ಬಳ್ಳಾರಿ

ಗನ್‌ಮ್ಯಾನ್ ಸಂಸ್ಕೃತಿಗೂ ಬ್ರೇಕ್

Published On :

 ಗಣಿಗಾರಿಕೆಯೇ ಬಳ್ಳಾರಿಯಲ್ಲಿ ಗನ್‌ಮ್ಯಾನ್ ಸಂಸ್ಕೃತಿ ಹೆಚ್ಚಾಗಲು ಕಾರಣವಾಗಿತ್ತು. ಇನ್ನು ಕೆಲ ಸಂದರ್ಭದಲ್ಲಿ ಅದು ಪ್ರತಿಷ್ಠೆಯ ವಿಷಯವಾಗಿತ್ತು. ಈಗ ಇಂತಹ ಅನಗತ್ಯ ಗನ್‌ಮ್ಯಾನ್ ಸಂಸ್ಕೃತಿಗೆ ಕಡಿವಾಣ ಹಾಕಲು ಪೊಲೀಸ್ ಇಲಾಖೆ ಮುಂದಾಗಿದ್ದು, ಸುಮಾರು 15ರಿಂದ 16 ಗನ್‌ಮ್ಯಾನ್‌ಗಳನ್ನು ರದ್ದುಗೊಳಿಸುವಂತೆ ಗುಪ್ತಚರ ದಳದ ಎಡಿಜಿಪಿ ಆದೇಶ ಹೊರಡಿಸಿದ್ದಾರೆ.
ಈ ಹಿಂದೆ ಎಸ್ಪಿ ಚಂದ್ರಗುಪ್ತ ಇರುವ ಕಾಲಕ್ಕೆ ಸುಮಾರು 60ರಿಂದ 70 ಜನ ಗನ್‌ಮ್ಯಾನ್‌ಗಳನ್ನು ರದ್ದುಗೊಳಿಸಿದ್ದರು. ಇಂತಹ ಸಂಸ್ಕೃತಿಗೆ ಕಡಿವಾಣ ಹಾಕುವ ಪ್ರಯತ್ನ ಮಾಡಿದ್ದರು.
ಗಣಿ ಭೂಮ್ ಇದ್ದ ಕಾಲದಲ್ಲಿ ಕೇವಲ ಖಾಸಗಿ ಗನ್‌ಮ್ಯಾನ್‌ಗಳಲ್ಲದೆ, ಸರ್ಕಾರಿ ಗನ್‌ಮ್ಯಾನ್‌ಗಳು ಇರುತ್ತಿದ್ದರು. ಅದರಲ್ಲೂ ಗಣಿ ಉದ್ಯಮಿಗಳಿಗೆ ಹಾಗೂ ಗಣಿ ಉದ್ಯಮಿ ಕಮ್ ರಾಜಕಾರಣಿಗಳ ಹಿಂದೆ ಮುಂದೆ ಗನ್‌ಮ್ಯಾನ್‌ಗಳಿರುತ್ತಿದ್ದರು. ಮನೆಗಳ ಹತ್ತಿರವಂತೂ ನಿರೀಕ್ಷೆಗೆ ಮೀರಿ ಪೊಲೀಸರು ಕಾವಲು ಇರುತ್ತಿರುವ ಕಾಲವೊಂದಿತ್ತು. ಆದರೆ, ಇದೀಗ ಕಾಲ ಬದಲಾಗಿದ್ದು, ಅಗತ್ಯ ಇರುವ ಕಡೆಗಳಲ್ಲಿ ಮಾತ್ರ ಪೊಲೀಸ್ ಭದ್ರತೆ ಎಂಬ ಕಲ್ಪನೆಯ ಹಿನ್ನೆಲೆಯಲ್ಲಿ ಬಹುತೇಕ ಮನೆಗಳಿಗೆ ಕಾವಲು ಇದ್ದ ಪೊಲೀಸರನ್ನು ವಾಪಸ್ ಕರೆಯಿಸಲಾಗಿದೆ. ಈ ಮೂಲಕ ಪೊಲೀಸರು ಜನಸಾಮಾನ್ಯರ ರಕ್ಷಕರು ಎಂಬ ಭಾವನೆ ಹುಟ್ಟುವ ನಿಟ್ಟಿನಲ್ಲಿ ಇಲಾಖೆಯು ಬಳ್ಳಾರಿಯಲ್ಲಿ ದಿಟ್ಟ ಹೆಜ್ಜೆ ಇಟ್ಟಿದೆ.
ಗಣಿ ಭೂಮ್ ಇದ್ದ ಕಾಲಕ್ಕೆ ಶಾಸಕರು, ಮಾಜಿ ಶಾಸಕರು, ಮಹಾನಗರ ಪಾಲಿಕೆಯ ಸದಸ್ಯರು, ಪರಾಭವಗೊಂಡ ಅಭ್ಯರ್ಥಿಗಳು ಹೀಗೆ ಕೆಲವರು ಬೆದರಿಕೆ ನೆಪವೊಡ್ಡಿ ಪೊಲೀಸ್ ಇಲಾಖೆಯಿಂದ ಗನ್‌ಮ್ಯಾನ್‌ಗಳನ್ನು ಪಡೆದಿದ್ದರು. ಗಣಿ ಭೂಮ್ ಇದ್ದ ಕಾಲದಿಂದಲೂ ಇಂತಹ ಗನ್‌ಮ್ಯಾನ್ ವ್ಯವಸ್ಥೆ ನಿರಂತರವಾಗಿ ನಡೆದಿತ್ತು. ಆದರೆ, 2011-12ರ ಸಂದರ್ಭದಲ್ಲಿ ಬಳ್ಳಾರಿಗೆ ಆಗಮಿಸಿದ ಎಸ್ಪಿ ಡಾ. ಚಂದ್ರಗುಪ್ತಾ ಗಣಿ ಉದ್ಯಮಿ, ರಾಜಕಾರಣಿಗಳ ಮನೆಗೆ ಇದ್ದ ಸುಮಾರು 60ರಿಂದ 70 ಸಿವಿಲ್ ಹಾಗೂ ಡಿಎಆರ್ ಗನ್‌ಮ್ಯಾನ್‌ಗಳನ್ನು ರದ್ದುಗೊಳಿಸಿದ್ದರು.
ಗುಪ್ತಚರ ದಳದ ಆದೇಶ: ಕೆಲವೊಬ್ಬರು ಬೆದರಿಕೆ ಇದೆ ಎಂದು ಹೇಳಿಕೊಂಡು ವೈಯಕ್ತಿಕವಾಗಿ ಗನ್‌ಮ್ಯಾನ್‌ಗಳನ್ನು ಮುಂದುವರಿಸಿಕೊಂಡಿದ್ದರು. ಗುಪ್ತಚರ ದಳ ಬಳ್ಳಾರಿಯಲ್ಲಿ ಇದೀಗ ಗನ್‌ಮ್ಯಾನ್‌ಗಳನ್ನು ಹೊಂದಿರುವ ವ್ಯಕ್ತಿಗಳಿಗೆ ಥ್ರೇಟ್ ಇದೆಯೋ, ಇಲ್ಲವೋ ಎಂಬುದನ್ನು ಪರಿಶೀಲಿಸಿ, ಗುಪ್ತಚರ ದಳದ ವರದಿ ಪಡೆದಿದೆ. ಅದರ ಆಧಾರದ ಮೇಲೆ ಬಳ್ಳಾರಿಯಲ್ಲಿರುವ ಸುಮಾರು 15ರಿಂದ 16 ಜನರಿಗೆ ನೀಡಿರುವ ಗನ್‌ಮ್ಯಾನ್‌ಗಳ ಅಗತ್ಯವಿಲ್ಲ, ರದ್ದುಪಡಿಸುವಂತೆ ರಾಜ್ಯದ ಗುಪ್ತಚರದ ದಳದ ಎಡಿಜಿಪಿ ಆದೇಶ ಹೊರಡಿಸಿದ್ದಾರೆ. ಕಳೆದ 2-3 ದಿನಗಳ ಹಿಂದೆ ಈ ಆದೇಶ ಬಂದಿರುವುದರಿಂದ ಗನ್‌ಮ್ಯಾನ್ ಹಿಂದಕ್ಕೆ ಪಡೆಯುವ ಪ್ರಕ್ರಿಯೆ ನಡೆಯುತ್ತಿದ್ದು, ಇನ್ನು ನಾಲ್ಕೈದು ದಿನಗಳಲ್ಲಿಯೇ ಹಿಂದಕ್ಕೆ ಪಡೆಯಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಸಿಬ್ಬಂದಿ ಕೊರತೆ: ಪೊಲೀಸ್ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಹೆಚ್ಚಾಗುತ್ತಿರುವುದರಿಂದ, ಕೆಲವೊಬ್ಬರು ಯಾವುದೇ ಥ್ರೇಟ್ ಇಲ್ಲದಿದ್ದರೂ, ಗನ್‌ಮ್ಯಾನ್ ಪಡೆದಿರುವುದು ಗುಪ್ತಚರ ದಳಕ್ಕೆ ಮಾಹಿತಿ ಹೋಗಿದೆ. ಈ ಹಿನ್ನೆಲೆಯಲ್ಲಿ ಇಂತಹ ಕ್ರಮಕ್ಕೆ ಮುಂದಾಗಿದ್ದಾರೆ. ಈ ಹಿಂದೆ ಥ್ರೇಟ್ ಇದೆ ಎಂದು ಕೇಳಿದವರಿಗೆಲ್ಲ ಗನ್‌ಮ್ಯಾನ್ ನೀಡಲಾಗಿತ್ತು. ಗಣಿ ನಾಡಿನಲ್ಲಿ ಹೆಚ್ಚಾಗಿರುವ ಗನ್‌ಮ್ಯಾನ್ ಸಂಸ್ಕೃತಿಗೆ ಕಡಿವಾಣ ಹಾಕಲು ಪೊಲೀಸ್ ಇಲಾಖೆ ಮುಂದಾಗಿದೆ. ಎಲ್ಲರಿಗೆ ಇರುವ ಗನ್‌ಮ್ಯಾನ್‌ಗಳನ್ನು ರದ್ದುಗೊಳಿಸದೆ, ಅಗತ್ಯ ಇರುವವರಿಗೆ, ಥ್ರೇಟ್ ಇರುವವರಿಗೆ ಮಾತ್ರ ಗಮ್‌ಮ್ಯಾನ್‌ಗಳನ್ನು ಮುಂದುವರಿಸಲಾಗಿದೆ. ಬಳ್ಳಾರಿಯಲ್ಲಿ ಯಾರಾದರೂ ಗನ್‌ಮ್ಯಾನ್‌ಗಳೊಂದಿಗೆ ಹೊರ ಬಂದರೆ, ಇವಾರ್ಯಾರೊ ದೊಡ್ಡ ವ್ಯಕ್ತಿ ಇರಬೇಕೆಂದು ಜನ ಆತನತ್ತಲೆ ನೋಡುತ್ತಿದ್ದರು. ಇನ್ಮುಂದೆ ಬಳ್ಳಾರಿಯಲ್ಲಿ ಗನ್‌ಮ್ಯಾನ್ ಸಂಸ್ಕೃತಿ ಕಡಿಮೆಯಾಗಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.