ಹಾಲು ಒಕ್ಕೂಟಕ್ಕೆ ಸತ್ಯನಾರಾಯಣ ಅಧ್ಯಕ್ಷ
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಜೂ. 6
ರಾಯಚೂರು, ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟಕ್ಕೆ ಅಧ್ಯಕ್ಷರಾಗಿ ಎನ್. ಸತ್ಯನಾರಾಯಣ, ಉಪಾಧ್ಯಕ್ಷರಾಗಿ ಅಮರಗುಂಡಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ನಗರದ ಕೆಎಂಎಫ್ ಕಚೇರಿಯಲ್ಲಿ ಶುಕ್ರವಾರ ಚುನಾವಣೆ ನಡೆಯಿತು. ಅಧ್ಯಕ್ಷ ಸ್ಥಾನಕ್ಕೆ ಗಂಗಾವತಿಯ ಕೋಟಯ್ಯ ಕ್ಯಾಂಪ್ನ ಎನ್. ಸತ್ಯನಾರಾಯಣ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಲಿಂಗಸ್ಗೂರು ತಾಲೂಕು ಕಣೆಕಲ್ಲೂರು ಅಮರ ಗುಂಡಪ್ಪ ನಾಮಪತ್ರ ಸಲ್ಲಿಸಿದ್ದರು. ಬೆಳಗ್ಗೆ 10ರಿಂದ ಮಧ್ಯಾಹ್ನ 12 ಗಂಟೆ ವರೆಗೂ ನಾಮಪತ್ರ ಸಲ್ಲಿಸಲು ಅವಕಾಶವಿದ್ದರೂ, ಇಬ್ಬರು ಮಾತ್ರ ಉಮೇದುವಾರಿಕೆ ಸಲ್ಲಿಸಿದ್ದರಿಂದ, 2 ಗಂಟೆಗೆ ಇತರೆ ಸದಸ್ಯರೊಂದಿಗೆ ಚರ್ಚಿಸಿದ ಚುನಾವಣಾಧಿಕಾರಿ, ಬಳ್ಳಾರಿಯ ಸಹಾಯಕ ಆಯುಕ್ತ ಅನಿರುದ್ಧ್ ಶ್ರವಣ್, ಅವಿರೋಧ ಆಯ್ಕೆ ಘೋಷಿಸಿದರು.
ನೂತನ ಅಧ್ಯಕ್ಷ ಎನ್. ಸತ್ಯನಾರಾಯಣ ಸುದ್ದಿಗಾರರೊಂದಿಗೆ ಮಾತನಾಡಿ, ಬಾಕಿ ಇರುವ ಯೋಜನೆಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗುವುದು. ಒಕ್ಕೂಟದಲ್ಲಿ ಹಲವು ಬದಲಾವಣೆಗಳನ್ನು ತಂದು ಮೂರು ಜಿಲ್ಲೆಗಳ ಉಸ್ತುವಾರಿ ಸಚಿವರು, ಶಾಸಕರು, ಆಡಳಿತ ಮಂಡಳಿ ಸದಸ್ಯರ ಸಹಕಾರದೊಂದಿಗೆ ಅಭಿವೃದ್ಧಿ ಪಡಿಸಲಾಗುವುದು ಎಂದು ತಿಳಿಸಿದರು.
ದಿನನಿತ್ಯ 60 ಸಾವಿರ ಲೀಟರ್ ಉತ್ಪಾದನೆ ಸಾಮರ್ಥ್ಯ ಹಾಗೂ ಶೀತಲೀಕರಣ ಘಟಕವುಳ್ಳ ಗಂಗಾವತಿ ತಾಲೂಕಿನ ಬೂದುಗುಂಪಾ ಘಟಕ ಕಾಮಗಾರಿ ಮುಕ್ತಾಯದ ಹಂತದಲ್ಲಿದೆ. 10 ಸಾವಿರ ಲೀಟರ್ ಸಾಮರ್ಥ್ಯದ ಇಟಗಿ ಶೀತಲೀಕರಣ ಘಟಕವನ್ನು ರು. 5 ಕೋಟಿ ವೆಚ್ಚದಲ್ಲಿ 50 ಸಾವಿರ ಲೀ. ಸಾಮರ್ಥ್ಯಕ್ಕೆ ಹೆಚ್ಚಿಸಲಾಗುವುದು. 10 ಸಾವಿರ ಲೀಟರ್ ಸಾಮರ್ಥ್ಯದ ಯಲಬುರ್ಗಾದ ಬೇವೂರು ಘಟಕವನ್ನು ಐಎನ್ಸಿಯು ಘಟಕವನ್ನಾಗಿ ಪರಿವರ್ತಿಸಲಾಗುವುದು ಎಂದು ಹೇಳಿದರು.
ಉತ್ತರ ಕರ್ನಾಟಕದಲ್ಲಿ ನಂದಿನಿ ಐಸ್ ಕ್ರೀಂನ್ನು ಬಳ್ಳಾರಿಯ ಒಕ್ಕೂಟದಿಂದಲೇ ಸರಬರಾಜು ಮಾಡಲಾಗುತ್ತಿದೆ. ನಗರದಲ್ಲೂ ಒಂದೆರಡು ಕಡೆ ಮಾರಾಟ ಮಳಿಗೆಗಳನ್ನು ತೆಗೆಯಲಾಗಿದ್ದು, ಮಳಿಗೆಗಳ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಲಾಗುವುದು. ಪಶು ಆಹಾರ ತಯಾರಿಕೆಯಲ್ಲೂ ಈಗ ಯಾವುದೇ ಸಮಸ್ಯೆಯಿಲ್ಲ ಎಂದು ಸ್ಪಷ್ಟಪಡಿಸಿದರು.
ಬಲಸು ಸೂರ್ಯನಾರಾಯಣಮೂರ್ತಿ, ಸತ್ಯನಾರಾಯಣ, ಎಂ. ತುಳಸಿ, ಡಿ. ಕೊಟ್ರೇಶ್, ಎಂ. ಗುರುಸಿದ್ದನಗೌಡ, ಬಿ.ಬಿ. ಸುಪ್ರಿತಾ, ಜಯತೀರ್ಥರಾವ್, ವೆಂಕನಗೌಡ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

