ಮಾಲ್ವಿಡ್ಯಾಂ ವಿಷಯದಲ್ಲಿ ರಾಜಕೀಯ ಸಹಿಸಲ್ಲ
ಹಗರಿಬೊಮ್ಮನಹಳ್ಳಿ: ಮಾಲ್ವಿ ಡ್ಯಾಂಗೆ ಶಾಶ್ವತ ನೀರೊದಗಿಸುವ ಯೋಜನೆ ಜಾರಿಗೆ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಕ್ಷೇತ್ರದ ಶಾಸಕರು ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಅದನ್ನು ಬಿಟ್ಟು ಈ ವಿಚಾರದಲ್ಲಿ ರಾಜಕೀಯ ಮಾಡಿದ್ದೇ ಆದರೆ ಈ ಕ್ಷೇತ್ರದ ಜನತೆ ನಿಮ್ಮನ್ನು ಕ್ಷಮಿಸಲಾರರು ಎಂದು ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಜೆ.ಎಂ. ವೀರಸಂಗಯ್ಯ ಎಚ್ಚರಿಸಿದರು.
ಶುಕ್ರವಾರ ಮಧ್ಯಾಹ್ನ ಹಗರಿಬೊಮ್ಮನಹಳ್ಳಿ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಮಾಲ್ವಿ ಜಲಾಶಯಕ್ಕೆ ಶಾಶ್ವತ ನೀರು ತುಂಬಿಸಬೇಕೆಂಬ ಹೋರಾಟಕ್ಕೆ 30 ವರ್ಷಗಳಷ್ಟು ಸುದೀರ್ಘ ಇತಿಹಾಸವಿದ್ದು, ಡ್ಯಾಂಗೆ ನೀರು ತುಂಬಿಸಬೇಕೆಂಬುವುದು ಕೇವಲ ಹೋರಾಟಗಾರರಷ್ಟೆ ಅಲ್ಲದೆ ಈ ಕ್ಷೇತ್ರದ ಸಮಸ್ತ ಸಾರ್ವಜನಿಕರ ಹೆಬ್ಬಯಕೆಯೂ ಹೌದು. ಇಂತಹ ವಿಚಾರದಲ್ಲಿ ರಾಜಕೀಯ ಮಾಡುವುದನ್ನು ಬಿಟ್ಟು ಪ್ರಾಮಾಣಿಕವಾಗಿ ನೀರು ತರುವ ಕೆಲಸ ಮಾಡಿದರೆ ಮಂತ್ರಿ, ಶಾಸಕರನ್ನು ಈ ಕ್ಷೇತ್ರದ ಜನತೆ ಗೌರವಿಸುತ್ತಾರೆ ಎಂದರು.
ಹುಸಿ ಹೋರಾಟಗಾರರು: 30 ವರ್ಷಗಳಿಂದಲೂ ಮಾಲ್ವಿಡ್ಯಾಂಗೆ ಶಾಶ್ವತ ನೀರೊದಗಿಸಬೇಕೆಂಬ ಬೇಡಿಕೆ ಇಟ್ಟುಕೊಂಡು ಈ ಭಾಗದಲ್ಲಿ ಸುದೀರ್ಘವಾದ ಚಳವಳಿ ನಡೆಸಿರುವೆ. ಇತ್ತೀಚಿಗೆ ಕೆಲ ಹುಸಿ ಹೋರಾಟಗಾರು ಸೃಷ್ಟಿಯಾಗಿ, ನಮ್ಮಿಂದಲೇ ಇಂದು ಮಾಲ್ವಿಡ್ಯಾಂಗೆ ನೀರು ಬರುತ್ತಿದೆ ಎಂಬಂತೆ ಪತ್ರಿಕಾ ಹೇಳಿಕೆ ನೀಡುತ್ತಿದ್ದಾರೆ. ಇಂತಹ ಪತ್ರಿಕಾ ಹೇಳಿಕೆ ವೀರರ ಮಾತಿಗೆ ಜನತೆ ಸೊಪ್ಪುಹಾಕಿ ದಾರಿ ತಪ್ಪಬಾರದು ಎಂದು ವೀರಸಂಗಯ್ಯ ಮನವಿ ಮಾಡಿದರು.
ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಾಲ್ಕು ವರ್ಷ ಸತತ ಬರಗಾಲ ಹಾಗೂ ಒಂದು ವರ್ಷ ನೆರೆ ಹಾವಳಿ, ಈಗ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಮತ್ತೆ ಬರಗಾಲ ಎದುರಾಗಿದೆ.
ರಾಜ್ಯದ ರೈತ ಕುಟುಂಬಗಳು ಸಂಪೂರ್ಣ ವಿನಾಶದ ಅಂಚಿಗೆ ಬಂದು ನಿಲ್ಲುವಂತಾಗಿದೆ. ಒಂದು ವರ್ಷ ಬರ ಬಿದ್ದರೆ ಅದರಿಂದ ಸುಧಾರಿಸಿಕೊಳ್ಳಲು ಮತ್ತೆ ಮೂರು ವರ್ಷಗಳೇ ಬೇಕು. ಹೀಗಾಗಿ, ಈ ಬಾರಿಯ ಕೇಂದ್ರ, ರಾಜ್ಯ ಬಜೆಟ್‌ನಲ್ಲಿ ರೈತರ ಎಲ್ಲ ರೀತಿಯ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು ಎಂದು ಆಗ್ರಹಿಸಿದರು. ವೈಜ್ಞಾನಿಕ ಬೆಲೆ, ಮಾರಾಟ ವ್ಯವಸ್ಥೆ ಅಗುವವರೆಗೂ ಸಾಲ ಮನ್ನಾ ಮಾಡುವುದು ಅನಿವಾರ್ಯ ಎಂದರು.
ರೈತ ಸಂಘದ ತಾಲೂಕಾಧ್ಯಕ್ಷ ಜಿ. ಗೋಣಿಬಸಪ್ಪ, ಹಿರಿಯ ಮುಖಂಡರಾದ ಸಿದ್ದರೆಡ್ಡಿ, ಸೂರ್ಯಬಾಬು, ಖಜಾಂಚಿ ಕೆ. ಗೋವಿಂದಪ್ಪ, ಅರವಳ್ಳಿ ನಾಗರಾಜ, ಸತೀಶ್, ಹಸಿರು ಸೇನೆ ಮುಖಂಡ ಮೇಗಳಗೇರಿ ಮಲ್ಲಿಕಾರ್ಜುನ, ರಾಜಸಾಬ್, ಮರಿಬಸಪ್ಪ ಗೋಷ್ಠಿಯಲ್ಲಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

