ಬೆಂಕಿ ಅನಾಹುತ: ಮೆಕ್ಕೆಜೋಳ ಭಸ್ಮ
ಹಗರಿಬೊಮ್ಮನಹಳ್ಳಿ: ಶನಿವಾರ ಸಂಜೆಯಿಂದ ಆರಂಭವಾಗಿರುವ ಹಗರಿಬೊಮ್ಮನಹಳ್ಳಿ ತಾಲೂಕಿನ ಅನ್ನದಾತನ ಮೇಲಿನ ಅಗ್ನಿದೇವನ ಮುನಿಸು ತಣಿಸಿದಂತೆ ಕಾಣಿಸುತ್ತಿಲ್ಲ. ಅದು ಭಾನುವಾರಕ್ಕೆ ಮತ್ತಷ್ಟು ಪ್ರಖರತೆ ಪಡೆದಿದೆ.
ತಾಲೂಕಿನ ಮೊರಗೇರಿಯಲ್ಲಿ ಹತ್ತು ಮೇವಿನ ಬಣವೆ, ಎರಡು ಬಂಡಿ, ವಾಸದ ಗುಡಿಸಲು ಭಸ್ಮವಾದ ವಿಷಯ ಮಾಸುವ ಮುನ್ನವೆ ಇತ್ತ ತಾಲೂಕಿನ ಗಡಿಗ್ರಾಮ ಹನಸಿಯಲ್ಲಿ ಭಾನುವಾರ ಮುಂಜಾನೆ ಎರಡು ಗಂಟೆಗೆ ಗ್ರಾಮದ 14 ರೈತರಿಗೆ ಸೇರಿದ ರು. 22 ಲಕ್ಷ ಮೌಲ್ಯದ 1600ಕ್ಕೂ ಅಧಿಕ ಕ್ವಿಂಟಲ್ ಮೆಕ್ಕೆಜೋಳದ ತೆನೆ ರಾಶಿಗಳು ಬೆಂಕಿಯ ಜ್ವಾಲೆಗೆ ಸಂಪೂರ್ಣ ಸುಟ್ಟು ಕರಕಲಾಗಿವೆ.
ಬೆಳೆಗಾಗಿ ಮಾಡಿದ ಸಾಲ ಮತ್ತು ಬಡ್ಡಿಯ ಭಾರಕ್ಕೆ ಇಂತಹ ಕಡು ಚಳಿಯಲ್ಲೂ ಬೆಳೆಗಾರನ ಮುಖದಲ್ಲಿ ಬೇವರು ಕಿತ್ತು ಬರುತ್ತಿದ್ದು, ಸಾಲ ತೀರಿಸುವುದು ಹೇಗೆಂದು ರೈತನ ಕುಟುಂಬ ತಲೆ ಮೇಲೆ ಕೈಹೊತ್ತು ಕುಳಿತಿದೆ.
ಮಾರುಕಟ್ಟೆಯಲ್ಲಿ ಮೆಕ್ಕೆಜೋಳದ ಬೆಲೆ ಕುಸಿದಿದೆ. ಹೀಗಾಗಿ ಬೆಲೆಯಲ್ಲಿ ಚೇತರಿಕೆ ಕಾಣುವವರೆಗೆ, ಇಲ್ಲವೆ ಸರ್ಕಾರ ಮೆಕ್ಕೆಜೋಳ ಖರೀದಿ ಕೇಂದ್ರ ಆರಂಭ ಮಾಡಿದ ನಂತರ ಮಾರಾಟ ಮಾಡಿದರಾಯಿತು ಎಂದು ಹನಸಿ ಗ್ರಾಮದ ರೈತರು ಮೆಕ್ಕೆಜೋಳದ ತೆನೆಗಳನ್ನು ಹಲವು ದಿನಗಳಿಂದ ರಸ್ತೆ ಮೇಲೆಯೇ ರಾಶಿ ಮಾಡಿದ್ದರು. ರಸ್ತೆಯುದ್ದಕ್ಕೂ ರೈತರಿಗೆ ಸೇರಿದ ಮೆಕ್ಕೆಜೋಳ ತೆನೆಗಳ ರಾಶಿಗಳೆ ಇವೆ.
ಘಟನೆ ವಿವರ: ಭಾನುವಾರ ಬೆಳಗಿನ ಜಾವ ಒಂದೂವರೆ ಸುಮಾರಿಗೆ ರಸ್ತೆ ಮೇಲಿನ ತೆನೆ ರಾಶಿಗೆ ಬೆಂಕಿಹತ್ತಿಕೊಂಡಿದೆ. ಅದು ನಿಯಂತ್ರಣಕ್ಕೆ ಬಾರದೆ ಪಕ್ಕ, ಪಕ್ಕದಲ್ಲಿದ್ದ ರಾಶಿಗೆ ತಗುಲಿದ ಪರಿಣಾಮ ಒಣಗಿದ ತೆನೆಯ ರಾಶಿ ಸಂಪೂರ್ಣ ಸುಟ್ಟು ಹೋಗಿವೆ. ರಾತ್ರಿ ವೇಳೆ ಆಗಿದ್ದರಿಂದ ಬೆಂಕಿ ಅನಾಹುತದಿಂದ ಜೋಳದ ರಾಶಿಗಳನ್ನು ರಕ್ಷಿಸಲು ಸಾಧ್ಯವಾಗಲಿಲ್ಲ ಎನ್ನುತ್ತಾರೆ ಸ್ಥಳೀಯರಾದ ಎಪಿಎಂಸಿ ಸದಸ್ಯ ಶಿವಕುಮಾರಗೌಡ.
ಗ್ರಾಮದ ಸಿ.ಎಚ್.ಎಂ. ಕೊಟ್ರಯ್ಯ, ಕೆಪಿ ದೇವರಾಜ, ಗುರುರಾಜ, ತಳವಾರ ಹನುಮಂತಪ್ಪ, ನಿಂಗಪ್ಪ, ಬಿ. ಕೊಟ್ರೇಶ್, ಇಲಿಯಾಖತ್, ಷಣ್ಮುಖಪ್ಪ, ರಾಮನಾಯ್ಕ, ತಿಪ್ಪಣ್ಣ, ರಹಿಮಾನ್ಸಾಬ್, ಮತ್ತಿಹಳ್ಳಿ ನೀಲಪ್ಪ, ಸಕ್ರಜ್ಜ, ದ್ರಾಕ್ಷಾಯಿಣಿ ಸೇರಿ 14 ರೈತರಿಗೆ ಸೇರಿದ ಮೆಕ್ಕೆಜೋಳದ ತೆನೆರಾಶಿ ಅಗ್ನಿ ಅನಾಹುತದಲ್ಲಿ ಸುಟ್ಟಿದೆ.
ಜನಪ್ರತಿನಿಧಿಗಳು ಭೇಟಿ: ಭಾನುವಾರ ಬೆಳಗ್ಗೆ ಎಪಿಎಂಸಿ ಸದಸ್ಯ ಶಿವಕುಮಾರಗೌಡ, ಕೃಷಿ ಸಮಾಜದ ಅಧ್ಯಕ್ಷ ಕೆಪಿ ದೇವರಾಜ, ತಹಸೀಲ್ದಾರ್ ಏಜಾಜ್ ಬೇಗ್, ಪ್ರಭಾರಿ ಸಹಾಯಕ ಕೃಷಿ ನಿರ್ದೇಶಕ ನಾಗರಾಜ, ಉಪ ತಹಸೀಲ್ದಾರ್ ಪ್ರತಿಭಾ, ತಾಪಂ ಸದಸ್ಯೆ ಮಂಜುಳಾ ಸೇರಿದಂತೆ ಕಂದಾಯ, ಕೃಷಿ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಪ್ರಕರಣ ಕೂಡ್ಲಿಗಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ದುಷ್ಕರ್ಮಿಗಳ ಕೃತ್ಯದ ಶಂಕೆ
ಹನಸಿಯಲ್ಲಿ ಭಾನುವಾರ ಸಂಭವಿಸಿದ ಬೆಂಕಿ ದುರಂತಕ್ಕೆ ದುಷ್ಕರ್ಮಿಗಳ ಕೃತ್ಯವೆ ಕಾರಣ ಎಂದು ಗ್ರಾಮಸ್ಥರು ಶಂಕಿಸಿದ್ದಾರೆ. ಘಟನಾ ಸ್ಥಳಕ್ಕೆ ಭೇಟಿ ನೀಡಿದಾಗ ಹೆಸರು ಹೇಳಲು ಇಚ್ಛಿಸದ ಗ್ರಾಮಸ್ಥರು, ಇದು ಆಕಸ್ಮಿಕ ಬಿದ್ದ ಬೆಂಕಿಯಲ್ಲ, ಯಾರೋ ಉದ್ದೇಶಪೂರ್ವಕವಾಗಿ ರಾಶಿಗೆ ಬೆಂಕಿ ಹಚ್ಚಿದ್ದಾರೆ. ಆಕಸ್ಮಿಕವಾಗಿ ಬೆಂಕಿ ಹಚ್ಚಿದ್ದರೆ ಒಂದು ರಾಶಿ ಸುಡಬಹುದಿತ್ತು. ಆದರೆ, ಸಾಲಿಗೆ 14 ತೆನೆರಾಶಿ ಸುಟ್ಟಿವೆ ಎಂದರೆ ನಾಲ್ಕೈದು ಜನರು ಸೇರಿ ಬೆಂಕಿ ಇಡುವ ಕೃತ್ಯ ಎಸಗಿದ್ದಾರೆ ಎಂದು ಅವರು ಬಲವಾಗಿ ಶಂಕೆ ವ್ಯಕ್ತಪಡಿಸಿದರು. ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ನೋಡಿದಾಗ ಗ್ರಾಮಸ್ಥರ ಶಂಕೆ ನಿಜವಿರುವಂತೆ ಕಾಣಿಸುತ್ತಿದ್ದು, ಪೊಲೀಸ್ ತನಿಖೆಯಿಂದ ಸತ್ಯ ಹೊರಬರಲಿದೆ. ಕಾರಣ, ರಸ್ತೆ ಮೇಲೆ ತೆನೆರಾಶಿ ಹಾಕಿರುವ ರೈತರು ಅಲ್ಲಿಯೆ ರಾತ್ರಿ ಕಾವಲು ಕಾಯುತ್ತಾರೆ. ಆದರೆ, ಏಕಾಏಕಿ ಒಂದೆರಡಲ್ಲದೆ 14 ರಾಶಿಗಳಿಗೆ ಬೆಂಕಿ ಬೀಳುವುದು ಎಂದರೆ ಊಹಿಸಲು ಅಸಾಧ್ಯ. ಹೀಗಾಗಿ ಗ್ರಾಮಸ್ಥರು ವ್ಯಕ್ತಪಡಿಸಿರುವ ಶಂಕೆಯಂತೆ ಈ ಘಟನೆಯಲ್ಲಿ ಕಾಣದ ಕೈಗಳ ಕೃತ್ಯ ಇರಬಹುದು ಎಂಬ ವದಂತಿ ಹನಸಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ವ್ಯಾಪಕವಾಗಿ ಹರಡಿದೆ.
ಜಿಲ್ಲಾ ಉಸ್ತುವಾರಿ ಸಚಿವರ ಭೇಟಿ, ಸಾಂತ್ವನ
ಹಗರಿಬೊಮ್ಮನಹಳ್ಳಿ: ಶನಿವಾರ ಸಂಜೆ ಅಗ್ನಿದುರಂತ ಸಂಭವಿಸಿದ ಹಗರಿಬೊಮ್ಮನಹಳ್ಳಿ ತಾಲೂಕಿನ ಮೊರಗೇರಿ ಗ್ರಾಮಕ್ಕೆ ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ ಭೇಟಿ ನೀಡಿ ದುರಂತದಲ್ಲಿ ನಷ್ಟ ಅನುಭವಿಸಿದ ರೈತ ಕುಟುಂಬಗಳಿಗೆ ಸಾಂತ್ವನ ಹೇಳಿದರು.
ಹೂವಿನಹಡಗಲಿಯಿಂದ ಆಗಮಿಸಿದ ಸಚಿವರು ಮೇವಿನ ಬಣವೆ, ಎತ್ತಿನಬಂಡಿ, ಗುಡಿಸಲು ಸುಟ್ಟಿರುವ ಗ್ರಾಮದ ಹೊಸಪ್ಲಾಟ್ಗೆ ಭೇಟಿ ನೀಡಿ ಸಂತ್ರಸ್ತರಿಂದ ಆಹವಾಲು ಸ್ವೀಕರಿಸಿದರು. ನಂತರ ಮಾತನಾಡಿ, ಮಳೆ ಇಲ್ಲದೆ ಬರ ಅವರಿಸಿದೆ. ಹೀಗಿರುವಾಗ ಮೇವು, ಜೋಳದ ತೆನೆಗಳು ಬೆಂಕಿಗಾಹುತಿಯಾಗಿರುವುದು ಬಡ ರೈತರನ್ನು ತೀವ್ರ ಘಾಸಿಗೊಳಿಸಿದೆ. ನಷ್ಟವನ್ನು ಸಮರ್ಪಕವಾಗಿ ಅಂದಾಜು ಮಾಡಿ ಹಾನಿ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಸುವಂತೆ ಕಂದಾಯ, ಕೃಷಿ ಅಧಿಕಾರಿಗಳಿಗೆ ಆದೇಶಿಸಿದರು.
ಗ್ರಾಪಂನಿಂದ ನೀಡುವ ಪರಿಹಾರದ ಚೆಕ್ಗಳನ್ನು ಸಚಿವರು ರೈತರಿಗೆ ವಿತರಿಸಿ, ಸಹಾಯಕ ಆಯುಕ್ತರು ಹಾಗೂ ಸರ್ಕಾರದಿಂದ ಇನ್ನೂ ಹೆಚ್ಚಿನ ಪರಿಹಾರ ವಿತರಿಸುವುದಾಗಿ ಭರವಸೆ ನೀಡಿದರು. ಕೃಷಿ ಇಲಾಖೆಯಿಂದ ಲಭ್ಯವಿರುವ ಸೌಲಭ್ಯಗಳನ್ನು ರೈತರಿಗೆ ನೀಡಲು ಕೃಷಿ ಅಧಿಕಾರಿಗೆ ಹೇಳಿದರು.
ತಾಪಂ ಸದಸ್ಯೆ ಭಾರತಮ್ಮ ಬೆಲ್ಲದ್, ಎಸಿ ವೆಂಕಟೇಶ, ತಹಸೀಲ್ದಾರ್ ಏಜಾಜ್ ಬೇಗ್, ಆರ್. ಪ್ರಭು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

