ರೈತರ ಅಹೋರಾತ್ರಿ ಧರಣಿ
ಬಳ್ಳಾರಿ: ಜಿಲ್ಲೆಯ ಭುಜಂಗನಗರದ ರೈತರಿಗೆ ರು. 1.24 ಕೋಟಿ ನಷ್ಟ ಪರಿಹಾರ ಸೇರಿದಂತೆ ಸಂಡೂರು ತಾಲೂಕಿನ ಹಾಗೂ ವಿವಿಧ ಮೂಲ ಸೌಲಭ್ಯಗಳಿಗೆ ಒತ್ತಾಯಿಸಿ ಜನಸಂಗ್ರಾಮ ಪರಿಷತ್, ಸಂಡೂರು ತಾಲೂಕು ನಾಗರಿಕ ಹಿತರಕ್ಷಣಾ ಸಮಿತಿ, ಪ್ರಗತಿಪರ ಸಂಘಟನೆಗಳು ಸಂಡೂರಿನಿಂದ ಗುರುವಾರ ಟ್ರ್ಯಾಕ್ಟರ್ನಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ, ಜಿಲ್ಲಾಧಿಕಾರಿ ಕಚೇರಿ ಮುಂದೆ ಅಹೋರಾತ್ರಿ ಧರಣಿ ಸತ್ಯಾಗ್ರಹ ಆರಂಭಿಸಿದ್ದಾರೆ.
ಸಂಡೂರು ತಾಲೂಕಿನ ಭುಜಂಗನಗರ, ತಾಳೂರು, ವಡ್ಡು, ಜೋಗು, ಬಳ್ಳಾರಿ ತಾಲೂಕಿನ ಚಾಗನೂರು, ಸಿರಿವಾರ, ಲಿಂಗದೇವನಹಳ್ಳಿ, ತೆಗ್ಗಿನ ಬೂದಿಹಾಳ್ 40ಕ್ಕೂ ಹೆಚ್ಚು ಟ್ರ್ಯಾಕ್ಟರ್ಗಳ ಮೂಲಕ ನೂರಾರು ರೈತರು ಸಂಡೂರಿನಿಂದ ಬಳ್ಳಾರಿಯವರಿಗೆ ಟ್ರ್ಯಾಕ್ಟರ್ನಲ್ಲಿ ಜಾಥಾದಲ್ಲಿ ಆಗಮಿಸಿ, ಜಿಲ್ಲಾಧಿಕಾರಿಗಳ ಕಚೇರಿಯನ್ನು ತಲುಪಿ ಮೂರು ದಿನಗಳ ಅಹೋರಾತ್ರಿ ಧರಣಿಯನ್ನು ಮುಂದುವರಿಸಿದ್ದಾರೆ.
ಪ್ರತಿಭಟನೆಯ ನೇತೃತ್ವವಹಿಸಿದ್ದ ರೈತ ಹೋರಾಟಗಾರ ಚಾಗನೂರು ಮಲ್ಲಿಕಾರ್ಜುನ ರೆಡ್ಡಿ ಮಾತನಾಡಿ, ಭುಜಂಗನಗರ ಚೆಕ್ ಡ್ಯಾಂ 2010ರಲ್ಲಿ ಒಡೆದು ಅಲ್ಲಿನ 450 ಎಕರೆ ಪ್ರದೇಶ ಹಾನಿಯಾಗಿ, 180ಕ್ಕೂ ಹೆಚ್ಚು ರೈತರು ತೊಂದರೆ ಪಡುವಂತಾಗಿದೆ. ಎನ್ಎಂಡಿಸಿಯ ತ್ಯಾಜ್ಯದಿಂದಾಗಿ ಅಲ್ಲಿನ ಫಲವತ್ತಾದ ಭೂಮಿ ಹಾನಿಯಾಗಿದೆ. ತಹಸೀಲ್ದಾರ್ ನೇತೃತ್ವದ ಸಮಿತಿಯು ಪರಿಶೀಲಿಸಿ, ವರದಿ ತಯಾರಿಸಿ ಕೊಟ್ಟ ಹಿನ್ನೆಲೆಯಲ್ಲಿ ಅಂದಿನ ಮುಖ್ಯಮಂತ್ರಿ ಸದಾನಂದಗೌಡ ಅವರು ಅಲ್ಲಿನ ರೈತರಿಗೆ ನಷ್ಟ ಪರಿಹಾರವಾಗಿ ರು. 1.24 ಕೋಟಿ ಘೋಷಣೆ ಮಾಡಿದ್ದಾರೆ. ಆದರೆ ಜಿಲ್ಲಾಧಿಕಾರಿಗಳು ಪರಿಹಾರ ಹಣವನ್ನು ನೀಡದೆ, ಕೇವಲ ರು. 32 ಲಕ್ಷ ನೀಡಲಾಗುತ್ತದೆ ಎಂದು ಹೇಳುತ್ತಿದ್ದಾರೆ ಎಂದು ಎನ್ಎಂಡಿಸಿ ಹಾಗೂ ಜಿಲ್ಲಾಧಿಕಾರಿಗಳ ಧೋರಣೆಯನ್ನು ತೀವ್ರವಾಗಿ ಖಂಡಿಸಿದರು.
ಸಂಡೂರು ಹಿತರಕ್ಷಣಾ ವೇದಿಕೆಯ ನ್ಯಾಯವಾದಿಗಳು ಶಿವಕುಮಾರ್, ಪಾರ್ವತಿ ಮಾತನಾಡಿ, ಗಣಿಗಾರಿಕೆಯಿಂದಾಗಿ ಕಮ್ಮತ್ತೂರು ಗ್ರಾಮದಲ್ಲಿ ಮೂಲಭೂತ ಸೌಲಭ್ಯಗಳು ಮರೀಚಿಕೆಯಾಗಿದೆ. ರಸ್ತೆಗಳು ಹದಗೆಟ್ಟು ಹೋಗಿದೆ, ಅಲ್ಲಿನ ಅದಿರನ್ನು ಹೊರ ತೆಗೆದು ಕೋಟ್ಯಂತರ ಸಂಪತ್ತುಗಳಿಸಿದ್ದಾರೆ. ಆದರೆ, ಅಲ್ಲಿನ ಜನರಿಗೆ ಕನಿಷ್ಠ ಮೂಲ ಸೌಲಭ್ಯಗಳು ಇಲ್ಲವಾಗಿವೆ. ಕಾರ್ಮಿಕರ ಸಚಿವರು ಅಧಿಕಾರ ಸ್ವೀಕರಿಸಿ, 10 ತಿಂಗಳು ಕಳೆದರೂ, ಇಲ್ಲಿನ ಕಾರ್ಮಿಕರ ಸಮಸ್ಯೆಗಳನ್ನು ಆಲಿಸುವ ಕೆಲಸ ಮಾಡಲಿಲ್ಲ ಎಂದು ತಿಳಿಸಿದರು. ಪ್ರತಿಭಟನೆಯಲ್ಲಿ ನೂರಾರು ರೈತರು ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

