ಬಳ್ಳಾರಿ

ಮೂಲ ಸೌಕರ್ಯದ ಕೊರತೆ: ಮಹಿಳೆಯರ ಅಳಲಿನ ಸುರಿಮಳೆ

Published On :

ಹೂವಿನಹಡಗಲಿ: ಮನೆ ಬಾಗಿಲಿಗೆ ಪುರಸಭೆ ಆಡಳಿತ ಅಭಿಯಾನದಲ್ಲಿ ಮೂಲಭೂತ ಸೌಕರ್ಯ ವಂಚಿತ ಮಹಿಳೆಯರು ಸಾಲು ಸಾಲಾಗಿ ನಿಂತು ಅಧ್ಯಕ್ಷರು ಮತ್ತು ಪುರಸಭೆ ಸಿಬ್ಬಂದಿಗೆ ತಮ್ಮ ಅಳಲನ್ನು ತೋಡಿಕೊಂಡಿರುವ ಘಟನೆ ಪಟ್ಟಣದ ರಾಜೀವ ನಗರದಲ್ಲಿ ನಡೆದಿದೆ.
10-15 ವರ್ಷಗಳಿಂದ 18ನೇ ವಾರ್ಡಿನ ರಾಜೀವ್ ನಗರಕ್ಕೆ ಸುತ್ತಿಕೊಂಡಿರುವ ಹತ್ತಾರು ಮೂಲಭೂತ ಸಮಸ್ಯೆಗಳ ನಡುವೆ ಜೀವನ ಸಾಗಿಸಿದ್ದೇವೆ. ಕೆಲವು ಅಧಿಕಾರಿಗಳ ನಿರ್ಲಕ್ಷ್ಯದಿಂದ  ಮೂಲಭೂತ ಸೌಲಭ್ಯಗಳು ಮರೀಚಿಕೆಯಾಗಿವೆ ಎಂದು ದೂರಿದರು.
ಇವರೆಗೂ ಯಾವ ಪುರಸಭೆ ಸಿಬ್ಬಂದಿ ಮತ್ತು ವಾರ್ಡ್ ಸದಸ್ಯರು ಭೇಟಿ ನೀಡಿ ಸಮಸ್ಯೆಯನ್ನು ಆಲಿಸಿಲ್ಲ, ಕೊನೆಗೂ ನೀವಾದರೂ ಒಂದು ಕಾರ್ಯಕ್ರಮದ ಮೂಲಕ ಬಂದು ಸಮಸ್ಯೆ ಆಲಿಸಿದ್ದೀರಿ. ಈ ರೀತಿ ಜನಪ್ರತಿನಿಧಿಗಳು ಭೇಟಿ ನೀಡಿದಾಗ ಪರಿಹಾರ ಸಿಗಬಹುದೆಂಬ ನಿರೀಕ್ಷೆಯಲ್ಲಿದ್ದೇವೆ ಎನ್ನುತ್ತಾರೆ ಮಹಿಳೆಯರು.
ಅಹವಾಲುಗಳ ಸುರಿಮಳೆ: ರಾಜೀವ್ ನಗರದಲ್ಲಿ 400 ಮನೆಗಳಿದ್ದರೂ ಮಹಿಳಾ ಶೌಚಾಲಯವಿಲ್ಲ. ಬೀದಿ ದೀಪಗಳಿಲ್ಲದೇ ನಿತ್ಯ ವಿಷಜಂತುಗಳ ನಡುವೆ ಕಗ್ಗತ್ತಲೆಯಲ್ಲಿ ಬದುಕುತ್ತಿದ್ದೇವೆ. ವಿದ್ಯುತ್ ಕಂಬ ಅಳವಡಿಸಿ ಬೀದಿ ದೀಪ, ಸೋಲಾರ್ ದೀಪದ ವ್ಯವಸ್ಥೆ, ಬಡಾವಣೆ ಸುತ್ತಲೂ ಮುಳ್ಳಿನ ಬೇಲಿ ಸ್ವಚ್ಛತೆ ಚರಂಡಿ ಮತ್ತು ಸಿಸಿ ರಸ್ತೆ ನಿರ್ಮಾಣ, ಎಲ್ಲ ಆಶ್ರಯ ಮನೆಗಳಿಗೆ ವೈಯಕ್ತಿಕ ಶೌಚಾಲಯ ನಿರ್ಮಾಣ ಮಂಜೂರು ಮಾಡಬೇಕೆಂದು ಮಹಿಳೆಯರು ಮನವಿ ಸಲ್ಲಿಸಿದರು.
ಬಡಾವಣೆಯ ಪಕ್ಕದ ಹಳ್ಳದಲ್ಲಿ ಸಕಷ್ಟು ಹೂಳು ತುಂಬಿಕೊಂಡಿದ್ದರಿಂದ ಹಳ್ಳದ ನೀರು ಮನೆಯೊಳಗೆ ನುಗ್ಗದಂತೆ ಕಲ್ಲಿನ ಗೋಡೆ ನಿರ್ಮಾಣ, ನಗರದ ಎ,ಬಿ ಬ್ಲಾಕ್‌ನಲ್ಲಿ 1500 ಮನೆಗಳಿದ್ದರೂ ಒಂದು ಉದ್ಯಾನವನ ಇಲ್ಲ, ಹಿರಿಯ ನಾಗರಿಕರು, ಮಕ್ಕಳು ಮತ್ತು ವಿಕಲಚೇತನರು ಮತ್ತು ಮಹಿಳೆಯರನ್ನು ಗಮನದಲ್ಲಿಟ್ಟುಕೊಂಡು ಒಂದು ಸುಂದರ ಉದ್ಯಾನವನ ನಿರ್ಮಾಣ ಮಾಡಬೇಕೆಂಬ ಬೇಡಿಕೆ ಸಲ್ಲಿಸಿದರು.
ಪುರಸಭೆ ಅಧ್ಯಕ್ಷ ಕೋಡಿಹಳ್ಳಿ ಸಣ್ಣಕೊಟ್ರೇಶ್, ಮುಖ್ಯಾಧಿಕಾರಿ ನೂರುಲ್ಲಾಖಾನ್, 18ನೇ ವಾರ್ಡ್ ಸದಸ್ಯ ಹನುಮಂತಪ್ಪ, ಹಂಪಸಾಗರ ಖಾಜ, ಪುರಸಭೆ ಅಧಿಕಾರಿಗಳಾದ ನಾಗರಾಜಪ್ಪ, ಶ್ರೀನಿವಾಸ್, ರಾಮಮೂರ್ತಿ, ಜಬೀವುಲ್ಲಾ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.