ಸಿದ್ಧರಾಮೇಶ್ವರ ವಿಚಾರಧಾರೆ ಪ್ರಸ್ತುತ
ಬಳ್ಳಾರಿ: ಶಿವಯೋಗಿ ಶ್ರೀ ಸಿದ್ಧರಾಮೇಶ್ವರರ ವಿಚಾರಧಾರೆಗಳು ಸಾರ್ವಕಾಲಿಕ ಸತ್ಯ. ನಾವೆಲ್ಲ ಅವರ ವಿಚಾರಧಾರೆಗಳನ್ನು ಅನುಸರಿಸಿ ಸನ್ಮಾರ್ಗದಲ್ಲಿ ನಡೆಯಬೇಕು ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶೋಭಾ ಬೆಂಡಿಗೇರಿ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಆಶ್ರಯದಲ್ಲಿ ನಗರದ ಡಾ. ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಗುರುವಾರ ಏರ್ಪಡಿಸಿದ್ದ ಶಿವಯೋಗಿ ಶ್ರೀ ಸಿದ್ಧರಾಮೇಶ್ವರರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸಿದ್ಧರಾಮೇಶ್ವರರು 12ನೇ ಶತಮಾನದ ಶರಣ ಶ್ರೇಷ್ಠರು, ವಚನಕಾರರೂ ಆಗಿದ್ದರು. ಉನ್ನತ ಸಾಧನೆ ಹಾಗೂ ಆಧ್ಯಾತ್ಮಿಕ ನಿಲುವು ಹೊಂದಿದ್ದ ಇವರು ಎಲ್ಲರಿಗೂ ಆದರ್ಶಪ್ರಾಯರಾಗಿದ್ದರು. ಇವರ ವಚನಗಳನ್ನು ತಿಳಿದರಷ್ಟೆ ಸಾಲದು, ಪರಿಪಾಲಿಸಬೇಕು ಎಂದರು.
ಉಪನ್ಯಾಸ ನೀಡಿದ ಸರ್ಕಾರಿ ಪಪೂ ಕಾಲೇಜು ಕನ್ನಡ ಉಪನ್ಯಾಸಕಿ ಕೆ.ವಿ. ಜಯಲಕ್ಷ್ಮೀ, 841ನೇ ಜಯಂತಿ ಇದಾಗಿದ್ದು, ಈಗಿನ ಮಹಾರಾಷ್ಟ್ರದ ಸೊಲ್ಲಾಪುರ ಶ್ರೀ ಸಿದ್ಧರಾಮೇಶ್ವರರ ಹುಟ್ಟೂರು. ದನ ಕಾಯುತ್ತಿದ್ದ ಇವರು, ಶಿವನ ಅನುಗ್ರಹ ಪಡೆದು ತಮ್ಮನ್ನು ತಾವು ಶಿವಸ್ವರೂಪಿ ಎಂದು ಭಾವಿಸಿದ್ದರು ಎಂದು ಕವಿ ರಾಘವಾಂಕನು ತನ್ನ ಸಿದ್ಧರಾಮಚರಿತೆಯಲ್ಲಿ ಹೇಳಿದ್ದಾನೆ. ಅಲ್ಲಮ ಪ್ರಭುಗಳಿಂದ ಜ್ಞಾನೋದಯ ಪಡೆದ ಸಿದ್ಧರಾಮರು, ಬಸವಣ್ಣನವರಿಂದ ಲಿಂಗದೀಕ್ಷೆ ಪಡೆದು ಕಪಿಲ ಸಿದ್ಧರಾಮ ಎಂಬ ಅಂಕಿತದಲ್ಲಿ ಅನೇಕ ವಚನಗಳನ್ನು ರಚಿಸಿದ್ದಾರೆ. ತಮ್ಮ ವಚನಗಳಲ್ಲಿ ಭಕ್ತಿ ಮತ್ತು ಕಾರ್ಯದ ಬಗ್ಗೆ ಚಿತ್ರಿಸಿದ್ದು ಅಧ್ಯಾತ್ಮಕ್ಕೆ ಹೆಚ್ಚು ಒತ್ತು ನೀಡಿದ್ದಾರೆ ಎಂದು ವಿವರಿಸಿದರು.
ಅಖಿಲ ಕರ್ನಾಟಕ ಭೋವಿ ಯುವ ವೇದಿಕೆ ರಾಜ್ಯಾಧ್ಯಕ್ಷ ವೈ. ಕೊಟ್ರೇಶ್ ಮಾತನಾಡಿ, ಶ್ರೀ ಸಿದ್ಧರಾಮೇಶ್ವರ ಜಯಂತಿ ಸಾರ್ವತ್ರಿಕ ಆಚರಿಸಲು ಸರ್ಕಾರ ಅನುವು ಮಾಡಿಕೊಟ್ಟಿದೆ. ಭೋವಿ ಸಮುದಾಯದ ಅಭಿವೃದ್ಧಿಗೆ ಎಲ್ಲರ ಸಹಕಾರ ಕೋರಿದರು.
ಜಿಲ್ಲಾ ಭೋವಿ ವಡ್ಡರ ಸಂಘದ ಅಧ್ಯಕ್ಷ ಮಿಥಿಲೇಶ್ ಮಾತನಾಡಿದರು. ಕಾರ್ಯಕ್ರಮದ ಅಂಗವಾಗಿ ಏರ್ಪಡಿಸಿದ್ದ ವಚನ ಗಾಯನದಲ್ಲಿ ಕವಿತಾ ವಸಂತಕುಮಾರ್ ಮತ್ತು ತಂಡ ವಚನಗಳನ್ನು ಅರ್ಥಪೂರ್ಣವಾಗಿ ಹಾಡಿದರು.
ಕಾರ್ಯಕ್ರಮದಲ್ಲಿ ತಾಪಂ ಅಧ್ಯಕ್ಷ ವಿ. ಗಾದಿಲಿಂಗಪ್ಪ, ಜಿಪಂ ಉಪ ಕಾರ್ಯದರ್ಶಿ ನಂದೀಶ್, ಮಹಾನಗರ ಪಾಲಿಕೆ ಸದಸ್ಯ ಕೆ. ನಾಗರಾಜ್, ಬೆಣಕಲ್ ಬಸವರಾಜ್, ಮಾಜಿ ಉಪ ಮೇಯರ್ ತೂರ್ಪು ಯಲ್ಲಪ್ಪ, ಭೋವಿ ಸಂಘದ ಮುಖಂಡ ರಾಮಚಂದ್ರಪ್ಪ, ಸಮಾಜದ ಬಂಧುಗಳು, ಅಧಿಕಾರಿಗಳು ಇದ್ದರು. ಎಡಿಸಿ ಟಿ. ವೆಂಕಟೇಶ್ ಸ್ವಾಗತಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಿ. ನಾಗರಾಜ್ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

