ಪೊಲೀಸ್ ಠಾಣೆಗೆ ರೈತರ ಮುತ್ತಿಗೆ
ಹೊಸಪೇಟೆ: ರೈತರ ಮೇಲೆ ಅರಣ್ಯ ಇಲಾಖೆಯ ಅಧಿಕಾರಿಗಳು ದೌರ್ಜನ್ಯ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಗುಂಡಾ ಗ್ರಾಮದ ನೂರಾರು ರೈತರು ಹಾಗೂ ರಾಜ್ಯ ರೈತ ಸಂಘದ ಪದಾಧಿಕಾರಿಗಳು ಭಾನುವಾರ ಸಂಜೆ ಮರಿಯಮ್ಮನಹಳ್ಳಿ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಗುಂಡಾ ಗ್ರಾಮದ ರೈತರು ತಮ್ಮ ಹೊಲಗಳಲ್ಲಿ ಕೆಲಸ ಮಾಡಿಕೊಂಡಿದ್ದರೂ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳೀಯ ರೈತ ಮಹಿಳೆಯರ ಮೇಲೆ ದೌರ್ಜನ್ಯ ನಡೆಸಿ, ಅವಾಚ್ಯ ಶಬ್ದಗಳಿಂದ ಮಹಿಳೆಯರನ್ನು ಬೈಯುತ್ತಿದ್ದಾರೆ. ಗುಂಡಾ ಗ್ರಾಮದ ರೈತರನ್ನು ಅರಣ್ಯ ಇಲಾಖೆಯವರು ನೆಮ್ಮದಿಯಿಂದ ಇರಲು ಬಿಡುತ್ತಿಲ್ಲ. ಗುಂಡಾ ಗ್ರಾಮದ ರೈತರ ಮೇಲೆ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಿಸಿ ರೈತರನ್ನು ಎದುರಿಸುತ್ತಿದ್ದಾರೆ. ರೈತರ ಮೇಲೆ ಕೇಸು ಹಾಕುವುದಾದರೆ ಎಲ್ಲ ರೈತರ ಮೇಲೆ ಕೇಸು ದಾಖಲಿಸಿ ಎಂದು ಗುಂಡಾ ಗ್ರಾಮದ ರೈತರು, ರೈತ ಮಹಿಳೆಯರು ಎತ್ತು, ಬಂಡಿ ಸಮೇತ ತಮ್ಮ ಮಕ್ಕಳಗಳನ್ನು ಕರೆದುಕೊಂಡು ಬಂದು ಮರಿಯಮ್ಮನಹಳ್ಳಿಯಲ್ಲಿ ಸಂಜೆ ಪ್ರತಿಭಟನಾ ಮೆರವಣಿಗೆ ನಡೆಸಿ ನಂತರ ಪೊಲೀಸ್ ಠಾಣೆಯ ಮುಂದೆ ನೂರಾರು ರೈತರು ಧರಣಿ ನಡೆಸಿದರು.
ವಾಗ್ವಾದ: ಪಿಎಸ್‌ಐ ಕೆ. ಜಯಪ್ರಕಾಶ್ ಠಾಣೆಯ ಮುಂದೆ ಪ್ರತಿಭಟನೆ ಸರಿಯಲ್ಲ ಎಂದಾಗ ರೈತರು ಠಾಣೆಯ ಮುಂದೇ ಪ್ರತಿಭಟನೆ ನಡೆಸುತ್ತೇವೆ. ನಮಗೆ ನ್ಯಾಯ ಸಿಗುವವರೆಗೂ ಪ್ರತಿಭಟನೆ ನಡೆಸುತ್ತೇವೆ. ಸರಿಯಲ್ಲ ಎನ್ನುವುದಾದರೆ ರೈತರನ್ನು ಬಂಧಿಸಿ ಎಂದು ಆಕ್ರೋಶ ವ್ಯಕ್ತಪಡಿಸಿ, ಪೊಲೀಸ್‌ರೊಂದಿಗೆ ವಾಗ್ವಾದ ನಡೆಸಿದರು. ನಂತರ ರೈತರು ಠಾಣೆ ಆವರಣದೊಳಗೆ ಪ್ರವೇಶಿಸಿ ಪ್ರತಿಭಟನೆ ನಡೆಸಿದರು.
ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಬಿ. ರಾಜಶೇಖರ್ ಗೌಡ, ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಕೊಟ್ಗಿ ಲೋಕೇಶ್, ಜಿಲ್ಲಾ ಸಂಘಟನ ಕಾರ್ಯದರ್ಶಿ ಗೋಣಿ ಬಸಪ್ಪ, ಸ್ಥಳೀಯ ಮುಖಂಡರಾದ ಕುಮಾರ ಸ್ವಾಮಿ, ಎಂ. ಹನುಮಂತ, ರುದ್ರಪ್ಪ, ನಾಯಕರ ಭೀಮಪ್ಪ, ಚಂದ್ರಪ್ಪ, ಬುಳ್ಳಪ್ಪ, ವೆಂಕಟೇಶ್, ನೂರಾರು ರೈತರು, ರೈತ ಮಹಿಳೆಯರು ಪ್ರತಿಭಟನೆಯಲ್ಲಿದ್ದರು.
ರೈತರು ವಿರುದ್ಧ ದೂರು: ಗುಂಡಾ ಗ್ರಾಮ ಸಮೀಪದ ಜಿ. ನಾಗಲಾಪುರ ಸರ್ವೇ ನಂಬರ್ 104ರ ಜಮೀನಿನಲ್ಲಿ ಹಾಕಲಾಗಿದ್ದ ಸುಮಾರು 66 ಸಾವಿರ ಗಿಡಗಳಲ್ಲಿ ಸ್ಥಳೀಯ ರೈತರು 1000 ರಿಂದ 1200 ಗಿಡಗಳನ್ನು ಕಿತ್ತು ನಾಶ ಮಾಡಿದ್ದಾರೆ ಎಂದು ಆರೋಪಿಸಿ ಸ್ಥಳೀಯ ಮೂರು ಜನರ ರೈತರ ಮೇಲೆ ಅರಣ್ಯ ಇಲಾಖೆಯ ಅಧಿಕಾರಿಗಳು ಮರಿಯಮ್ಮನಹಳ್ಳಿ ಠಾಣೆಯಲ್ಲಿ ದೂರು ನೀಡಿದ್ದರು.
ಭಾನುವಾರ ಅರಣ್ಯ ಇಲಾಖೆಯ ಉಪ ವಲಯ ಅರಣ್ಯಾಧಿಕಾರಿ ರಾಜಶೇಖರ್ ಪಿ. ಲಮಾಣಿ ಸೇರಿದಂತೆ ಮೂರು ಜನರು ಅರಣ್ಯ ಪ್ರದೇಶದಲ್ಲಿ ಗಸ್ತು ಮಾಡುವಾಗ ಸ್ಥಳೀಯ ಮೂರು ರೈತರು ಗಿಡಗಳನ್ನು ಕಿತ್ತು ಬಿಸಾಕುತ್ತಿರುವುದನ್ನು ಕಂಡು ಅರಣ್ಯ ಇಲಾಖೆಯಿಂದ ಉಪ ವಲಯ ಅರಣ್ಯಾಧಿಕಾರಿ ರಾಜಶೇಖರ್ ಪಿ. ಲಮಾಣಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಪ್ರತಿಭಟನಾ ಸ್ಥಳಕ್ಕೆ ಶಾಸಕ ಭೀಮಾ ನಾಯ್ಕ ಭೇಟಿ ನೀಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

