ಕುಡಿವ ನೀರು, ರಸ್ತೆ, ನೀರಾವರಿಗೆ ಆದ್ಯತೆ
ಹೂವಿನಹಡಗಲಿ: ಶುದ್ಧ ಕುಡಿಯುವ ನೀರು, ನೀರಾವರಿ ಸೌಲಭ್ಯ, ಸಮರ್ಪಕ ರಸ್ತೆಗಳಿಂದ ವಂಚಿತವಾಗಿರುವ ಗ್ರಾಮಗಳಿಗೆ ತುಂಗಭದ್ರಾ ನದಿಯಿಂದ ಕುಡಿಯುವ ನೀರಿನ ಯೋಜನೆ, ರಸ್ತೆ ಮತ್ತು ನೀರಾವರಿ ಸೌಲಭ್ಯಗಳಿಗೆ ಆದ್ಯತೆ ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಪರಮೇಶ್ವರ ನಾಯ್ಕ ಹೇಳಿದರು.
ಪಟ್ಟಣದ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಿಂದ ಲಾಲ್ ಬಹದ್ದೂರ್ ಶಾಸ್ತ್ರಿ ವೃತ್ತ ಸೇರಿದಂತೆ ಎಂಪಿಪಿ ನಗರದವರೆಗಿನ ಅರಭಾವಿ- ಚಳ್ಳಕೆರೆ ರಾಜ್ಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿ, ಕ್ಷೇತ್ರದ ಎಲ್ಲ ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳು ತುಂಬ ಹಾಳಾಗಿದ್ದು, ಪ್ರಯಾಣಿಕರ ಸುಗಮ ಸಂಚಾರಕ್ಕೆ ಅನುಕೂಲವಾಗಲು ರಸ್ತೆ ಸುಧಾರಣೆಗಾಗಿ ಸರ್ಕಾರ ವಿವಿಧ ಯೋಜನೆಗಳಲ್ಲಿ ಸಾವಿರಾರು ಕೋಟಿ ರು. ವೆಚ್ಚ ಮಾಡುತ್ತಿದೆ ಎಂದರು.
ರಸ್ತೆ ಅಭಿವೃದ್ಧಿಗೆ ರು. 70 ಕೋಟಿ: ಅರಭಾವಿ- ಚಳ್ಳಕೆರೆ ರಾಜ್ಯ ಹೆದ್ದಾರಿ ಅಭಿವೃದ್ಧಿಗೆ ಬಿಡುಗಡೆಯಾಗಿರುವ ರು. 13.94 ಕೋಟಿಯಲ್ಲಿ 16.8 ಕಿಮೀ., ಕೊಳಚೆ ನಿರ್ಮೂಲನ ಮಂಡಳಿಯಿಂದ ಎಂಪಿಪಿ ನಗರದ ಸಿಸಿ ರಸ್ತೆ ನಿರ್ಮಾಣಕ್ಕೆ ರು. 25 ಲಕ್ಷ, ಎಸ್ಸಿಪಿ ಯೋಜನೆಯಡಿ ರು. 68 ಲಕ್ಷ ವೆಚ್ಚದಲ್ಲಿ ಮೈಲಾರ- ತೊರಣಗಲ್ಲು ರಾಜ್ಯ ಹೆದ್ದಾರಿ ಅಭಿವೃದ್ಧಿ ಸೇರಿದಂತೆ ತಾಲೂಕಿನ ವಿವಿಧ ರಸ್ತೆಗಳ ಅಭಿವೃದ್ಧಿಗೆ ಒಟ್ಟು ರು. 70 ಕೋಟಿ ಹಣ ಬಿಡುಗಡೆಯಾಗಿದೆ ಎಂದರು.
ಕುಡಿವ ನೀರಿಗೆ ರು. 100 ಕೋಟಿ: ವಿವಿಧ ಗ್ರಾಮಗಳ ಸಂಯುಕ್ತ ಕುಡಿಯುವ ನೀರಿನ ಯೋಜನೆಗಳಿಗೆ ರು. 100 ಕೋಟಿ ಅನುದಾನ ಬಿಡುಗಡೆಯಾಗಿದ್ದು, ಶೀಘ್ರದಲ್ಲೆ ತುಂಗಭದ್ರಾ ನದಿಯಿಂದ ಶುದ್ಧ ಕುಡಿಯುವ ನೀರು ಸರಬರಾಜು ಯೋಜನೆಗಳು ಆರಂಭವಾಗಲಿವೆ. ಕೆಲ ಕಾಮಗಾರಿಗಳು ಹಂತದಲ್ಲಿವೆ, ಇನ್ನು ಕೆಲವು ಟೆಂಡರ್ ಹಂತದಲ್ಲಿದ್ದು, ಯೋಜನೆಗಳಿಗೆ ಏಜೆನ್ಸಿ ನಿಗದಿ ಮಾಡುವ ಕಾರ್ಯ ನಡೆದಿದೆ. ಬರುವ ಮಾರ್ಚ್ ವೇಳೆಗೆ ಎಲ್ಲ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ಸಂಬಂಧ ಪಟ್ಟ ಅಧಿಕಾರಿಗಳಿಗೆ ಸೂಚಿನೆ ನೀಡಿರುವುದಾಗಿ ತಿಳಿಸಿದರು.
ಮತ್ತೆರಡು ಕೆರೆ ಸೇರ್ಪಡೆ: ತಾಲೂಕಿನ 10 ಕೆರೆಗಳಿಗೆ ತುಂಗಭದ್ರಾ ನದಿಯಿಂದ ನೀರು ತುಂಬಿಸುವ ಯೋಜನೆ ಕಾಮಗಾರಿ ಆರಂಭಿಸುವ ಹಂತಕ್ಕೆ ಬಂದಿದೆ. ಯೋಜನೆಗೆ ಅಗತ್ಯವಿರುವ ರು. 104 ಕೋಟಿಗೆ ಸಿಎಂ ಸಿದ್ದರಾಮಯ್ಯ ಅನುಮೋದನೆ ನೀಡಿದ್ದಾರೆ. ಈ ಯೋಜನೆಯಲ್ಲಿ 10 ಕೆರೆಗಳಿಗೆ ಮಾತ್ರ ಅವಕಾಶವಿತ್ತು. ಇದರಲ್ಲಿ ತಾಲೂಕಿನ ನಾಗತಿಬಸಾಪುರ ಹಾಗೂ ಹ್ಯಾರಡ ಹೊಸ ಮಲಿಯಮ್ಮ ಕೆರೆಗಳನ್ನು ಹೆಚ್ಚುವರಿಯಾಗಿ ಸೇರ್ಪಡೆ ಮಾಡಿ 12 ಕೆರೆಗಳಿಗೆ ನೀರು ತುಂಬಿಸಲಾಗುವುದು ಎಂದರು.
ಮರಿಯಮ್ಮನಹಳ್ಳಿ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಐಗೋಳ ಚಿದಾನಂದ, ಎಂ. ಪರಮೇಶ್ವರಪ್ಪ, ಜಿಪಂ ಸದಸ್ಯ ಜಿ. ವಸಂತ, ಎಪಿಎಂಸಿ ಅಧ್ಯಕ್ಷ ವಾರದಗೌಸ್ ಮೊಹಿದ್ದೀನ್, ಯುವ ಕಾಂಗ್ರೆಸ್ ಅಧ್ಯಕ್ಷ ಹಣ್ಣಿ ಅಶೋಕ, ಲೋಕೋಪಯೋಗಿ ಇಇ ಯಮನೂರಪ್ಪ, ಎಇಇ ಮಹಾಂತೇಶಗೌಡ, ಪುರಸಭೆ ಸದಸ್ಯರಾದ ಕೋಡಿಹಳ್ಳಿ ಕೊಟ್ರೇಶ, ರಹಿಮಾನ್, ಸಂತೋಷ ಜೈನ್, ಮುದ್ದಿ ಗಿರಿರಾಜ, ಅರವಳ್ಳಿ ವೀರಣ್ಣ, ಹಕ್ಕಂಡಿ ಮಹದೇವ, ಅಟವಾಳಿಗಿ ಕೊಟ್ರೇಶ ಇತರರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

