ಬಳ್ಳಾರಿ

ಎಂದೋ ಬರುವ ರೈಲಿಗೆ ಇಂದೇ ತಡೆಯಾಕೆ?

Published On :

ಹಗರಿಬೊಮ್ಮನಹಳ್ಳಿ ಪಟ್ಟಣದ ರಾಮನಗರದಲ್ಲಿರುವ ಗಂಗಾವತಿ ಭೀಮಣ್ಣನವರ ಸರ್ಕಾರಿ ಪದವಿಪೂರ್ವ ಕಾಲೇಜ್ ಹಾಗೂ ಜಿವಿಪಿಪಿ ಸರ್ಕಾರಿ ಪದವಿ ಕಾಲೇಜುಗಳ ಮುಂದೆ ಹಾದು ಹೋಗಿರುವ ಹೊಸಪೇಟೆ- ಕೊಟ್ಟೂರು ರೈಲು ಮಾರ್ಗ ಈ ಎರಡು ಕಾಲೇಜುಗಳ ಸಾವಿರಾರು ವಿದ್ಯಾರ್ಥಿಗಳ ನಿತ್ಯದ ಸುಗಮ ಸಂಚಾರಕ್ಕೆ ಅಡ್ಡಿಯಾಗಿದೆ. ಸುರಕ್ಷತೆಗಾಗಿ ರೈಲು ಹಳಿ ಮುಂಭಾಗದಲ್ಲಿದ್ದ ಕಾಲೇಜಿನ ಪ್ರವೇಶ ದ್ವಾರವನ್ನು ಇಲಾಖೆಯವರು ಬಂದ್ ಮಾಡಿದ್ದಾರೆ. ಹೀಗಾಗಿ ಈ ಎರಡು ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮೂರೂವರೆ ಸಾವಿರ ವಿದ್ಯಾರ್ಥಿಗಳು, ಉಪನ್ಯಾಸಕರು, ಒಂದು ಕಿಲೋಮೀಟರ್ ಸುತ್ತು ಹಾಕಿ ಈಶ್ವರ ದೇವಸ್ಥಾನದ ಮುಂದಿನ ರಸ್ತೆಗುಂಟ ಕಾಲೇಜಿಗೆ ಬರುವಂತಾಗಿದೆ. ಈ ರಸ್ತೆಯೋ ಸಂಚಾರಕ್ಕೆ ಯೋಗ್ಯವಿಲ್ಲದಷ್ಟು ಪ್ರಮಾಣದಲ್ಲಿ ಹದಗೆಟ್ಟಿದೆ. ಇಡೀ ರಾಮನಗರ ಏರಿಯಾದ ಅಷ್ಟೂ ಮನೆಗಳ ಚರಂಡಿ ನೀರೆಲ್ಲ ಈ ರಸ್ತೆ ಮೇಲೆಯೆ ಹರಿಯುತ್ತದೆ. ಚರಂಡಿ ನೀರಿನಲ್ಲಿಯೆ ಕಾಲೇಜು ವಿದ್ಯಾರ್ಥಿಗಳು ಸಂಚರಿಸುವ ಅನಿವಾರ್ಯತೆ ಎದುರಾಗಿದೆ. ಮುಖ್ಯವಾಗಿ ಈ ರಸ್ತೆ ಬಂದ್ ಆಗಿದ್ದರಿಂದ ರಾಮನಗರ, ಸುತ್ತಿಲಿನ ಗ್ರಾಮಗಳಿಂದ ಈ ಎರಡು ಕಾಲೇಜುಗಳಿಗೆ ಬರುವ ಸಾವಿರಾರು ವಿದ್ಯಾರ್ಥಿಗಳಿಗೆ ತೀವ್ರ ತೊಂದರೆಯಾಗಿದೆ. ವಿನಾಕಾರಣ ವಿದ್ಯಾರ್ಥಿಗಳು ಸುತ್ತಿ ಬಳಸಿ ಸಂಚರಿಸಬೇಕಾಗಿದೆ. ವಿದ್ಯಾರ್ಥಿಗಳಿಗೆ ತೊಂದರೆ ಕೊಡುವ ರೀತಿಯಲ್ಲಿ ರಸ್ತೆ ಬಂದ್ ಮಾಡಿರುವ ರೇಲ್ವೆ ಇಲಾಖೆ ಕಾರ್ಯವೈಖರಿ ವಿದ್ಯಾರ್ಥಿಗಳ ಅಸಮಾಧಾನಕ್ಕೆ ಕಾರಣವಾಗಿದೆ. ಸದ್ಯ ಈ ರೇಲ್ವೆ ಹಳಿಯ ಮೇಲೆ ರೈಲುಗಾಡಿಗಳ ಸಂಚಾರವಿಲ್ಲ. ಆದರೆ ಎಂದಾದರೊಂದು ದಿನ ರೈಲು ಸಂಚಾರ ಆರಂಭವಾಗಬಹುದು ಎಂಬ ದೂರದ ನಿರೀಕ್ಷೆಯಲ್ಲಿ ಸುರಕ್ಷತೆ ದೃಷ್ಟಿಯಿಂದ ಈ ಎರಡು ಕಾಲೇಜುಗಳಿಗೆ ಇದ್ದ ನೇರ ರಸ್ತೆ ಸಂಪರ್ಕವನ್ನು ರೇಲ್ವೆ ಇಲಾಖೆ ಬಂದ್ ಮಾಡಿದೆ. ಆದರೆ ಎಂದೋ ಬರುವ ರೈಲಿಗಾಗಿ ಇಂದೆ ರಸ್ತೆ ಬಂದ್ ಮಾಡಿ ವಿದ್ಯಾರ್ಥಿಗಳು, ಉಪನ್ಯಾಸಕರು ತೊಂದರೆ ಅನುಭವಿಸುವಂತೆ ಮಾಡುವುದು ಎಷ್ಟರ ಮಟ್ಟಿಗೆ ಸರಿ? ಅಗತ್ಯವಿದ್ದರೆ ರೈಲು ಗಾಡಿಗಳ ಸಂಚಾರ ಆರಂಭವಾದ ಮೇಲೆ ರಸ್ತೆ ಬಂದ್ ಮಾಡಬೇಕಿತ್ತು. ಅಲ್ಲಿಯವರೆಗೆ ಗೋಡೆಯನ್ನ್ನು ರೇಲ್ವೆ ಇಲಾಖೆ ತೆರವುಗೊಳಿಸಿ, ವಿದ್ಯಾರ್ಥಿಗಳು, ಉಪನ್ಯಾಸಕರು, ಸಾರ್ವಜನಿಕರು ಕಾಲೇಜಿಗೆ ಸುಗಮವಾಗಿ ಪ್ರವೇಶಿಸಲು ಅನುಕೂಲ ಮಾಡಿಕೊಟ್ಟರೆ ಉತ್ತಮ.
- ಬಾರಿಕರ ಗಂಗಾಧರ, ಹಗರಿಬೊಮ್ಮನಹಳ್ಳಿ



ಸ್ವಚ್ಛತೆಗೆ ಆದ್ಯತೆ ನೀಡಿ
ಕೊಟ್ಟೂರು, ಸುತ್ತಲಿನ ಜನರ ಆರೋಗ್ಯ ಕಾಪಾಡುವ ಗುರುತರ ಜವಾಬ್ದಾರಿ ಹೊತ್ತ ಸಮುದಾಯ ಆರೋಗ್ಯ ಕೇಂದ್ರದ ಪರಿಸರವೇ ರೋಗಪೀಡಿತವಾಗಿದೆ. ಇಲ್ಲಿ ಎಲ್ಲೆಂದರಲ್ಲಿ ಕಸ ಕಡ್ಡಿ, ಜಲ, ಮಲರಾಶಿ ಸಾಮಾನ್ಯವಾಗಿದೆ. ಈ ಜಾಗ ರೋಗಗಳನ್ನು ಹುಟ್ಟುಹಾಕುವ ತಾಣವಾಗಿದೆ. ಸಮುದಾಯ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಲಿರುವ ಜನ, ರೋಗಿಗಳ ಅದರಲ್ಲೂ ಪುರುಷರ ಮೂತ್ರವಿಸರ್ಜನೆಗೆಂದು ನಿರ್ಮಿಸಲಾದ ಮೂತ್ರಾಲಯ ಕಲುಷಿತವಾಗಿದೆ. ಮೂತ್ರಾಲಯದ ಸ್ಥಿತಿ ಗಮನಿಸಿ ಜನತೆಮೂತ್ರಾಲಯದೊಳಕ್ಕೆ ಕಾಲಿಡದೆ ಅಕ್ಕಪಕ್ಕದ ಬಯಲಲ್ಲೇ ಮೂತ್ರವಿಸರ್ಜನೆ ಮಾಡತೊಡಗಿದ್ದಾರೆ. ಆರೋಗ್ಯ ಇಲಾಖೆ ಅಧಿಕಾರಿ, ಕೊಟ್ಟೂರು ಪಪಂ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಕೂಡಲೇ ಗಮನಹರಿಸಿ ಮೂತ್ರಾಲಯ ಬಳಕೆ ಮಾಡುವ ರೀತಿಯಲ್ಲಿ ಶುದ್ಧೀಕರಿಸಲು ಕ್ರಮಕೈಗೊಳ್ಳುವತ್ತ ಮುಂದಾಗಬೇಕಿದೆ.
-ಜಗದೀಶ ಜಿ.ಪಿ, ಗಣಕಯಂತ್ರ ಉಪನ್ಯಾಸಕ, ರೇಣುಕ ಬಡಾವಣೆ


ದುರ್ನಾತ ಬೀರುವ ಚರಂಡಿ ಸರಿಪಡಿಸಿ..
ಕೊಟ್ಟೂರು ತುಂಬಾ ಇರುವ ಅನೇಕ ಚರಂಡಿಗಳು ಸದಾ ದುರ್ನಾತದಿಂದ ತುಂಬಿತುಳುಕುತ್ತಿವೆ. ಚರಂಡಿಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸುವ ಕಾರ್ಯಕ್ಕೆ ಪಪಂ ಆಡಳಿತ ಮುಂದಾಗದೇ ಇರುವುದು ನಾಗರಿಕರಿಗೆ ದೊಡ್ಡ ತಲೆನೋವಾಗಿದೆ. ಇಲ್ಲಿನ ರೇಣುಕ ಚಿತ್ರಮಂದಿರದ ಹೂಗಾರ್ ಕಾಂಪ್ಲೆಕ್ಸ್ ಬಳಿಯ ಚರಂಡಿ ತುಂಬೆಲ್ಲಾ ತ್ಯಾಜ್ಯಗಳು ತುಂಬಿವೆ. ನೀರು ಮುಂದೆ ಹೋಗದಂತಾಗಿ ಚರಂಡಿಯಲ್ಲಿ ಕೊಳೆತು ನಾರುತ್ತಾ ದುರ್ನಾತ ಬೀರುತ್ತಿದೆ. ಈ ರಸ್ತೆಗುಂಟ ಪಪಂ ಜನಪ್ರತಿನಿಧಿಗಳು ದಿನನಿತ್ಯ ಸಂಚರಿಸುತ್ತಿದ್ದರೂ ಯಾರೊಬ್ಬರೂ ಇತ್ತ ಗಮನಹರಿಸಿಲ್ಲ. ಇದನ್ನು ಸ್ವಚ್ಛಗೊಳಿಸಲು ಹಲವು ಬಾರಿ ಪಪಂ ಸಿಬ್ಬಂದಿಗೆ ದೂರಿದರೂ ಯಾವುದೇ ಕ್ರಮಕೈಗೊಂಡಿಲ್ಲ. ಚರಂಡಿ ಈ ಪರಿಸ್ಥಿತಿಯಿಂದಾಗಿ ಸೊಳ್ಳೆಗಳ ಸಂಖ್ಯೆ ದ್ವಿಗುಣಗೊಂಡು ರೋಗ ರುಜಿನಿಗಳು ಹರಡಲಾರಂಭಿಸಿವೆ. ಈಗಲಾದರೂ ಸಂಬಂಧಪಟ್ಟವರು ಚರಂಡಿಯನ್ನು ಸ್ವಚ್ಛಗೊಳಿಸುವ ಕಾರ್ಯಕ್ಕೆ ಕೈಹಾಕಬೇಕು. ತಿಂಗಳಿಗೆ ಒಮ್ಮೆಯಾದರೂ ಚರಂಡಿ ಸ್ವಚ್ಛಗೊಳಿಸುವ ಕಾರ್ಯಕ್ಕೆ ತೊಡಗಿಸಿಕೊಳ್ಳಬೇಕು. ಈ ಮೂಲಕ ಪಟ್ಟಣದ ನೈರ್ಮಲ್ಯ ಕಾಪಾಡುವತ್ತ ಗಮನ ಹರಿಸಬೇಕಾಗಿದೆ.
-ಎನ್.ಎಂ. ಸಂತೋಷ್ ಕುಮಾರ್, ಎನ್.ಎಂ. ಪಾನ್ಶಾಪ್, ಕೊಟ್ಟೂರು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.