ಬೇಡಿಕೆಗಾಗಿ ಗಣಿ ಕಾರ್ಮಿಕರ ಒತ್ತಾಯ
ಬಳ್ಳಾರಿ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ, ಸಂಯುಕ್ತ ಗಣಿ ಕಾರ್ಮಿಕರ ಸಂಘದ ಆಶ್ರಯದಲ್ಲಿ ಎಸ್ಡಬ್ಲ್ಯೂಎಂಎಲ್ ಗುತ್ತಿಗೆ ಕಾರ್ಮಿಕರ ಸಮಿತಿಯು ನಗರದಲ್ಲಿ ಮಂಗಳವಾರ ಪ್ರತಿಭಟನಾ ಮೆರವಣಿಗೆ ನಡೆಸಿತು.
ಸಂಯುಕ್ತ ಗಣಿ ಕಾರ್ಮಿಕರ ಸಂಘದ ಅಧ್ಯಕ್ಷ ಕೆ. ಸೋಮಶೇಖರ್ ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿ, ಜಿಲ್ಲೆಯ ಸಂಡೂರು ತಾಲೂಕಿನ ತೋರಣಗಲ್ಲು ಸಮೀಪದ ಎಸ್ಡಬ್ಲ್ಯೂಎಂಎಲ್ ಕಂಪನಿಯು ಸುಮಾರು 800 ಕಾರ್ಮಿಕರನ್ನು ಹಲವಾರು ವರ್ಷಗಳಿಂದ ಗುತ್ತಿಗೆದಾರರ ಮೂಲಕ ನೇಮಕ ಮಾಡಿಕೊಂಡು ಕಾರ್ಯನಿರ್ವಹಿಸುತ್ತಿದೆ. ಇದು ಜಿಂದಾಲ್ ಸ್ಟೀಲ್ ಸಮೂಹದ ಒಂದು ಭಾಗವಾಗಿದೆ. ತಿಮ್ಮಪ್ಪನ ಗುಡಿ ಬಳಿ ಗಣಿಗಾರಿಕೆ ಮಾಡುವ ಜತೆಗೆ ಜಿಲ್ಲೆಯ ವಿವಿಧ ಗಣಿಗಳಿಂದ ಕಬ್ಬಿಣದ ಅದಿರನ್ನು ಪಡೆದು ಜಿಂದಾಲ್ ಸ್ಟೀಲ್ಗೆ ಸರಬರಾಜು ಮಾಡುವ ಪ್ರಮುಖವಾದ ಎಲ್ಲ ಕೆಲಸಗಳನ್ನು ಗುತ್ತಿಗೆ ಕಾರ್ಮಿಕರಿಂದ ಮಾಡಿಸಲಾಗುತ್ತಿದೆ. ಆದರೆ ಈ ಕಾರ್ಮಿಕರಿಗೆ ನ್ಯಾಯಯುತವಾಗಿ ದೊರೆಯಬೇಕಾದ ಕಾನೂನು ಬದ್ಧ ಸವಲತ್ತುಗಳು ಕೂಡ ದೊರೆಯುತ್ತಿಲ್ಲ. ನ್ಯಾಯ ಕೇಳಿದ ಹಲವು ಕಾರ್ಮಿಕರನ್ನು ಕೆಲಸದಿಂದ ತೆಗೆದುಹಾಕಲಾಗಿದೆ ಎಂದು ಆರೋಪಿಸಿದರು. 10 ಕಾರ್ಮಿಕರಿಗೆ ಐದಾರು ತಿಂಗಳಿಂದ ಕೆಲಸ ನೀಡದೆ ಹೊರ ಹಾಕಲಾಗಿದೆ. ಇವರಿಗೆ ತಕ್ಷಣ ಕೆಲಸ ನೀಡಬೇಕು. ಐದು ತಿಂಗಳ ಬಾಕಿ ವೇತನ ಪಾವತಿಸಬೇಕು ಎಂದು ಒತ್ತಾಯಿಸಿದರು.
ಎಸ್ಡಬ್ಲ್ಯೂಎಂಎಲ್ ಗುತ್ತಿಗೆ ಕಾರ್ಮಿಕರಿಗೆ ಪ್ರತಿವರ್ಷ ಸಮವಸ್ತ್ರ ಒದಗಿಸಬೇಕು. ಇನ್ಸೆಂಟಿವ್ ಮತ್ತು ಇಂಕ್ರಿಮೆಂಟ್ ನೀಡುವಲ್ಲಿ ವಿಳಂಬ ತಪ್ಪಿಸಬೇಕು. ಇವುಗಳ ಮೊತ್ತ ಹೆಚ್ಚಿಸಬೇಕು. ಪ್ರತಿ ತಿಂಗಳು 10ರೊಳಗಾಗಿ ವೇತನ ನೀಡಬೇಕು. ಕಿರುಕುಳ ತಪ್ಪಿಸಬೇಕು. ಕಾರ್ಮಿಕ ಕಾಯ್ದೆಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ರಜೆ ದಿನಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ವೇತನದ ಎರಡರಷ್ಟು ಹಣ ಪಾವತಿಸಬೇಕು ಹಾಗೂ ಇತರೆ ಬೇಡಿಕೆಗಳನ್ನು ಈಡೇರಿಸುವಂತೆ ಕಾರ್ಮಿಕರು ಆಗ್ರಹಿಸಿದರು.
ನಂತರ ಕಾರ್ಮಿಕ ಆಯುಕ್ತರಿಗೆ ಮನವಿಪತ್ರ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಆರ್. ಸೋಮಶೇಖರಗೌಡ, ಎ. ದೇವದಾಸ್, ನಾಗಲಕ್ಷ್ಮೀ, ಮಂಜುಳಾ ಹಾಗೂ ಬಸಪ್ಪ, ಮಹೇಂದ್ರ, ಕುಮಾರಸ್ವಾಮಿ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

