ಬಳ್ಳಾರಿ

ಆದೋನಿ: ಇಂದು ಸಭೆ

Published On :

ಬಳ್ಳಾರಿ: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಆಂಧ್ರಪ್ರದೇಶ ಗಡಿಭಾಗದ ಕರ್ನಾಟಕದ ಬಳ್ಳಾರಿ, ರಾಯಚೂರು ಹಾಗೂ ಆಂಧ್ರಪ್ರದೇಶದ ಅನಂತಪುರ, ಕರ್ನೂಲು ಜಿಲ್ಲೆಗಳ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಸಭೆ ಮಾ. 14ರಂದು ಬೆಳಗ್ಗೆ 11ಕ್ಕೆ ಆಂಧ್ರಪ್ರದೇಶದ ಆದೋನಿಯಲ್ಲಿ ನಡೆಯಲಿದೆ ಎಂದು ಎಸ್ಪಿ ಡಾ೤ ಚೇತನ್‌ಸಿಂಗ್ ರಾಥೋಡ್ ತಿಳಿಸಿದ್ದಾರೆ. ಈ ಕುರಿತು 'ಕನ್ನಡಪ್ರಭ'ದೊಂದಿಗೆ ಮಾತನಾಡಿ ಅವರು, ಸಭೆಯಲ್ಲಿ ಎರಡು ರಾಜ್ಯಗಳ ಗಡಿಭಾಗದಲ್ಲಿರುವ ಜಂಟಿ ಚೆಕ್ ಪೋಸ್ಟ್ ವ್ಯವಸ್ಥೆ, ಲಿಕ್ಕರ್, ಹಣ ಅಕ್ರಮ ಸಾಗಾಣಿಕೆ, ಕ್ರಾಸ್ ಓಟರ್‌ಗಳು, ರೌಡಿಶೀಟರ್‌ಗಳ ಮಾಹಿತಿ ಕುರಿತಾಗಿ ಚರ್ಚಿಸಲಾಗುತ್ತದೆ. ಚುನಾವಣೆ ನೀತಿಸಂಹಿತೆ ಉಲ್ಲಂಘನೆಯಾಗದಂತೆ ಕ್ರಮ ವಹಿಸುವುದು ಮುಂತಾದ ವಿಷಯಗಳ ಬಗ್ಗೆ ನಾಲ್ಕು ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಎಸ್ಪಿಗಳು ಚರ್ಚೆ ನಡೆಸಲಿದ್ದಾರೆ. ಗಡಿಭಾಗದಲ್ಲಿ ಚುನಾವಣೆ ಸೂಕ್ಷ್ಮತೆ ಇರುವುದರಿಂದ, ಚುನಾವಣೆ ಆಯೋಗದ ನಿರ್ದೇಶನದ ಮೇರೆಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.
ಇಂದು ಉಪನ್ಯಾಸ
ಹೊಸಪೇಟೆ: ಹಂಪಿ ಕನ್ನಡ ವಿಶ್ವವಿದ್ಯಾಲಯದ ಕನ್ನಡ ಭಾಷಾಧ್ಯಯನ ವಿಭಾಗದಿಂದ ಕೆಎಲ್‌ಇ ಸಂಸ್ಥೆ ದತ್ತಿ ನಿಧಿ ಉಪನ್ಯಾಸ ಕಾರ್ಯಕ್ರಮ ಹಂಪಿ ವಿಶ್ವವಿದ್ಯಾಲಯದ ಕನ್ನಡ ಭಾಷಾಂತರ ವಿಭಾಗದಲ್ಲಿ ಮಾ. 14ರಂದು ಬೆಳಗ್ಗೆ 11ಕ್ಕೆ ನಡೆಯಲಿದೆ. ಬಹುಭಾಷಾ ವಿದ್ವಾಂಸ ಡಾ. ರಾಬರ್ಟ್ ವಿಲಿಯಂ ಡಿಸಿಲ್ವಾ ಅವರು ಭಾಷಾ ವಿಜ್ಞಾನ ಮತ್ತು ಇತರೆ ಜ್ಞಾನ ಶಿಸ್ತುಗಳ ಕುರಿತು ಉಪನ್ಯಾಸ ನೀಡುವರು. ವಿವಿ ಕುಲಸಚಿವ ಡಾ. ವಿಜಯ್ ಪೂಣಚ್ಚ ತಂಬಂಡ, ವಿವಿ ಕನ್ನಡ ಭಾಷಾಧ್ಯಯನ ವಿಭಾಗದ ಮುಖ್ಯಸ್ಥ ಡಾ. ಸಾಂಬಮೂರ್ತಿ ಸೇರಿದಂತೆ ಇತರರು ಭಾಗವಹಿಸುವರು ಎಂದು ಪ್ರಕಟಣೆ ತಿಳಿಸಿದೆ.
16ರಂದು ವಚನ ಸ್ಪರ್ಧೆ
ಕಂಪ್ಲಿ: ಇಲ್ಲಿನ ಓದ್ಸೋ ಕರಿಬಸಯ್ಯನವರ ಶಿವಾನಂದಾಶ್ರಮದಲ್ಲಿ ಗೊಗ್ಗ ಚನ್ನಬಸಯ್ಯನವರ 16ನೇ ಪುಣ್ಯ ಸ್ಮರಣೋತ್ಸವದ ಅಂಗವಾಗಿ ಮಾ. 16ರಂದು ಸಂಜೆ ಮಕ್ಕಳಿಗಾಗಿ ವಚನ ಸ್ಪರ್ಧೆ ಏರ್ಪಡಿಸಲಾಗಿದೆ ಎಂದು ಟ್ರಸ್ಟಿ ಗೊಗ್ಗ ಚನ್ನಬಸವರಾಜ ತಿಳಿಸಿದ್ದಾರೆ. ಅಂದು ಸಂಜೆ 6ಕ್ಕೆ ನಡೆಯುವ ಪುಣ್ಯಸ್ಮರಣೋತ್ಸವ ಸಮಾರಂಭದ ಸಾನ್ನಿಧ್ಯವನ್ನು ಕಲ್ಮಠದ ಅಭಿನವ ಪ್ರಭು ಮಹಾಸ್ವಾಮೀಜಿ ವಹಿಸಲಿದ್ದು, ಹಗರಿಬೊಮ್ಮನಹಳ್ಳಿಯ ನಿವೃತ್ತ ಮುಖ್ಯಗುರು ಎಸ್.ಎಸ್.ಎಂ. ಹಿರೇಮಠ ವಚನ ಸಾಹಿತ್ಯದ ಮೌಲ್ಯಗಳು ಕುರಿತು ಶಿವಾನುಭವ ಪ್ರವಚನ ನೀಡಲಿದ್ದಾರೆ. ವಚನ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಬಯಸುವ 5ರಿಂದ 15 ವರ್ಷದೊಳಗಿನ ಮಕ್ಕಳು ತಮ್ಮ ಹೆಸರನ್ನು ನೋಂದಾಯಿಸಲು ಮುಕ್ಕುಂದಿ ರುದ್ರಾಣಿ-9449136255 ಮತ್ತು 9448718855ನ್ನು ಸಂಪರ್ಕಿಸಲು ಕೋರಿದ್ದಾರೆ.
ಸುರೇಶ್‌ಗೆ ಸನ್ಮಾನ
ಬಳ್ಳಾರಿ: ಕರ್ನಾಟಕ ರಕ್ಷಣಾ ವೇದಿಕೆ (ಶಿವರಾಮೇಗೌಡ ಬಣ) ಜಿಲ್ಲಾಧ್ಯಕ್ಷ ಎಸ್. ಸುರೇಶ್ ವೇದಿಕೆಯ ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿ ನೇಮಕವಾದ ಹಿನ್ನೆಲೆಯಲ್ಲಿ ಕರವೇ ಕೊಪ್ಪಳ ಜಿಲ್ಲಾ ಘಟಕದಿಂದ ಗೌರವಿಸಿ ಸನ್ಮಾನಿಸಲಾಯಿತು. ಬೆಂಗಳೂರಿನಲ್ಲಿ ಈಚೆಗೆ ನಡೆದ ರಾಜ್ಯ ಮಟ್ಟದ ಸಭೆಯಲ್ಲಿ ಕರವೇ ಬಳ್ಳಾರಿ ಜಿಲ್ಲಾಧ್ಯಕ್ಷ ಎಸ್. ಸುರೇಶ್ ಅವರನ್ನು ರಾಜ್ಯ ಸಂಘಟನಾ ಕಾರ್ಯದರ್ಶಿಯನ್ನಾಗಿ ವೇದಿಕೆಯ ರಾಜ್ಯಾಧ್ಯಕ್ಷ ಘೋಷಿಸಿದ್ದು, ಕೊಪ್ಪಳ ಜಿಲ್ಲಾ ಘಟಕದ ಅಧ್ಯಕ್ಷ ಅಜ್ಜಪ್ಪ ಕರಡಗಲ್, ಲಕ್ಷ್ಮೀಪ್ರಿಯಾ ಅಧ್ಯಕ್ಷತೆಯಲ್ಲಿ ಸನ್ಮಾನಿಸಲಾಯಿತು. ಈ ವೇಳೆ ಕರವೇ ಪದಾಧಿಕಾರಿಗಳು, ಕಾರ್ಯಕರ್ತರು ಇದ್ದರು.
ಬಿಜೆಪಿ ಸೇರ್ಪಡೆ
ಬಳ್ಳಾರಿ: ಭಾರತೀಯ ಜನತಾ ಪಕ್ಷದ ಜಿಲ್ಲಾ ಕಚೇರಿಯಲ್ಲಿ ಹಿಂದುಳಿದ ವರ್ಗಗಳ ಮೋರ್ಚಾದ ಜಿಲ್ಲಾಧ್ಯಕ್ಷ ದತ್ತಾತ್ರೇಯ ರೆಡ್ಡಿ ನೇತೃತ್ವದಲ್ಲಿ ಭಾರತೀಯ ಅಂಬೇಡ್ಕರ್ ಜನತಾ ಪಕ್ಷದ ಜಿಲ್ಲಾಧ್ಯಕ್ಷ ಉರುಕುಂದ ರೆಡ್ಡಿ ತಮ್ಮ ಬೆಂಬಲಿಗರೊಂದಿಗೆ ಬಿಜೆಪಿ ಸೇರ್ಪಡೆಗೊಂಡರು. ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುರಾರಿಗೌಡ ಉರುಕುಂದ ರೆಡ್ಡಿ ಅವರನ್ನು ಬಿಜೆಪಿ ಧ್ವಜ ನೀಡಿ ಸ್ವಾಗತಿಸಿದರು. ರಾಜ್ಯ ಸ್ಲಂ ಮೋರ್ಚಾ ರಾಜ್ಯ ಉಪಾಧ್ಯಕ್ಷ ಎ. ಸಂಜಯ ಹೂಮಾಲೆ ಹಾಕಿ ಪಕ್ಷಕ್ಕೆ ಬರಮಾಡಿಕೊಂಡರು. ಬಿಜೆಪಿ ಮುಖಂಡ ರಾಮಚಂದ್ರಯ್ಯ, ಎಚ್. ಹನುಮಂತಪ್ಪ, ಸುಬ್ಬಾರಾವ್, ಪಿ. ಭಾಸ್ಕರ್, ಪಂಪನಗೌಡ, ತಿಪ್ಪಣ್ಣ, ಕ್ರಾಂತಿಕುಮಾರ, ಶ್ಯಾಂಸುಂದರ, ರಾಮದಾಸ, ಕೃಷ್ಣೋಜಿರಾವ್, ಶಂಕ್ರಪ್ಪಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.