ಬಳ್ಳಾರಿ

ಸವಿನೆನಪಲಿ ಕುಚಿಕು ಗೆಳೆಯರ ಮಿಲನ

Published On :

ಬಳ್ಳಾರಿ: ಬಾಲ್ಯದ ನೆನೆಪುಗಳೆಂದರೆ ಎಲ್ಲರಿಗೂ ಅಚ್ಚುಮೆಚ್ಚು, ಅದರಲ್ಲೂ ಪ್ರೌಢಶಾಲೆ ಜೀವನವನ್ನು ಯಾರು ಮರೆಯಲು ಸಾಧ್ಯ? 40 ವರ್ಷದ ಹಿಂದಿನ ಗೆಳೆಯರು ದಿಢೀರನೆ ಮುಂದೆ ಬಂದರೆ ತಮ್ಮ ವಯಸ್ಸನ್ನು ಮರೆತು ನೆನಪುಗಳನ್ನು ಮೆಲುಕು ಹಾಕುತ್ತ 10ನೇ ತರಗತಿ ವಿದ್ಯಾರ್ಥಿಗಳಾಗುತ್ತಾರೆ...
ಇಂತಹ ಕ್ಷಣಕ್ಕೆ ಇತ್ತೀಚೆಗೆ ಬಳ್ಳಾರಿಯ ಶೆಟ್ರ ಗುರುಶಾಂತಪ್ಪ ಶಾಲೆ ಸಾಕ್ಷಿಯಾಯಿತು. ಈ ಶಾಲೆಯಲ್ಲಿ 1973-74ನೇ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಓದಿದ ವಿದ್ಯಾರ್ಥಿಗಳ ಬಳಗ ಅಲ್ಲಿ ನೆರೆದಿತ್ತು. ಅಲ್ಲಿ ನೆರೆದಿರುವವರೆಲ್ಲ 55 ವರ್ಷ ಮೇಲ್ಪಟ್ಟವರಾದರೂ ಹೈಸ್ಕೂಲ್ ಹುಡುಗರಂತೆ ಮಾತನಾಡಿಕೊಳ್ಳುತ್ತಿದ್ದ ದೃಶ್ಯಗಳು ಕಂಡುಬಂದವು.
ಶಾಲೆಯಲ್ಲಿ 1974ರಲ್ಲಿ ಕಲಿತ ಸಿರಿಗೇರಿ ಪನ್ನರಾಜ್, ಡಾ. ಅರವಿಂದ ಪಾಟೀಲ್, ಡಾ. ಬಸವನಗೌಡ ತಮ್ಮ ಗೆಳೆಯರನ್ನು ಒಂದೆಡೆ ಕಲೆ ಹಾಕಿದ್ದರು. ಭಾನುವಾರ ಎಸ್‌ಜಿ ಕಾಲೇಜಿನಲ್ಲಿ ನಾಲ್ಕು ದಶಕಗಳ ಬಳಿಕ ಗುರು-ಶಿಷ್ಯರು ಒಂದೆಡೆ ಸೇರಿ ಹಿಂದಿನ ನೆನಪುಗಳನ್ನು ಮೆಲುಕು ಹಾಕಿದರು. 60ಕ್ಕೂ ಹೆಚ್ಚು ವಿದ್ಯಾರ್ಥಿಗಳಲ್ಲಿ 47 ಜನ ಭಾಗವಹಿಸಿದ್ದರು.
ಸಿರಿಗೇರಿ ಪನ್ನರಾಜ್ ಮಾತನಾಡಿ, ಯಾಂತ್ರೀಕೃತ ಜೀವನ ನಮ್ಮದಾಗಿದೆ. ದುಡಿಮೆ ಇದ್ದರೂ ನೆಮ್ಮದಿ ಇಲ್ಲದ ಜೀವನ ಸಾಗಿಸುತ್ತಿದ್ದೇವೆ, ಹಳೆಯ ಕಾಲದ ನೆನಪುಗಳನ್ನೆ ನಮ್ಮನ್ನು ಒಂದಷ್ಟು ನೆಮ್ಮದಿಯ ಬದುಕಿನತ್ತ ಕೊಂಡೊಯ್ಯುತ್ತವೆ ಎಂದರು.
ಡಾ. ಅರವಿಂದ ಪಾಟೀಲ್, ಡಾ. ಬಸವನಗೌಡ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯಕ್ರಮದಲ್ಲಿ 1974ರ ಗೆಳೆಯರ ಬಳಗದ ಮಾಜಿ ಮೇಯರ್ ಕೆ. ಹನುಮಂತಪ್ಪ, ಪಾಲಿಕೆ ಸದಸ್ಯ ಕೆರೆಕೋಡಪ್ಪ, ವೈದ್ಯರು, ಎಂಜಿನಿಯರ್‌ಗಳು, ಹೋಟೆಲ್ ಉದ್ಯಮಿಗಳು ಹಲವು ದುಡಿಮೆಯಲ್ಲಿರುವ ಗೆಳೆಯರು ಪಾಲ್ಗೊಂಡಿದ್ದರು. 56 ವರ್ಷಗಳಾದರೂ ಅವರ ಮಾತಿನಲ್ಲಿ ಎಸ್ಸೆಸ್ಸೆಲ್ಸಿ ಕಚಗುಳಿತನದ ಮಾತುಗಳು ಕೇಳಿ ಬಂದದ್ದು ವಿಶೇಷ. ಕೊನೆಗೆ ಎಲ್ಲ ಗೆಳೆಯರು ತಮ್ಮ ಅಂದಿನ ಶಿಕ್ಷಕರ ಸಮೇತ ಫೋಟೋಕ್ಕೆ ಫೋಜ್ ಕೊಟ್ಟು ಸಂಭ್ರಮಿಸಿದರು.
ನೆನಪು ತೋರಿದ ಶಾಲೆ ಗಂಟೆ
ಸೆವಿನೆನಪು ಕಾರ್ಯಕ್ರಮದಲ್ಲಿ ಶಾಲೆಯ ಗಂಟೆ ಬಾರಿಸಿತು, ವಿದ್ಯಾರ್ಥಿಗಳು ತರಗತಿಗೆ ಹೋಗಿ ಕುಳಿತರು, ವಿಜ್ಞಾನ ಶಿಕ್ಷಕ ಶಾಂತವೀರಪ್ಪ ಮಾಸ್ಟ್ರು ಬೆತ್ತ ಹಿಡಿದು ಶಾಲೆಗೆ ಬಂದರು, ಪ್ರತಿಯೊಬ್ಬರ ಹೆಸರು ಕೂಗಿ ಹಾಜರಿ ಹಾಕಿದರು. ಆದರೆ ಶಾಂತವೀರಪ್ಪ ಮೇಷ್ಟು ಇಂದು ಯಾವ ಪಾಠ ಮಾಡಬೇಕೆಂದು ಕೇಳಿ ಪಾಠ ಶುರು ಮಾಡಿದರು. ನಂತರ ಸಮಾಜಶಾಸ್ತ್ರ ಶಿಕ್ಷಕ ರವೀಂದ್ರನಾಥ್, ಗಣಿತ ಮೇಷ್ಟ್ರು ಕೆ. ತಿಪ್ಪೇಸ್ವಾಮಿ ಅವರು ಪ್ರೀತಿಯ ಶಿಷ್ಯರ ಒತ್ತಾಯದ ಮೇರೆಗೆ ಪಾಠ ಮಾಡಿದರು.
ಗುರುಗಳಿಗೆ ಸನ್ಮಾನ
ಡ್ರಾಯಿಂಗ್ ಮೇಸ್ಟ್ರು ವಿಶ್ವನಾಥ್, ಸೂಪರ್‌ಡೆಂಟ್ ಶಿವಕುಮಾರ್, ವ್ಯಾಕರಣ ಶಿಕ್ಷಕ ಗುಡದೂರು ಶ್ರೀನಿವಾಸ್‌ರಾವ್, ಭೌತಶಾಸ್ತ್ರ ಮೇಷ್ಟ್ರ ಜಿ. ಗೋವಿಂದರಾಜನ್, ದೈಹಿಕ ಶಿಕ್ಷಣ ಶಿಕ್ಷಕ ಜೆ. ಬಸವನಗೌಡ, ವಿಜ್ಞಾನ ಶಿಕ್ಷಕ ಎಂ. ಶಾಂತವೀರಪ್ಪ, ಗಣಿತ ಶಿಕ್ಷಕ ಕೆ. ತಿಪ್ಪೇಸ್ವಾಮಿ, ಕಾಲೇಜಿನ ಈಗಿನ ಪ್ರಾಚಾರ್ಯ ಬಸವನಗೌಡ ಹಾಗೂ ಹಳೆಯ ವಿದ್ಯಾರ್ಥಿ, ಹಾಲಿ ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಕೆ. ಉಮಾಕಾಂತ್ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.