ಶಾಸಕ ಅನಿಲ್ ಲಾಡ್ಗೆ ಮಾಹಿತಿ ಕೊರತೆ
ಕನ್ನಡಪ್ರಭ ವಾರ್ತೆ, ಹೂವಿನಹಡಗಲಿ, ಜ. 5
ಹಂಪಿ ಉತ್ಸವ ರಾಜ್ಯ ಮಟ್ಟದ ಉತ್ಸವವಾಗಿದ್ದು, ಯಾರನ್ನು ಕಡೆಗಣಿಸುವ ಪ್ರಶ್ನೆಯೇ ಇಲ್ಲ. ಶಾಸಕ ಅನಿಲ್ ಲಾಡ್ರಿಗೆ ಮಾಹಿತಿ ಕೊರತೆಯಿಂದ ಈ ರೀತಿ ಹೇಳಿಕೆ ನೀಡಿದ್ದಾರೆಂದು ಜಿಲ್ಲಾ ಉಸ್ತುವಾರಿ ಸಚಿವ ಪಿ.ಟಿ.ಪರಮೇಶ್ವರ ನಾಯ್ಕ ತಿರುಗೇಟು ನೀಡಿದ್ದಾರೆ.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ತಮ್ಮನ್ನು ಕಡೆಗಣಿಸಲಾಗಿದೆ ಎಂಬ ಹೇಳಿಕೆ ಅವರ ವೈಯಕ್ತಿಕ ವಿಚಾರ, ರಾಜಕೀಯದಲ್ಲಿ ಸಾಕಷ್ಟು ಅನುಭವವಿರುವ ಶಾಸಕ ಅನಿಲ್ ಲಾಡ್ ಒಳ್ಳೆಯ ಸ್ನೇಹಿತರು, ಉತ್ಸವದ ಆಹ್ವಾನ ಪತ್ರಿಕೆಯಲ್ಲಿ ಶಿಷ್ಟಾಚಾರದ ಪ್ರಕಾರ ಎಲ್ಲ ಜನಪ್ರತಿನಿಧಿಗಳಿಗೂ ಆಹ್ವಾನಿಸಲಾಗಿದೆ ಎಂದರು.
ಹಂಪಿ ಉತ್ಸವವು 2013ರ ಮುಂಚೆ ಜಿಲ್ಲಾ ಉಸ್ತುವಾರಿ ಉತ್ಸವವಾಗಿತ್ತು. ಆದರೆ, 2013 ಜೂನ್ನಿಂದ ಇಚೆಗೆ ರಾಜ್ಯಮಟ್ಟದ ಉತ್ಸವವಾಗಿ ಪರಿವರ್ತನೆಯಾಗಿದೆ. ಇದರ ಸಂಪೂರ್ಣ ಹೊಣೆಯನ್ನು ರಾಜ್ಯ ಪ್ರವಾಸೋದ್ಯಮ ಸಚಿವ ಆರ್.ವಿ. ದೇಶಪಾಂಡೆ ಅವರಿಗೆ ವಹಿಸಲಾಗಿದೆ. ಅವರ ಅಧ್ಯಕ್ಷತೆಯಲ್ಲೇ ಸಭೆ ಆಯೋಜಿಸಲಾಗಿತ್ತು ಎಂದರು.
ಸಿಎಂ ಸಲಹೆಯಂತೆ ನಿರ್ಧಾರ: ಹಂಪಿ ಉತ್ಸವಕ್ಕೆ ಯಾರನ್ನು ಕಡೆಗಣಿಸುವ ಪ್ರಶ್ನೆ ಉದ್ಭವಿಸಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಲಹೆಯಂತೆ ಜಿಲ್ಲೆ, ರಾಜ್ಯ ಮತ್ತು ಅಂತಾರಾಜ್ಯ ಕಲಾವಿದರು, ಸಾಹಿತಿಗಳನ್ನು ಆಹ್ವಾನಿಸಲಾಗಿದೆ. ಸಮಿತಿ ಅಧ್ಯಕ್ಷರಾಗಿರುವ ಪ್ರವಾಸೋದ್ಯಮ ಸಚಿವ ಆರ್.ವಿ. ದೇಶಪಾಂಡೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ ಇವರು ಹೊಸಪೇಟೆಯಲ್ಲಿ ಸಭೆ ನಡೆಸಿದ್ದು, ಹಂಪಿ ಉತ್ಸವವು ಪಾರದರ್ಶಕವಾಗಿ ನಡೆಯಲು ಕ್ರಮ ಕೈಗೊಳ್ಳಲಾಗಿದೆ ಎಂದರು.
ಎಲ್ಲರ ಸಹಕಾರ ಇದೆ: ಶಾಸಕ ಅನಿಲ್ ಲಾಡ್ರ ಬೆಂಬಲಿಗರು ಉತ್ಸವದಲ್ಲಿ ಅಹಿತಕರ ಘಟನೆ ನಡೆದರೆ ಜಿಲ್ಲಾ ಉಸ್ತುವಾರಿ ಸಚಿವರೆ ಹೊಣೆ ಎಂಬ ಪ್ರಶ್ನೆಗೆ ಬಳ್ಳಾರಿ ಶಾಂತಿ, ಸುವ್ಯವಸ್ಥೆಗೆ ಹೆಸರಾದ ಜಿಲ್ಲೆ. ಗಲಾಟೆ ಮತ್ತು ಅಹಿತಕರ ಘಟನೆ ಉದ್ಭವಿಸುದಿಲ್ಲ. ಉತ್ಸವಕ್ಕೆ ಎಲ್ಲರ ಸಲಹೆ, ಸಹಕಾರವಿದೆ ಎಂದರು.
ಪ್ಲಾಟಿನಂ ಕಾರ್ಡ್ ವಿತರಣೆಗಳಿಂದ ಶ್ರೀಮಂತರ ಉತ್ಸವವಾಗಿದೆ ಎಂಬ ಆರೋಪಕ್ಕೆ ಉತ್ತರಿಸಿದ ಸಚಿವರು, ಶ್ರೀಸಾಮಾನ್ಯರಿಗೂ ಉತ್ಸವದಲ್ಲಿ ಅವಕಾಶ ನೀಡಲಾಗಿದೆ. ಉತ್ಸವಕ್ಕೆ ಬರುವ ಪ್ರವಾಸಿಗರಿಗೆ ಯಾವುದೇ ತೊಂದರೆಯಾದಂತೆ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ಉತ್ಸವದಲ್ಲಿ ಮಾಜಿ ಉಪ ಮುಖ್ಯಮಂತ್ರಿ ಹಾಗೂ ಹಂಪಿ ಉತ್ಸವ ರೂವಾರಿ ಎಂ.ಪಿ. ಪ್ರಕಾಶ ಅವರ ಕುಟುಂಬ ನಿರ್ಲಕ್ಷ್ಯ ಮಾಡಿಲ್ಲ. ಉತ್ಸವ ಸಮಿತಿಯಲ್ಲಿ ಸುಮಾ ಸಮಿತಿ ಸದಸ್ಯರಾಗಿದ್ದಾರೆ. ಹಂಪಿ ಉತ್ಸವದ ವೇದಿಕೆಗೆ ಎಂ.ಪಿ. ಪ್ರಕಾಶ ಹೆಸರಿಟ್ಟಿದ್ದು ನಾನೇ, ಅವರ ಪತ್ನಿ ರುದ್ರಮ್ಮ ಅವರನ್ನು ವಿಶೇಷವಾಗಿ ಗೌರವಿಸಲು ಕ್ರಮ ತೆಗೆದುಕೊಂಡಿದ್ದು ನಾನೇ, ಹೀಗಿರುವಾಗ ಅವರ ನಿರ್ಲಕ್ಷ್ಯ ಎಲ್ಲಿಂದ ಬಂತೆಂದು ಪತ್ರಕರ್ತರಿಗೆ ಮರುಪ್ರಶ್ನೆ ಮಾಡುತ್ತಾ, ಎಂ.ಪಿ. ರವೀಂದ್ರ ಹರಪನಹಳ್ಳಿ ಶಾಸಕರಾಗಿದ್ದರೂ ಅವರಿಗೂ ವಿಶೇಷ ಆಹ್ವಾನ ನೀಡಲಾಗಿದೆ. ಉತ್ಸವ ಕುರಿತು ಆರೋಪ ಮಾಡಿದವರು, ಮೊದಲು ಆಹ್ವಾನ ಪತ್ರಿಕೆ ನೋಡಲಿ ಎಂದರು.
ಎಪಿಎಂಸಿ ಅಧ್ಯಕ್ಷ ವಾರದ್ ಗೌಸ್ ಮೋಹಿದ್ದೀನ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಪರಮೇಶ್ವರಪ್ಪ, ಜಿಪಂ ಸದಸ್ಯ ವಸಂತ, ಮಾಜಿ ಪಿರ್ಕಾಡ್ ಬ್ಯಾಂಕ್ ಅಧ್ಯಕ್ಷ ಬ್ಯಾಲಹುಣ್ಸಿ ಬಸವನಗೌಡ ಇತರರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

