ಬಳ್ಳಾರಿ

ಐಸಿಡಿಎಸ್ ಖಾಸಗೀಕರಣಕ್ಕೆ ವಿರೋಧ

Published On :

ಕನ್ನಡಪ್ರಭ ವಾರ್ತೆ, ಬಳ್ಳಾರಿ, ಜ. 10
ಐಸಿಡಿಎಸ್ ಯೋಜನೆಯ ಖಾಸಗೀಕರಣ ವಿರೋಧಿಸಿ, ಅಂಗನವಾಡಿ ನೌಕರರಿಗೆ ಕನಿಷ್ಠ ಹತ್ತು ಸಾವಿರ ರು.ಗಳ ವೇತನ ನೀಡುವಂತೆ ಆಗ್ರಹಿಸಿ ಸಿಐಟಿಯು, ಎಐಟಿಯುಸಿ ನೇತೃತ್ವದಲ್ಲಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ ಮತ್ತು ಫೆಡರೇಷನ್‌ನ ಜಿಲ್ಲಾ ಸಮಿತಿಯ ಕಾರ್ಯಕರ್ತರು ಶುಕ್ರವಾರ ನಗರದಲ್ಲಿ ಪ್ರತ್ಯೇಕವಾಗಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಎಐಟಿಯುಸಿ ಸಂಯೋಜಿತ ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಫೆಡರೇಷನ್ ರಾಜ್ಯ ಘಟಕದ ಕರೆಯಂತೆ ನಗರದ ಮೋತಿ ವೃತ್ತದಲ್ಲಿ ಜೈಲ್‌ಭರೋ ಚಳವಳಿ ನಡೆಸಿದ ಅಂಗನವಾಡಿ ಕಾರ್ಯಕರ್ತೆಯರನ್ನು ಪೊಲೀಸರು ಬಂಧಿಸಿ, ನಂತರ ಬಿಡುಗಡೆಗೊಳಿಸಿದರು.
ಅಂಗನವಾಡಿ ಕಾರ್ಯಕರ್ತೆಯರಿಗೆ ಸರ್ಕಾರಿ ಕಾಯಂ ನೌಕರರ ಎಲ್ಲ ಸೌಲಭ್ಯಗಳನ್ನು ಒದಗಿಸಬೇಕು. ಕಾರ್ಯಕರ್ತೆ ಮತ್ತು ಸಹಾಯಕಿಯರನ್ನು ಕ್ರಮವಾಗಿ ಸಿ, ಡಿ ಗ್ರೂಪ್ ನೌಕರರೆಂದು ಪರಿಗಣಿಸಬೇಕು. ಮಾಸಿಕ ರು. 12500 ಕನಿಷ್ಠ ವೇತನ ನಿಗದಿಗೊಳಿಸುವುದು ಸೇರಿದಂತೆ ತಮ್ಮ ಇನ್ನಿತರೆ ಹಲವು ಬೇಡಿಕೆಗಳನ್ನು ಈಡೇರಿಸಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಎಸ್.ಎ. ಆದಿಮೂರ್ತಿ, ಎ.ಆರ್.ಎಂ. ಇಸ್ಮಾಯಿಲ್, ಅರ್ಕಾಣಿ, ಎರ್ರೆಮ್ಮ, ನೂರಾರು ಕಾರ್ಯಕರ್ತರು ಇದ್ದರು.
ಸಿಐಟಿಯು ಪ್ರತಿಭಟನೆ: ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ (ಸಿಐಟಿಯು ಸಹಯೋಗದಲ್ಲಿ)ದ ಜಿಲ್ಲಾ ಕಾರ್ಯಕರ್ತೆಯರು ನಗರದ ಕನಕ ದುರ್ಗಮ್ಮ ದೇವಸ್ಥಾನದಿಂದ ಮೆರವಣಿಗೆ ಮೂಲಕ ಹೊರಟು, ಗಡಗಿಚನ್ನಪ್ಪ ವೃತ್ತದಲ್ಲಿ ಕೆಲಕಾಲ ಮಾನವ ಸರಪಳಿ ನಿರ್ಮಿಸಿ, ರಸ್ತೆ ತಡೆ ನಡೆಸಿದರು. ನಂತರ ಡಿಸಿ ಕಚೇರಿಗೆ ತಲುಪಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ಸಂಘದ ಅಧ್ಯಕ್ಷೆ ಕೆ.ನಾಗರತ್ನಮ್ಮ ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿ, ಐಸಿಡಿಎಸ್‌ನ್ನು ಯಾವುದೇ ಕಾರಣಕ್ಕೂ ಎನ್‌ಜಿಒ, ಕಾರ್ಪೋರೇಟ್, ಸ್ವಸಹಾಯ ಗುಂಪುಗಳಿಗೆ ವಹಿಸಬಾರದು. ಅದನ್ನು ಕ್ರಮಬದ್ಧಗೊಳಿಸಿ, ಇಲಾಖೆಯನ್ನಾಗಿ ಪರಿವರ್ತಿಸಬೇಕು. ಯೋಜನೆ ಕುರಿತು ರಾಜ್ಯದ 12 ಜಿಲ್ಲೆಗಳಿಂದ ಬಂದ ಶಿಫಾರಸುಗಳನ್ನು ಕೂಡಲೇ ಕೈಬಿಡಬೇಕು. ಅಂಗನವಾಡಿ ನೌಕರರ ಕೆಲಸವನ್ನು ಕಾಯಂಗೊಳಿಸಬೇಕು. ಉಚಿತ ಶಿಕ್ಷಣ ಹಕ್ಕು ಕಾಯ್ದೆ ವ್ಯಾಪ್ತಿಗೊಳಪಡಿಸಬೇಕು ಸೇರಿದಂತೆ ಇತರೆ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿದರು.
ಸತ್ಯಬಾಬು, ಆರ್.ಎಸ್. ಬಸವರಾಜ, ಖಜಾಂಚಿ ಎಂ. ಲೀಲಾವತಿ, ಕಾರ್ಯದರ್ಶಿ ಎಂ. ಎರ್ರೆಮ್ಮ ಸೇರಿದಂತೆ ಜಿಲ್ಲೆಯ ಸಿರುಗುಪ್ಪ, ಹೊಸಪೇಟೆ, ಹಗರಿಬೊಮ್ಮನಹಳ್ಳಿ, ಕೂಡ್ಲಿಗಿ, ಬಳ್ಳಾರಿ ತಾಲೂಕುಗಳ ಸಾವಿರಾರು ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರು ಸೇರಿದಂತೆ ಸಾವಿರಾರು ಜನರು ಪಾಲ್ಗೊಂಡಿದ್ದರು.

ಸಾಹಿತ್ಯ ಸಮ್ಮೇಳನ ಕುರಿತ ಅಭಿಪ್ರಾಯ
81ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸುವ ಆತಿಥ್ಯ ಬಳ್ಳಾರಿಗೆ ದೊರಕುತ್ತದೆಂಬ ಆಶಾಭಾವನೆ ಮಡಿಕೇರಿ ಸಮ್ಮೇಳನದಿಂದ ಕಮರಿದೆ. ಕಳೆದ ಬಾರಿ ಬಳ್ಳಾರಿ ಸ್ಪರ್ಧೆಯಲ್ಲಿತ್ತು. ಮುಂದಿನ ಬಾರಿಯ ಸಮ್ಮೇಳನ ಸ್ಥಳದ ಈ ಬಾರಿ ಬಳ್ಳಾರಿ ಹೆಸರು ಕೇಳಬಾರದಿರುವುದು ನಿಜಕ್ಕೂ ದುರಂತ.
- ಜಿ. ಕೊಟ್ರಯ್ಯ, ಹವ್ಯಾಸಿ ಬರಹಗಾರ, ಕೊಟ್ಟೂರು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.