ಬಳ್ಳಾರಿ

ಆಲಿಕಲ್ಲು ಮಳೆಗೆ ಅಪಾರ ಬೆಳೆ ನಷ್ಟ

Published On :

ಕನ್ನಡಪ್ರಭ ವಾರ್ತೆ, ಬಳ್ಳಾರಿ/ಕಂಪ್ಲಿ, ಮಾ. 4
ಜಿಲ್ಲೆಯ ಬಳ್ಳಾರಿ ತಾಲೂಕು ಹಾಗೂ ಕಂಪ್ಲಿ ಪಟ್ಟಣ ವ್ಯಾಪ್ತಿಯಲ್ಲಿ ಕೆಲ ಗ್ರಾಮಗಳಲ್ಲಿ ಸೋಮವಾರ ಸಂಜೆ ಅಕಾಲಿಕ ಆಲಿಕಲ್ಲು ಮಳೆ ಸುರಿಯಿತು. ಮಳೆಯಿಂದಾಗಿ ಕೆಲ ಕಡೆಗಳಲ್ಲಿ ಬತ್ತ, ಟೊಮೆಟೊ, ಹತ್ತಿ, ಸಪೋಟ ಬೆಳೆ ಹಾನಿಯಾಗುವ ರೈತರ ಆತಂಕಕ್ಕೆ ಕಾರಣವಾಗಿದೆ.
ಸೋಮವಾರ ಸಂಜೆ ಜಿಲ್ಲೆಯ ಬಳ್ಳಾರಿ ತಾಲೂಕಿನಲ್ಲಿ ಮೋಡ ಕವಿದ ವಾತಾವರಣವಿತ್ತು, ಸಂಜೆ ಹೊತ್ತಿಗೆ ಮೋಕಾ ಹೋಬಳಿ ವ್ಯಾಪ್ತಿಯ ಡಿ. ನಾಗೇನಹಳ್ಳಿ ಸೇರಿದಂತೆ ಇತರ ಭಾಗದಲ್ಲಿ ಆಲಿಕಲ್ಲು ಮಳೆಯಾಗಿದ್ದು, ಡಿ. ನಾಗೇನಹಳ್ಳಿಯಲ್ಲಿ ಸಪೋಟ ಬೆಳೆಗೆ ಹಾನಿಯಾಗಿದೆ. ಇದರಿಂದಾಗಿ ಲಕ್ಷಾಂತರ ರು. ನಷ್ಟವಾಗಿದೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ. ಆದರೆ ಈ ಕುರಿತಾಗಿ ಯಾವುದೆ ಅಧಿಕೃತ ಮಾಹಿತಿ ಬಂದಿಲ್ಲ ಎಂದು ಬಳ್ಳಾರಿ ತಹಸೀಲ್ದಾರ್ ತಿಳಿಸಿದ್ದಾರೆ. ಇನ್ನು ತಾಲೂಕಿನ ಶ್ರೀಧರಗಡ್ಡೆ ಸೇರಿದಂತೆ ಇತರ ಹಳ್ಳಿಗಳಲ್ಲೂ ಆಲಿಕಲ್ಲು ಮಳೆಯಾದ ವರದಿಯಾಗಿದೆ.
ಕಂಪ್ಲಿ ಸಮೀಪದ ಮಾವಿನಹಳ್ಳಿ ಗ್ರಾಮ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಆಲಿಕಲ್ಲು ಮಳೆಯಾಗಿದೆ. ಮಾವಿನಹಳ್ಳಿ ಗ್ರಾಮವೊಂದರಲ್ಲಿಯೆ ಅಪಾರ ಪ್ರಮಾಣದ ಹತ್ತಿ, ಬಾಳೆ, ಟೊಮೆಟೊ ಬೆಳೆ ಹಾನಿಯಾಗಿದೆ. ಬತ್ತದ ಬೆಳೆ ನೆಲೆಸಮವಾಗಿದೆ. ಸುಮಾರು 5ಕ್ಕೂ ಹೆಚ್ಚು ಗುಡಿಸಲುಗಳು ಬಿರುಗಾಳಿಗೆ ಉರುಳಿ ಬಿದ್ದಿವೆ. ರೈತರು ಹೊಲ ಗದ್ದೆಗಳ ಪೈರಿಗೆ ಹಾಕಲು ತಂದಿಟ್ಟುಕೊಂಡಿದ್ದ ರಸಗೊಬ್ಬರ ಮಳೆ ನೀರಿನಿಂದ ಸಂಪೂರ್ಣ ಹಾಳಾಗಿದೆ. ಆಲಿಕಲ್ಲು ಮಳೆಗೆ ಸಿ. ಕೊಳಗಲ್ ಸಿದ್ದಪ್ಪ ಎನ್ನುವವರ ಗುಡಿಸಲಿನ ಮೇಲ್ಛಾವಣಿ ಕುಸಿದು ಗುಡಿಸಲಿನಲ್ಲಿದ್ದ 20 ಚೀಲ ಅಕ್ಕಿ, 15 ಚೀಲ ರಸಗೊಬ್ಬರ, 10 ಕ್ವಿಂಟಲ್ ಹತ್ತಿ ನಾಶವಾಗಿದೆ. ಕೊಳ್ಳೆಗಾಲ ದೇವಣ್ಣ ಎನ್ನುವವರು ಸಂಗ್ರಹಿಸಿಟ್ಟಿದ್ದ 40 ಚೀಲ ಗೊಬ್ಬರ, ಮಲ್ಲಯ್ಯನವರಿಗೆ ಸೇರಿದ 50 ಚೀಲ ಗೊಬ್ಬರ ಮಳೆಗೆ ತೊಯ್ದು ಹಾಳಾಗಿದೆ.
ಕಂಪ್ಲಿ ಭಾಗದ ರೈತ ಮುಖಂಡ ನಾರಾಯಣ ಸ್ವಾಮಿ, ನಾಯಕರ ಸಿದ್ದಪ್ಪ, ಚಲುವಾದಿ ತಿಪ್ಪಯ್ಯ, ದೇವಣ್ಣ, ಸುಬ್ರಹ್ಮಣ್ಯ ಇವರು ಮಾತನಾಡಿ, ಇದೇ ಮೊದಲ ಬಾರಿಗೆ ನಮ್ಮ ಗ್ರಾಮದಲ್ಲಿ ಆಲಿಕಲ್ಲು ಮಳೆಯಾಗಿದ್ದು, ಮಳೆಯ ಬಗ್ಗೆ ಯಾವುದೆ ಮಾಹಿತಿ ಇಲ್ಲದೆ ರೈತರಿಗೆ ಹಾನಿ ಉಂಟಾಗಿದೆ. ಸುಮಾರು ಒಂದು ಸಾವಿರ ಎಕರೆ ಪ್ರದೇಶದಲ್ಲಿ ಬೆಳೆದ ಬತ್ತ, 50 ಎಕರೆ ಪ್ರದೇಶದಲ್ಲಿ ಬೆಳೆದ ಬಾಳೆ ಆಲಿಕಲ್ಲು ಮಳೆಗೆ ತುತ್ತಾಗಿದೆ. ರೈತರು ತೀವ್ರ ಸಂಕಷ್ಟ ಅನುಭವಿಸುಂತಾಗಿದೆ. ಹಾಲು ತುಂಬುತ್ತಿರುವ ಬತ್ತದ ಬೆಳೆ ಆಲಿಕಲ್ಲು ಮಳೆಗೆ ಶೇ. 50ರಷ್ಟು ಹಾಳಾಗಿದೆ. ಸರ್ಕಾರ ಕೂಡಲೆ ಗಮನಹರಿಸಿ ಮಳೆಯಿಂದಾದ ಹಾನಿ ತುಂಬಿಕೊಡಬೇಕು ಎಂದು ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.