ಮೊಬೈಲ್ನಿಂದ ಪೊಲೀಸ್ ಅತಿಥಿಯಾದ ಕಳ್ಳ
ಜಾಗತಿಕ ಇಂದಿನ ಯುಗದಲ್ಲಿ ಮನುಷ್ಯನಿಗೆ ಗಣಕಯಂತ್ರ, ಮೊಬೈಲ್ ಅತ್ಯವಶ್ಯಕವಾಗಿದೆ. ಇವುಗಳಿಂದ ಎಲ್ಲ ರೀತಿಯ ಉಪಯೋಗಗಳು ಎಲ್ಲ ಕಾಲಕ್ಕೂ ಸಿಗುತ್ತಿವೆ. ಸರ್ಕಾರಿ, ಅರೆ ಸರ್ಕಾರಿ, ಖಾಸಗಿ ಕಂಪನಿಗಳಲ್ಲಿ ಗಣಕಯಂತ್ರ, ಮೊಬೈಲ್ ಬಹುಪಯೋಗಿಯಾಗಿವೆ. ಅಂತೆಯೇ ಪೊಲೀಸ್ ಇಲಾಖೆಗೆ ಮೊಬೈಲ್ಗಳು ಅನೇಕ ಬಾರಿ ಅಪರಾಧಿಗಳನ್ನು ಪತ್ತೆಹಚ್ಚುವಲ್ಲಿ ಸಹಾಯಕವಾಗಿವೆ.
ಕಳ್ಳತನವಾದ ಎರಡು ವರ್ಷದ ನಂತರ ಕಳ್ಳ ಮತ್ತು ಕಳ್ಳತನದ ಮಾಲನ್ನು ಪತ್ತೆಗೆ ಮೊಬೈಲ್ ಸಹಕಾರಿಯಾಗಿದೆ. ಕಳ್ಳನ ಮೊಬೈಲ್ ಪೊಲೀಸರ ತನಿಖೆಗೆ ಉಪಯೋಗವಾಯಿತು ಎಂಬುದಕ್ಕೆ ಬಳ್ಳಾರಿ ತಾಲೂಕು ಕುಡಿತಿನಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 2 ವರ್ಷದ ಹಿಂದೆ ನಡೆದ ಮೂರು ಕಳ್ಳತನ ಪ್ರಕರಣದಲ್ಲಿ ಕಳ್ಳನನ್ನು ಹಿಡಿಯಲು ಹಾಗೂ ಆತನಿಂದ ಬಂಗಾರ ವಶಪಡಿಸಿಕೊಳ್ಳುವುದಕ್ಕೆ ಸಾಕ್ಷಿಯಾಗಿದೆ.
ಹೈದರಾಬಾದ್ನಲ್ಲಿ ನೆಲೆಸಿರುವ ಗಂಗಾವತಿಯ ರಹೀಮ್ ಎಂಬಾತ 2012ರಲ್ಲಿ ಕುಡಿತಿನಿ ಗ್ರಾಮದ ಮನೆಯೊಂದರಲ್ಲಿ 10 ತೊಲೆ ಬಂಗಾರ, ರು. 3 ಸಾವಿರದ ಮೊಬೈಲ್ ಕದ್ದಿದ್ದ. ಆತ ಬಂಗಾರ ಕದ್ದು ಹೋಗಿದ್ದರೆ ಇದುವರೆಗೆ ಸಿಗುತ್ತಿದ್ದನೋ ಇಲ್ಲವೊ ಗೊತ್ತಿಲ್ಲ. ಆದರೆ ಅಲ್ಲಿಯೇ ಇದ್ದ ಮೊಬೈಲನ್ನು ಏಕೆ ಬಿಡಬೇಕು ಎಂದು ಅದನ್ನೂ ಕದ್ದು ಎರಡು ವರ್ಷದ ನಂತರ ಪೊಲೀಸರ ಅತಿಥಿಯಾದ. 2 ವರ್ಷವಾದ ಬಳಿಕ ಕಳ್ಳನನ್ನು ಹಿಡಿಯಲು ಆ ಮೊಬೈಲ್ ಸಹಕರಿಸಿದ್ದು ಮಾತ್ರ ಕುತೂಹಲದ ಸಂಗತಿ.
ಕದ್ದ ಮೊಬೈಲ್ ಮಾರಿದ್ದ: ಆತ ಕದ್ದು ಮೊಬೈಲನ್ನು ತನ್ನ ಸ್ನೇಹಿತ ಗಂಗಾವತಿಯ ರಫೀಕ್ನಿಗೆ ಹಾಗೂ 10 ತೊಲೆಯಲ್ಲಿ 2 ತೊಲೆ ಬಂಗಾರವನ್ನು ಮಾರಿದ್ದ. ಇತ್ತ ಪೊಲೀಸರು ಕಳ್ಳನನ್ನು ಹಿಡಿಯಲು ಯತ್ನ ನಡೆಸಿದ್ದರು. ಐಎಂಇಐ ನಂಬರ್ ಮೂಲಕ ಪೊಲೀಸರು ಮೊಬೈಲ್ ಯಾರ ಹತ್ತಿರ ಇದೆ ಎಂದು ಪತ್ತೆಹಚ್ಚಿದ್ದಾರೆ. ಕೂಡಲೆ ರಫೀಕ್ನನ್ನು ಹುಡುಕಿಕೊಂಡು ಹೋಗಿದ್ದಾರೆ. ರಫೀಕ್ನನ್ನು ವಿಚಾರಣೆ ಮಾಡಿದ್ದಾರೆ. ಆಗ ರಫೀಕ್ ದುಬೈಗೆ ಹೋಗಿದ್ದ ನನ್ನ ಸ್ನೇಹಿತ ನನಗೆ ಮೊಬೈಲ್ ಮಾರಿದ್ದಾನೆ ಎಂದು ಸುಳ್ಳು ಹೇಳಿ ಪೊಲೀಸರ ತನಿಖೆಯ ದಾರಿ ತಪ್ಪಿಸಲು ಮುಂದಾಗಿದ್ದಾನೆ. ಅವನ ಮಾತನ್ನು ಒಪ್ಪಿದಂತೆ ಮಾಡಿದ ಪೊಲೀಸರು, ಸ್ವಲ್ಪ ದಿನಗಳ ಕಾಲ ತನಿಖೆಯಿಂದ ದೂರು ಸರಿದಂತೆ ಮಾಡಿದರು.
ಡಬಲ್ ಗೇಮ್: ದುಬೈಗೆ ಹೋಗಿದ್ದ ವ್ಯಕ್ತಿಯ ಬರುವಿಕೆಗೆ ಕಾಯುತ್ತ ಕುತಿದ್ದರು. ದುಬೈಗೆ ಹೋಗಿದ್ದ ವ್ಯಕ್ತಿ ಆಂಧ್ರಪ್ರದೇಶದ ಕಡಪದವನಾಗಿದ್ದು, ಒಂದೂವರೆ ವರ್ಷದ ಬಳಿಕ ಆತ ಕಡಪಕ್ಕೆ ಬಂದಿದ್ದ ವಿಷಯ ತಿಳಿದ ಪೊಲೀಸರು, ಕಡಪಕ್ಕೆ ಹೋಗಿ ಆತನನ್ನು ವಿಚಾರಿಸಿದ್ದಾರೆ. ಆಗ ಮೊಬೈಲನ್ನು ತಾನು ರಫೀಕ್ನಿಗೆ ತಾನು ಮಾರಿಲ್ಲ ಎಂದು ಹೇಳಿದ್ದಾನೆ. ಈ ಪ್ರಕರಣದಲ್ಲಿ ರಫೀಕ್ ಡಬಲ್ ಗೇಮ್ ಆಡುತ್ತಿದ್ದಾನೆ ಎಂದು ತಿಳಿದ ಪೊಲೀಸರು, ರಫೀಕ್ನನ್ನು ಮತ್ತೆ ವಿಚಾರಣೆಗೆ ಒಳಪಡಿಸಿದಾಗ ರಹೀಮ್ ತನಗೆ ಮೊಬೈಲ್ ಮತ್ತು 2 ತೊಲೆ ಬಂಗಾರವನ್ನು ಮಾರಿದ್ದಾನೆ. ಆತ ಸಿಕ್ಕರೆ ಮೊಬೈಲ್ ಜತೆಗೆ ಬಂಗಾರವೂ ಹೋಗುತ್ತದೆ ಎಂಬ ಕಾರಣದಿಂದ ಹೇಳಿಲ್ಲ ಎಂದು ತಿಳಿಸಿದ್ದಾನೆ. ಆಗ ಅಸಲಿ ಕಳ್ಳ ರಹೀಮ್ನನ್ನು ಹಿಡಿಯುವುದು ಪೊಲೀಸರಿಗೆ ಸುಲಭವಾಯಿತು.
ರಹೀಮ್ ಎಲ್ಲಿದ್ದಾನೆ ಎಂಬುದನ್ನು ಆತನ ಮೊಬೈಲ್ ನಂಬರ್ ಮೂಲಕ ಪತ್ತೆಹಚ್ಚಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ಪ್ರಕರಣದೊಂದಿಗೆ ರಹೀಮ್ ಇನ್ನೆರಡು ಕಳ್ಳತನದ ಪ್ರಕರಣದಲ್ಲಿ ಭಾಗಿಯಾಗಿರುವುದು ತಿಳಿದಿದೆ. 3 ತೊಲೆ ಬಂಗಾರವನ್ನು ಪೊಲೀಸರು ಆತನಿಂದ ವಶಪಡಿಸಿಕೊಂಡಿದ್ದಾರೆ. ಆ ಮೂಲಕ ಪ್ರಕರಣದ ಕುರಿತು ಸಣ್ಣದೊಂದು ಸುಳಿವು ಸಿಕ್ಕರೂ ಅಪರಾಧಿಯನ್ನು ಪತ್ತೆಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗುತ್ತಾರೆ ಎಂಬುದಕ್ಕೆ ಈ ಪ್ರಕರಣ ಸಾಕ್ಷಿಯಾಗಿದೆ.
ಬಳ್ಳಾರಿ ಗ್ರಾಮೀಣ ಡಿವೈಎಸ್ಪಿ ರುದ್ರಮುನಿ ಮಾರ್ಗದರ್ಶನದಲ್ಲಿ ತನಿಖೆ ನಡೆಸುತ್ತಿದ್ದ ಇನ್ಸ್ಪೆಕ್ಟರ್ ಲಕ್ಷ್ಮಿಕಾಂತಯ್ಯ, ಕುಡಿತಿನಿ ಪೊಲೀಸ್ ಠಾಣೆ ಪಿಎಸ್ಐ ವಾಸಕುಮಾರ್ ಅವರ ನೇತೃತ್ವದ ತಂಡ ಕಳ್ಳನನ್ನು ಹಿಡಿಯುವಲ್ಲಿ ಕೊನೆಗೂ ಯಶಕಂಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

