ಗವಿಮಠ ಜಾತ್ರೆಗೆ ದೇಣಿಗೆ ಮಹಾಪೂರ
ದಕ್ಷಿಣ ಭಾರತದ ಕುಂಭಮೇಳ ಎಂದೇ ಕರೆಯುವ ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವಕ್ಕೆ ದೇಣಿಗೆ ಮಹಾಪೂರವೆ ಹರಿದು ಬರುತ್ತಿದೆ. ಈ ಬಾರಿ ಸಾಲು ಸಾಲು ಬಂಡಿಯಲ್ಲಿ ಭಕ್ತರು ದವಸ, ಧಾನ್ಯ ತಂದು ನೀಡುತ್ತಿರುವುದರಿಂದ ಗವಿಮಠ ಆವರಣ ಸೇರಿದಂತೆ ಇಡೀ ಕೊಪ್ಪಳದಲ್ಲಿ ಸಾಂಸ್ಕೃತಿಕ ವೈಭವ ಮನೆ ಮಾಡಿದೆ. ಎಲ್ಲಿ ನೋಡಿದರೂ ಸಿಂಗಾರ ಮಾಡಿಕೊಂಡು ಬರುತ್ತಿರುವ ಬಂಡಿ, ಟ್ರ್ಯಾಕ್ಟರ್ಗಳನ್ನು ನೋಡುವುದೆ ಕಣ್ಣಿಗೆ ಒಂದು ಹಬ್ಬ.
ಜನಜಾತ್ರೆ ಈಗಲೇ ಕೊಪ್ಪಳದಲ್ಲಿ ಮನೆ ಮಾಡಿದೆ. ಪ್ರತಿ ಗ್ರಾಮದಲ್ಲಿ ಸಾವಿರಾರು ರೊಟ್ಟಿ ತಟ್ಟಿಕೊಂಡು ತಂದು ಮಠಕ್ಕೆ ಕಾಣಿಕೆ ನೀಡುತ್ತಿದ್ದಾರೆ. ಇದರ ಜೊತೆಗೆ ಕಾಳು, ಕಡಿ ಸೇರಿದಂತೆ ತಾವು ಬೆಳೆದಿರುವುದೆಲ್ಲದರಲ್ಲಿಯೂ ಗವಿಮಠದ ಜಾತ್ರೆಗೊಂದು ಪಾಲು ಸಲ್ಲಿಸುತ್ತಿದ್ದಾರೆ.
ಬಂದಿರುವ ರೊಟ್ಟಿಯಿಂದ ಒಂದು ಗೋದಾಮು ಭರ್ತಿಯಾಗಿದ್ದರಿಂದ ಮತ್ತೊಂದು ಗೋದಾಮಿಗೆ ಹಾಕಬೇಕಾಗಿದೆ. ಒಂದು ಅಂದಾಜಿನ ಪ್ರಕಾರ ಲಕ್ಷಕ್ಕೂ ಅಧಿಕ ರೊಟ್ಟಿಗಳು ಈಗಾಗಲೇ ಬಂದಿವೆ ಎಂದು ಮಠದ ಮೂಲಗಳು ಖಚಿತಪಡಿಸಿವೆ. ಇನ್ನು ದವಸ-ಧಾನ್ಯ ಎಷ್ಟು ಬಂದಿದೆ ಎಂದು ಲೆಕ್ಕಹಾಕುವುದಕ್ಕೆ ಆಗಿಲ್ಲ. ಅಷ್ಟೊಂದು ದವಸ-ಧಾನ್ಯ ಬಂದಿದೆ ಎಂದು ಹೇಳಲಾಗುತ್ತಿದೆ.
ನೆರವಿನ ಮಹಾಪೂರ: ಈ ಹಿಂದಿನ ಎಲ್ಲ ಜಾತ್ರೆಗಳಿಗಿಂತಲೂ ಈ ಬಾರಿಯ ದೇಣಿಗೆ, ಕಾಣಿಕೆ, ದಾನ ಅತ್ಯಧಿಕ ಪ್ರಮಾಣದಲ್ಲಿ ಹರಿದು ಬರುತ್ತಿದೆ ಎಂದು ಹೇಳಲಾಗುತ್ತದೆ. ಈ ಬಾರಿ ಮಳೆ-ಬೆಳೆ ಚೆನ್ನಾಗಿ ಆಗಿದ್ದರಿಂದ ಭಕ್ತರು ಅತ್ಯಂತ ಹುಮ್ಮಸ್ಸಿನಿಂದಲೆ ನೆರವು ನೀಡುತ್ತಿದ್ದಾರೆ. ಶ್ರೀಗಳು ಭೇಟಿ ನೀಡದ ಗ್ರಾಮಸ್ಥರೂ ತಾವೇ ಸ್ವಯಂ ಪ್ರೇರಿತವಾಗಿ ಮಠಕ್ಕೆ ಬಂದು ಕಾಣಿಕೆ ನೀಡುತ್ತಿದ್ದಾರೆ.
ಟ್ರಾಫಿಕ್ ಜಾಮ್: ಗವಿಮಠಕ್ಕೆ ಬರುವ ಭಕ್ತರು ಅಧಿಕವಾಗಿದ್ದರಿಂದ ಹಾಗೂ ಸಾಲು ಸಾಲು ಬಂಡಿ, ಟ್ರ್ಯಾಕ್ಟರ್ ಬರುತ್ತಿರುವುದರಿಂದ ನಗರದ ರಸ್ತೆಯೆಲ್ಲಾ ಟ್ರಾಫಿಕ್ ಜಾಮ್ ಆಗುತ್ತಿದೆ. ಗಂಟೆಗಟ್ಟಲೆ ರಸ್ತೆ ದಾಟುವುದಕ್ಕೆ ಸಮಯ ತೆಗೆದುಕೊಳ್ಳಬೇಕಾಗುತ್ತದೆ. ಇದನ್ನು ನಿಯಂತ್ರಿಸಲು ಪೊಲೀಸರು ವಿಶೇಷ ವ್ಯವಸ್ಥೆ ಮಾಡಿಕೊಂಡಿದ್ದರೂ ನಿಯಂತ್ರಣ ಕಷ್ಟವಾಗುತ್ತಿದೆ.
ಒಂದೇ ದಿನ ಬಂದಿದ್ದು: ಶ್ರೀ ಗವಿಸಿದ್ಧೇಶ್ವರನ ಜಾತ್ರೆಗೆ ಈಗ ದಿನಗಣನೆ ಆರಂಭವಾಗಿದೆ. ಸೋಮವಾರ ಶ್ರೀ ಗವಿಸಿದ್ಧೇಶ್ವರನ ವಾರವಾಗಿದ್ದರಿಂದ ಶ್ರೀ ಗವಿಮಠದಲ್ಲಿ ಜಾತ್ರೆಯ ವಿಶೇಷ ಮೆರಗು ಕಂಡುಬಂದಿತು.
ಚಿಕ್ಕಮನ್ನಾಪುರ, ಕೆಂಪಳ್ಳಿ, ಹಿರೇವಡ್ಡರಕಲ್, ಇರಕಲ್ಗಡಾ, ಗಂಗನಾಳ, ಕನಕಾಪುರ, ಹಿರೇಅರಳೆಹಳ್ಳಿ, ಓಬಳಬಂಡಿ, ಹೊನ್ನುಣಸಿ, ಚಿಕ್ಕಸುಳಿಕೇರಿ, ಚಂಡಿನಾಳ, ನವಲಹಳ್ಳಿ, ಕಿನ್ನಾಳ, ನಾಗೇಶನಹಳ್ಳಿ, ನವಲಿ, ಹೊಸೂರು, ಕಂದಕುರ, ಬಿಸರಳ್ಳಿ, ಚಿಲಕಮುಖಿ, ಯಡ್ಡೋಣಿ ಗ್ರಾಮಗಳ ಭಕ್ತರು 1 ಲಕ್ಷಕ್ಕಿಂತಲೂ ಹೆಚ್ಚು ರೊಟ್ಟಿಗಳು ಹಾಗೂ 200 ಪ್ಯಾಕೆಟ್ ದವಸ-ಧಾನ್ಯ, 20 ಚೀಲ ತರಕಾರಿ, 200 ಕುಂಬಳಕಾಯಿ ಶ್ರೀಮಠದ ದಾಸೋಹಕ್ಕೆ ಸಮರ್ಪಿತವಾಗಿರುವುದು ಒಂದು ದಿನದ ಲೆಕ್ಕ ಅಷ್ಟೇ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

