16ರಂದು ದೊಡ್ಡಬಸವೇಶ್ವರ ರಥೋತ್ಸವ
ಕುರುಗೋಡು: ಧಾರ್ಮಿಕ ದತ್ತಿ ಇಲಾಖೆಯ ಎ ಶ್ರೇಣಿಗೆ ಒಳಪಟ್ಟ ಪಟ್ಟಣದ ಐತಿಹಾಸಿಕ ದೊಡ್ಡಬಸವೇಶ್ವರ ಸ್ವಾಮಿ ರಥೋತ್ಸವ ಮಾ. 16ರಂದು ನಡೆಯಲಿದ್ದು, ಇದಕ್ಕೆ ಪೂರ್ವಭಾವಿ ಸಿದ್ಧತೆ ಭರದಿಂದ ಸಾಗಿದೆ. ಜಾತ್ರೆಗೆ ಒಂದು ಲಕ್ಷಕ್ಕೂ ಅಧಿಕ ಭಕ್ತರು ಬರುವ ನಿರೀಕ್ಷೆ ಇದೆ.
ಭಕ್ತರು ಪಾಲಿಸಬೇಕಾದ ಕೆಲ ನಿಯಮದ ಬಗ್ಗೆ ಇಲಾಖೆ ಪ್ರಕಟಣೆ ಹೊರಡಿಸಿದ್ದು, ಭಕ್ತರು ಸಲ್ಲಿಸಿದ ರು. 3000 ಬ್ಯಾಂಕ್ ಠೇವಣಿಯಿಂದ ಬರುವ ಬಡ್ಡಿಯಲ್ಲಿ ದೇವರಿಗೆ ನಿತ್ಯ ರುದ್ರಾಭಿಷೇಕ ನಡೆಸಲಾಗುವುದು. ಸದ್ರಿ ಠೇವಣಿಗಳು ಭಕ್ತರ ಹೆಸರಲ್ಲಿದ್ದು, ಇದನ್ನು ತಕ್ಷಣ ದೇವಸ್ಥಾನದ ಉಳಿತಾಯ ಖಾತೆಗೆ ಜಮಾಗೊಳಿಸಬೇಕು. ಭಕ್ತಾದಿಗಳು ದೇವಸ್ಥಾನಕ್ಕೆ ಕಾಣಿಕೆಯಾಗಿ ನೀಡುವ ಚಿನ್ನ, ಬೆಳ್ಳಿ ಅಭರಣ, ದವಸ ಧಾನ್ಯದ ಬಗ್ಗೆ ಆಡಳಿತ ಕಚೇರಿಯಿಂದ ಸೂಕ್ತ ರಶೀದಿ ಪಡೆಯುವಂತೆ ಇಲಾಖೆ ತಿಳಿಸಿದೆ.
ಜಾತ್ರೆಗೆ ಮುನ್ನ ಹಾಗೂ ನಂತರ ಪಟ್ಟಣದಲ್ಲಿ ಸ್ವಚ್ಛತೆ ಕಾಯ್ದುಕೊಳ್ಳಲು ಹಾಗೂ ಸೂಕ್ತ ಭದ್ರತೆ ನೀಡಲು ಗ್ರಾಪಂ ಸಮುದಾಯ ಆರೋಗ್ಯ ಕೇಂದ್ರ, ಪೊಲೀಸ್ ಠಾಣೆ, ಗೃಹರಕ್ಷಕ ದಳದ ಅಧಿಕಾರಿಗೆ ಸೂಚನೆ ನೀಡಲಾಗಿದ್ದು, ಪಟ್ಟಣದಲ್ಲಿನ ಎಲ್ಲ ಚರಂಡಿ ಸ್ವಚ್ಛತೆ, ತೇರುಬೀದಿ ಸ್ವಚ್ಛತೆ, ದೇವಸ್ಥಾನದ ಸುತ್ತಮುತ್ತಲಿನ ರಸ್ತೆ ಧೂಳು ನಿಯಂತ್ರಿಸಲು ನೀರು, ಕುಡಿವ ನೀರಿನ ಪೈಪ್ಲೈನ್ ದುರಸ್ತಿ, ಸಾಂಕ್ರಾಮಿಕ ರೋಗ ಹರಡದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ.
ರಥದ ಅಲಂಕಾರಕ್ಕೆ ಅಗತ್ಯವಾದ ಜೋಡಣೆ ಕಾರ್ಯದಲ್ಲಿ ಸಾಂಪ್ರದಾಯಿಕ ಕೈ ಕಸುಬುದಾರರು ಭರದಿಂದ ಕೆಲಸ ನಡೆಸಿದ್ದಾರೆ. ಮಾರ್ಚ್ 8ರಿಂದ 15ರ ವರೆಗೆ ಪ್ರತಿದಿನ ಸ್ವಾಮಿಗೆ ಮತ್ತು ನೀಲಮ್ಮ ದೇವಿಗೆ ಕಂಕಣ ಕಟ್ಟುವ ಕಾರ್ಯ, ನಾಗಾಭರಣ, ಸಿಂಹ, ನವಿಲು, ಅಶ್ವ, ಬಿಳಿ ಬಸವ, ನೀಲಮ್ಮ ದೇವತೆಗೆ ಉಡಿ ತುಂಬವ, ಗಜ ಉತ್ಸವ ನಡೆದು ಮಾ. 16ರಂದು ಮಹಾ ರಥೋತ್ಸವ ನಡೆಯಲಿದೆ. ಈ ಎಲ್ಲ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಭಕ್ತರಿಗೆ ಮಾರ್ಚ್ 8ರಿಂದಲೆ ಧಾರ್ಮಿಕ ದತ್ತಿ ಇಲಾಖೆ ಪಕ್ಕದ ರೈತ ಸಮುದಾಯ ಭವನದಲ್ಲಿ ಅನ್ನ ದಾಸೋಹ ಹಮ್ಮಿಕೊಂಡಿದೆ. ಬಂದ ಭಕ್ತರಿಗೆ ಕುಡಿವ ನೀರು ಒದಗಿಸಲು ದೇವಸ್ಥಾನದ ಹೊರ ಮತ್ತು ರೈತ ಸಮುದಾಯ ಭವನದ ಪಕ್ಕದಲ್ಲಿ ಒಟ್ಟು 30ಕ್ಕೂ ಹೆಚ್ಚು ಸಾರ್ವಜನಿಕ ಟ್ಯಾಪ್ ನಿರ್ಮಿಸಲಾಗಿದೆ. ರಥಕ್ಕೆ ಹೊಸ ಮಿಣಿ ಒದಗಿಸಿದ್ದು, ಭಕ್ತರ ರಕ್ಷಣೆಗೆ ದೇವಸ್ಥಾನದ ಪ್ರದೇಶದಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ ಎಂದು ಧಾರ್ಮಿಕ ದತ್ತಿ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

