ಜೀವಜಲಕ್ಕಾಗಿ ಪ್ರಾಣ ತೆತ್ತ ಗೃಹಿಣಿ
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಮಾ. 20
ಬಳ್ಳಾರಿ ಎಂದರೆ ಬಿಸಿಲೂರು. ಎಂಟು ದಿನಗಳಿಗೊಮ್ಮೆ ನಲ್ಲಿಗಳು ಹರಿಸುವ ನೀರಿಗೆ ಇಲ್ಲಿ ಹಾಹಾಕಾರ ನಿರಂತರ. ಜೀವಜಲಕ್ಕಾಗಿ ಬಳ್ಳಾರಿಗರು ನಡೆಸುವ ಪರಿತಾಪ ಈಗ ಅವರ ಪ್ರಾಣಕ್ಕೇ ಸಂಚಕಾರ ತಂದಿದೆ. ಈಗ ನೀರು ಹಿಡಿಯದಿದ್ದರೆ ಇನ್ನೆಂಟು ದಿನ ಏನು ಮಾಡುವುದು ಎಂಬ ಚಿಂತೆಯಲ್ಲಿ ನಿದ್ದೆ ಮಂಪರಿನಲ್ಲೇ ಎದ್ದ ಗೃಹಿಣಿ ವಿದ್ಯುತ್ ಅವಘಡಕ್ಕೆ ಜೀವ ತೆತ್ತಿದ್ದಾರೆ.
ಬುಧವಾರ ರಾತ್ರಿ 11ರ ಸುಮಾರಿಗೆ ಜಲ ಮಂಡಳಿ ಇಲ್ಲಿನ ರೂಪನಗುಡಿ ಪರಿಸರಕ್ಕೆ ನೀರು ಬಿಟ್ಟಿದೆ. ನಿದ್ದೆ ಮಂಪರಿನಲ್ಲಿ ನೀರು ತುಂಬಿಸಿಕೊಳ್ಳಲು ಎದ್ದ ಮಹಿಳೆ ಇಂದಿರಾ ಮೋಟಾರ್ ವೈರ್ ತಗುಲಿ ಸಾವನ್ನಪ್ಪಿದ ಘಟನೆ ಅಗಡಿ ಮಾರೆಪ್ಪ ಕಾಂಪೌಂಡ್ನಲ್ಲಿ ಜರುಗಿದೆ.
ಆಗಿನ್ನೂ ಹಾಸಿಗೆಗೆ ಒರಗಿ ಕೊಂಚ ಸಮಯವಾಗಿತ್ತು. ನೀರು ಬಿಟ್ಟಿದ್ದಾರೆ ಎಂದು ಪಕ್ಕದಲ್ಲಿ ಯಾರೋ ಕೂಗಿ ಹೇಳಿದ್ದರಿಂದ ಇಂದಿರಾ (30) ಗಡಬಡಿಸಿ ಎದ್ದಿದ್ದಾರೆ. ನಿದ್ದೆ ಮಂಪರಿನಲ್ಲಿ ಮೋಟಾರ್ನ ವೈರ್ ಮುಟ್ಟಿ ಶಾಕ್ನಿಂದ ಸಾವನ್ನಪ್ಪಿದ್ದಾರೆ. ಈ ಸಾವು ನ್ಯಾಯವೇ? ಇದಕ್ಕೆ ಹೊಣೆ ಯಾರು ಎಂದು ನಾಗರಿಕರು ಪ್ರಶ್ನಿಸಿದ್ದಾರೆ.
ಬೇಸಿಗೆಯಲ್ಲಿ ನೀರು, ವಿದ್ಯುತ್ ಸಮಸ್ಯೆ: ಹೇಳಿ ಕೇಳಿ ಇದು ಬೇಸಿಗೆ. ನೀರು ಬಿಟ್ಟಾಗ ವಿದ್ಯುತ್ತಿಲ್ಲದಿದ್ದರೆ, 2-3ನೇ ಅಂತಸ್ತಿನಲ್ಲಿರುವ ಮನೆಗಳಿಗೆ ಕೆಳಗಿನಿಂದ ನೀರು ಹೊತ್ತೊಯ್ಯಬೇಕು. ಆಗ ಮೆಟ್ಟಿನಿಂದ ಜಾರಿ ಬಿದ್ದರೆ ಏನು ಗತಿ? ಈಗಾಗಲೇ ಹೀಗೆ ಹಲವರು ಗಾಯಗೊಂಡಿದ್ದಾರೆ. ಈಗ ನೀರಿಗಾಗಿ ಪ್ರಾಣ ಬಿಡುವ ಸರದಿ.
ತಬ್ಬಲಿಗಳಾದ ಕಂದಮ್ಮಗಳು: ಇಂದಿರಾ ಅವರ ಪತಿ ಬಸವರಾಜ್ ಆಟೋ ಚಾಲಕ. ಇವರಿಗೆ ಇಬ್ಬರು ಪುತ್ರಿಯರು, ಓರ್ವ ಪುತ್ರ ಇದ್ದಾರೆ. ತಾಯಿಯ ಸಾವಿನಿಂದ ಈಗ ಮಾನಸಾ (8), ತೇಜಸ್ವಿನಿ (4) ಹಾಗೂ ಯಶವಂತ್ (2) ತಬ್ಬಲಿಯಾಗಿದ್ದಾರೆ. ಹಗಲಲ್ಲಿ ನೀರು ಬಿಟ್ಟಿದ್ದರೆ ಇಂಥ ದುರಂತ ಸಂಭವಿಸುತ್ತಿರಲಿಲ್ಲ.
ಅಧಿಕಾರಿಗಳು ನೀರು ಬಿಡುವ ಬಗ್ಗೆ ಮುಂಚಿತವಾಗಿ ಸೂಚನೆ ನೀಡಬೇಕು. ಬೆಳಗಿನ ಹೊತ್ತಲ್ಲೇ ನೀರು ಬಿಡಬೇಕೆಂಬ ಆದೇಶ ಪಾಲನೆಯಾಗದೆ ಇಂದಿರಾ ಪ್ರಾಣ ಬಿಡುವಂತಾಗಿದೆ.
ಗಡಿಬಿಡಿ ಅವಘಡಕ್ಕೆ ದಾರಿ: ಮಾನಸಿಕ ತಜ್ಞ ಡಾ ಟಿ.ಆರ್ ಶ್ರೀನಿವಾಸ್ ಮಾತನಾಡಿ, ಮನುಷ್ಯ ನಿದ್ರೆಯಿಂದ ಎದ್ದ ಕೂಡಲೆ ಅರೆಪ್ರಜ್ಞಾವಸ್ಥೆಯಲ್ಲಿ ಇರುತ್ತಾನೆ. ಐದರಿಂದ 10 ನಿಮಿಷ ಸುಧಾರಿಸಿಕೊಂಡರೆ, ಪೂರ್ಣವಾಗಿ ನಿಚ್ಚಳನಾಗುತ್ತಾನೆ. ನಿದ್ರೆಯಿಂದ ಎದ್ದೊಡನೆ ಗಡಿಬಿಡಿಯಲ್ಲಿ ಓಡಾಡಿದರೆ ಬೀಳುವ ಸಾಧ್ಯತೆ ಹೆಚ್ಚು ಎಂದರು.
ನೀರು ಹಿಡಿಯಲು ಹೋಗಿ...: ಇಂದಿರಾ ಅವರ ಸಂಬಂಧಿ ಮಲ್ಲಿಕಾರ್ಜುನ್ ಮಾತನಾಡಿ, ರಾತ್ರಿ ಹೊತ್ತಿನಲ್ಲಿ ನೀರು ಬಿಟ್ಟಿದ್ದರಿಂದ ನೀರು ಹಿಡಿಯಲು ಮೋಟಾರ್ನ ಸ್ವಿಚ್ ಹಾಕಲು ಹೋಗಿ, ಶಾಕ್ ಹೊಡೆದು ಇಂದಿರಾ ಮೃತಪಟ್ಟಿದ್ದಾರೆ. ಹೊತ್ತಿಲ್ಲದ ಹೊತ್ತಿನಲ್ಲಿ ನೀರು ಬಿಡುವುದರಿಂದ ಒಂದು ಜೀವ ಬಲಿಯಾಗಿದೆ. ಕೆಲವೊಮ್ಮೆ ಮಧ್ಯರಾತ್ರಿಯಲ್ಲಿ ನೀರು ಬಿಡುತ್ತಾರೆ. ನಿರ್ದಿಷ್ಟ ಸಮಯಕ್ಕೆ ಅಥವಾ ಬೆಳಗಿನ ಜಾವ ನೀರು ಬಿಟ್ಟರೆ ಇಂಥ ಸಮಸ್ಯೆಯಾಗದು ಎಂದರು.
ಈಗಲಾದರೂ ನೀರು ಸರಬರಾಜು ಹೊಣೆ ಹೊತ್ತ ಅಧಿಕಾರಿಗಳು, ಸಿಬ್ಬಂದಿ ಎಚ್ಚೆತ್ತುಕೊಳ್ಳಬೇಕಿದೆ.
- ಶಶಿಧರ ಮೇಟಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

