ಬಳ್ಳಾರಿ

ಕಾಂಗ್ರೆಸ್‌ನಲ್ಲಿ ಗುಂಪುಗಾರಿಕೆ ನಿಲ್ಲಲಿ

Published On :

ಬಳ್ಳಾರಿ: ಎಲ್ಲಿಯವರೆಗೆ ಕಾಂಗ್ರೆಸ್‌ನಲ್ಲಿ ಗುಂಪುಗಾರಿಕೆ ನಿಲ್ಲುವುದಿಲ್ಲವೋ ಅಲ್ಲಿಯವರಿಗೆ ಕಾಂಗ್ರೆಸ್ ಪಕ್ಷಕ್ಕೆ ಉಳಿಗಾಲವಿಲ್ಲ ಎಂದು ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪಿ.ಟಿ. ಪರಮೇಶ್ವರನಾಯಕ್ ಅವರು ಉಪಚುನಾವಣೆ ವೀಕ್ಷಕರ ಸಮ್ಮುಖದಲ್ಲೇ ಖಾರವಾಗಿ ಮಾತನಾಡಿದರು.
ನಗರದ ಬುಡಾ ಕಚೇರಿ ಹಿಂಭಾಗದಲ್ಲಿ ಕೆಇಬಿ ಫಂಕ್ಷನ್ ಹಾಲ್‌ನಲ್ಲಿ ಬಳ್ಳಾರಿ ಗ್ರಾಮೀಣ ಉಪಚುನಾವಣೆ ಅಂಗವಾಗಿ ಭಾನುವಾರ ನಡೆದ ವೀಕ್ಷಕರ ಸಭೆಯಲ್ಲಿ ಅವರು ಮಾತನಾಡಿದರು.
ಬಳ್ಳಾರಿ ಗ್ರಾಮೀಣ ಉಪಚುನಾವಣೆಯಲ್ಲಿ ಉತ್ಸಾಹದಿಂದ ಕೆಲಸ ಮಾಡಿ, ಪಕ್ಷದ ಅಭ್ಯರ್ಥಿ ಗೆಲವು ಸಾಧಿಸಲು ಮುಂದಾಗಬೇಕು. ಜಿಲ್ಲೆಗೆ ಆಗಮಿಸಿರುವ ಪಕ್ಷದ ವೀಕ್ಷಕರೊಂದಿಗೆ ಕಾರ್ಯಕರ್ತರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಬಹುದಾಗಿದೆ ಎಂದರು.
ವೀಕ್ಷಕ, ಶಾಸಕ ಕೆ.ಎನ್. ರಾಜಣ್ಣನವರು ಮಾತನಾಡಿ, ಬಳ್ಳಾರಿ ಗ್ರಾಮೀಣ ಉಪಚುನಾವಣೆಯ ಆಕಾಂಕ್ಷಿಗಳ ಕುರಿತಂತೆ ಕಾರ್ಯಕರ್ತರು ತಮ್ಮ ಅಭಿಪ್ರಾಯಗಳನ್ನು ಲಿಖಿತ ಮತ್ತು ಮೌಖಿಕವಾಗಿಯೇ ನೀಡಬಹುದು. ಚುನಾವಣೆಯಲ್ಲಿ ಗೆಲವಿನಲ್ಲಿ ಪಕ್ಷದ ಕಾರ್ಯಕರ್ತರ ಉತ್ಸಾಹ ಮುಖ್ಯ. ಪಕ್ಷವನ್ನು ಸೋಲಿಸುವ ಶಕ್ತಿ ಎಲ್ಲರಲ್ಲೂ ಇರುತ್ತದೆ. ಆದರೆ, ಗೆಲ್ಲುವ ಶಕ್ತಿ ಒಗ್ಗಟ್ಟಿನಲ್ಲಿದೆ. ಇಂಥ ಒಗ್ಗಟ್ಟಿನ ಕೊರತೆಯಿಂದಾಗಿ ಜಿಲ್ಲೆಯಲ್ಲಿ ಕಾಂಗ್ರೆಸ್ ಭದ್ರಕೋಟೆಗೆ ಸಮಸ್ಯೆ ಬಂದು, ಬಿಜೆಪಿ ಗೆಲವು ಸಾಧಿಸಿದೆ. ಈ ಉಪಚುನಾವಣೆಯಲ್ಲಿ ಬಳ್ಳಾರಿ ಕಾಂಗ್ರೆಸ್ ಭದ್ರಕೋಟೆ ಎಂಬುದನ್ನು ತೋರಿಸಿಕೊಡಬೇಕೆಂದರು.
ಎಲ್ಲ ಆಕಾಂಕ್ಷಿಗಳಿಗೆ ಟಿಕೆಟ್ ಕೊಡಲು ಆಗುವುದಿಲ್ಲ. ನಮ್ಮನ್ನು ಗುರುತಿಸಿಲ್ಲ ಎಂಬ ಸಮಸ್ಯೆ ಪಕ್ಷದ ಕಾರ್ಯಕರ್ತರಲ್ಲಿದೆ. ಮುಂದಿನ ದಿನಗಳಲ್ಲಿ ಕಾರ್ಯಕರ್ತರ ಗಮನದಲ್ಲಿಟ್ಟುಕೊಂಡು, ಅವರು ವ್ಯಕ್ತಪಡಿಸುವ ಅಭಿಪ್ರಾಯದಂತೆ ನಿರ್ಣಯ ಕೈಗೊಳ್ಳಲಾಗುತ್ತದೆ. ಕಾರ್ಯಕರ್ತರಲ್ಲಿ ಅಭಿಪ್ರಾಯ, ಭೇದ ಇಲ್ಲದಂತೆ ಎಲ್ಲರೂ ಒಟ್ಟಾಗಿ ಚುನಾವಣೆಯಲ್ಲಿ ಪಾಲ್ಗೊಂಡು ಪಕ್ಷದ ಗೆಲವಿಗೆ ಶ್ರಮಿಸಬೇಕೆಂದರು.
ವೀಕ್ಷಕ, ಮಾಜಿ ಶಾಸಕ ನೆ.ಲ. ನರೇಂದ್ರಬಾಬು ಮಾತನಾಡಿ, ಹೊರಗಿನ ಶತ್ರುಗಳನ್ನು ಸಮರ್ಥವಾಗಿ ಎದುರಿಸಬಹುದು. ಆದರೆ, ಒಳಗಿನ ಶಕ್ತಿಗಳನ್ನು ಎದುರಿಸುವುದು ಕಷ್ಟವಾಗಿದೆ. ಎಲ್ಲ ಸಮುದಾಯ ಗಮನಕ್ಕೆ ತೆಗೆದುಕೊಂಡು ಹೋಗುವ ಅಭ್ಯರ್ಥಿ ಆಯ್ಕೆ, ಗೆಲ್ಲಬೇಕಾಗಿದೆ. ಈ ನಿಟ್ಟಿನಲ್ಲಿ ಅಭಿಪ್ರಾಯಗಳನ್ನು ಸಂಗ್ರಹಿಸಿ ಅಭ್ಯರ್ಥಿಗಳ ಆಯ್ಕೆಗೆ ವರದಿ ಸಲ್ಲಿಸಲಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಮುಖಂಡರಾದ ಚಂದ್ರಿಕಾ ಪರಮೇಶ್ವರಿ, ಎಸ್.ಎಸ್. ಪ್ರಕಾಶಂ, ಕೆ.ಸಿ. ಕೊಂಡಯ್ಯ, ಅಲ್ಲಂ ವೀರಭದ್ರಪ್ಪ, ಶಾಸಕರಾದ ಅನಿಲ್ ಲಾಡ್, ತುಕಾರಾಂ, ಮೇಯರ್ ಎಂ. ರಮೇಶ್, ಮುಖಂಡರಾದ ವೆಂಕಟರಾವ್ ಘೋರ್ಪಡೆ, ಕಮಲಾ ಮರಿಸ್ವಾಮಿ, ಪಕ್ಷದ ಟಿಕೆಟ್ ಆಕಾಂಕ್ಷಿಗಳಿದ್ದರು. ಬಳ್ಳಾರಿ ಜಿಲ್ಲಾ ನಗರ ಕಾಂಗ್ರೆಸ್ ಘಟಕದ ಅಧ್ಯಕ್ಷ ಜೆ.ಎಸ್. ಆಂಜನೇಯಲು ಸ್ವಾಗತಿಸಿದರು. ಅಸುಂಡಿನ ನಾಗರಾಜ್ ನಿರೂಪಿಸಿ, ಎಚ್. ಅರ್ಜುನ ವಂದಿಸಿದರು.
ಟಿಕೆಟ್ ಆಕಾಂಕ್ಷಿಗಳ ಕೆಲ ಬೆಂಬಲಿಗರು ಘೋಷಣೆ ಕೂಗಿ ಸಭೆಗೆ ಬಂದರೆ, ಕೆಲವು ಕಾರ್ಯಕರ್ತರು ಚುನಾವಣೆಯಲ್ಲಿ ಪಕ್ಷದ ಮುಖಂಡರು ಒಗ್ಗಟ್ಟು ತೋರಬೇಕೆಂದು ಸಭೆಯಲ್ಲಿ ಧ್ವನಿ ಎತ್ತಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.