ಕೂಡ್ಲಿಗಿ: ಶಾಶ್ವತ ನೀರಾವರಿ ಜಾರಿಯಾಗಲಿ
ಕನ್ನಡಪ್ರಭ ವಾರ್ತೆ, ಕೊಟ್ಟೂರು, ಜೂ. 1
ತಾಲೂಕಿನಲ್ಲಿ ಸಾಮರಸ್ಯವಿರುವುದರಿಂದ ಸಮಸ್ಯೆಗಳೇ ಇಲ್ಲ. ಆದರೆ, ಹಲವು ಸವಾಲುಗಳಿವೆ. ಜನನಾಯಕರುಗಳು ತಾಲೂಕಿನ ಸಮಗ್ರ ಅಭಿವೃದ್ಧಿಗೆ ತೊಡಗಿಸಿಕೊಳ್ಳಬೇಕು. ಬರಡಾದ ತಾಲೂಕಿಗೆ ಶಾಶ್ವತ ನೀರಾವರಿ ಯೋಜನೆಗಳ ತಕ್ಷಣ ಜಾರಿಗೊಳಿಸಬೇಕು ಎಂದು ಕೂಡ್ಲಿಗಿ ತಾಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಪಂಡಿತ ಎಸ್.ಎಂ. ರುದ್ರಮುನಿ ಅಯ್ಯ ಕರೆ ನೀಡಿದರು.
ಸಮೀಪದ ಉಜ್ಜಯಿನಿಯ ಸಭಾಭವನದಲ್ಲಿ ಆಯೋಜಿಸಲಾಗಿದ್ದ ಪ್ರಥಮ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷೀಯ ಭಾಷಣ ಮಾಡಿದ ಅವರು, ಸಮಾಜದ ಆಗು ಹೋಗುಗಳನ್ನು ಕೇವಲ ಅಸಹಾಯಕತೆಯಿಂದ ಕೆಲವರು ನೋಡುವ ಗೀಳು ತಪ್ಪಬೇಕು. ಸಮಾಜದ ಮುಖ್ಯವಾಹಿನಿಯಲ್ಲಿ ಸೇರಿ ಋಣ ಭಾರ ತೀರಿಸಬೇಕು ಎಂದರು.
ಕೂಡ್ಲಿಗಿ ತಾಲೂಕಿಗೆ ರಾಷ್ಟ್ರೀಯ ಮಟ್ಟದಲ್ಲಿ ಮಹತ್ವದ ಹೆಸರಿದೆ. ಇಂಥ ತಾಲೂಕಿಗೆ ಪ್ರತಿವರ್ಷ ಹರಡುವ ಬರಗಾಲವನ್ನು ಹೋಗಲಾಡಿಸಲು ನಿರ್ದಿಷ್ಟ ಯೋಜನೆಗಳನ್ನು ಹಾಕಿಕೊಂಡು ಇಲ್ಲಿನ ಜನತೆಗೆ ನೆರವು ನೀಡುವತ್ತ ಮುಂದಾಗಬೇಕು ಎಂದರು.
ಕೊಟ್ಟೂರನ್ನು ತಾಲೂಕನ್ನಾಗಿಸುವ ಮೂಲಕ ವಿಶಾಲ ಕೂಡ್ಲಿಗಿ ತಾಲೂಕಿನ ಜನತೆಯ ಇನ್ನೂ ಹತ್ತಿರಕ್ಕೆ ಅಧಿಕಾರವನ್ನು ದೊರಕಿಸುವ ಪ್ರಯತ್ನವನ್ನು ಮಾಡಬೇಕು ಎಂದರು. ಕೂಡ್ಲಿಗಿ, ಹೊಸಹಳ್ಳಿ, ಗುಡೇಕೋಟೆಗಳು ಪರಿವರ್ತನೆಯ ಹಾದಿ ಹಿಡಿದಿವೆ. ಒಟ್ಟಾರೆಯಾಗಿ ತಾಲೂಕಿನ ಬೆಳವಣಿಗೆಗೆ ಜನತೆ ನೆರವಾಗಬೇಕು ಎಂದು ಅವರು ಕರೆ ನೀಡಿದರು.
ಸಮಾರಂಭವನ್ನು ಉದ್ಘಾಟಿಸಿದ ಸಾಹಿತಿ ಹುರಿಕಡ್ಲಿ ಶಿವಕುಮಾರ್, ಸಾಹಿತ್ಯ, ಸಂಸ್ಕೃತಿ ಮತ್ತು ಔದ್ಯೋಗಿಕ ರಂಗಗಳಲ್ಲಿ ಕೂಡ್ಲಿಗಿ ತಾಲೂಕು ತನ್ನೆಲ್ಲಾ ಹಿರಿಮೆಗಳಿಂದ ಮುನ್ನಡೆ ಸಾಧಿಸಿದೆ. ತಾಲೂಕಿನಲ್ಲಿ ಕನ್ನಡ ಬೆಳವಣಿಗೆಗೆ ಪೂರಕವಾದ ಸಂಪೂರ್ಣ ವಾತಾವರಣ ಸದಾ ಇರುತ್ತದೆ. ಈ ಬಗೆಯ ವಾತಾವರಣದಲ್ಲಿ ಕನ್ನಡದ ಕೆಲಸ ಹೆಚ್ಚು ಹೆಚ್ಚು ನಡೆಯಬೇಕು. ಇಂಗ್ಲಿಷ್ ಮಾದರಿಯಲ್ಲಿಯೇ ಕನ್ನಡತನವನ್ನು ರೂಢಿಸುವ ಸಾಧ್ಯತೆಯನ್ನು ಪ್ರತಿಯೊಬ್ಬರೂ ಕಂಡುಕೊಳ್ಳಬೇಕು ಎಂದರು.
ಸಮಾರಂಭವನ್ನುದ್ದೇಶಿಸಿ ಕಲಾ ಕೇಂದ್ರದ ಅಧ್ಯಕ್ಷ ಎಂ.ಎಂ.ಜೆ. ಸತ್ಯಪ್ರಕಾಶ್, ಜಿ.ಪಂ. ಸದಸ್ಯ ಪಿ. ಚನ್ನಬಸವನಗೌಡ, ಸಾಹಿತಿ ರೇವಯ್ಯ ಒಡೆಯರ್, ಎನ್. ಎಂ. ರವಿಕುಮಾರ್, ಉಜ್ಜಿನಿ ಗ್ರಾ.ಪಂ. ಅಧ್ಯಕ್ಷ ಕೊಟ್ರೇಶ್ ಮಾತನಾಡಿದರು. ಕಸಾಪ ಜಿಲ್ಲಾಧ್ಯಕ್ಷ ಸಿರಿಗೆರೆ ಯರ್ರಿಸ್ವಾಮಿ ಎ.ಎಂ. ಚನ್ನವೀರಸ್ವಾಮಿ, ಉಜ್ಜಿನಿ ರುದ್ರಪ್ಪ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಕಸಾಪ ಕೂಡ್ಲಿಗಿ ತಾಲೂಕು ಅಧ್ಯಕ್ಷ ಎಸ್.ಎಂ. ಗುರುಪ್ರಸಾದ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಶಿಕ್ಷಕಿ ನಳಿನ, ಬಿ.ಆರ್.ಸಿ. ಅಧಿಕಾರಿ ಜಿ.ಎಂ. ಪ್ರದೀಪ್ಕುಮಾರ್ ಕಾರ್ಯಕ್ರಮ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

