ಬಳ್ಳಾರಿ

ದೇವಸ್ಥಾನ ಖಾಸಗಿ ಅಕ್ರಮ ಸಮಿತಿಗೆ ಸಚಿವರ ಬೆಂಬಲ

Published On :

ಹೂವಿನಹಡಗಲಿ: ತಾಲೂಕಿನ ಸುಕ್ಷೇತ್ರ ಬೆಟ್ಟದ ಮಲ್ಲೇಶ್ವರ ದೇವಸ್ಥಾನದಲ್ಲಿ ಅಕ್ರಮವಾಗಿ ಖಾಸಗಿ ಸಮಿತಿಗೆ ಕಾರ್ಮಿಕ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ ಬೆಂಬಲವಾಗಿ ನಿಂತಿದ್ದಾರೆಂದು ತಾಲೂಕಿನ ಸೋಗಿ ಗ್ರಾಮಸ್ಥರು, ದೇವಸ್ಥಾನ ಸಮಿತಿ ಸದಸ್ಯರು ಆರೋಪಿಸಿದ್ದಾರೆ.
ಶನಿವಾರ ಬೆಟ್ಟದ ಮಲ್ಲೇಶ್ವರ ದೇವಸ್ಥಾನದಲ್ಲಿ ಬೆಟ್ಟದ ಮಲ್ಲೇಶ್ವರ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಯು. ಸಿದ್ಲಿಲಿಂಗಪ್ಪ, ಕೆ.ಬಿ. ದೇವೀಂದ್ರಪ್ಪ ಸುದ್ದಿಗಾರರೊಂದಿಗೆ ಮಾತನಾಡಿ, ಹತ್ತಾರು ವರ್ಷಗಳಿಂದ ಸೋಗಿ ಗ್ರಾಮಸ್ಥರು ದೇವಸ್ಥಾನದ ಎಲ್ಲ ಆಗುಹೋಗುಗಳನ್ನು ನೋಡಿಕೊಂಡು ಬರುತ್ತಿದ್ದಾರೆ. ದೇವಸ್ಥಾನ ಹೆಸರಲ್ಲಿ ಮತ್ತೊಂದು ಅಕ್ರಮ ಖಾಸಗಿ ಸಮಿತಿಯೊಂದು ಭಕ್ತರಿಂದ ಹಣ ವಸೂಲಿ ದಂಧೆ ನಡೆಸಿದೆ. ಇಂಥ ಸಮಿತಿಯವರಿಗೆ ಸಚಿವರು ಬೆಂಬಲ ವ್ಯಕ್ತಪಡಿಸುತ್ತಿರುವುದು ಖಂಡನೀಯ ಎಂದರು. ಬೆಟ್ಟದ ಮಲ್ಲೇಶ್ವರ ದೇವಸ್ಥಾನ ಖಾಸಗಿ ಸಮಿತಿಯನ್ನು ಜಿಲ್ಲಾಧಿಕಾರಿ ರದ್ದುಪಡಿಸಿದ್ದು, ಅದಕ್ಕೆ ಸಂಬಂಧಪಟ್ಟಂತೆ ಖಾಸಗಿ ಸಮಿತಿ ಹೆಸರಲ್ಲಿರುವ ರು. 19 ಲಕ್ಷವನ್ನು ಆಡಳಿತಾಧಿಕಾರಿಗಳು ಖಾತೆ ಬದಲಾವಣೆ ಮಾಡಿ ಸರ್ಕಾರದ ಅಧೀನದಲ್ಲಿರಬೇಕೆಂದು ಒತ್ತಾಯಿಸಿದ್ದಾರೆ. ಬೆಟ್ಟದ ಮಲ್ಲೇಶ್ವರ ದೇವಸ್ಥಾನಕ್ಕೆಂದು ಇಲ್ಲಿನ ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ಈ ಹಿಂದೆ 29 ಎಕರೆ ಜಮೀನು ನೀಡಿದ್ದಾರೆ. ಇದೇ ಸ್ಥಳದಲ್ಲಿ ಖಾಸಗಿ ಸಮಿತಿಯಲ್ಲಿರುವ ಅಧ್ಯಕ್ಷರು ಸದಸ್ಯರು ಭಕ್ತರಿಂದ ಹಣ ವಸೂಲಿ ಮಾಡಿ ಸಮುದಾಯ ಭವನ ನಿರ್ಮಿಸಿದ್ದಾರೆ. ಭಕ್ತರ ಅನುಕೂಲಕ್ಕೆ ನಿರ್ಮಿಸದೆ ಹಣ ವಸೂಲಿಗೆ ಮಾಡಿದ್ದಾರೆಂದು ಆರೋಪಿಸಿದರು.
ದೇವಸ್ಥಾನಕ್ಕೆ ಸಂಬಂಧಪಟ್ಟ ಎಲ್ಲ ಆಸ್ತಿ ಕುರಿತು ದಾಖಲೆಗಳನ್ನು ಸಂಗ್ರಹಿಸಿ ಧಾರ್ಮಿಕ ದತ್ತಿ ಇಲಾಖೆ ಅಧೀನದಲ್ಲಿದೆ. ಇಂಥ ದೇವಸ್ಥಾನದ ಹೆಸರಿನಲ್ಲಿ ಅಕ್ರಮವಾಗಿ ಸಮಿತಿಗೆ ಹೆಚ್ಚು ಒತ್ತು ನೀಡುವ ಸಚಿವರ ವಿರುದ್ಧ ತಾವು ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಖಾಸಗಿ ಸಮಿತಿಯಲ್ಲಿ ಸಾಕಷ್ಟು ಪ್ರಭಾವಿ ವ್ಯಕ್ತಿಗಳಿದ್ದು, ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಸಚಿವರು ಅವರ ಬೆಂಬಲಕ್ಕೆ ನಿಂತಿದ್ದಾರೆ. ಅಕ್ರಮಗಳನ್ನು ಹೊರ ತೆಗೆದಿರುವ ದೇವಸ್ಥಾನ ಆಡಳಿತಾಧಿಕಾರಿಗಳನ್ನು ಸಿಎಂ ಸಿದ್ದರಾಮಯ್ಯ, ಧಾರ್ಮಿಕ ದತ್ತಿ ಇಲಾಖೆ ಹಿಂದಿನ ಮಂತ್ರಿ ಪ್ರಕಾಶ ಹುಕ್ಕೇರಿ ಅವರಿಗೆ ಹೇಳಿ ವರ್ಗಾವಣೆ ಮಾಡಿಸುವ ಸಚಿವರ ಹುನ್ನಾರಕ್ಕೆ ಯಾರೂ ಸೊಪ್ಪು ಹಾಕುತ್ತಿಲ್ಲ. ಅದರಿಂದ ತಾವು ದೇವಸ್ಥಾನವನ್ನು ಯಾವುದೇ ಕಾರಣಕ್ಕೂ ಖಾಸಗಿ ಸಮಿತಿಯವರ ಪಾಲಾಗಲು ಬಿಡಲ್ಲ ಎಂದು ಸ್ಪಷ್ಟಪಡಿಸಿದರು.
ದೇವಸ್ಥಾನ ಆವರಣದಲ್ಲಿ ನಿರ್ಮಿಸಿದ ಸಮುದಾಯ ಭವನ ಅರಣ್ಯ ಪ್ರದೇಶದಲ್ಲಿದೆ ಎಂದು ಅರಣ್ಯಾಧಿಕಾರಿ ದೂರು ದಾಖಲಿಸಿದ್ದಾರೆ. ದೇವರ ಹೆಸರಲ್ಲಿ ದೇಣಿಗೆ ವಸೂಲಿ ಮಾಡಿತ್ತಾರೆ. ಖಾಸಗಿ ಸಮಿತಿ ಹೆಸರಲ್ಲಿ ರು. 19 ಲಕ್ಷ ಇದ್ದರೂ ದೇವಸ್ಥಾನದಲ್ಲಿ ಅಭಿವೃದ್ಧಿ ಕಾರ್ಯಕ್ಕೆ ಕೈ ಜೋಡಿಸಿಲ್ಲ. ಇದೇನು ಅವರ ಸ್ವತ್ತಲ್ಲ. ಸರ್ಕಾರದ ನಿಯಮಗಳಂತೆ ನಡೆಯಬೇಕೆಂದು ಕಾನೂನು ಹೋರಾಟ ಮಾಡುತ್ತೇವೆಂದು ಹೇಳುತ್ತಾ, ಬೆಟ್ಟದ ಮಲ್ಲೇಶ್ವರ ಜೀರ್ಣೋದ್ಧಾರ ಎಂಬ ಖಾಸಗಿ ಸಮಿತಿ ಅಧ್ಯಕ್ಷ ಬಾವಿ ಬೆಟ್ಟಪ್ಪ ದೇವಸ್ಥಾನ ಸಮಿತಿ ಅಧ್ಯಕ್ಷರಾಗಲು ಕಾಂಗ್ರೆಸ್ ಸೇರಿದ್ದಾರೆ. ಭಾರಿ ಮಳೆಯಿಂದ ದೇವಸ್ಥಾನಕ್ಕೆ ಅಪಾರ ಹಾನಿಯಾಗಿದೆ. ಮಳೆ ನೀರಿಗೆ ಬಿದ್ದಿರುವ ಕಲ್ಲು ಮಣ್ಣು ಇನ್ನು ತೆರವುಗೊಳಿಸಿಲ್ಲ. ಸಚಿವರು ಭೇಟಿ ನೀಡಿರುವುದು ದೇವಸ್ಥಾನದ ಅಭಿವೃದ್ಧಿಗೆ ಅಲ್ಲ. ಜನರ ಒತ್ತಾಯದ ಮೇರೆಗೆ ಬಂದಿದ್ದಾರೆ. ಇವರಿಗೆ ಯಾವುದೇ ರೀತಿ ಕಾಳಜಿ ತೋರುತ್ತಿಲ್ಲ. ಯಾವ ಅಧಿಕಾರಿಗಳು ಮತ್ತೆ ದೇವಸ್ಥಾನದ ಕಡೆಗೆ ಬಂದಿಲ್ಲ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.