ನು ನೀಡಲಿದೆ. ಬಿಐಟಿಎಫ್ನಿಂದ ರು. 92 ಲಕ್ಷ, ಅರೆ ಸರ್ಕಾರಿ, ಖಾಸಗಿ, ಜಿಲ್ಲಾ ಪಂಚಾಯ್ತಿ ಸೇರಿದಂತೆ ಇತರ ಕಡೆಗಳಿಂದ ರು. 2.5 ಕೋಟಿ ದೇಣಿಗೆ ಬಂದಿದೆ. ಇದರಿಂದಾಗಿ ಅನುದಾನದಲ್ಲಿ ಯಾವುದೇ ಸಮಸ್ಯೆ ಆಗುವುದಿಲ್ಲ ಎಂದು ತಿಳಿಸಿದರು.
ನಾಲ್ಕು ವೇದಿಕೆಗಳ ವ್ಯವಸ್ಥೆ: ಉತ್ಸವದಲ್ಲಿ ನಾಲ್ಕು ವೇದಿಕೆಗಳ ವ್ಯವಸ್ಥೆ ಮಾಡಲಾಗಿದೆ. ಶ್ರೀಕೃಷ್ಣದೇವರಾಯ ವೇದಿಕೆ, ಎಂ.ಪಿ. ಪ್ರಕಾಶ್ ವೇದಿಕೆ, ವಿದ್ಯಾರಣ್ಯ ವೇದಿಕೆ, ಹಕ್ಕಬುಕ್ಕ ವೇದಿಕೆ ಇರುತ್ತವೆ. ಶ್ರೀಕೃಷ್ಣದೇವರಾಯ ವೇದಿಕೆಯಲ್ಲಿ ಕಾರ್ಯಕ್ರಮದ ಉದ್ಘಾಟನೆ ಹಾಗೂ ಸಮಾರೋಪ ನಡೆಯಲಿದೆ. ಜ. 10ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ಸವ ಉದ್ಘಾಟಿಸಲಿದ್ದಾರೆ. ಪ್ರವಾಸೋದ್ಯಮ ಸಚಿವ ಆರ್.ವಿ. ದೇಶಪಾಂಡೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ, ಜಿಲ್ಲಾ ಉಸ್ತುವಾರಿ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ ಭಾಗವಹಿಸಲಿದ್ದಾರೆ. ಜ. 11ರಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ಯ ಇಲಾಖೆ ಸಚಿವ ಎಚ್.ಕೆ. ಪಾಟೀಲ್, ಕಂದಾಯ ಸಚಿವ ಶ್ರೀನಿವಾಸ್ಪ್ರಸಾದ್, ವಿಧಾನಸಭೆ ವಿರೋಧ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಆಗಮಿಸಲಿದ್ದಾರೆ. ಸಮಾರೋಪ ಸಮಾರಂಭದಲ್ಲಿ ಕೇಂದ್ರ ರೇಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ, ವಸತಿ ಸಚಿವ ಅಂಬರೀಷ್, ವಾರ್ತಾ ಸಚಿವ ರೋಷನ್ ಬೇಗ್ ಭಾಗವಹಿಸುವರು.
ಉಪಕರಣಗಳ ಖರೀದಿ: ಈ ಬಾರಿ ಕೆಲ ಉಪಕರಣಗಳನ್ನು ಖರೀದಿಸಲಾಗುತ್ತಿದೆ. ಒಂದು ಸ್ಟೇಜ್ಗೆ ಸಂಬಂಧಿಸಿದಂತೆ ಸೌಂಡ್ ಸಿಸ್ಟಮ್, ರಸ್ತೆ ನಿರ್ಮಾಣ, ಮೂರು ಕಡೆಗಳಲ್ಲಿ ಶಾಶ್ವತ ನೀರು ಪೂರೈಕೆ ವ್ಯವಸ್ಥೆ, ಬೀದಿ ದೀಪ, ಒಂದು 125 ಕೆವಿ ಜನರೇಟರ್, 8 ಕೆಮಿಕಲ್ ಟಾಯ್ಲೆಟ್, ಸೋಲಾರ್ ಸೇರಿದಂತೆ ಇತರ ವಸ್ತುಗಳನ್ನು ಖರೀದಿಸಲಾಗುತ್ತದೆ. ಶಾಶ್ವತ ವಸ್ತುಗಳನ್ನು ಖರೀದಿಸಿರುವುದು ಬಿಟ್ಟು ರು. 7.3 ಕೋಟಿ ವೆಚ್ಚದಲ್ಲಿ ಉತ್ಸವ ಆಚರಣೆ ಯೋಜನೆ ಹಾಕಿಕೊಳ್ಳಲಾಗಿದೆ. ಈ ಬಾರಿ ಸಂಜೆಯಿಂದ ರಾತ್ರಿ 10ರ ವರೆಗೆ ಅಕ್ಕ-ತಂಗಿಯ ಹಾಗೂ ಕುಸ್ತಿ ಪಂದ್ಯಾವಳಿ ಸಮೀಪದಲ್ಲಿ ರು. 5ಗೆ ಸಾರ್ವಜನಿಕರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ ಎಂದರು.
ಗೋಲ್ಡ್, ಪ್ಲಾಟಿನಂ ಕಾರ್ಡ್ ವ್ಯವಸ್ಥೆ: ಮೈಸೂರು ದಸರಾ ಉತ್ಸವ ಮಾದರಿಯಲ್ಲಿ ಈ ಬಾರಿ ಗೋಲ್ಡ್ ಹಾಗೂ ಪ್ಲಾಟಿನಂ ಕಾರ್ಡ್ ವ್ಯವಸ್ಥೆ ಮಾಡಲಾಗಿದೆ. ಮುಖ್ಯ ವೇದಿಕೆ ಹಾಗೂ ಕ್ಲಾಸಿಕಲ್ ವೇದಿಕೆಗೆ ಮಾತ್ರ ಕಾರ್ಡ್ ವ್ಯವಸ್ಥೆ ಮಾಡಲಾಗಿದೆ. ಪ್ಲಾಟಿನಂ ಕಾರ್ಡ್ಗೆ ರು. 3,000 ಹಾಗೂ ರು. 2,000, ಗೋಲ್ಡ್ ಕಾರ್ಡ್ಗಳಿಗೆ ರು. 2,000, ರು. 1,000 ದರ ನಿಗದಿಪಡಿಸಲಾಗಿದೆ. ಆದರೆ, ಈ ರೀತಿ ಕಾರ್ಡ್ಗಳಿಗೆ ಕೆಲವೇ ಆಸನಗಳನ್ನು ವ್ಯವಸ್ಥೆ ಮಾಡಲಾಗಿದೆ ಎಂದರು.
ಪ್ರಮುಖ ಕಲಾವಿದರು: ಶ್ರೀಕೃಷ್ಣದೇವರಾಯ ವೇದಿಕೆಯಲ್ಲಿ ಜ. 10ರಂದು ಎಂ.ಡಿ. ಪಲ್ಲವಿ ಹಾಡು, ರೂಪ ಲೇಯರ್ ವಿಜಯನಗರ ಕಾಲದ ನೆನಪನ್ನು ಪರಿಚಯಿಸುವ ಫ್ಯಾಷನ್ ಶೋ, ಕಸ್ತೂರಿ ಶಂಕರ್ ಅವರಿಂದ ಸುಗಮ ಸಂಗೀತ, ಶಬ್ರಿ ಬದರ್ಸ್ ಕವಾಲಿ, ಶಾನ್ ಅವರಿಂದ ಹಿಂದಿ ಮತ್ತು ಕನ್ನಡ ಹಾಡುಗಳು, ಜ. 11ರಂದು 140 ಜನ ಕಲಾವಿದರಿಂದ ಜಾನಪದ ಜಾತ್ರೆ, ಅರ್ಚನಾ ಉಡುಪರಿಂದ ಕನ್ನಡ ಹಾಡುಗಳು, ಪ್ರಿನ್ಸ್ ಡ್ಯಾನ್ಸ್ ಗ್ರೂಪ್ನಿಂದ ಟ್ಯಾಲೆಂಟ್ ಷೋ, ನಾಗರಾಜ ಕೋಟೆ ಅವರಿಂದ ಹಾಸ್ಯ ಕಾರ್ಯಕ್ರಮ, ಡಿ.ಎಂ. ಶಂಕರ್ ಮತ್ತು ತಂಡದಿಂದ ನೃತ್ಯ, ಕುಣಾಲ್ ಗಾಂಜವಾಲ್ ಅವರಿಂದ ಹಿಂದಿ ಮತ್ತು ಕನ್ನಡ ಹಾಡುಗಳು, ಜ. 12ರಂದು ಪಂಕಜ್ ಉದಾಸ್ ಅವರ ಗಜಲ್, ರಿಚರ್ಡ್ ಲೂಯಿಸ್ ತಂಡದಿಂದ ಹಾಸ್ಯ ಕಾರ್ಯಕ್ರಮ, ಜಾವೇದ್ ಅಲಿ ತಂಡದಿಂದ ಹಿಂದಿ ಹಾಡುಗಳು, ರಘು ದೀಕ್ಷಿತ್ ಅವರಿಂದ ಕಾರ್ಯಕ್ರಮ, ಸುನಿಧಿ ಚೌವ್ಹಾಣರಿಂದ ಹಿಂದಿ ಮತ್ತು ಕನ್ನಡ ಹಾಡುಗಳು. ಎಂ.ಪಿ. ಪ್ರಕಾಶ್ ವೇದಿಕೆಯಲ್ಲಿ ವಿವಿಧ ಪ್ರಸಿದ್ಧ ಕಲಾವಿದರ ಕೊಳಲುವಾದ, ಗಜಲ್, ನೃತ್ಯ ಹಾಗೂ ಹಾಡುಗಾರಿಕೆ ನಡೆಯುತ್ತಿದೆ.ವಿದ್ಯಾರಣ್ಯ ವೇದಿಕೆಯಲ್ಲಿ ನಾಟಕ, ಡ್ಯಾನ್ಸ್, ಹಾಸ್ಯ ಕಾರ್ಯಕ್ರಮ, ಭರತನಾಟ್ಯ, ಜಾನಪದ ಗೀತೆಗಳು, ಕೂಚುಪುಡಿ ನಡೆಯಲಿದೆ.ಹಕ್ಕ ಬುಕ್ಕ ವೇದಿಕೆಯಲ್ಲಿ ಯಕ್ಷಗಾನ, ಭರತನಾಟ್ಯ, ಕವಿಗೋಷ್ಠಿ, ಟ್ಯಾಲೆಂಟ್ ಯೋಗ ಷೋ, ತಬಲ, ಮ್ಯೂಜಿಕ್ ಷೋ, ಹಿಂದುಸ್ತಾನಿ, ಕ್ಲಾಸಿಕಲ್ ಸಂಗೀತ ನಡೆಯಲಿದೆ.
ಹಂಪಿ ಬೈ ಸ್ಕೈ:  ಉತ್ಸವದಲ್ಲಿ ಹಂಪಿ ಬೈ ಸ್ಕೈ ವ್ಯವಸ್ಥೆ ಮಾಡಲಾಗಿದೆ. ಈಗಾಗಲೆ ಎರಡು ಹೆಲಿಕಾಪ್ಟರ್ಗಳನ್ನು ಬುಕ್ ಮಾಡಲಾಗಿದೆ. ಬಿಎಂಎಂನಿಂದ ಒಂದು ನೀಡಿದ್ದರೆ, ಮತ್ತೊಂದನ್ನು ಬಾಡಿಗೆ ಪಡೆಯಲಾಗುತ್ತದೆ. ಹಂಪಿ, ಸಂಡೂರು, ತುಂಗಭದ್ರಾ ಜಲಾಶಯವನ್ನು 15 ನಿಮಿಷಗಳಲ್ಲಿ ಹೆಲಿಕಾಪ್ಟರ್ನಲ್ಲಿ ತೋರಿಸಲಾಗುತ್ತದೆ. ಪ್ರತಿಯೊಬ್ಬರಿಗೆ ರು. 2000 ವ್ಯವಸ್ಥೆ ಮಾಡಲಾಗಿದೆ. ಬೆಳಗ್ಗೆ 9ರಿಂದ ಸಂಜೆ 5ರ ವರೆಗೆ ಹಂಪಿ ಬೈ ಸ್ಕೈ ವ್ಯವಸ್ಥೆ ಮಾಡಲಾಗಿದೆ. 10 ವರ್ಷ ಕೆಳಗಿನ ಮಕ್ಕಳಿಗೆ ರು. 1,500 ಇರುತ್ತದೆ. ಕಾಪ್ಟರ್ಗೆ ಬೇಡಿಕೆ ಇದ್ದು, ಹೆಚ್ಚಿನ ಕಾಪ್ಟರ್ ವ್ಯವಸ್ಥೆ ಮಾಡುವ ಚಿಂತನೆ ಇದೆ ಎಂದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.