ಬಳ್ಳಾರಿ

ಅನಧಿಕೃತ ವಾಹನ ಸಂಚಾರ ನಿರ್ಬಂಧಿಸಿ

Published On :

ಕನ್ನಡಪ್ರಭ ವಾರ್ತೆ, ಬಳ್ಳಾರಿ, ಜು. 14
ಜಿಲ್ಲೆಯಲ್ಲಿ ಪರವಾನಿಗೆ ಇಲ್ಲದೇ ಸಂಚರಿಸುತ್ತಿರುವ ಖಾಸಗಿ ವಾಹನಗಳನ್ನು ನಿಯಂತ್ರಿಸುವಂತೆ ಒತ್ತಾಯಿಸಿ ಕೆಎಸ್ಸಾರ್ಟಿಸಿ ಸಿಬ್ಬಂದಿ ಮತ್ತು ಕಾರ್ಮಿಕ ಸಂಘದ ನೇತೃತ್ವದಲ್ಲಿ ಸಾರಿಗೆ ಸಂಸ್ಥೆಯ ನೌಕರರು, ನಗರದ ಪ್ರಾದೇಶಿಕ ಸಾರಿಗೆ ಇಲಾಖೆ (ಆರ್‌ಟಿಒ) ಎದುರು ಸೋಮವಾರ ಸರದಿ ಸತ್ಯಾಗ್ರಹ ಆರಂಭಿಸಿದರು.
ಸ್ಥಳೀಯ ಎಸ್‌ಪಿ ವೃತ್ತದಿಂದ ಮೆರವಣಿಗೆ ನಡೆಸಿದ ಕಾರ್ಯಕರ್ತರು, ಸುಧಾ ವೃತ್ತದ ಮೂಲಕ ಪ್ರಾದೇಶಿಕ ಸಾರಿಗೆ ಇಲಾಖೆ ಕಚೇರಿಗೆ ತೆರಳಿದರು. ಇಲಾಖೆಯ ಅಧಿಕಾರಿಗಳ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಚ್.ವಿ. ಅನಂತ ಸುಬ್ಬರಾವ್ ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿ, ಖಾಸಗೀಕರಣದ ವಿರುದ್ಧ ಸತತ ಹೋರಾಟವನ್ನು ಬಳ್ಳಾರಿ ಮಾತ್ರವಲ್ಲದೇ ರಾಜ್ಯಮಟ್ಟದಲ್ಲಿ ಹಮ್ಮಿಕೊಂಡಿದ್ದೇವೆ. ರಾಜ್ಯದಲ್ಲಿ ಸಾರಿಗೆ ಇಲಾಖೆಯ ಶೇಕಡಾ ಅರ್ಧದಷ್ಟು ಖಾಸಗಿ ಬಸ್ಸುಗಳಿವೆ. ಇದರಲ್ಲಿ ಕೆಲವಕ್ಕೆ ಪರ್ಮಿಟ್ ಇಲ್ಲ. ಒಂದು ವೇಳೆ ಇದ್ದರೂ, ಒಂದಕ್ಕೆ ಹತ್ತು ಬಸ್‌ಗಳನ್ನು ಓಡಿಸಲಾಗುತ್ತಿದೆ. ಅನುಮತಿ ಪಡೆದ ರಸ್ತೆಯನ್ನು ಬಿಟ್ಟು ಬೇರೆ ರಸ್ತೆಗಳಲ್ಲೂ ಸಂಚರಿಸಲಾಗುತ್ತಿದೆ. ಇವುಗಳಿಂದ ಸರ್ಕಾರಕ್ಕೆ ಯಾವುದೇ ತೆರಿಗೆ ಬರಲ್ಲ. ಮೇಲಾಗಿ ಸಾರಿಗೆ ಇಲಾಖೆಗೆ ಪ್ರತಿದಿನ ಸುಮಾರು ಮೂರು ಕೋಟಿ ರುಪಾಯಿ ನಷ್ಟವಾಗುತ್ತಿದೆ ಎಂದು ತಿಳಿಸಿದರು.
ಖಾಸಗಿ ಕಂಪನಿಗಳು ರಾಜ್ಯದಲ್ಲಿ ಬಹಳಷ್ಟು ಶಕ್ತಿಯುತವಾಗಿವೆ. ಇದನ್ನು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮತ್ತು ಇಲಾಖೆಯ ಈ ಹಿಂದಿನ ಮುಖ್ಯ ಕಾರ್ಯದರ್ಶಿ ರವಿಕುಮಾರ್ ಅವರೇ ಒಪ್ಪಿಕೊಂಡಿದ್ದಾರೆ. ಇದಕ್ಕೆಲ್ಲ ಇಲಾಖೆಯಲ್ಲಿನ ಅಧಿಕಾರಿಗಳೇ ಕಾರಣ ಎಂದು ಆರೋಪಿಸಿದರು.
ಸಂಘದ ಜಿಲ್ಲಾಧ್ಯಕ್ಷ ಎಚ್.ಎ. ಆದಿಮೂರ್ತಿ ಮಾತನಾಡಿ, ಜಿಲ್ಲೆಯಲ್ಲಿ ಸುಮಾರು 920 ಖಾಸಗಿ ಬಸ್ಸುಗಳು ಸಂಚರಿಸುತ್ತಿವೆ. ಜತೆಗೆ ಟಂಟಂ, ಮ್ಯಾಕ್ಸಿಕ್ಯಾಬ್ ಹಾವಳಿಯೂ ದಿನದಿನಕ್ಕೆ ಹೆಚ್ಚುತ್ತಿದ್ದು, ಸಾರಿಗೆ ಇಲಾಖೆಯ ಬೊಕ್ಕಸಕ್ಕೆ ನಿತ್ಯ ರು. 15 ಲಕ್ಷ ನಷ್ಟವಾಗುತ್ತಿದೆ. ಪರಿಣಾಮ ಸಿಬ್ಬಂದಿ, ಕಾರ್ಮಿಕರ ವೇತನಗಳು ಸಮಯಕ್ಕೆ ಆಗುತ್ತಿಲ್ಲ. ಈ ಕುರಿತು ಈಗಾಗಲೇ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ, ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ಅನಧಿಕೃತ ವಾಹನಗಳನ್ನು ನಿಯಂತ್ರಿಸುವವರೆಗೂ ನಿರಶನ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಸಾರಿಗೆ ನಿಗಮಗಳ ಬಸ್ ನಿಲ್ದಾಣದಿಂದ 500 ಮೀಟರ್ ದೂರದಲ್ಲಿ ಖಾಸಗಿ ವಾಹನಗಳ ಏಜೆಂಟರು ಪ್ರವೇಶವನ್ನು ನಿರ್ಬಂಧಿಸಬೇಕು. ಖಾಸಗಿ ವಾಹನಗಳ ರಹದಾರಿಗಳನ್ನು ತಪಾಸಣೆ ಮಾಡಿ ರಹದಾರಿ ಪರವಾನಿಗೆ ಇಲ್ಲದ ಅಥವಾ ನಕಲಿ ರಹದಾರಿ ಪರವಾನಿಗೆ ಇರುವ ವಾಹನಗಳನ್ನು ರದ್ದು ಮಾಡಿ, ಕಾನೂನಿನ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾ ನಿರತರು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಉಪಾಧ್ಯಕ್ಷ ಟಿ. ಚೆನ್ನಪ್ಪ, ಬಿ.ಶ್ರೀನಿವಾಸುಲು, ಕಾಂತಯ್ಯ ಗುತ್ತರಗಿಮಠ, ಎಐಟಿಯುಸಿ ಪ್ರಧಾನ ಕಾರ್ಯದರ್ಶಿ ಎ.ಆರ್.ಎಂ. ಇಸ್ಮಾಯಿಲ್, ಇಲಾಖೆಯ ನೂರಾರು ಸಿಬ್ಬಂದಿ, ಕಾರ್ಮಿಕರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.