ಹೆದ್ದಾರಿ ನಿರ್ಮಾಣಕ್ಕೆ ಸೂರು ನಾಶ
ಕನ್ನಡಪ್ರಭ ವಾರ್ತೆ, ಕೊಟ್ಟೂರು, ಜು. 20
ಕೊಟ್ಟೂರಿನ ರೇಣುಕಾ ಚಿತ್ರಮಂದಿರ ರಸ್ತೆ ಮೂಲಕ ಸಾಗುವ ಉಜ್ಜಿನಿ ವೃತ್ತದವರೆಗಿನ ಅಂದಾಜು ಸಾವಿರ ನಿವಾಸಿಗಳು ಕಳೆದ 5-6 ವರ್ಷಗಳಿಂದ ಮನೆ ಕಳೆದುಕೊಳ್ಳುವ ಆತಂಕದಿಂದಲೇ ಬದುಕುವಂತಾಗಿದೆ.
ಪಟ್ಟಣದ ಪ್ರಮುಖ ಮುಖ್ಯ ರಸ್ತೆಗಳಲ್ಲಿ ಒಂದಾದ ಈ ರಸ್ತೆ ರಾಜ್ಯ ಹೆದ್ದಾರಿ 40 ಅರಬಾವಿ-ಚಳ್ಳಕೆರೆಯನ್ನು ಸಂಪರ್ಕಿಸುವ ರಸ್ತೆಯಾಗಿದೆ. ಸದ್ಯ 5.5 ಮೀಟರ್ ಅಗಲ ರಸ್ತೆ ಅಭಿವೃದ್ಧಿಪಡಿಸಲು ಲೋಕೋಪಯೋಗಿ ಬಂದರು ಒಳನಾಡು ಮತ್ತು ಜಲಸಾರಿಗೆ ಇಲಾಖೆ ಈಗ್ಗೆ ಕೆಲ ವರ್ಷಗಳ ಹಿಂದೆ ಎಸ್ಎಚ್ಡಿಪಿ ಯೋಜನೆಯಡಿ ರು. 7.28 ಕೋಟಿ ಅನುದಾನ ಮಂಜೂರು ಮಾಡಿ, ಕಾಮಗಾರಿ ಕೈಗೆತ್ತಿಕೊಂಡಿದೆ. ಎಸ್. ರಾಜೇಂದ್ರಪ್ರಸಾದ್ ಗುತ್ತಿಗೆ ಪಡೆದಿದ್ದಾರೆ. ರಸ್ತೆಯನ್ನು ಯಥಾ ರೀತಿಯ 5.5 ಮೀಟರ್ ಅಭಿವೃದ್ಧಿಪಡಿಸುವಂತಿದ್ದರೆ ಈ ಕಾರ್ಯ 1 ವರ್ಷದ ಹಿಂದೆಯೇ ಪೂರ್ಣಗೊಳ್ಳುತ್ತಿತ್ತು. ಮುಖ್ಯ ಸಮಸ್ಯೆ ಏನೆಂದರೆ ಲೋಕೋಪಯೋಗಿ ಇಲಾಖೆ ರಸ್ತೆ ಮಧ್ಯದಿಂದ ತಲಾ ಎರಡು ಬದಿ 2.5 ಮೀಟರ್ ಡಾಂಬರೀಕರಣದ ಕಾರ್ಯಕ್ಕೆ ಮೀಸಲಾದರೆ ಮತ್ತೆ 2 ಮೀಟರ್ ರಸ್ತೆ ಬದಿಯನ್ನು ಇನ್ನಿತರ ಕಾರ್ಯಕ್ಕೆ ಮೀಸಲು, ಪುನಃ 1.5 ಮೀಟರ್ ಚರಂಡಿ ನಿರ್ಮಾಣಕ್ಕೆ ಮೀಸಲಿರಿಸಬೇಕೆಂದು ಕಾಮಗಾರಿಯ ರೂಪುರೇಷೆಯಲ್ಲಿ ನಮೂದಿಸಿದೆ. ಇದೂ ಸೇರಿದಂತೆ ಈ ರಸ್ತೆ ರಾಷ್ಟ್ರೀಯ ಹೆದ್ದಾರಿಯಾಗಿ ಪರಿವರ್ತಿತಗೊಂಡಿರುವುದರಿಂದ ಅಧಿಕಾರಿಗಳು 9ರಿಂದ 10 ಮೀ. ಅಗಲೀಕರಣ ಮಾಡುವ ತೀರ್ಮಾನದ ಸೂತ್ರವನ್ನು ಇದೀಗ ಹರಿಯಬಿಟ್ಟಿದ್ದಾರೆ.
ನೆಲಸಮ: ಲೋಕೋಪಯೋಗಿ ಮತ್ತು ಸ್ಥಳೀಯ ಆಡಳಿತದ ಅಧಿಕಾರಿಗಳು ಸೂಚಿಸಿರುವ ರಸ್ತೆ ಅಗಲೀಕರಣ ಸೂತ್ರವನ್ನು ಅನುಷ್ಠಾನಗೊಳಿಸಲು ಮುಂದಾದರೆ ಈ ರಸ್ತೆ ಎರಡೂ ಬದಿಗಳಲ್ಲಿನ 350ಕ್ಕೂ ಹೆಚ್ಚು ಮನೆಗಳವರು ಸೂರು ಕಳೆದುಕೊಳ್ಳುವ ಸಾಧ್ಯತೆ ಇದೆ. ಈ ಪೈಕಿ ಕೆಲ ಮನೆಗಳು ಅರ್ಧದಷ್ಟು ನೆಲಸಮಗೊಂಡರೆ ಈ ರಸ್ತೆ ಉದ್ದಕ್ಕೂ ನೆಲೆಸಿರುವ ಬಹುತೇಕ ಬಡ ಮತ್ತು ಮಧ್ಯಮ ವರ್ಗದ ಜನರ ಮನೆಗಳು ರಸ್ತೆಯ ಈ ಕಾಮಗಾರಿಗೆ ಆಹುತಿಯಾಗುವುದು ಖಚಿತ.
ರಸ್ತೆ ಅಭಿವೃದ್ಧಿಯಾಗುವುದು ಇಲ್ಲಿನ ನಿವಾಸಿಗರಿಗೆ ಕೊಂಚ ಸಮಾಧಾನ ತಂದಿದ್ದರೂ ಸೂರು ಕಳೆದುಕೊಳ್ಳುವ ಚಿಂತೆ ಕಾಡುತ್ತಿದೆ. ಹಲವು ನಗರಗಳಂತೆ ರಾಷ್ಟ್ರೀಯ ಹೆದ್ದಾರಿಯನ್ನು ಹೊರವಲಯದಲ್ಲಿ ಅಥವಾ ರಿಂಗ್ರೋಡ್ ನಿರ್ಮಿಸಿದರೆ ಸಮಸ್ಯೆ ನಿವಾರಿಸಬಲ್ಲದು ಎಂಬುದು ಅವರ ವಾದವಾಗಿದೆ.
ಕೊಟ್ಟೂರಿನ ಅರಬಾವಿ -ಚಳ್ಳಕೆರೆ ರಾಜ್ಯ ಹೆದ್ದಾರಿ ನಿರ್ಮಾಣ ಕಾರ್ಯಕ್ಕೆಂದು ಪಟ್ಟಣದ ಈ ರಸ್ತೆಯ ಎರಡೂ ಬದಿಯಲ್ಲಿನ ನಿವಾಸಿಗರನ್ನು ಒಕ್ಕಲೆಬ್ಬಿಸುವ ಮುನ್ನ ನೆಲೆ ಕಳೆದುಕೊಳ್ಳುವ ಭೀತಿ ಎದುರಿಸುತ್ತಿರುವ ಸಂತ್ರಸ್ತರಿಗೆ ಪರ್ಯಾಯ ವ್ಯವಸ್ಥೆಯನ್ನು ಸರ್ಕಾರ ಕೈಗೊಳ್ಳಬೇಕು.
ಈಗಾಗಲೇ ರಸ್ತೆ ಅಭಿವೃದ್ಧಿಯನ್ನು ಕೂಡ್ಲಿಗಿ, ಹರಪನಹಳ್ಳಿ ಪಟ್ಟಣಗಳಲ್ಲಿ ಕೈಗೊಂಡಿದ್ದರೂ ಅಲ್ಲಿ ಕಡಿಮೆ ಪ್ರಮಾಣದಲ್ಲಿ ರಸ್ತೆ ಅಗಲೀಕರಿಸುವ ಮಾನದಂಡ ಬಳಸಿರುವಂತೆಯೇ ಈ ಮಾನದಂಡವನ್ನು ಕೊಟ್ಟೂರಿಗೂ ಬಳಸುವತ್ತ ಮುಂದಾಗಬೇಕು. ಈ ಹಿಂದೆ ಕೈಗೊಂಡ ರಸ್ತೆ ಅಗಲೀಕರಣ ಸಮಯದಲ್ಲಿ ಕೊಟ್ಟೂರಿನ ನಿವಾಸಿಗರು ಬಹಳಷ್ಟು ಅಂತರದ ವಂಚನೆಗೆ ಒಳಗಾಗಿದ್ದಾರೆ. ಈ ಕುರಿತು ಜನಪ್ರತಿನಿಧಿಗಳು ಗಮನಹರಿಸಬೇಕು ಎಂದು ಚಾನುಕೋಟಿ ಮಠಾಧ್ಯಕ್ಷ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಒತ್ತಾಯಿಸುತ್ತಾರೆ.
ಈ ರಸ್ತೆಯ ನಿವಾಸಿಗರು ಮತ್ತು ಜನತೆ ತಾವೇ ಸ್ವಯಂ ಪ್ರೇರಿತರಾಗಿ ರಸ್ತೆ ಅಭಿವೃದ್ಧಿಗೆ ಅನುಕೂಲವಾಗುವ ಪ್ರಮಾಣದಲ್ಲಿ ತಮ್ಮ ಮನೆ, ಮತ್ತಿತರವುಗಳನ್ನು ತೆರವುಗೊಳಿಸಲು ಲೋಕೋಪಯೋಗಿ ಇಲಾಖೆಯ ಈ ಕಾರ್ಯಕ್ಕೆ ಸಹಕರಿಸಬೇಕು ಎನ್ನುತ್ತಾರೆ ಇಲಾಖೆಯ ಕಾಮಗಾರಿ ಸೆಕ್ಷನ್ ಅಧಿಕಾರಿ ಪರಮೇಶ್ವರಪ್ಪ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

