'ವಾಲ್ಮೀಕಿ ಯಾರು?' ಕೃತಿ ನಿಷೇಧಿಸಲು ಆಗ್ರಹ
ಕನ್ನಡಪ್ರಭ ವಾರ್ತೆ, ಹೊಸಪೇಟೆ, ಮಾ. 16
ವಾಲ್ಮೀಕಿ ಬೇಡ ಸಮುದಾಯಕ್ಕೆ ಸೇರಿದವನಲ್ಲ, ಬ್ರಾಹ್ಮಣ ಎಂದು ಸಾರುವ ಕೆ.ಎಸ್. ನಾರಾಯಣಾಚಾರ್ಯ ಅವರ 'ವಾಲ್ಮೀಕಿ ಯಾರು?' ಪುಸ್ತಕ ನಿಷೇಧಿಸಬೇಕು ಎಂದು ಆಗ್ರಹಿಸಿ ವಾಲ್ಮೀಕಿ ನಾಯಕ ಸಮಾಜದ ವಿವಿಧ ಸಂಘಟನೆಗಳು ಭಾನುವಾರ ನಗರದಲ್ಲಿ ಪ್ರತಿಭಟನೆ ನಡೆಸಿ, ಮಾನವ ಸರಪಳಿ ರಚಿಸಿ, ಕೆ.ಎಸ್. ನಾರಾಯಣಾಚಾರ್ಯರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತ ಪಡಿಸಿದರು.
ನಗರದ ವಾಲ್ಮೀಕಿ ವೃತ್ತದಲ್ಲಿ ಭಾನುವಾರ ಸಂಜೆ ನಡೆದ ಈ ಪ್ರತಿಭಟನೆ ಉದ್ದೇಶಿಸಿ ರಾಜನಹಳ್ಳಿ ವಾಲ್ಮೀಕಿ ಗುರು ಪೀಠದ ಜಿಲ್ಲಾ ಧರ್ಮದರ್ಶಿ ಬಿ.ಎಸ್. ಜಂಬಯ್ಯ ನಾಯಕ ಮಾತನಾಡಿ, ಜಾತಿ ನಡುವೆ ವಿಷ ಬೀಜ ಬಿತ್ತುತ್ತ, ಹಿಂದುಳಿದ ಜಾತಿಗಳನ್ನು ಅವಹೇಳನ ಮಾಡುವುದು ಸಲ್ಲದು. ಸರ್ಕಾರ ತಕ್ಷಣವೇ 'ವಾಲ್ಮೀಕಿ ಯಾರು?' ಪುಸ್ತಕವನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು. ವಾರದೊಳಗೆ ನಿರ್ಧಾರ ಕೈಗೊಳ್ಳದಿದ್ದರೆ, ಹೊಸಪೇಟೆ ಬಂದ್ ನಡೆಸಿ, ರಾಜ್ಯಾದ್ಯಂತ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ಸರ್ಕಾರಿ ನೌಕರರ ಒಕ್ಕೂಟದ ಮುಖಂಡ ಎಂ. ಜಂಬಯ್ಯ ನಾಯಕ ಮಾತನಾಡಿ, ಇತಿಹಾಸವನ್ನು ತಿರುಚುವ ಕೆಲಸವನ್ನು ಕೋಮುವಾದಿಗಳು ಮೊದಲಿನಿಂದಲೂ ಮಾಡುತ್ತಿದ್ದು, ಇದರ ಭಾಗವಾಗಿ 2 ಸಾವಿರ ವರ್ಷಗಳ ಹಿಂದಿನದನ್ನು ಕಾಗಕ್ಕ ಗೂಬಕ್ಕನ ಕತೆ ಹೇಳುತ್ತಾ ದಾರಿ ತಪ್ಪಿಸುವ ಕೆಲಸ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ, ತಾಲೂಕು ವಾಲ್ಮೀಕಿ ನಾಯಕ ಸಂಘ, ನಾಯಕ ನೌಕರರ ಸಂಘ ಪ್ರತಿಭಟನೆಯಲ್ಲಿ ಭಾಗವಹಿಸಿದ್ದವು.
ಪ್ರತಿಭಟನೆಯಲ್ಲಿ ಕಿಚಡಿ ಶ್ರೀನಿವಾಸ, ಪೂಜಾರ್ ವೆಂಕೋಬ ನಾಯಕ, ಡಾ ತಾರಿಹಳ್ಳಿ ವೆಂಕಟೇಶ್, ಗೋಸಲ ಭರಮಪ್ಪ, ಬಸವರಾಜ, ತಾಯಪ್ಪ ನಾಯಕ, ಜಿ.ಕೆ. ಹನುಮಂತಪ್ಪ, ಕಮಲಾ ಮರಿಸ್ವಾಮಿ, ಚೆನ್ನಪ್ಪ, ವಕೀಲರಾದ ಪಿ. ವೆಂಕಟೇಶ್, ರಾಮಣ್ಣ ಹಾಗೂ ಜೆ. ವಸಂತ, ಜೆ. ಸತ್ಯನಾರಾಯಣ, ಕಟಗಿ ಜಂಬಯ್ಯ, ಗಣೇಶ, ನೀಲಕಂಠ, ಪಂಪಾಪತಿ ಪಾಲ್ಗೊಂಡಿದ್ದರು.
ಶಾಂತಿಯಿಂದ ಹೋಳಿ ಆಚರಿಸಿ: ಮಾಳಗಿ
ಕನ್ನಡಪ್ರಭ ವಾರ್ತೆ, ಹೊಸಪೇಟೆ, ಮಾ. 16
ಚುನಾವಣೆ ನೀತಿ ಸಂಹಿತೆ ಜಾರಿ ಇರುವುದರಿಂದ ಹೋಳಿ ಹಬ್ಬವನ್ನು ಸೋಮವಾರ ಶಾಂತ ರೀತಿಯಿಂದ ಆಚರಿಸಬೇಕೆಂದು ಡಿವೈಎಸ್ಪಿ ಡಿ.ಡಿ. ಮಾಳಗಿ ಹೇಳಿದರು.
ಭಾನುವಾರ ಇಲ್ಲಿನ ನಗರ ಪೊಲೀಸ್ ಠಾಣೆಯಲ್ಲಿ ನಡೆದ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ಓಕುಳಿ ಆಡುವವರು ಅನ್ಯ ಧರ್ಮೀಯರು ಹಾಗೂ ಮಹಿಳೆಯರ ಮೇಲೆ ಬಣ್ಣ ಎರಚಬಾರದು. ಮಾ. 17ರಂದು ಹೋಳಿ ಹಬ್ಬದ ಹಿನ್ನೆಲೆಯಲ್ಲಿ ಬಸ್ ನಿಲ್ದಾಣ ಹಾಗೂ ರೇಲ್ವೆ ನಿಲ್ದಾಣದ ಬಳಿ ಇರುವ ಮದ್ಯದಂಗಡಿ ಬಂದ್ ಮಾಡಲಾಗುವುದು. ಅಪರಿಚಿತರಿಗೆ ಬಣ್ಣ ಎರಚುವುದು, ಒತ್ತಾಯಪೂರ್ವಕ ಬಣ್ಣ ಹಚ್ಚುವುದನ್ನು ಮಾಡಿದರೆ ಕ್ರಮ ಕೈಗೊಳ್ಳಲಾಗುವುದು. ಮೆರವಣಿಗೆ, ಧ್ವನಿವರ್ಧಕಗಳನ್ನು ನಿಷೇಧಿಸಲಾಗಿದೆ ಎಂದರು.
ಸಿಪಿಐಗಳಾದ ಪ್ರಹ್ಲಾದ್, ಶ್ರೀಧರ ದೊಡ್ಡಿ, ರಘು ಕುಮಾರ್ ಹಾಗೂ ಕಾಮಣ್ಣ ಪ್ರತಿಷ್ಠಾಪನೆ ಮಾಡಿದ ಸಂಸ್ಥೆಗಳ ಮುಖಂಡರು ಸಭೆಯಲ್ಲಿ ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

