ಬಳ್ಳಾರಿ

ಪರಿಶಿಷ್ಟರಿಲ್ಲದೂರಲ್ಲಿ ಎಸ್ಸಿ ಸೌಲಭ್ಯ

Published On :

ಕನ್ನಡಪ್ರಭವಾರ್ತೆ, ಕೂಡ್ಲಿಗಿ, ಜೂ. 13
ಪರಿಶಿಷ್ಟ ಜಾತಿಯ ಜನತೆಯ ಇಲ್ಲದ ಊರಿನಲ್ಲಿ ದಲಿತರ ಕಾಲೋನಿ ಎಂದು ಸೃಷ್ಠಿ ಮಾಡಿ ಪರಿಶಿಷ್ಟ ಜಾತಿಗೆ ಸಿಗಬೇಕಾದ ರು. 24 ಲಕ್ಷ ವೆಚ್ಚದ ಕಾಮಗಾರಿಯನ್ನು ಮುಂಜೂರು ಮಾಡಿ ದಲಿತರಿಗೆ ಅನ್ಯಾಯ ಮಾಡಿರುವ ಘಟನೆ ತಾಲೂಕಿನ ಚಪ್ಪರದಹಳ್ಳಿ ಗ್ರಾಮದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ಪರಿಶಿಷ್ಟ ಜಾತಿ ಕಾಲೋನಿಗೆ ಮೂಲಭೂತ ಸೌಕರ್ಯ ಕಲ್ಪಿಸುವ 2011-12ನೇ ಯೋಜನೆಯಡಿ ರು. 24 ಲಕ್ಷ ಅನುದಾನವನ್ನು ತಾಲೂಕಿನ ಚಪ್ಪರದಹಳ್ಳಿ ಗ್ರಾಮಕ್ಕೆ ಸರ್ಕಾರ ಮುಂಜೂರು ಮಾಡಿದ್ದು ಈಗಾಗಲೇ ರು. 13 ಲಕ್ಷ ವೆಚ್ಚದ ಸಿಸಿ ರಸ್ತೆ ಮುಗಿದಿದ್ದು ರು. 11 ಲಕ್ಷದ ಚರಂಡಿ ಕಾಮಗಾರಿ ನಡೆಯಬೇಕಿತ್ತು ಅಷ್ಟರಲ್ಲಿ ಕೊಟ್ಟೂರಿನ ದಲಿತ ಮುಖಂಡರ ಗಮನಕ್ಕೆ ಬಂದಾಗ ಈ ಬಗ್ಗೆ ಆಕ್ಷೇಪವೆತ್ತಿದ್ದಾರೆ. ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿಗಳು ಈ ಗ್ರಾಮಕ್ಕೆ ಭೇಟಿ ನೀಡಿ ತಕ್ಷಣದಿಂದ ಕಾಮಗಾರಿ ನಿಲ್ಲಿಸುವಂತೆ ತಡೆಹಿಡಿದಿದ್ದಾರೆ. ಹೀಗಾಗಿ ರು. 11 ಲಕ್ಷದ ಚರಂಡಿ ಕಾರ್ಯ ಮಾತ್ರ ನಡೆದಿಲ್ಲ. ಉಳಿದ ಕಾಮಗಾರಿಯನ್ನು ತಕ್ಷಣ ತಡೆದು ನಿಜವಾದ ದಲಿತರ ಕಾಲೋನಿಯಲ್ಲಿ ನಡೆಸಲು ಅಧಿಕಾರಿಗಳು ಮುಂದಾಗಬೇಕಿದೆ.
ಒಬ್ಬ ವ್ಯಕ್ತಿಯೂ ಇಲ್ಲ: ಚಪ್ಪರದಹಳ್ಳಿಯಲ್ಲಿ ಪರಿಶಿಷ್ಟ ಜಾತಿಯ ಒಬ್ಬ ವ್ಯಕ್ತಿಯೂ ಇಲ್ಲ. ತಾಲೂಕಿನ ನೂರಾರು ಹಳ್ಳಿಗಳಲ್ಲಿ ಸಹಸ್ರಾರು ದಲಿತರು ವಾಸಿಸುತ್ತಿದ್ದು, ಅಂಥ ಕಾಲೋನಿಗಳಲ್ಲಿ ಈ ಸೌಲಭ್ಯ ನೀಡುವುದನ್ನು ಬಿಟ್ಟು ಅಧಿಕಾರಿಗಳು ರಾಜಕೀಯ ಒತ್ತಾಯಕ್ಕೆ ಮಣಿದು ಮುಂದುವರಿದ ಜನಾಂಗವಿರುವ ಚಪ್ಪರದಹಳ್ಳಿ ಗ್ರಾಮಕ್ಕೆ ದಲಿತರ ಅನುದಾನ ಖರ್ಚು ಮಾಡಲಾಗಿದೆ. ಈ ವ್ಯಾಪ್ತಿಗೆ ಬರುವ ಈ ಗ್ರಾಮಕ್ಕೆ ಆ ಸಮಯದಲ್ಲಿ ನೇಮಿರಾಜ ನಾಯ್ಕ ಹಗರಿಬೊಮ್ಮನಹಳ್ಳಿ ಕ್ಷೇತ್ರದ ಶಾಸಕರಾಗಿದ್ದರು.
ಕಾಲೋನಿಗೆ ರು. 25 ಲಕ್ಷ: ಪರಿಶಿಷ್ಟ ಜಾತಿಯ ಕಾಲೋನಿಗೆ ನೀಡಬೇಕಾದ ರು. 25 ಲಕ್ಷ ಹಣ ವಿವಿಧ ಕಾಮಗಾರಿಗೆ ಜನವರಿ 2012ರಲ್ಲಿ ಮಂಜೂರಾತಿ ದೊರೆತಿದೆ. ದಲಿತರ ಉದ್ಧಾರ ದೇಶದ ಉದ್ಧಾರ ಎಂದು ಹೇಳುವ ಸರ್ಕಾರದ ನೀತಿ ನಿಯಮಗಳು ಇಲ್ಲಿ ರಾಜಕೀಯ ಒತ್ತಡದಿಂದಾಗಿ ಅಧಿಕಾರಿಗಳನ್ನು ಗಾಳಿಗೆ ತೂರಿದ್ದಾರೆ. ಯಾರೇ ತಪ್ಪು ಮಾಡಲಿ ತಪ್ಪಿತಸ್ಥರಿಗೆ ಕಾನೂನು ಕ್ರಮ ಕೈಗೊಂಡು ಚಪ್ಪರದಹಳ್ಳಿಗೆ ಮಂಜೂ ರಾದ ಹಣವನ್ನು ನಿಜವಾದ ದಲಿತರ ಕಾಲೋನಿಗೆ ಬಳಸಬೇಕೆಂದು ಕೊಟ್ಟೂರು ದಲಿತ ಮುಖಂಡರಾದ ಬಿ. ಮರಿಸ್ವಾಮಿ, ಪಿ. ಸಂತೋಷ್‌ಕುಮಾರ್, ಎಲ್. ಕುಬೇರಪ್ಪ, ಡಿ. ಸುರೇಶ್ ಒತ್ತಾಯಿಸಿದ್ದಾರೆ.
ಚಪ್ಪರದಹಳ್ಳಿ ಗ್ರಾಮಕ್ಕೆ ಪರಿಶಿಷ್ಟ ಜಾತಿ ಕಾಲೋನಿಗಳಲ್ಲಿ ಮೂಲಭೂತ ಸೌಕರ್ಯ ಕಲ್ಪಿಸುವ ಯೋಜನೆಗೆ ಮಂಜೂರಾಗಿತ್ತು. ಆದರೆ, ಎರಡು ತಿಂಗಳು ಹಿಂದೆ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿಗಳು ಚಪ್ಪರದಹಳ್ಳಿ ಗ್ರಾಮಕ್ಕೆ ಭೇಟಿ ನೀಡಿದಾಗ ರು. 13 ಲಕ್ಷ ವೆಚ್ಚದ ಸಿಸಿ ರಸ್ತೆ ಕಾಮಗಾರಿ ಮುಗಿದಿತ್ತು. ಉಳಿದ ರು. 11 ಲಕ್ಷ ವೆಚ್ಚದ ಚರಂಡಿ ಕಾಮಗಾರಿ ಮಾತ್ರ ಬಾಕಿ ಇತ್ತು. ಆಗ ಅಧಿಕಾರಿಗಳು ಚರಂಡಿ ಕಾಮಗಾರಿ  ನಿಲ್ಲಿಸುವಂತೆ ಆದೇಶ ನೀಡಿದ್ದರು. ಅಂದಿನಿಂದಲೇ ಕಾಮಗಾರಿಯನ್ನು ನಿಲ್ಲಿಸಲಾಗಿದೆ.
- ನಾಗಪ್ಪ,
ಕೂಡ್ಲಿಗಿ ಪಂಚಾಯತ್‌ರಾಜ್
ಎಂಜಿನಿಯರಿಂಗ್ ಇಲಾಖೆಯ
ಸಹಾಯಕ ಅಭಿಯಂತ

-ಭೀಮಣ್ಣ ಗಜಾಪುರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.