ಬಳ್ಳಾರಿ

ಮಾನವ ಪಂಥಕ್ಕೆ ಹೊಸ ಭಾಷ್ಯ ಬರೆದ ಜಿಎಸ್ಸೆಸ್

Published On :

ಕೂಡ್ಲಿಗಿ: ಜಿ.ಎಸ್. ಶಿವರುದ್ರಪ್ಪ ಅವರು ಯಾವ ಪಂಥಕ್ಕೂ ಸೇರದೆ ಮಾನವ ಪಂಥಕ್ಕೆ ಸೇರಿದ ಕವಿಯಾಗಿ ಕನ್ನಡ ಸಾಹಿತ್ಯ ಲೋಕಕ್ಕೆ ಪರಿಚಿತರಾಗಿದ್ದಾರೆ. ಭಾವಗೀತೆ ಲೋಕಕ್ಕೆ ತನ್ನದೆ ಆದ ಕಾಣಿಕೆ ನೀಡಿ, ಸರಳ, ಸಾತ್ವಿಕತೆ, ನುಡಿದಂತೆ ನಡೆದ ಸೌಮ್ಯವಾದಿಯಾಗಿದ್ದರು ಎಂದು ಶಿಕ್ಷಣ ಸಂಯೋಜಕ ಪಿ. ಶಿವರಾಜ್ ಹೇಳಿದರು.
ಅವರು ಪಟ್ಟಣದ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಹಿರೇಮಠ ಕಾಲೇಜಿನ  ಇಕೋ ಕ್ಲಬ್ ಆಶ್ರಯದಲ್ಲಿ ನಡೆದ ಭಾವ ಕವಿ ಜಿ.ಎಸ್. ಶಿವರುದ್ರಪ್ಪ ಅವರ ನುಡಿನಮನ ಹಾಗೂ ಗೀತಗಾಯನ ಕಾರ್ಯಕ್ರಮದಲ್ಲಿ ಮಾತನಾಡಿ, ಭಾವನೆಗಳನ್ನು ಬಿತ್ತುವ ಮೂಲಕ ಸಮಾಜದ ಅಂಕು ಡೊಂಕುಗಳ ಬಗ್ಗೆ ವೈರಾಗ್ಯ, ಪ್ರೀತಿಯ ಬಗ್ಗೆ ಅವಿನಾಭಾವ ಸಂಬಂಧ, ಪರಿಸರದ ಪ್ರೀತಿ, ಸ್ನೇಹದ ಕಾರಂಜಿ, ದೇಶಭಕ್ತಿ ಕುರಿತ ಅವರ ಚಿಂತನೆ ಕಾವ್ಯ, ಗದ್ಯಗಳು ಸಾರಸ್ವತ ಲೋಕಕ್ಕೆ ಮೆರುಗು ತಂದಿವೆ ಎಂದರು.
ಕೂಡ್ಲಿಗಿ ಹಿರೇಮಠದ ಶ್ರೀ ಪ್ರಶಾಂತ ಸಾಗರ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ಬದುಕಿನಲ್ಲಿ ಸರಳ ಸಜ್ಜನಿಕೆ ತೋರುತ್ತಲೆ ಕಾವ್ಯದಲ್ಲಿ ತಮ್ಮ ಮೇರು ಪ್ರತಿಭೆ ಅನಾವರಣಗೊಳಿಸಿದ ಶಿವರುದ್ರಪ್ಪ ಅವರು, ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸಿದ ಕವಿ. ತಮ್ಮ ಸಾವಿನಲ್ಲೂ, ಜಾತಿ, ಮತಗಳ ವಿಧಿ, ವಿಧಾನಗಳ ಹಂಗನ್ನು ತೊರೆದು ಅವರ ಆಲೋಚನೆ ಎಲ್ಲರಿಗೂ ಆದರ್ಶನೀಯ ಎಂದರು.
ತಾಲೂಕು ಕಸಾಪ ಮಾಜಿ ಅಧ್ಯಕ್ಷ ಬ್ಯಾಳಿ ವಿಜಯಕುಮಾರ್ ಗೌಡ ಮಾತನಾಡಿ, ಕೂಡ್ಲಿಗಿ ಮತ್ತು ಜಿಎಸ್ಸೆಸ್ ಅವರ ಉತ್ತಮ ಬಾಂಧವ್ಯಕ್ಕೆ ಈ ಪತ್ರವೆ ಸಾಕ್ಷಿ ಎಂದು ಜಿಎಸ್ಸೆಸ್ ಕೈ ಬರಹದ ಪತ್ರವನ್ನು ವಿದ್ಯಾರ್ಥಿಗಳಿಗೆ ತೋರಿಸಿ ಚಕಿತಗೊಳಿಸಿದರು. ಕಸಾಪ ತಾಲೂಕು ಅಧ್ಯಕ್ಷ ಎಸ್.ಎಂ. ಗುರುಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು. ಸಂಗೀತ ಶಿಕ್ಷಕ ಮರಿದೇವರ ಮಠ ಹಾಗೂ ವಿದ್ಯಾರ್ಥಿನಿ ಶಿವಲೀಲಾ ಮರಿದೇವರಮಠ ಅವರು ಭಾವಗೀತೆಗಳನ್ನು ಪ್ರಸ್ತುತಪಡಿಸಿದರು. ಸತ್ಯಂ ಅವರು ತಬಲ ಸಾಥ್ ನೀಡಿದರು. ಕೂಡ್ಲಿಗಿ ರಂಗಕಲಾವಿದೆ ಪಿ. ಪದ್ಮಾ, ಹಿರೇಮಠ ವಿದ್ಯಾಪೀಠ ಆಡಳಿತಾಧಿಕಾರಿ ಅಂಗಡಿ ವೀರೇಶ್, ಪ್ರಭಾರಿ ಪ್ರಾಚಾರ್ಯ ಸುರೇಶ್ ಮುದ್ದೇಬಿಹಾಳ, ಪ್ರೌಢಶಾಲೆ ಮುಖ್ಯಶಿಕ್ಷಕ ಪಿ.ಎಂ. ತಿಪ್ಪಯ್ಯಸ್ವಾಮಿ, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಪಿ.ವಿ. ಕೊತ್ಲಪ್ಪ, ಕಸಾಪ ಕಾರ್ಯದರ್ಶಿ ಕೆ.ಎಂ. ವೀರೇಶ್, ಪಿ. ವೀರೇಶ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.