ಬಳ್ಳಾರಿ

ಸಂಪ್ರದಾಯ ವಿಚಾರಗಳ ಮರು ಪರಿಶೀಲನೆ ಅಗತ್ಯ

Published On :

ಕನ್ನಡಪ್ರಭ ವಾರ್ತೆ, ಹೊಸಪೇಟೆ, ಜ. 22
ವ್ಯವಸ್ಥೆ ಅಮೂಲಾಗ್ರ ಬದಲಾವಣೆಗೆ ಒಳಪಡಬೇಕು. ಹಲವು ಸಾಂಪ್ರದಾಯಿಕ ವಿಚಾರಗಳನ್ನು ಮರು ಪರಿಶೀಲನೆ ಮಾಡುವ ಅಗತ್ಯವಿದೆ ಎಂದು ಹಿರಿಯ ನ್ಯಾಯವಾದಿ ಹೇಮಲತಾ ಮಹಿಷಿ ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ಹಂಪಿ ಕನ್ನಡ ವಿಶ್ವವಿದ್ಯಾಲಯದ ಪಂಪ ಸಭಾಂಗಣದಲ್ಲಿ ಬುಧವಾರ ನಡೆದ ಲಿಂಗ, ಲೈಂಗಿಕತೆ ಮತ್ತು ಕಾನೂನು ಕುರಿತ ರಾಷ್ಟ್ರೀಯ ವಿಚಾರ ಸಂಕಿರಣದ ಸಮಾರೋಪ ಭಾಷಣ ಮಾಡಿ ಮಾತನಾಡಿದರು.
ಲಿಂಗ ತಾರತಮ್ಯ, ಪುರುಷ ಪ್ರಧಾನ ಸಮಾಜ, ಅಧೀನಕ್ಕೊಳಪಟ್ಟ ಮಹಿಳೆಯರ ಸ್ಥಿತಿ ಇಂತಹ ಮೂಲಭೂತ ಪರಿಕಲ್ಪನೆಗಳ ಆಧಾರದ ಮೇಲೆ ಸಾಗಿದ್ದ ಮಹಿಳಾ ಚಳವಳಿ ಇಂದು ಸಂಕ್ರಮಣ ಕಾಲಘಟ್ಟದಲ್ಲಿದೆ. ಲೈಂಗಿಕ ಅಲ್ಪಸಂಖ್ಯಾತರು, ಲಿವಿಂಗ್ ರಿಲೇಶನ್ಶಿಪ್, ಮರ್ಯಾದಾ ಹತ್ಯೆ, ಲೈಂಗಿಕ ಕಾರ್ಯಕರ್ತೆಯರ ಸಮಸ್ಯೆಗಳು ಸೇರಿ ಇಂತಹ ಅನೇಕ ಸಂಗತಿಗಳನ್ನು ಚಳವಳಿ ಮೂಲಕ ಮುಖ್ಯವಾಹಿನಿಗೆ ತರಬೇಕಾಗಿದೆ ಎಂದು ಹೇಳಿದರು.
ಸಂವಿಧಾನದ 21ನೇ ಅನುಚ್ಛೇದ ಎಲ್ಲರೂ ಗೌರವ ಘನತೆಯಿಂದ ಬದುಕುವ ಅವಕಾಶ ನೀಡಿದೆ. ಸಲಿಂಗ ಕಾಮಿಗಳಿಗೆ ಅಮೆರಿಕ ಇತ್ತೀಚಿಗೆ ಮಾನ್ಯತೆ ನೀಡಿದೆ. ಆದರೆ ನಮ್ಮ ಸಮಾಜದಲ್ಲಿ ಅದಕ್ಕೆ ಕಾನೂನಿನ ಬೆಂಬಲ, ಜನಜಾಗೃತಿ, ಸಮಾಜದ ಒಪ್ಪಿಗೆ ಏಕಕಾಲದಲ್ಲಿ ಬೇಕಾಗುತ್ತದೆ ಎಂದರು.
ಹಂಪಿ ಕನ್ನಡ ವಿಶ್ವವಿದ್ಯಾಲಯದ ಅಧ್ಯಯನಾಂಗದ ನಿರ್ದೇಶಕ ಡಾ. ಅಶೋಕಕುಮಾರ ರಂಜೇರ ಅಧ್ಯಕ್ಷತೆ ವಹಿಸಿ ಮಾತನಾಡಿ, ಲಿಂಗತ್ವವನ್ನು ಜೈವಿಕವೆ? ಸಾಮಾಜಿಕವೆ? ಮಾನಸಿಕವೆ ಎಂದು ಇನ್ನು ನಿರ್ಧರಿಸಲಾಗಿಲ್ಲ. ನಮ್ಮ ಸಂವಿಧಾನ, ಆಡಳಿತದ ಪರಿಭಾಷೆ, ಕಾನೂನುಗಳು ಈ ಎಲ್ಲವುಗಳಲ್ಲೂ ಮಹಿಳೆ ಆಧಾರಿತ ಪರಿಭಾಷೆಗಳು ಅತ್ಯಂತ ಕಡಿಮೆ. 3ನೇ ಲಿಂಗ ಕುರಿತು ಚಳವಳಿ ಮೂಲಕ ಅರಿವು, ಸಂಶೋಧನೆ, ಮಾಧ್ಯಮಗಳ ಮೂಲಕ ಪರಿವರ್ತನೆ ಸಾಧ್ಯವಾಗಬಹುದು ಎಂದು ತಿಳಿಸಿದರು.
ಪಯಣ ವೇದಿಕೆಯ ಚಾಂದಿನಿ, ಹಿರಿಯ ರಂಗ ಕಲಾವಿದೆ ಡಾ.ಕೆ. ನಾಗರತ್ನಮ್ಮ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ಮಂಜಪ್ಪ ಜೋಗತಿ ಇವರು ಕುಟುಂಬ, ಸಮಾಜದಿಂದ ಅನುಭವಿಸಿದ ತಿರಸ್ಕಾರದ ಕುರಿತು ನೋವು ನಲಿವುಗಳನ್ನು ಹಂಚಿಕೊಂಡರು. ಅಕೈ ಪದ್ಮಶಾಲಿ, ಅಂಜಲಿ ರಾಮಣ್ಣ, ಶಾಂತಾ, ಡಾ. ನಿಖಿಲಾ, ಡಾ.ಡಿ. ಮೀನಾಕ್ಷಿ ಸೇರಿದಂತೆ ಇತರರು ಸಭೆಯಲ್ಲಿ ಭಾಗವಹಿಸಿದ್ದರು. ಭೀಮೇಶ್ ನಿರೂಪಿಸಿ, ಸ್ವಾಗತಿಸಿದರು. ವಿಭಾಗದ ಮುಖ್ಯಸ್ಥೆ ಡಾ. ಶೈಲಜಾ ಹಿರೇಮಠ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.