ನಕಲಿ ಬಸ್ ಪಾಸ್: ತನಿಖೆ ಚುರುಕು
ಕೊಟ್ಟೂರು: ನಕಲಿ ಬಸ್ ಪಾಸ್ ತಯಾರಿಕೆಗೆ ಸಂಬಂಧಿಸಿದಂತೆ ಇಲ್ಲಿನ ಪೊಲೀಸರು ತನಿಖೆ ಚುರುಕುಗೊಳಿಸಿದ್ದು, ಸೋಮವಾರ ಕಾವ್ಯಾಂಜಲಿ ಕಂಪ್ಯೂಟರ್ಸ್ ಕೇಂದ್ರದಲ್ಲಿನ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಕಾವ್ಯಾಂಜಲಿ ಕಂಪ್ಯೂಟರ್ಸ್ ಮಾಲೀಕ ಕಡ್ಲಿ ಸ್ವರೂಪಾನಂದ ಬಗೆಗಿನ ಮತ್ತಷ್ಟು ಮಾಹಿತಿ ಕಲೆ ಹಾಕುವ ಕಾರ್ಯಕ್ಕೆ ಕೊಟ್ಟೂರು ಪೊಲೀಸ್ ಇನ್‌ಸ್ಪೆಕ್ಟರ್ ಗುರುರಾಜ್ ಮೈಲಾರ ನಿರತರಾಗಿದ್ದಾರೆ.
ಪ್ರಕರಣ ದಾಖಲಾದ ದಿನದಿಂದ ಸ್ವರೂಪಾನಂದ ತಲೆ ಮರೆಸಿಕೊಂಡಿದ್ದಾನೆ. ಸೋಮವಾರ ಪೊಲೀಸರು ಕಂಪ್ಯೂಟರ್ ಕೇಂದ್ರಕ್ಕೆ ಭೇಟಿ ನೀಡಿ ಸಮಗ್ರ ಪರಿಶೀಲನೆ ನಡೆಸಿದರು.
ನಕಲಿ ಬಸ್ ಪಾಸ್, ಪಡಿತರ ಚೀಟಿ, ಜಾತಿ ಆದಾಯ ಪ್ರಮಾಣ ಪತ್ರ ಮತ್ತು ಕೆಲ ಸರ್ಕಾರಿ ದಾಖಲೆಗಳನ್ನು ಸೃಷ್ಟಿಸಲಾಗುತ್ತಿತ್ತು ಎಂಬುದಕ್ಕೆ ಸಾಕ್ಷಿಯಾಗಿದ್ದ ಕೆಲ ದಾಖಲೆಗಳನ್ನು ಸಬ್ ಇನ್‌ಸ್ಪೆಕ್ಟರ್ ಸಂಗ್ರಹಿಸಿದರು.
ಎರಡು ಕಂಪ್ಯೂಟರ್, ಕಲರ್ ಪ್ರೀಂಟರ್, ಲ್ಯಾಮಿನೇಟಿಂಗ್ ಮಷಿನ್ ಮತ್ತಿತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ವಕೀಲರಾದ ಕೋರಿ ಚನ್ನಬಸಪ್ಪ, ಹೊ.ಮ. ಪಂಡಿತಾರಾಧ್ಯ, ಬಸ್ ನಿಲ್ದಾಣದ ನಿಯಂತ್ರಕ ಗುರುಬಸಯ್ಯ, ಜೆ. ಸಿದ್ದೇಶ, ಶಾಂತವೀರಪ್ಪ ಮತ್ತಿತರರು ಸಹ ಇದ್ದರು.
ವಕೀಲನಾಗಿದ್ದ ಸ್ವರೂಪಾನಂದ ತನ್ನ ಜೀವನ ನಿರ್ವಹಣೆಗೆಂದು ಕಾವ್ಯಾಂಜಲಿ ಕಂಪ್ಯೂಟರ್ಸ್ ನಡೆಸುತ್ತಿದ್ದ. ಕಂದಾಯ ಇಲಾಖೆ ಆರಂಭಗೊಳಿಸಿದ ಸಕಾಲ ಯೋಜನೆಯ ಸೇವೆಗೆಂದು ಕೆಲ ದಿನಗಳ ವರೆಗೆ ನಿಯುಕ್ತಿಗೊಂಡಿದ್ದ. ಈ ಸಂದರ್ಭದಲ್ಲಿ ಕಂದಾಯ ಇಲಾಖೆಯಲ್ಲಿನ ದಾಖಲೆಗಳ ಬಗ್ಗೆ ಮಾಹಿತಿ ಕಲೆಹಾಕಿದ್ದ ಎಂದು ಈತನ ಹಿನ್ನೆಲೆ ಬಗ್ಗೆ ಕಂದಾಯ ಇಲಾಖೆ ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ.
ಸಂಭ್ರಮದ ಗಂಗೆ ಸ್ಥಳ ಮಹೋತ್ಸವ
ಕಂಪ್ಲಿ: ಕಂಪ್ಲಿ-ಕೋಟೆಯ ಮೀನುಗಾರರ ಕುಟುಂಬದ ಸದಸ್ಯರು ಶ್ರೀ ಕಾಳಿಕಾದೇವಿ ಗಂಗೆ ಸ್ಥಳ ಮಹೋತ್ಸವವನ್ನು ಮಂಗಳವಾರ ಸಡಗರ ಸಂಭ್ರಮದಿಂದ ನೆರವೇರಿಸಿದರು.
ಶ್ರೀ ಕಾಳಿಕಾದೇವಿಯ ಗಂಗೆ ಸ್ಥಳ ಪೂಜೆಯನ್ನು ತುಂಗಭದ್ರಾ ನದಿ ತಟದಲ್ಲಿ ನೆರವೇರಿಸಲಾಯಿತು.
ನಂತರ ಅರ್ಚಕರು ಕಾಳಿಕಾದೇವಿ ಕುಂಭವನ್ನು ಸುಂಕ್ಲಮ್ಮದೇವಿ ದೇವಸ್ಥಾನದ ವರೆಗೆ ಮೆರವಣಿಗೆಯಲ್ಲಿ ಶ್ರದ್ಧೆ ಭಕ್ತಿಗಳಿಂದ ಹೊತ್ತು ತಂದರು.
ಹರಕೆ ಹೊತ್ತ 12 ಜನರಲ್ಲಿ ಈಶ್ವರ ಎನ್ನುವ ಸದ್ಭಕ್ತ ಒಂದೊಂದು ನಿಂಬೆ ಹಣ್ಣನ್ನು ಸೂಜಿ ದಾರದಲ್ಲಿ ಪೋಣಿಸಿ ತನ್ನ ಎದೆ ಹಾಗೂ ಬೆನ್ನಿಗೆ 51 ಕಡೆ ಸುಚ್ಚಿಸಿಕೊಂಡದ್ದು, ಒಬ್ಬ 1 ಆಟೋವನ್ನು, 3 ಜನರು ತಲಾ ಒಂದು ಕಾರನ್ನು, 6 ಜನರು ತಲಾ ಒಂದು ಗುಂಡನ್ನು ತಮ್ಮ ಬೆನ್ನುಗಳಿಗೆ ಅಲಗಿ(ಕೊಂಡಿ)ನಿಂದ ಸುಚ್ಚಿಸಿಕೊಂಡು, ಹಗ್ಗ ಕಟ್ಟಿಕೊಂಡು, ತಮ್ಮ ಕೆನ್ನೆಗಳಿಗೆ 9 ರಿಂದ 11 ಅಡಿ ಉದ್ದದ ಒಂದೊಂದು ಅಸ್ತ್ರ(ಮುರುಗಾಸ್ತ್ರ, ತ್ರಿಶೂಲಾಸ್ತ್ರ)ಗಳನ್ನು ಹಾಕಿಕೊಂಡು, ಸುಮಾರು 2-3 ಕಿ.ಮೀ. ದೂರದವರೆಗೆ ಎಳೆದು ಭಕ್ತಿಯ ಪರಾಕಾಷ್ಟೆ ಮೆರೆದರು.
ಗಂಗೆ ಸ್ಥಳ ಮಹೋತ್ಸವದಲ್ಲಿ ಕಳಸ, ಕನ್ನಡಿ, ಹೂವು, ಹಣ್ಣು, ಕೊಬ್ಬರಿ ಬಟ್ಟಲು, ಬಳೆ ಅರಿಷಿಣ, ಕುಂಕುಮ, ನಿಂಬೆಹಣ್ಣು, ತೆಂಗಿನಕಾಯಿ ಹಿಡಿದ ಮೀನುಗಾರ ಕುಟುಂಬದ ಸುಮಂಗಲೆಯರು, ಮಂಗಳವಾದ್ಯದವರು ಹಾಗೂ ಮೀನುಗಾರ ಕುಟುಂಬದ ಮುಖಂಡರು, ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಗಂಗೆ ಸ್ಥಳ ಮಹೋತ್ಸವ ನಡೆಸಿದವರು ಮೂಲತಃ ತಮಿಳು ಭಾಷಿಕರಾಗಿದ್ದರಿಂದ ಅವರೆಲ್ಲರು ಕಾಳಿಕಾದೇವಿಗೆ ತಮಿಳಿನಲ್ಲಿಯೆ ಹರಕೆಗಳನ್ನು ತೀರಿಸಿದ್ದು ವಿಶೇಷವಾಗಿತ್ತು.
ಪ್ರೊ. ಸಿಎನ್‌ಆರ್ ರಾವ್ ಯುವಕರಿಗೆ ಸ್ಫೂರ್ತಿ: ಮಂಜುನಾಥ್
ಬಳ್ಳಾರಿ: ಕಠಿಣ ಪರಿಶ್ರಮ, ಸಮರ್ಪಣಾ ಮನೋಭಾವವಿದ್ದಲ್ಲಿ ಏನು ಬೇಕಾದರೂ ಸಾಧಿಸಬಹುದು ಎನ್ನುವುದಕ್ಕೆ ಭಾರತ ರತ್ನ ಪ್ರೊ. ಸಿಎನ್‌ಆರ್ ರಾವ್ ಅವರೇ ಸಾಕ್ಷಿಯಾಗಿದ್ದು, ಯುವ ಸಮೂಹಕ್ಕೆ ಪ್ರೇರಕ ಶಕ್ತಿಯಾಗಿದ್ದಾರೆಂದು ಮೇಡಂ ಕ್ಯೂರಿ ವಿಜ್ಞಾನ ಅಕಾಡೆಮಿ ಅಧ್ಯಕ್ಷ ಎಸ್. ಮಂಜುನಾಥ ಅಭಿಪ್ರಾಯಪಟ್ಟರು.
ನಗರದ ಶೆಟ್ರ ಗುರುಶಾಂತಪ್ಪ ಪಪೂ ಕಾಲೇಜಿನಲ್ಲಿ ಅಕಾಡೆಮಿಯಿಂದ ಸೋಮವಾರ ಏರ್ಪಡಿಸಿದ್ದ ಪ್ರೊ. ಸಿಎನ್‌ಆರ್ ರಾವ್‌ರ 80ನೇ ಜನ್ಮ ದಿನಾಚರಣೆಯಲ್ಲಿ ಅವರು ಮಾತನಾಡಿದರು.
ಪ್ರೊ. ಸಿಎನ್‌ಆರ್ ರಾವ್ ಅವರ ನಿರಂತರ ಅಧ್ಯಯನ ಸ್ವಭಾವ ಮತ್ತು ಸಮಯಪ್ರಜ್ಞೆ ಇಂದಿನ ವಿದ್ಯಾರ್ಥಿಗಳಿಗೆ ಮಾದರಿಯಾಗಿದೆ. ಅಂತೆಯೇ ಈ ಮಹಾನ್ ವಿಜ್ಞಾನಿಯ ಹಾದಿಯಲ್ಲಿ ನಾವೆಲ್ಲರೂ ಸಾಗಿ ಭಾರತೀಯ ವಿಜ್ಞಾನ ಕ್ಷೇತ್ರಕ್ಕೆ ಅಲ್ಪ ಪ್ರಮಾಣದಲ್ಲಾದರೂ ಸೇವೆ ಸಲ್ಲಿಸೋಣ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಪ್ರಾಚಾಯರಾದ ಸುಜಾತಾ ಬೆಳ್ಳಿಗುಂಡಿ ಕಾರ್ಯಕ್ರಮ ಉದ್ಘಾಟಿಸಿದರು. ಕನ್ನಡ ಉಪನ್ಯಾಸಕಿ ಎಂ. ಇಂದಿರಾ ಅಧ್ಯಕ್ಷತೆ ವಹಿಸಿದ್ದರು. ಈ ವೇಳೆ ಕಾಲೇಜಿನ ಪಂಚಾಕ್ಷರಪ್ಪ, ವಿಜಯ್‌ಕುಮಾರ್, ಅಕಾಡೆಮಿಯ ಪಿ. ರಘು, ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಅಕಾಡೆಮಿಯ ಎಸ್. ಅರ್ಜುನ್ ಸ್ವಾಗತಿಸಿದರು. ಉಪಾಧ್ಯಕ್ಷೆ ಡಾ. ಬಿ.ಎಂ. ಶಿವಶಾಂತಲ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

