ಶ್ರೀರಾಮುಲುಗೆ ಜೈಲಿನಿಂದಲೇ ಜೈ!
ಬಳ್ಳಾರಿ: ಆರು ಕೊಟ್ಟರೆ ಅತ್ತೆ ಕಡೆಗೆ ಮೂರು ಕೊಟ್ಟರೆ ಸೊಸೆ ಕಡೆಗೆ ಎನ್ನುವ ಗಾದೆ ಮಾತು ಬಳ್ಳಾರಿಯ ರಾಜಕೀಯಕ್ಕೆ ಹೆಚ್ಚು ಹೊಂದುತ್ತದೆ. ಬಿಜೆಪಿ ಬಿಟ್ಟು ಬಿಎಸ್ಆರ್ ಕಾಂಗ್ರೆಸ್ ಸ್ಥಾಪಿಸಿದಾಗ ಶ್ರೀರಾಮುಲು ಜತೆಗೆ ಹೋಗದ ಬಳ್ಳಾರಿಯ ಬಹುತೇಕ ಶಾಸಕರು, ಮುಖಂಡರು ಈಗ ಬಿಜೆಪಿ ಅಭ್ಯರ್ಥಿಯಾಗುತ್ತಿದ್ದಂತೆ ಬೆಂಬಲಕ್ಕೆ ನಿಂತಿದ್ದಾರೆ.
ಶ್ರೀರಾಮುಲು ಸ್ವಾಭಿಮಾನಕ್ಕಾಗಿ ಬಿಜೆಪಿ ಬಿಟ್ಟಾಗ ಅಂದಿನ ಶಾಸಕರಾದ ಬಿ. ನಾಗೇಂದ್ರ ಹಾಗೂ ಬಿ.ಎಸ್. ಆನಂದ ಸಿಂಗ್ ಅವರಿಂದ ದೂರಾಗಿದ್ದರು. ಈಗ ಶ್ರೀರಾಮುಲು ಬಿಜೆಪಿಗೆ ಮರಳಿದ್ದಾರೆ. ಬಳ್ಳಾರಿ ಕ್ಷೇತ್ರದಿಂದ ಪಕ್ಷದ ಅಭ್ಯರ್ಥಿಯೂ ಆಗಿದ್ದಾರೆ. ಅವರಿಗೆ ಬೆಂಬಲ ನೀಡಿ, ಗೆಲ್ಲಿಸುವಂತೆ ಜೈಲಿನಿಂದಲೇ ಶಾಸಕರು ತಮ್ಮ ಬೆಂಬಲಿಗರಿಗೆ ಸಂದೇಶ ರವಾನಿಸಿದ್ದಾರೆ.
2008ರ ವಿಧಾನಸಭಾ ಚುನಾವಣೆಯಲ್ಲಿ ರೆಡ್ಡಿ ಸಹೋದರರು ಹಾಗೂ ಶ್ರೀರಾಮುಲು ಪ್ರಾಬಲ್ಯದಿಂದ ಬಿಜೆಪಿ ಜಿಲ್ಲೆಯ 9 ಕ್ಷೇತ್ರಗಳ ಪೈಕಿ ಎಂಟನ್ನು ಬುಟ್ಟಿಗೆ ಹಾಕಿಕೊಂಡಿತ್ತು. ಆನಂದ್ ಸಿಂಗ್ ವಿಜಯನಗರ ಕ್ಷೇತ್ರದಲ್ಲಿ ವರ್ಚಸ್ಸು ಹೊಂದಿದ್ದಾರೆ. ಬಳ್ಳಾರಿ ಗ್ರಾಮೀಣ ಕ್ಷೇತ್ರದ ಅಭ್ಯರ್ಥಿ ಎಂದು ಬಿಂಬಿತರಾಗಿದ್ದ ನಾಗೇಂದ್ರಗೆ ಏಕಾಏಕಿ ಕೂಡ್ಲಿಗಿ ಟಿಕೆಟ್ ನೀಡಿದ್ದು ಆತಂಕ ಮೂಡಿಸಿದರೂ ರೆಡ್ಡಿ ಸಹೋದರರು ಹಾಗೂ ಶ್ರೀರಾಮುಲು ಗೆಲ್ಲಿಸಿದ್ದರು.
ಅಂತರ ಕಾಯ್ದುಕೊಂಡಿದ್ದ ಶಾಸಕರು: 2011ರಲ್ಲಿ ಬಿ. ಶ್ರೀರಾಮುಲು ಬಿಜೆಪಿ ಬಿಟ್ಟಾಗಲೂ ವಿಜಯನಗರ ಶಾಸಕ ಆನಂದ್ ಸಿಂಗ್ ಶ್ರೀರಾಮುಲು ಹಿಂಬಾಲಿಸಲಿಲ್ಲ. ಕೂಡ್ಲಿಗಿ ಶಾಸಕ ಬಿ. ನಾಗೇಂದ್ರ ತಟಸ್ಥರಾದರು. ಒಂದರ್ಥದಲ್ಲಿ ಇಬ್ಬರೂ ರೆಡ್ಡಿ ಪಾಳೆಯದಿಂದ ಅಂತರ ಕಾಯ್ದುಕೊಂಡರು. 2013ರ ವಿಧಾನಸಭೆ ಚುನಾವಣೆಯಲ್ಲಿ ವಿಜಯ ನಗರ ಕ್ಷೇತ್ರದಿಂದ ಆನಂದ ಸಿಂಗ್ ಮತ್ತೆ ಬಿಜೆಪಿ ಶಾಸಕರಾಗಿ ಆಯ್ಕೆಯಾದರೆ, ನಾಗೇಂದ್ರ ಅದೇ ಕೂಡ್ಲಿಗಿ ಕ್ಷೇತ್ರದಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿಯೂ ಮತದಾರರ ಮನ ಗೆದ್ದರು. ಶ್ರೀರಾಮುಲು ಬಿಎಸ್ಸಾರ್ ಕಾಂಗ್ರೆಸ್ ಸೊರಗಿತು.
ಬೆಂಬಲ: ಬಿ. ನಾಗೇಂದ್ರ ಕಾಂಗ್ರೆಸ್ಗೆ ಹೋಗುತ್ತಾರೆ ಎಂಬ ಸುದ್ದಿ ಹಬ್ಬಿತ್ತು. ಆದರೆ ಬಹಿರಂಗ ಚರ್ಚೆಯಾಗಿಲ್ಲ. ಬೇಲೆಕೇರಿ ಅದಿರು ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೂಡ್ಲಿಗಿ ಶಾಸಕ ನಾಗೇಂದ್ರ, ಹೊಸಪೇಟೆ ಶಾಸಕ ಆನಂದ್ಸಿಂಗ್, ಕಂಪ್ಲಿ ಶಾಸಕ ಟಿ.ಎಚ್. ಸುರೇಶ್ಬಾಬು ಸಿಬಿಐನಿಂದ ಬಂಧಿತರಾದರು. ಬಳ್ಳಾರಿ ಜಿಲ್ಲೆಯ ಮೂರು ಕ್ಷೇತ್ರಗಳು ಅನಾಥವಾದವು. ಆದರೂ ಈ ಶಾಸಕರು ಜೈಲಿನಿಂದಲೇ ಕ್ಷೇತ್ರಗಳ ಮೇಲೆ ತಮ್ಮ ಹಿಡಿತ ಮುಂದುವರಿಸಿದ್ದಾರೆ. ಇತ್ತೀಚೆಗೆ ಶ್ರೀರಾಮುಲು ತಮ್ಮ ಆಪ್ತರೊಂದಿಗೆ ಬೆಂಗಳೂರಿನ ಪರಪ್ಪನ ಅಗ್ರಹಾರಕ್ಕೆ ಭೇಟಿ ನೀಡಿ, ಈ ಶಾಸಕರೊಂದಿಗೆ ಚರ್ಚಿಸಿದ್ದರು. ಈಗ ತಮ್ಮ ಬೆಂಬಲಿಗರಿಗೆ ಈ ಶಾಸಕರು ಇದೇ ಸಂದೇಶ ರವಾನಿಸಿದ್ದಾರೆ.
ಶಶಿಧರ ಮೇಟಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

