ಅಂಜಿನಮ್ಮ ಬಾ ಎಂದಳು, ಆತ್ಮಹತ್ಯೆ ಮಾಡಿಕೊಂಡೆ!
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಜೂ. 9
ಸತ್ತಿರುವ ಅಜ್ಜಿ ಕರೆದಳೆಂದು ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ವಿಲಕ್ಷಣ ಘಟನೆ ತಾಲೂಕಿನ ಎತ್ತಿನಬೂದಿಹಾಳ್ ಗ್ರಾಮದಲ್ಲಿ ನಡೆದಿದೆ.
ಹುಲಿಯಮ್ಮ (25) ಎಂಬಾಕೆಯ ಅಜ್ಜಿ ಅಂಜಿನಮ್ಮ 10 ವರ್ಷಗಳ ಹಿಂದೆ ಕೊಲೆಯಾಗಿದ್ದರು. ಈಗ ಅಜ್ಜಿ ನನ್ನೊಂದಿಗೆ ಬಾ ಎಂದು ಕರೆದಳೆಂದು ಸೀಮೆಎಣ್ಣೆ ಸುರಿದು, ಬೆಂಕಿ ಹಚ್ಚಿಕೊಂಡು ಹುಲಿಯಮ್ಮ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಹುಲಿಯಮ್ಮಳ ಮೈಗೆ ಹತ್ತಿಕೊಂಡಿದ್ದ ಬೆಂಕಿಯನ್ನು ನಂದಿಸಿ, ಗ್ರಾಮ ಪಂಚಾಯ್ತಿ ಸದಸ್ಯರು ಆಕೆಯನ್ನು ಮಾತನಾಡಿಸಿದ್ದಾರೆ. ಅಂಜಿನಮ್ಮ ನನ್ನನ್ನು ಬಾ ಎಂದು ಕರೆದಳು ಎಂದು ಹುಲಿಯಮ್ಮ ಹೇಳಿದ್ದು, ಮೊಬೈಲ್ನಲ್ಲಿ ರೆಕಾರ್ಡ್ ಆಗಿದೆ. ಅದೇ ರೀತಿ ಪ್ರಕರಣವೂ ದಾಖಲಾಗಿದೆ.
ಎಂಥಾ ವಿಪರ್ಯಾಸ!
ಹುಲಿಯಮ್ಮ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಫರ್ಕುತಿ ಗ್ರಾಮದವಳು. ಆಕೆ 15 ವರ್ಷದವಳಿದ್ದಾಗ ಅಜ್ಜಿ ಅಂಜಿನಮ್ಮಳನ್ನು (ಬಳ್ಳಾರಿ ಜಿಲ್ಲೆಯ ಸಂಜೀವರಾಯನಕೋಟೆ ಈಕೆಯ ತವರೂರು) ಗಂಡನೇ ಹತ್ಯೆ ಮಾಡಿದ್ದ. ಇದರಿಂದ ಹುಲಿಯಮ್ಮ ಘಾಸಿಗೊಂಡಿದ್ದಳು. ಆಕೆಯ ಮೈಯಲ್ಲಿ ಅಂಜಿನಮ್ಮ ಬಂದಿದ್ದಾಳೆ ಎಂದು ದೆವ್ವ ಬಿಡಿಸಿದ್ದರು, ವೈದ್ಯರಿಗೂ ತೋರಿಸಿದ್ದರು. ಗುಣಮುಖಳಾದ ಮೇಲೆ ಎತ್ತಿನಬೂದಿಹಾಳ್ ನಿವಾಸಿ ಎರ್ರಿಸ್ವಾಮಿಗೆ ಐದು ವರ್ಷಗಳ ಹಿಂದೆ ಮದುವೆ ಮಾಡಿಕೊಟ್ಟಿದ್ದರು.
ಗಂಡ-ಹೆಂಡತಿ ಅನ್ಯೋನ್ಯವಾಗಿದ್ದರು. ಇವರಿಗೆ ಎರಡು ವರ್ಷಗಳ ಮಗಳೂ ಇದ್ದಾಳೆ. ಈ ಮಧ್ಯೆ ಎರಡು ವರ್ಷಗಳ ಹಿಂದೆ ಹುಲಿಯಮ್ಮ ಮನೆಯವರಿಗೆ ಗೊತ್ತಿಲ್ಲದಂತೆ ಅಂಜಿನಮ್ಮ ಅವರ ತವರೂರು ಸಂಜೀವರಾಯನ ಕೋಟೆಗೆ ನಡೆದೇ ಹೋಗಿದ್ದಳು. ಜೂ. 7ರಂದು ರಾತ್ರಿ ಅತ್ತೆ, ಮಾವ, ಗಂಡ ಪಕ್ಕದಲ್ಲೇ ಮಲಗಿದ್ದರು.
ಹುಲಿಯಮ್ಮ ಎದ್ದು, ಅಡುಗೆ ಮನೆಗೆ ಹೋಗಿ, ಸೀಮೆ ಎಣ್ಣೆ ಸುರಿದುಕೊಂಡು, ಆತ್ಮಹತ್ಯೆಗೆ ಯತ್ನಿಸಿದ್ದಳು. ಮನೆಯವರು, ಪಕ್ಕದವರು ಸೇರಿ, ಬೆಂಕಿ ನಂದಿಸಿದ್ದಾರೆ. ಏಕೆ ಹೀಗೆ ಮಾಡಿಕೊಂಡೆ ಎಂದು ಕೇಳಿದರೆ, ಅಂಜಿನಮ್ಮ ನನ್ನ ಬಾ ಎಂದು ಕರೆದಳು, ಅದಕ್ಕಾಗಿ ಆತ್ಮಹತ್ಯೆ ಪ್ರಯತ್ನ ಮಾಡಿದ್ದೇನೆ ಎಂದಿದ್ದಾಳೆ. ಕೂಡಲೇ ವಿಮ್ಸ್ ಆಸ್ಪತ್ರೆಗೆ ದಾಖಲಿಸಿದರೂ, ಭಾನುವಾರ ರಾತ್ರಿ ಮೃತಪಟ್ಟಿದ್ದಾಳೆ.
ಇದು ಮನೋವ್ಯಾಧಿ
ಈ ಕಾಯಿಲೆಗೆ ಮನಃಶಾಸ್ತ್ರದಲ್ಲಿ 'ಪೊಸೆಷನ್ ಸಿಂಡ್ರೋಮ್' ಎನ್ನುತ್ತಾರೆ. ಜೀವನದಲ್ಲಿ ನಡೆದಿರುವ ಮಹತ್ವದ ಘಟನೆ ಮನಸ್ಸಿನ ಮೇಲೆ ಪ್ರಭಾವ ಬೀರುತ್ತದೆ. ಈ ಘಟನೆಯಲ್ಲಿ ಹುಲಿಯಮ್ಮನ ಮೇಲೆ ಅಂಜಿನಮ್ಮ ಅವರ ಗಾಢ ಪ್ರಭಾವವಿದೆ. ಹುಲಿಯಮ್ಮ ಸ್ವಂತ ವ್ಯಕ್ತಿತ್ವ ಕಳೆದುಕೊಂಡು, ಅಂಜಿನಮ್ಮಗೆ ಶರಣಾಗುತ್ತಾಳೆ. ಇದರಿಂದಾಗಿ ಇಂಥ ಘಟನೆಗಳು ನಡೆಯುತ್ತವೆ. ಇದು ಮೌಢ್ಯವಲ್ಲ, ಮನೋರೋಗ.
- ಡಾ. ಟಿ.ಆರ್. ಶ್ರೀನಿವಾಸ್,
ಮಾನಸಿಕ ತಜ್ಞರು
-ಶಶಿಧರ ಮೇಟಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

